Thursday, September 19, 2024

ಪ್ರಾಯೋಗಿಕ ಆವೃತ್ತಿ

ಮೇಕೆದಾಟು ಯೋಜನೆಯ ತೊಡಕು ನಿವಾರಣೆ: ಹೆಚ್.ಡಿ. ಕುಮಾರಸ್ವಾಮಿ

ರಾಜ್ಯದ ಕಾವೇರಿ ಸಮಸ್ಯೆ, ಮೇಕೆದಾಟು ಯೋಜನೆಗಿರುವ ತೊಡಕನ್ನು ನಿವಾರಿಸುವುದರ ಜೊತೆಗೆ ಮಹದಾಯಿ, ಕೃಷ್ಣ ಮೇಲ್ದಂಡೆ ಯೋಜನೆಗಳಿಗೆ ಅನುದಾನ ತಂದು ರಾಜ್ಯದ ಅಭಿವೃದ್ದಿಗೆ ಶ್ರಮಿಸುವುದಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ಜಾ.ದಳ-ಬಿಜೆಪಿ ಮೈತ್ರಿ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

ಮಂಡ್ಯ ನಗರದ ಮಂಡ್ಯ ವಿಶ್ವವಿದ್ಯಾಲಯದ ಮೈದಾನದಲ್ಲಿ ಗುರುವಾರ ನಡೆದ ಜಾ.ದಳ-ಬಿಜೆಪಿ ಮೈತ್ರಿಕೂಟದನುದ ಸಮನ್ವಯ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜಕಾರಣದಲ್ಲಿ ನಾನು ಈ ಮಟ್ಟಕ್ಕೆ ಬೆಳೆಯಲು ಮಂಡ್ಯ ಜಿಲ್ಲೆಯ ಜನರ ಪ್ರೀತಿ-ವಿಶ್ವಾಸವೇ ಕಾರಣ. ನನ್ನನ್ನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಬಹುಮತಗಳಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.

ಜಿಲ್ಲೆಯ ನಾಯಕರನ್ನೇ ನಿಲ್ಲಿಸಬೇಕೆಂದುಕೊಂಡಿದ್ದೆ

ಲೋಕಸಭೆ ಚುನಾವಣೆಗೆ ಜಿಲ್ಲೆಯ ನಾಯಕರನ್ನೇ ನಿಲ್ಲಿಸಬೇಕೆಂದುಕೊಂಡಿದ್ದೆ. ಆದರೆ, ನೀವೇ ನಿಲ್ಲಬೇಕೆಂದು ಹಲವರು ದೂರವಾಣಿ ಮೂಲಕ ಹಾಗೂ ಖುದ್ದಾಗಿ ಬಂದು ಒತ್ತಡ ಹಾಕಿದರು. ನೀವು ಬರದಿದ್ದರೆ ಮಂಡ್ಯ ನಗರದ ಸಂಜಯ. ವೃತ್ತದಲ್ಲಿ ನೇಣಿಗೆ ಶರಣಾಗುವುದಾಗಿ ಹೆದರಿಸಿದರು. ಇದರಿಂದಾಗಿ ಬೇರೆ ದಾರಿ ಕಾಣದೆ ನಾನೇ ನಿಲ್ಲಬೇಕಾಯಿತು. ವಿರೋಧಿಗಳು ಆರೋಪಿಸುವಂತೆ ನನ್ನ ಕುಟುಂಬ ಅಥವಾ ವೈಯಕ್ತಿಕ ಸ್ವಾರ್ಥಕ್ಕಾಗಿ ಅಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡಿ ನೀವು ಕೈಯೊಡ್ಡುವಂತೆ ಮಾಡಿದೆ. ಆದರೆ, ನೀವೇ ಅವರಿಗೆ ಕೊಡುವ ಹಾಗೆ ಮಾಡುವುದೇ ನನ್ನ ಗುರಿ. ನರೇಂದ್ರ ಮೋದಿ ಅವರು ೩ನೇ ಬಾರಿ ಪ್ರಧಾನಿಯಾಗುವುದು ನಿಶ್ಚಿತ. ಅವರ ನೇತೃತ್ವದಲ್ಲಿ ಮಂತ್ರಿಯಾಗಿ, ರೈತರ ಬೆಳೆಗಳಿಗೆ ಸರಿಯಾದ ಬೆಲೆ ಕೊಡಿಸಿ, ನಿಮ್ಮಗಳ ಧ್ವನಿಯಾಗಿ ಕೆಲಸ ಮಾಡುತ್ತೇನೆ, ನನ್ನ ಮೇಲೆ ವಿಶ್ವಾಸವಿಡಿ ಎಂದರು.

ತೆರಿಗೆ ಹಣ ಲೂಟಿ ಮಾಡಿಲ್ಲ

ಇದು ನನಗೆ ದೇವರ ಸಭೆ. ವೈಯಕ್ತಿಕ ಸ್ಥಾನಮಾನಕ್ಕಾಗಿ ಮೈತ್ರಿ ಮಾಡಿಕೊಂಡಿಲ್ಲ. ರೈತರ ಸಮಸ್ಯೆಯನ್ನು ಬಗೆಹರಿಸುವುದಕ್ಕೋಸ್ಕರ ಮೈತ್ರಿ ಮಾಡಿಕೊಂಡಿದ್ದೇನೆ. ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ಜನರ ತೆರಿಗೆ ಹಣವನ್ನು ಲೂಟಿ ಮಾಡಿಲ್ಲ. ದೊಡ್ಡ ದೊಡ್ಡ ವಾಣಿಜ್ಯ ಕಟ್ಟಡಗಳು, ಶಾಲಾ-ಕಾಲೇಜುಗಳನ್ನು ಕಟ್ಟಿಸಿಕೊಂಡು ವ್ಯಾಪಾರ ಮಾಡುತ್ತಿಲ್ಲ. ಚನ್ನಾಂಬಿಕಾ ಕಂಬೈನ್ಸ್ ಅಡಿ ಚಲನಚಿತ್ರಗಳನ್ನು ತಯಾರಿಸಿ, ಅದರಿಂದ ಬಂದ ಲಾಭದ ಹಣದಿಂದ ರಾಮನಗರ ಜಿಲ್ಲೆಯ ಕೇತಗಾನಹಳ್ಳಿ ಬಳಿ ಜಮೀನು ತೆಗೆದುಕೊಂಡಿದ್ದೇನೆಯೇ ಹೊರತು, ನಿಮ್ಮ ಹಾಗೆ ಜನರಿಂದ ಲೂಟಿ ಮಾಡಿ ಜನತೆಗೆ ಮೋಸ ಮಾಡಿದವನಲ್ಲ ಎಂದು ಪರೋಕ್ಷವಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಛೇಡಿಸಿದರು.

ಕಿಸಾನ್ ಸಮ್ಮಾನ್ ಯೋಜನೆ ಸ್ಥಗಿತ

ಬಿಜೆಪಿ ನಾಯಕ, ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಕೇಂದ್ರ ಸರ್ಕಾರ 6,000 ಹಾಗೂ ರಾಜ್ಯ ಸರ್ಕಾರ 4000 ಹಣ ನೀಡುತ್ತಿತ್ತು. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಏಕೆ ರೈತರಿಗೆ ಹಣ ನೀಡದೆ ಸ್ಥಗಿತ ಮಾಡಿದ್ದಾರೆ, ಭಾಗ್ಯಲಕ್ಷ್ಮಿ ಯೋಜನೆ ನಿಲ್ಲಿಸಿದ್ದು ಏಕೆ ಎಂದು ಪ್ರಶ್ನಿಸಿದರು.

ರೈತರಿಗೆ ನೆರವಾಗಲು ರಾಜ್ಯ ಸರ್ಕಾರ ಸಹ 4000 ರೂ ನೀಡುತ್ತಿತ್ತು ಆದರೆ ಕಾಂಗ್ರೆಸ್ ಸರ್ಕಾರ ಏಕಾಏಕಿ ಕವಿತ ಮಾಡಿದೆ, ಕೋಟ್ಯಂತರ ಮಹಿಳೆಯರಿಗೆ ಅನುಕೂಲ ಮಾಡಿಕೊಟ್ಟಿದ್ದ ಭಾಗ್ಯಲಕ್ಷ್ಮಿ ಯೋಜನೆಯನ್ನು ನಿಲ್ಲಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ -ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ, ಶಾಸಕರಾದ ಎಚ್.ಟಿ.ಮಂಜು, ಜಿ.ಡಿ.ಹರೀಶ್ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್.ವೀರಯ್ಯ, ಬೋಜೇಗೌಡ, ಮಾಜಿ‌ ಸಚಿವರಾದ ಲೀಲಾದೇವಿ ಆರ್.ಪ್ರಸಾದ್, ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ ಕೆ.ಸಿ.ನಾರಾಯಣಗೌಡ, ಬಂಡೆಪ್ಪ ಕಾಶೆಂಪುರ, ಮಾಜಿ ಶಾಸಕರಾದ ಡಾ.ಕೆ.ಅನ್ನದಾನಿ, ಎ.ಎಸ್.ರವೀಂದ್ರ ಶ್ರೀಕಂಠಯ್ಯ, ಸಾ.ರಾ.ಮಹೇಶ್, ಕೆ.ಟಿ.ಶ್ರೀಕಂಠೇಗೌಡ, ಕೆ. ಸುರೇಶ್ ಗೌಡ, ಸುನೀಲ್ ಸುಬ್ರಹ್ಮಣ್ಯ, ಜಿ.ಬಿ.ಶಿವಕುಮಾರ್, ಆಶ್ವಿನ್, ಜಿ.ಪಂ‌. ಮಾಜಿ ಸದಸ್ಯ ಕೆ.ಎಸ್.ವಿಜಯಾನಂದ, ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಚಾಲಕ ಸಿ.ಪಿ.ಉಮೇಶ್, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಸಿದ್ದರಾಮಯ್ಯ, ಮನ್ ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಉಪಾಧ್ಯಕ್ಷ ಎಂ.ಎಸ್.ರಘುನಂದನ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಎಸ್.ಜೆ.ಅಶೋಕ್ ಜಯರಾಮ್, ನೆಲ್ಲಿಗೆರೆ ಬಾಲು, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!