ನಿರಂತರ ಪರಿಶ್ರಮದಿಂದ ಮಾತ್ರ ಶ್ರೇಷ್ಠ ಗುರಿಯನ್ನು ಸಾಧಿಸಬಹುದು, ಇದಕ್ಕೆ ನಿದರ್ಶನವಾಗಿ ನಮ್ಮ ಹತ್ತು ವರ್ಷಗಳ ಶ್ರಮ ಚಂದ್ರಯಾನ ಮೂರು ಯಶಸ್ವಿಯ ಸಾರ್ಥಕ ಸಾಧನೆಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷಎಸ್ ಸೋಮನಾಥ್ ತಿಳಿಸಿದರು.
ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ ನಡೆದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಯವರ 11ನೇ ವಾರ್ಷಿಕ ಪಟ್ಟಾಭಿಷೇಕೋತ್ಸವ ಸಮಾರಂಭದಲ್ಲಿ ಪ್ರತಿಷ್ಠಿತ ‘ವಿಜ್ಞಾತಂ ಪ್ರಶಸ್ತಿ’ಯನ್ನು ಸ್ವೀಕರಿಸಿ ಮಾತನಾಡಿದ ಅವರು, ಚಂದ್ರಯಾನ -3, ಇದು ಕೇವಲ ನನ್ನೊಬ್ಬನಿಂದ ಮಾತ್ರ ಸಾಧ್ಯವಾದುದಲ್ಲ, ನಮ್ಮ ಸಂಸ್ಥೆಯ ಎಲ್ಲ ವಿಜ್ಞಾನಿಗಳು, ತಂತ್ರಜ್ಞರು ಸೇರಿದಂತೆ ಇಡೀ ತಂಡದ ಪರಿಶ್ರಮದ ಪ್ರತಿಫಲ ಎಂದು ಬಣ್ಣಿಸಿದರು.
ಇಂಥ ಸಾಧನೆಯನ್ನ ಪರಿಗಣಿಸಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ನೀಡುತ್ತಿರುವ ಈ ವಿಜ್ಞಾತಂ ಪ್ರಶಸ್ತಿಯು ಕೇವಲ ನನ್ನೊಬ್ಬನಿಗೆ ಸೀಮಿತವಲ್ಲ, ಇಸ್ರೋದ ಪ್ರತಿನಿಧಿಯಾಗಿ, ಇಸ್ರೋ ಬಳಗದ ಎಲ್ಲ ವಿಜ್ಞಾನಿಗಳ ಪರವಾಗಿ ಬಹಳ ವಿನೀತ ಭಾವದಿಂದ ಸ್ವೀಕರಿಸುತ್ತಿದ್ದೇನೆ. ಸಮಸ್ತ ವಿಜ್ಞಾನಿ ಸಂಕುಲಕ್ಕೆ ಈ ಪ್ರಶಸ್ತಿಯನ್ನು ಸಮರ್ಪಿಸುತ್ತೇನೆ ಎಂದು ಪ್ರಶಸ್ತಿ ಸ್ವೀಕಾರ ಸಂದರ್ಭದಲ್ಲಿ ಭಾವುಕರಾದರು.
ವಿಜ್ಞಾನ, ಆಧ್ಯಾತ್ಮ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಹಾಗಾಗಿ ಉಪಗ್ರಹ ತಯಾರಿಕೆ ಮತ್ತು ಉಡಾವಣೆಯ ಕಾರ್ಯ ವಿಜ್ಞಾನವೇ ಆದರೂ ಇದರ ಯಶಸ್ವಿಗೆ ಸಾರ್ಥಕತೆಯನ್ನು ಕೋರಿ ಆಧ್ಯಾತ್ಮ ಮತ್ತು ದೇವರ ಅನುಗ್ರಹಕ್ಕಾಗಿ ದೇವಸ್ಥಾನಕ್ಕೂ ಹೋಗಿದ್ದೆವು, ನಮ್ಮೆಲ್ಲರ ಆಲೋಚನೆ ಶ್ರಮ ಹಾಗೂ ದೇವರ ಅನುಗ್ರಹದಿಂದ ವಿಶ್ವವೇ ನಿಬ್ಬರಗಾಗುವಂತಹ ಕಾರ್ಯ ಸಾಧನೆ ನಮ್ಮಿಂದ ನೆರವೇರಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೃಷಿ ಸಚಿವರಾದ ಚಲುವರಾಯಸ್ವಾಮಿ ಮಾತನಾಡಿ, ವೈಯಕ್ತಿಕವಾಗಿ ಹಾಗೂ ಸರ್ಕಾರದ ಪರವಾಗಿ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರಿಗೆ ಗೌರವ ಅಭಿನಂದನೆಗಳನ್ನು ಸಲ್ಲಿಸುತ್ತೇನೆ, ಜ್ಞಾನ ವಿಜ್ಞಾನ ತಂತ್ರಜ್ಞಾನ ಮೇಳದ ನೆಪದಲ್ಲಿ ವಿದ್ಯಾರ್ಥಿಗಳ ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ರಹದಾರಿಯನ್ನು ಕಲ್ಪಿಸಿ ಕೊಡುತ್ತಿರುವ ಶ್ರೀ ಮಠವು ಸರ್ಕಾರವೂ ಮಾಡಲಾಗದ ಕೈಂಕರ್ಯವನ್ನು ಕೈಗೊಂಡು, ವಿದ್ಯಾರ್ಥಿಗಳನ್ನು ಆಧುನಿಕ ಸ್ಪರ್ಧಾತ್ಮಕ ಯುಗಕ್ಕೆ ಸಜ್ಜುಗೊಳಿಸುತ್ತಿದೆ ಎಂದರು.
ಮಾಜಿ ಉಪಮುಖ್ಯಮಂತ್ರಿ ಡಾ. ಸಿ ಎನ್ ಅಶ್ವಥ್ ನಾರಾಯಣ್, ರಾಜಕೋಟ್ ನ ಆರ್ಶ್ ವಿದ್ಯಾಮಂದಿರದ ಅಧ್ಯಕ್ಷ ಸ್ವಾಮಿ ಪರಮಾತ್ಮನಂದ ಸರಸ್ವತಿ ಹಾಗೂ ಶಿಕ್ಷಣ ತಜ್ಞ ಡಾ. ಗುರುರಾಜ್ ಕರ್ಜಗಿ ಮಾತನಾಡಿದರು. ಬಾಬಾ ಮಸ್ತ್ ನಾಥ್ ವಿಶ್ವವಿದ್ಯಾಲಯದ ಕುಲಪತಿ ಮಹಂತ್ ಪಾಲಕ್ ನಾಥ್ ಯೋಗಿ ಶೈಕ್ಷಣಿಕ ವಿಚಾರಧಾರೆಗಳನ್ನು ಹಂಚಿಕೊಂಡರು.
ಸಮಾರಂಭದಲ್ಲಿ ಮಾಜಿ ಸಚಿವರಾದ ಸೋಮಣ್ಣ, ಸಿ ಎಸ್ ಪುಟ್ಟರಾಜು, ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಪುರುಷೋತ್ತಮಾನಂದನಾಥ ಸ್ವಾಮೀಜಿ, ಕಿಶನ್ ನಾಥ ಸ್ವಾಮೀಜಿ, ಉಪಕುಲಪತಿ ಡಾ. ಎಂ ಎ ಶೇಖರ್ ಮತ್ತಿತರರು ಭಾಗವಹಿಸಿದ್ದರು.




