Tuesday, April 30, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರುಗೆ ವೀರಶೈವ-ಲಿಂಗಾಯತರ ಒಗ್ಗಟ್ಟಿನ ಬೆಂಬಲ

ಮಂಡ್ಯ ಜಿಲ್ಲೆಯ ವೀರಶೈವ ಲಿಂಗಾಯತ ಸಮುದಾಯದ ಜನತೆ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ನಾಯಕತ್ವದ ಮೇಲೆ ನಂಬಿಕೆ ಇಟ್ಟಿದ್ದು, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಅವರನ್ನು ಬೆಂಬಲಿಸಲಿದೆ ಎಂದು ವೀರಶೈವ-ಲಿಂಗಾಯತ ಮುಖಂಡರು ಘೋಷಣೆ ಮಾಡಿದರು.

ಈ ಕುರಿತು ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿ.ಪಂ.ಮಾಜಿ ಅಧ್ಯಕ್ಷ ವಿಶ್ವಾಸ್, ರಾಜಕೀಯ ಇತಿಹಾಸವನ್ನು ಅವಲೋಕಿಸಿದಾಗ ನಮ್ಮ ಸಮುದಾಯದ ನಾಯಕತ್ವವನ್ನು ಹಣಿಯುತ್ತಲೇ ಬಂದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಧಿಕಾರ ವಂಚಿಸಿ ವಚನಭ್ರಷ್ಟರಾಗಿದ್ದಾರೆ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಉಸಿರುಗಟ್ಟಿಸುವ ವಾತಾವರಣವಿತ್ತು. ಯಾವೊಂದು ನಿರ್ಧಾರವನ್ನು ಸಹ ಯಡಿಯೂರಪ್ಪ ತೆಗೆದುಕೊಳ್ಳಲಾಗದ ಪರಿಸ್ಥಿತಿಯನ್ನು ನಿರ್ಮಾಣಮಾಡಿ ಕಿರುಕುಳ ನೀಡಿದ್ದನ್ನು ಮಂಡ್ಯ ಜಿಲ್ಲೆಯ ಸ್ವಾಭಿಮಾನಿ ಲಿಂಗಾಯತರು ಮರೆತಿಲ್ಲ ಎಂದು ಹೇಳಿದರು.

ಅಡ್ಡಗಾಲು ಹಾಕುತ್ತಲೇ ಬಂದ ದೇವೇಗೌಡರು

ಕನ್ನಡನಾಡಿನ ಎಲ್ಲಾ ಸಮುದಾಯದ ಬೆಂಬಲದೊಂದಿಗೆ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದ ಬಿಎಸ್‌ವೈ ಅವರಿಗೆ ಸಮರ್ಪಕವಾಗಿ ಆಡಳಿತ ನಡೆಸಲು ಅಡ್ಡಗಾಲು ಹಾಕುತ್ತಲೇ ಬಂದ ದೇವೇಗೌಡರು ಹಾಗೂ ಕುಮಾರಸ್ವಾಮಿಯವರ ವಿರುದ್ಧ ಸದನದ ಒಳಗೆ ‘ಈ ಅಪ್ಪಮಕ್ಕಳು ಮುಂಬರುವ ದಿನಗಳಲ್ಲಿ ನಿಮ್ಮನ್ನು ರಾಜಕೀಯವಾಗಿ ತುಳಿಯುತ್ತಾರೆ. ಇವರೊಟ್ಟಿಗೆ ಹೋದರೆ ನಿಮ್ಮ ಸಿಎಂ ಕನಸು ನನಸಾಗದು’ ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಆಕ್ರೋಶಭರಿತರಾಗಿ ಹೇಳಿದ್ದ ಯಡಿಯೂರಪ್ಪನವರು ಇದೀಗ ಅಪವಿತ್ರ ಮೈತ್ರಿ ಮಾಡಿಕೊಂಡಿರುವುದು ನಗೆಪಾಟಲಿಗೀಡಾಗಿದೆ ಎಂದು ತಿರುಗೇಟು ನೀಡಿದರು.

ಜನಜಾಗೃತರಾಗಬೇಕಿದೆ

ರಾಮಕೃಷ್ಣಹೆಗಡೆ, ಜೆ.ಹೆಚ್.ಪಟೀಲ್, ಬಚ್ಚೇಗೌಡ, ಎಂ.ಪಿ.ಪ್ರಕಾಶ್, ಸಿಎಂ ಸಿದ್ದರಾಮಯ್ಯ, ಸಚಿವರಾದ ಚಲುವರಾಯಸ್ವಾಮಿ ಹಾಗೂ ಮಂಡ್ಯ ಜಿಲ್ಲೆಯ ಹಲವಾರು ಶಾಸಕರ ಭವಿಷ್ಯಕ್ಕೆ ಅಡ್ಡಗಾಲು ಹಾಕಿಕೊಂಡೇ ಬಂದಿರುವ ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಜನಜಾಗೃತರಾಗಬೇಕಿದೆ. ಎರಡು ಲಕ್ಷಕ್ಕೂ ಅಧಿಕ ಸಂಖ್ಯೆಯ ಮತದಾರರಿರುವ ನಮ್ಮ ಸಮಾಜದ ಮತಗಳು ನಿರ್ಣಾಯಕ ಮತಗಳಾಗಿದ್ದು ಯಾವುದೇ ಅಭ್ಯರ್ಥಿಯ ಗೆಲುವು ನಮ್ಮ ಸಮುದಾಯದ ಬಲದ ಮೇಲೆ ನಿಂತಿದೆ.

ಪ್ರಜಾಪ್ರಭುತ್ವದ ವ್ಯವಸ್ಥೆ ಉಳಿಯಬೇಕಾದರೆ ಕೋಮುವಾದಿ ಬಿಜೆಪಿಯನ್ನು ದೂರವಿಡಬೇಕಾದ ಅನಿವಾರತೆ ಎದುರಾಗಿದೆ. ಹನ್ನೆರಡನೇ ಶತಮಾನದಲ್ಲೇ ಇಂತಹ ಕೋಮುವಾದವನ್ನು ವಿಶ್ವಗುರು ಬಸವಣ್ಣನವರು ವಿರೋಧಿಸಿ ಸಮಸಮಾಜವನ್ನು ನಿರ್ಮಾಣ ಮಾಡಿದ್ದರು. ಇಂತಹ ಶರಣಪರಂಪರೆಯ ಪರವಾಗಿ ನಿಂತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಧಿಕಾರವಧಿಯಲ್ಲಿ ಅಣ್ಣ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಿಸಿದರು. ಎಲ್ಲಾ ಸರ್ಕಾರಿ ಕಚೇರಿಯಲ್ಲೂ ಬಸವಣ್ಣನವರ ಭಾವಚಿತ್ರ ಕಡ್ಡಾಯವೆಂದು ಆದೇಶಿಸಿದ್ದಾರೆ. ನಮ್ಮ ಸಮಾಜದ ಪರವಾಗಿ ಅಪಾರ ಪ್ರೀತಿ ಗೌರವವಿಟ್ಟುಕೊಂಡಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕಿದೆ ಎಂದರು.

ಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಮುಖಂಡರಾದ ಶಿವಾನಂದ, ಪ್ರಪುಲ್ಲಚಂದ್ರ, ಸಾಸಲು ಈರಪ್ಪ,  ಮಹದೇವ ಪ್ರಸಾದ್, ವಕೀಲ ಗುರುಪ್ರಸಾದ್, ಎಸ್.ಪಿ.ಉಮೇಶ್, ಸಿ.ರುದ್ರೇಶ್, ಆನಂದ್ ಟಿ., ರುದ್ರಪ್ಪ ಸಂತೆಕಸಲಗೆರೆ, ಕುಮಾರಸ್ವಾಮಿ ಮತ್ತಿತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!