Thursday, September 19, 2024

ಪ್ರಾಯೋಗಿಕ ಆವೃತ್ತಿ

ದೇವಾಲಯಗಳು ಸಾಂಸ್ಕೃತಿಕ ಕೇಂದ್ರಗಳಾಗಲಿ: ಹರವು ದೇವೇಗೌಡ

ನಾಡಿನ ಹಾಗೂ ಜಿಲ್ಲೆಯ ಸ್ಮಾರಕ ರಕ್ಷಿತ ದೇವಾಲಯಗಳು ಸಾಂಸ್ಕೃತಿಕ ಕೇಂದ್ರಗಳಾಗಿ, ದೇವಾಲಯಗಳ ಸಂರಕ್ಷಣೆ ಕಾರ್ಯ ಮುಂದುವರೆಯಲಿ ಎಂದು ಸಾಹಿತಿಗಳಾದ ಹರವು ದೇವೇಗೌಡ ಅಭಿಪ್ರಾಯಪಟ್ಟರು.

ನಾಡಹಬ್ಬ ಶ್ರೀರಂಗಪಟ್ಟಣ ದಸರಾದ ಮೂರನೇ ದಿನದ ಅಂಗವಾಗಿ ಶ್ರೀರಂಗ ವೇದಿಕೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಇಂದು ನಡೆದ ದಸರಾ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜಿಲ್ಲೆಯ ಜನರ ಸಾಂಸ್ಕೃತಿಕ ಬದುಕಿಗೆ ಅಡಿಗಲ್ಲು ಇರುವುದೇ ಶ್ರೀರಂಗಪಟ್ಟಣದಲ್ಲಿ. ತಲಕಾಡಿನ ಗಂಗರಿಂದ ಪ್ರಾರಂಭವಾದ ಈ ಸಾಂಸ್ಕೃತಿಕ ಅಡಿಪಾಯ ಹೊಯ್ಸಳರು, ವಿಜಯನಗರ, ಮೈಸೂರು ಅರಸರ ಕಾಲದಲ್ಲಿ ಉತ್ತುಂಗದಲ್ಲಿತ್ತು ಎಂದರು.

ಶಾಸನಗಳಿಂದ ಸ್ಮಾರಕಗಳ ಇತಿಹಾಸ ತಿಳಿಯುತ್ತದೆ. ಶಾಸನ ಹಾಗೂ ಸ್ಮಾರಕಗಳ ಬಗ್ಗೆ ಶ್ರೀಸಾಮಾನ್ಯರಿಗೆ ಮಾಹಿತಿ ನೀಡಿ ಅದರ ಮಹತ್ವ ತಿಳಿಸಿ. ಆಗ ಸ್ಥಳೀಯರ ಸಹಕಾರದಿಂದ ಸ್ಮಾರಕಗಳು ರಕ್ಷಣೆಯು ಆಗಲಿವೆ ಎಂದರು.

ಜಿಲ್ಲೆಯ ದೇವಾಲಯಗಳು ಬಹುತೇಕ ಜೈನ ಕ್ಷೇತ್ರದಿಂದ ಹೊಯ್ಸಳರ ಕ್ಷೇತ್ರಗಳಾಗಿ ಬದಲಾಗಿವೆ. ಹೊಯ್ಸಳರ ಕಾಲದಲ್ಲಿ ಮಂಡ್ಯ ಜಿಲ್ಲೆಯು ಸಾಂಸ್ಕೃತಿಕವಾಗಿ ಅಭಿವೃದ್ಧಿ ಹೊಂದಿತ್ತು. ಹೊಯ್ಸಳರ ಕಾಲದಲ್ಲಿ ಯುದ್ಧದಲ್ಲಿ ರಾಜ ಮಡಿದರೆ. ರಾಜನ ಯೋಧನು ಕೂಡ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಇದೇ ಜಿಲ್ಲೆಯ ಅಗ್ರಹಾರ ಬಾಚಹಳ್ಳಿಯ ಆತ್ಮಹುತಿ ಶಾಸನ ತಿಳಿಸುತ್ತದೆ. ಆತ್ಮಾರ್ಪಣೆಯಂತಹ ಪದ್ದತಿ ಹೇಗೆ ಜೀವಂತವಾಗಿತ್ತು ಎಂದು ನೆನೆದರೆ ರೋಮಾಂಚನವಾಗುತ್ತದೆ ಎಂದರು.

ಹೊಯ್ಸಳರ ಸೋಮೇಶ್ವರ ಆಳ್ವಿಕೆ ಕಾಲದಲ್ಲಿ ಜಿಲ್ಲೆಯ ಗೋವಿಂದನಹಳ್ಳಿಯಲ್ಲಿ ಹೊಯ್ಸಳ ಶೈಲಿಯ ಪಂಚಲಿಂಗೇಶ್ವರ ದೇವಾಲಯವಿದ್ದು, ಎತ್ತರವಾದ ಜಗತಿಯ ಮೇಲಿರುವ ಈ ಗುಡಿ ಪಂಚಕೂಟ ರೀತಿ ಐದು ಗರ್ಭಗುಡಿ, ಶಿಖರ, ಶಿಖರಗಳಲ್ಲಿ ಸಾಲಂಕೃತ ರಥಗಳಂತೆ ಕಾಣುವ ಇದು ಜಿಲ್ಲೆಯ ಶಿಲ್ಪ ಸೌಂದರ್ಯದ ಸಾಕ್ಷಿ ಪ್ರಜ್ಞೆಯಾಗಿದೆ ಎಂದರು.

ಪಾಂಡವಪುರವು ಪ್ರಾಗೈತಿಹಾಸಿಕ ಕಾಲದಿಂದಿಡಿದು ನವಶಿಲಾಯುಗ, ಇತಿಹಾಸ ಯುಗದವರೆಗಿನ ಇತಿಹಾಸ ಹೊಂದಿದೆ. ಇಲ್ಲಿನ ಕುಂತಿಬೆಟ್ಟ ಜೈನ ಸನ್ಯಾಸಿ ಬುದ್ಧಸೇನಾ ಕಂತಿಕೆಯ ಇತಿಹಾಸವನ್ನು ಹೇಳುತ್ತದೆ ಎಂದರು.

ಸರ್ಕಾರಗಳು ದೇವಾಲಯ ಸಂರಕ್ಷಣೆ ಮಾಡುವಲ್ಲಿ ಅಲ್ಲಿಯ ಸ್ಥಳೀಯ ಜನರ ಸಹಕಾರ ಕೇಳಲಿ. ಜನರ ಭಾವನೆಗಳಿಗೆ ಬೆಲೆ ಕೊಟ್ಟು, ಸ್ಥಳೀಯ ಜನರು ಪ್ರಜ್ಞಾವಂತರಾಗಿ ಸ್ವತಃ ಸ್ಥಳೀಯರೇ ದೇವಾಲಯ ಜೀರ್ಣೋದ್ಧಾರ ಮಾಡುವ ಹಾಗೆ ಪ್ರೇರೆಪಣೆ ಮಾಡಲಿ ಎಂದರು.

ಉದ್ಘಾಟನೆ ನುಡಿಗಳನ್ನಾಡಿದ ಸಾಹಿತಿ ತೈಲೂರು ವೆಂಕಟಕೃಷ್ಟ ಅವರು ಶ್ರೀರಂಗಪಟ್ಟಣವೇ ಸಂರಕ್ಷಣೆಯ ಸ್ಮಾರಕವಾಗಿದೆ. ಇಲ್ಲಿ ಸಾಕಷ್ಟು ಕೋಟೆ, ದೇವಾಲಯಗಳು ಅಳಿದು ಉಳಿದುಕೊಂಡಿವೆ. ಶ್ರೀರಂಗಪಟ್ಟಣ ಐತಿಹಾಸಿಕ ಪಟ್ಟಣವಾಗಿ ದೇವಾಲಯಗಳ ಬೀಡಾಗಿದೆ ಎಂದರು.

ಸ್ಮಾರಕಗಳ ಸರಂಕ್ಷಣೆಯಾದರೆ ನಾಡು ಹಾಗೂ ಅಂದಿನ ಜನ ಜೀವನದ ಇತಿಹಾಸ ಹೇಳಬಹುದು. ಸ್ಮಾರಕಗಳು ಎಂದರೆ ದೇವಾಲಗಳಷ್ಟೆ ಅಲ್ಲ ಕೆರೆ ಕಟ್ಟೆಗಳು ಕೂಡ ಸ್ಮಾರಕಗಳೇ ಆಗಿವೆ. ಆಗಾಗಿ ಕೆರೆ ಕಟ್ಟೆಗಳ ರಕ್ಷಣೆಯು ಆಗಲಿ ಎಂದರು.

ಕಂಠೀರವ ನರಸಿಂಹರಾಜ ಒಡೆಯರ್ ಅವರು ಶ್ರೀರಂಗಪಟ್ಟಣದಲ್ಲಿ ದಸರಾ ಮಾಡಿದ ಘಟನೆಯನ್ನು ನೆನೆದು. ಅಂದಿನ ದಸರಾ ಮನರಂಜನೆ ಹಾಗೂ ಆಡಂಬರದ ದಸರಾ ಅಚರಣೆಯಾಗಿರದೆ. ಜನಸಾಮಾನ್ಯರ ದಸರಾವಾಗಿತ್ತು. ತುಂಬ ಅಚ್ಚುಕಟ್ಟಾಗಿ ನೆಡೆಯುತ್ತಿತ್ತು ಎಂದರು.

ಗೋಷ್ಠಿಯು ಜಿಲ್ಲೆಯ ಸ್ಮಾರಕಗಳ ಮಹತ್ವ ಮತ್ತು ಸರಂಕ್ಷಣೆಯ ಬಗ್ಗೆ ಸರ್ಕಾರ ಹಾಗೂ ಅಧಿಕಾರಿಗಳ ಗಮನತಂದಿತು. ಜಿಲ್ಲೆಯ ದೇವಾಲಯ ಹಾಗೂ ಕೆರೆ, ಕಟ್ಟೆಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಕೊಡುವ ಭರವಸೆ ನೀಡಿತು.

ಗೋಷ್ಠಿಯಲ್ಲಿ ಪ್ರೊ.ಬಿ. ಜಯಪ್ರಕಾಶ್ ಗೌಡ, ಡಿ.ಎನ್ ಲೋಕೇಶ್, ಗಾಂಧಿವಾದಿಗಳಾದ ಡಾ.ಸುಜಯ್ ಕುಮಾರ್, ಪೈಲ್ವಾನ್ ಮುಕುಂದ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕಿನ ಸಾಹಿತಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!