Friday, September 20, 2024

ಪ್ರಾಯೋಗಿಕ ಆವೃತ್ತಿ

ಸರ್ಕಾರದ ಸಾಧನೆ ಬಿಚ್ಚಿಟ್ಟ ರಾಜ್ಯಪಾಲರು; ಗ್ಯಾರಂಟಿ ಸರ್ಕಾರ ಜನಪರ ಎಂಬುದು ಸಾಬೀತು: ದಿನೇಶ್‌ ಗೂಳಿಗೌಡ

ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಸರ್ಕಾರ ಎಂಬುದನ್ನು ರಾಜ್ಯದ ಸಂವಿಧಾನಿಕ ಮುಖ್ಯಸ್ಥರಾದ ಘನತೆವೆತ್ತ ರಾಜ್ಯಪಾಲರು ತಮ್ಮ ಭಾಷಣದ ಮೂಲಕ ಪ್ರತಿಪಾದಿಸಿದ್ದಾರೆ. ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆಯಿಂದ ಯಾವೆಲ್ಲ ಅನುಕೂಲವಾಗಿದೆ ಎಂಬ ಸತ್ಯ ಸಂಗತಿಯನ್ನು ಜನತೆ ಎದುರು ರಾಜ್ಯಪಾಲರು ತೆರೆದಿಟ್ಟಿದ್ದಾರೆಂದು ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಸುಮಾರು 7 ಕೋಟಿ ಜನಸಂಖ್ಯೆ ಇದೆ. ನಮ್ಮ ಗ್ಯಾರಂಟಿ ಯೋಜನೆಗಳಿಂದಾಗಿ 1.27 ಕೋಟಿ ಕುಟುಂಬದವರು ಬಡತನ ರೇಖೆಯಿಂದ ಹೊರಗೆ ಬಂದಿವೆ. ಸರಿಸುಮಾರು 5 ಕೋಟಿಗೂ ಹೆಚ್ಚು ಮಂದಿ ಮಧ್ಯಮ ವರ್ಗದ ಜೀವನ ಮಟ್ಟದ ಜೀವನ ಮಟ್ಟವನ್ನು ನಿರ್ವಹಣೆ ಮಾಡಲು ಸಹಾಯಕವಾಗಿದೆ. ಹೀಗಾಗಿ ನಮ್ಮ ಸರ್ಕಾರದ ಯೋಜನೆಗಳು ರಾಜ್ಯದ ಜನರಿಗೆ ಅನುಕೂಲಕರವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಿಳೆಯರಿಗೆ “ಶಕ್ತಿ” ತುಂಬುವ ಉಚಿತ ಪ್ರಯಾಣ ಯೋಜನೆ, “ಭಾಗ್ಯ ಲಕ್ಷ್ಮಿ”, ಬಡವರಿಗೆ “ಅನ್ನಭಾಗ್ಯ” , “ಯುವನಿಧಿ”, ಎಲ್ಲರಿಗೂ ಪ್ರಕಾಶಮಾನವಾಗಿ ಬೆಳಕು ನೀಡುವ “ಗೃಹಜ್ಯೋತಿ” ಹೀಗೆ ಜನರ ಆರ್ಥಿಕ ಶಕ್ತಿ ತುಂಬುವ ಮಹತ್ವದ ಯೋಜನೆ ಜಾರಿಗೊಳಿಸಿದ ರಾಜ್ಯ ಸರ್ಕಾರ ತನ್ನ ಜನಪರ ನಿಲುವಿನಿಂದ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂಬುದನ್ನು ರಾಜ್ಯಪಾಲರು ಇಂದು ಜಂಟಿ ಸದನವನ್ನು ಉದ್ದೇಶಿಸಿ ಹೇಳಿದ್ದಾರೆ.

ಅಲ್ಲದೆ, 8.50 ಲಕ್ಷ ಹಾಲು ಉತ್ಪಾದಕರಿಗೆ 757 ಕೋಟಿ ರೂಪಾಯಿಗಳ ಪ್ರೋತ್ಸಾಹಧನವನ್ನು ನೀಡಲಾಗಿದೆ. ಕಳೆದ ಎಂಟು ತಿಂಗಳಿಂದ ಕರ್ನಾಟಕ ರಾಜ್ಯಕ್ಕೆ 77 ಸಾವಿರ ಕೋಟಿ ರೂಪಾಯಿ ಬಂಡವಾಳ ಹರಿದುಬಂದಿದೆ. ಇದರಿಂದ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗಲಿದೆ. ಒಟ್ಟಾರೆಯಾಗಿ ರೈತರ ಬದುಕನ್ನು ಹಸನ ಮಾಡಲು ನಮ್ಮ ಸರ್ಕಾರ ಶ್ರಮಿಸುತ್ತಿದ್ದು, ಕೇಂದ್ರ ಸರ್ಕಾರದ ಅಸಹಕಾರದ ನಡುವೆಯೂ 32.50ಲಕ್ಷ ರೈತರಿಗೆ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ. ಇಂತಹ ಸಂದರ್ಭದಲ್ಲಿ ರಾಜ್ಯದ ರೈತರ, ಮಹಿಳೆಯರ, ಜನಸಾಮಾನ್ಯರ ಬದುಕಿಗೆ 5 ಗ್ಯಾರಂಟಿ ಯೋಜನೆಗಳು ಸಹಾಯಕವಾಗಿವೆ ಎಂಬುದು ಪದೇ ಪದೆ ಸಾಬೀತಾಗುತ್ತಲೇ ಬರುತ್ತಿದೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ  ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆಯನ್ನು ಹೇಳ ಬಯಸುತ್ತೇನೆಂದು ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!