Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೆ.ಸಿ.ನಾರಾಯಣಗೌಡ ಮನೆಗೆ ದೌಡಾಯಿಸಿದ ಹೆಚ್.ಡಿ. ಕುಮಾರಸ್ವಾಮಿ

ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಶಾಸಕರಾಗಿ ಪ್ರಥಮ ಬಾರಿಗೆ ಆಯ್ಕೆಯಾಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಕೆ.ಸಿ.ನಾರಾಯಣಗೌಡ ಅವರನ್ನು ಸೆಳೆಯಲು ರಾಜಕೀಯ ಪಕ್ಷಗಳ ನಾಯಕರು ತಂತ್ರ-ಪ್ರತಿತಂತ್ರ ಹೆಣೆಯುತ್ತಿದ್ದಾರೆ.

2023ರ ವಿಧಾನಸಭಾ ಚುನಾವಣೆ ಪೂರ್ವ ಹಾಗೂ ನಂತರ ದಿನಗಳಿಂದ ಕಾಂಗ್ರೆಸ್ ಸೇರುತ್ತಾರೆಂಬ ಚರ್ಚೆಗೆ ಗ್ರಾಸವಾಗಿದ್ದ ಮಾಜಿ ಸಚಿವ ಕೆ.ಸಿ.ನಾರಾಯಣಗೌಡರ ಕಾಂಗ್ರೆಸ್ ಸೇರ್ಪಡೆಯ ದಿನ ಘೋಷಣೆಯಾಗುವ ಹೊಸ್ತಿಲಲ್ಲೇ ಮತ್ತೊಂದು ರಾಜಕೀಯ ತಂತ್ರಗಾರಿಕೆ ಹೊರ ಬಿದ್ದಿದೆ.

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ವಿಶ್ರಾಂತ್ರಿಗೆ ಮರಳಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದು ಬೆಳಿಗ್ಗೆ ಬೆಂಗಳೂರಿನ ಕೆ.ಸಿ.ನಾರಾಯಣಗೌಡರ ನಿವಾಸಕ್ಕೆ ಏಕಾಏಕಿ ಭೇಟಿ ನೀಡಿ, ರಾಜಕೀಯ ವಲಯದಲ್ಲಿ ಹುಬ್ಬೇರಿಸಿದ್ದಾರೆ.

ಮಾಜಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಿ.ಎಸ್.ಪುಟ್ಟರಾಜು, ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪಿ.ಉಮೇಶ್ ಉಪಸ್ಥಿತಿಯಲ್ಲಿ ಕೆ.ಸಿ.ಎನ್ ಭೇಟಿ ಮಾಡಿರುವ ಕುಮಾರಸ್ವಾಮಿ ಮರಳಿ ಮಾತೃ ಪಕ್ಷಕ್ಕೆ ಬರುವಂತೆ ಮನವಿ ಮಾಡಿದ್ದಾರೆನ್ನಲಾಗಿದೆ.

ಈ ಸಂಬಂಧ ಕೆಲಹೊತ್ತು ಚರ್ಚೆ ನಡೆಸಿದ ನಾಯಕರು ಸೂಕ್ತ ತೀರ್ಮಾನ ಕೈಗೊಂಡು ಬೆಂಬಲಿಸುವಂತೆ ಮನವಿ ಮಾಡಿ, ಕೆಸಿಎನ್ ಮನೆಯಿಂದ ತೆರಳಿದ್ದಾರೆ. ಇದು ರಾಜಕೀಯ ವಲಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್.ಪೇಟೆ ಕ್ಷೇತ್ರದಿಂದ ಜೆಡಿಎಸ್ ಶಾಸಕರಾಗಿ ಆಯ್ಕೆಯಾಗಿದ್ದ ಕೆಸಿಎನ್, ನಂತರ ದಿನದಲ್ಲಿ ಬದಲಾದ ರಾಜಕೀಯ ಕಾರಣಕ್ಕೆ ಪಕ್ಷ ತೊರೆದು ಬಿಜೆಪಿ ಸೇರಿದರು. ಮಾತ್ರವಲ್ಲದೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದ ಶಾಸಕರ ಗುಂಪಿನಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಉಪಚುನಾವಣೆಯಲ್ಲಿ ಕಣಕ್ಕಿಳಿದು ಗೆಲುವು ಸಾಧಿಸಿ ಜಿಲ್ಲೆಯಲ್ಲಿ ಬಿಜೆಪಿ‌ ಮೊದಲ ಶಾಸಕ ಹಾಗೂ ಸಚಿವ ಎನ್ನುವ ಹೆಗ್ಗಳಿಕೆ ಹೊಂದಿದ್ದಾರೆ.

ಇನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದರು. ಬಳಿಕ ರಾಜಕೀಯವಾಗಿ ತಟಸ್ಥವಾಗಿದ್ದರು. ಈ ನಡುವೆ ಬಿಜೆಪಿ ಜೆಡಿಎಸ್‌‌‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಜತೆಗೆ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡದಂತೆ ಒತ್ತಾಯಿಸಿದರು.
ಆದರೆ ಜೆಡಿಎಸ್‌ಗೆ ಮಂಡ್ಯ ಕ್ಷೇತ್ರ ಬಿಟ್ಟು ಕೊಟ್ಟ ಕಾರಣಕ್ಕೆ ಕಾಂಗ್ರೆಸ್ ಸೇರುತ್ತಾರೆನ್ನುವ ಚರ್ಚೆ ಕೇಳಿಬಂದಿತ್ತು. ಈ ನಡುವೆ ಮೈತ್ರಿ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಖಚಿತವಾದ ಹಿನ್ನೆಲೆಯಲ್ಲಿ ನಾರಾಯಣಗೌಡ ಅವರನ್ನು ಭೇಟಿ‌ ಮಾಡಿ ಮನವೊಲಿಸುವ ಪ್ರಯತ್ನ ನಡೆದಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರೊಂದಿಗೆ ಉತ್ತಮ ಒಡನಾಟ ಹೊಂದಿರುವ ಕೆ.ಸಿ.ಎನ್ ಅವರನ್ನು ಕಾಂಗ್ರೆಸ್ ಗೆ ಕರೆತರಲು ‘ಕೈ’ ಪಾಳಯ ತಂತ್ರಗಾರಿಕೆ ರೂಪಿಸುತ್ತಿರುವ ಸಂದರ್ಭದಲ್ಲೆ ಜೆಡಿಎಸ್ ವರಿಷ್ಠರ ಭೇಟಿಗೆ ಮಹತ್ವ ಬಂದಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!