Thursday, September 19, 2024

ಪ್ರಾಯೋಗಿಕ ಆವೃತ್ತಿ

ಜ.29ರಂದು ಶ್ರೀರಂಗಪಟ್ಟಣದಲ್ಲಿ ಸಾಮರಸ್ಯ ಸಹಬಾಳ್ವೆ ಸಂಗಮ

ಮಂಡ್ಯ ಜಿಲ್ಲಾ ಸಮಾನ ಮನಸ್ಕರ ವೇದಿಕೆ ವತಿಯಿಂದ ಗಣರಾಜ್ಯೋತ್ಸವ ಮತ್ತು ಗಾಂಧಿ ನೆನಪಿನಲ್ಲಿ ಜ.29ರಂದು ಬೆಳಿಗ್ಗೆ 10.30 ಗಂಟೆಗೆ ಶ್ರೀರಂಗಪಟ್ಟದ ಶ್ರೀರಂಗನಾಥ ದೇವಸ್ಥಾನದ ಮೈದಾನದಲ್ಲಿ ಸಾಮರಸ್ಯ ಸಹಬಾಳ್ವೆ ಸಂಗಮ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಮುಖ್ಯಸ್ಥ ಗುರುಪ್ರಸಾದ್ ಕೆರಗೋಡು ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಾವೇಶದಲ್ಲಿ ಗಾಂಧಿವಾದಿ ಡಾ.ಸುಜಯ್ ಕುಮಾರ್, ಮಾನವ ಹಕ್ಕುಗಳ ಹೋರಾಟಗಾರರಾದ ತೀಸ್ತಾ ಸೆಟಲ್ವಾಡ್, ಸಾಮಾಜಿಕ ಕಾರ್ಯಕರ್ತ ಶಶಿಕಾಂತ್ ಸೇಂಥಿಲ್, ವಿಶ್ರಾಂತ ಕುಲಪತಿ ಸಬಿಹಾ ಭೂಮಿಗೌಡ, ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಕರ್ನಾಟಕ ರಾಜ್ಯ ರೈತಸಂಘದ ಮುಖಂಡ ಬಡಗಲಪುರ ನಾಗೇಂದ್ರ, ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಕೆ.ಎಲ್.ಅಶೋಕ್, ಶಾಂತಿ ಪ್ರಕಾಶನದ ಮುಖ್ಯಸ್ಥರಾದ ಮಹಮದ್ ಕುಂಞ, ಸಮಾನ ಮನಸ್ಕರ ವೇದಿಕೆಯ ಪ್ರೊ.ಹುಲ್ಕೆರೆ ಮಹದೇವು ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು ಭಾಗವಹಿಸುವರು ಎಂದರು.

ಮನೆ-ಮನಕ್ಕೂ ಸಾಮರಸ್ಯ ಸಹಬಾಳ್ವೆ ಸಂಗಮ ಸಂದೇಶ….. 

ಮನುಷ್ಯಜಾತಿ ತಾನೊಂದೇ ವಲಂ ಎಂಬ ಕವಿವಾಣಿ ಇದೆ. ಹಾಗೆಯೇ ಬಿಡಿಯಾದ ಇಟ್ಟಿಗೆಗಳನ್ನು ಬೆಸೆಯುವುದರಿಂದ ಮನ ನಿರ್ಮಾಣವಾದರೆ, ಸಂಬಂಧಗಳನ್ನು ಬೆಸೆಯುವುದರಿಂದ ಕುಟುಂಬ ರೂಪಗೊಳ್ಳುತ್ತದೆ, ಭಾವ ಮತ್ತು ಬದುಕನ್ನು ಬೆಸೆಯುವುದರಿಂದ ದೇಶ ರೂಪಗೊಳ್ಳುತ್ತದೆ. ಭಾವನಾತ್ಮಕ ಒಗ್ಗಟ್ಟನ್ನು ಹೊಂದಿದ ದೇಶವನ್ನು ಯಾರಿಂದಲೂ ಮಣಿಸಲೂ ಸಾಧ್ಯವಿಲ್ಲ.

nudikarnataka.com

ಆಂತರಿಕ ಸಂಬಂಧ ಗಟ್ಟಿಗೊಂಡಷ್ಟೂ ದೇಶ  ಅಭಿವೃದ್ಧಿಗೊಳ್ಳುತ್ತದೆ. ಮನಸ್ಸು ಮುರಿದರೆ ಕುಟುಂಬ ಕುಸಿಯುತ್ತದೆ. ಸಂಬಂಧಗಳು ಹದಗಟ್ಟರೇ ದೇಶದ ಆರೋಗ್ಯ ಹದಗೆಡುತ್ತದೆ. ಬ್ರಿಟೀಷರು ನಮ್ಮ ದೇಶವನ್ನು ಆಳಿದ್ದು ಅವರ ಬಲದಿಂದಲ್ಲ, ನಮ್ಮಲ್ಲಿದ್ದ ಒಡಕಿನಿಂದ. ಅದೇ ದೇಶ ಸ್ವಾತಂತ್ರ್ಯ ಗಳಿಸಿದ್ದು, ಭಾಷೆ, ಜಾತಿ, ಧರ್ಮದ ಗಡಿಗಳನ್ನು ದಾಟಿದ ಒಗ್ಗಟ್ಟಿನಿಂದ, ಸ್ವಾತಂತ್ರ್ಯ, ಸಂಗ್ರಾಮದ ಭಾಗವಾಗಿ ಮೂಡಿದ ಈ ಐಕ್ಯತೆಯನ್ನು ದೇಶದ ನೀತಿಸೂತ್ರವನ್ನಾಗಿಸಿದ ಪ್ರಯತ್ನವೇ ನಮ್ಮ ಸಂವಿಧಾನ. ವಿವಿಧ ಜನ ಸಮುದಾಯಗಳನ್ನು ನ್ಯಾಯದ ನೆಲೆಯ ಮೇಲೆ ಹೆಣೆಯಲು ನಡೆಸಿದ ಪ್ರಯತ್ನವೇ ಈ ಗಣತಂತ್ರ.

ಟಿಪ್ಪುವನ್ನು ಕೊಂದವರ ಬಗ್ಗೆ ಬಿಜೆಪಿ ಕಟ್ಟುಕಥೆ

ಬ್ರಿಟಿಷರ ವಿರುದ್ಧ ಹೋರಾಡಿ ಮಡಿದ ಮೈಸೂರು ಹುಲಿ ಟಿಪ್ಪು ಸುಲ್ತಾನನನ್ನು ಕೊಂದದ್ದು ಬ್ರಿಟಿಷರು. ಆದರೆ ಇತ್ತೀಚೆಗೆ ಬಿಜೆಪಿಯ ನಾಯಕರು ಉರಿಗೌಡ ಹಾಗೂ ನಂಜೇಗೌಡ ಎಂಬ ವ್ಯಕ್ತಿಗಳು ಟಿಪ್ಪುವನ್ನು ಕೊಂದಿದ್ದಾರೆಂದು ಅಪಪ್ರಚಾರ ಮಾಡುತ್ತಿರುವುದು ಮಂಡ್ಯಜಿಲ್ಲೆಯಲ್ಲಿ ಮುಸಲ್ಮಾನರು ಹಾಗೂ ಒಕ್ಕಲಿಗರ ನಡುವೆ ಕೋಮುಗಲಭೆ ಉಂಟು ಮಾಡುವ ಹುನ್ನಾರವಾಗಿದೆ ಎಂದು ವಕೀಲ ಚೀರನಹಳ್ಳಿ ಲಕ್ಷ್ಮಣ್ ದೂರಿದರು.  

ಟಿಪ್ಪುವನ್ನು ಕೊಂದಿದ್ದು ಯಾರು ಎಂಬುದು ಈಗಾಗಲೇ ಇತಿಹಾಸದಲ್ಲಿ ದಾಖಲಾಗಿದೆ. ಬೇಕಿದ್ದವರೂ ಇತಿಹಾಸವನ್ನು ಓದಿಕೊಳ್ಳಲಿ, ಆದರೆ ಬಿಜೆಪಿ ನಾಯಕರು ಇತಿಹಾಸವನ್ನು ತಿರುಚುವ ಕ್ರಮವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಇದರ ಜೊತೆಗೆ ರಂಗಾಯಣ ನಿರ್ದೇಶಕರ ಮೂಲಕವು ಕಟ್ಟುಕಥೆಯನ್ನು ಹೆಣಿದು ನಾಟಕ ಪ್ರದರ್ಶನ ಮಾಡಿಸುತ್ತಿದ್ದಾರೆ. ಆದರೆ ಒಂದೇ ಸುಳ್ಳನ್ನು ನೂರು ಬಾರಿ ಹೇಳಿದರೆ ಅದು, ಸತ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. 

ದುರಾದೃಶ್ಯವಶಾತ್ ನಮ್ಮನ್ನು ಆಳಿದ ರಾಜಕಾರಣಿಗಳು ಈ ದೇಶದ ಸಂವಿಧಾನವನ್ನು, ಗಟ್ಟಿಗೊಳಿಸುವ ಬದಲು ದುರ್ಬಲಗೊಳಿಸುತ್ತಾ ಬಂದರು. ತಮ್ಮ ಸ್ವಾರ್ಥಕ್ಕಾಗಿ ಜಾತಿ, ಧರ್ಮ, ಭಾಷೆಗಳ ನಡುವಿದ್ದ ಭಿನ್ನತೆಗಳನ್ನು, ಭಿನ್ನಾಭಿಪ್ರಾಯಗಳಾಗಿ ಬೆಳೆಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಾ ಬಂದರು. ಈಗ ಈ ಸ್ವಾರ್ಥ ರಾಜಕಾರಣ, ಬೆಳೆದುಬಿಟ್ಟಿದೆ, ಧರ್ಮ, ಮಂದಿರ, ದುಸೀದಿ, ಮಾಲೆಯ ಹೆಸರಿನಲ್ಲಿ ಒಡೆದಾಳುವುದನ್ನೇ ರಾಜಕೀಯ ಪಕ್ಷಗಳು ತಮ್ಮ ಗೆಲುವಿನ ಸೂತ್ರ ಮಾಡಿಕೊಂಡು ಬಿಟ್ಟಿವೆ.

ವಿವಿಧ ಜಾತಿ – ಧರ್ಮದ ಜನರ ನಡುವೆ ಪ್ರೀತಿ ಬೆಳಸುವ ಬದಲು ದ್ವೇಷವನ್ನು ಪ್ರಚೋದಿಸುತ್ತಿದ್ದಾರೆ. ಒಬ್ಬರನ್ನು ಮತ್ತೊಬ್ಬರ ಮೇಲೆ ಎತ್ತಿಕಟ್ಟುತ್ತಿದ್ದಾರೆ. ಯುವಜನರನ್ನು ಭಾವೋದ್ರೇಕಗೊಳಿಸಿ ಕೊಲೆ, ಹಿಂಸೆ, ಗಲಭ, ಕೇಸು, ಜೈಲು, ಅಲೆದಾಟದ ಕೂಪಕ್ಕೆ ತಳ್ಳುತ್ತಿದ್ದಾರೆ: ಜನರನ್ನು ಬಡಿದಾಟಕ್ಕೆ ಹಚ್ಚಿ ದೇಶದ ಸಂಪತ್ತನ್ನು ನುಂಗಿ ನೊಣವಿ ನೀರು ಕುಡಿಯುತ್ತಿದ್ದಾರೆ. ರಾಜಕಾರಣಿಗಳು, ಕಾರ್ಪೋರೇಟ್ ಪಕ್ಷಗಳ ಆಸ್ತಿಪಾಸ್ತಿಗಳು ರಾಕೆಟ್ ವೇಗದಲ್ಲಿ ಬೆಳೆಯುತ್ತಿವೆ. ಜನಸಾಮಾನ್ಯರಾದ ನಮ್ಮ ಸಾಲ ಮತ್ತು ಚಿಂತೆಗಳು ದಿನದಿನಕ್ಕೂ ಹೆಚ್ಚಾಗುತ್ತಿವೆ.

ಈಗ ಚುನಾವಣೆಗಳು ಹತ್ತಿರವಾಗುತ್ತಿವೆ. ಪಡ್ಯಂತ್ರಗಳು ಸಿದ್ಧವಾಗುತ್ತಿವೆ. ವೈಷಮ್ಯವನ್ನು ಭಿತ್ತಿ ಬೆಳೆಸಲಾಗುತ್ತದೆ. ನಮ್ಮ ಚಾರಿತ್ರಿಕ ವ್ಯಕ್ತಿಗಳ ಅವಹೇಳನ ಮಾಡಿ ನಮ್ಮನ್ನು ಭಾವನಾತ್ಮಕವಾಗಿ ಭಾವೋದ್ರೇಕಗೊಳಿಸಿ, ಮತಗಳಿಸಲು ನೀಚ ಕೃತ್ಯಗಳಿಗೂ ಕೈ ಹಾಕಲಾಗುತ್ತದೆ. ನಮ್ಮ ಯುವಜನರನ್ನು ದಿಕ್ಕು ತಪ್ಪಿಸಲು, ನಮ್ಮನ್ನೆಲ್ಲಾ ದಾರಿ ತಪ್ಪಿಸಲು ಸಕಲ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ. ನಾವು ಮಾಡಬೇಕಿರುವ ಮೊದಲ ಕೆಲಸ ನಮ್ಮ ತಲೆಗಳನ್ನು ಕೊಡವಿ ಇವರ ಸ್ವಾರ್ಥದ ಮೋಡಿಯಾಟದಿಂದ ಹೊರಬರಬೇಕಿದೆ.

ನಮ್ಮ ಸಂತರು, ಶರಣರು, ಸೂಫಿಗಳು, ಸ್ವಾತಂತ್ರ್ಯ ಯೋಧರು, ಹಿರೀಕರು ಬಿಟ್ಟು ಹೋದ ವಿವೇಕವಾಣಿಗಳನ್ನು ಮತ್ತೊಮ್ಮೆ ಮನಕ್ಕಿಳಿಸಿಕೊಳ್ಳಬೇಕಿದೆ. ಅವರು ನೀಡಿದ “ಕೂಡಿಬಾಳುವ, ಪ್ರೀತಿ ಹಂಚುವ, ಸತ್ಯ ನುಡಿಯುವ, ಸರಳವಾಗಿ ಬದುಕುವ, ಕಷ್ಟದಲ್ಲಿರುವವರಿಗೆ ನೆರವಾಗುವ, ಪರಸ್ಪರ ಸಹಕರಿಸುವ ಸರಳ ಸಂದೇಶಗಳನ್ನು ಪಾಲಿಸುವ ಸಂಕಲ್ಪ ತೊಡಬೇಕಿದೆ. ಸಂಬಂಧಗಳನ್ನು ಒಡೆಯುವವರನ್ನು ದೂರ ಸರಿಸಬೇಕಿದೆ.

ಪರಸ್ಪರ ಪ್ರೀತಿ, ಸಾಮರಸ್ಯ, ಸಹಬಾಳ್ವೆ ಸರಕಾರದ ಮೂಲಕ ಎಲ್ಲರ ಜೊತೆಗಿನ ಬಾಂಧವ್ಯವನ್ನು ಗಟ್ಟಿಗೊಳಿಸಿಕೊಳ್ಳಬೇಕಿದೆ. ಎಲ್ಲಾ ಜಾತಿ, ಧರ್ಮ ಭಾಷೆಯ ಗಡಿಗಳನ್ನು ಮೀರಿ ಜನರನ್ನು ಆದರಿಸುವ ಮೂಲಕ ರಾಜಕೀಯ ಪಕ್ಷಗಳ ಸಂಚನ್ನು ವಿಫಲಗೊಳಿಸಬೇಕಿದೆ ದ್ವೇಷ ಮಿತಿಮೀರಿ ಬೆಳೆಯುತ್ತಿರುವುದು ನಿಜ. ಹಾಗಂತ ಕೈ ಚೆಲ್ಲಿ ಕೂರದೆ ನಮ್ಮ ದೇಶವನ್ನು ಕಾಪಾಡಿಕೊಳ್ಳಲು ನಾವು ಕಾರ್ಯ ಪ್ರವೃತ್ತರಾಗಬೇಕಿದೆ. ದ್ವೇಷ ನಂದಿಸಲು ಮತ್ತು ಪ್ರೀತಿ ಬೆಳೆಸಲು ನಮ್ಮಿಂದ ಸಾಧ್ಯವಿರುವ ಎಲ್ಲಾ ಪುಯತ್ನ ಮಾಡಬೇಕಿದೆ. ಸುಳ್ಳು ಕ್ಷಣಿಕ ಸತ್ಯ ಶಾಶ್ವತ, ಸತ್ಯ, ಪ್ರೀತಿ, ಸೌಹಾರ್ದತೆ ಸಾಮರಸ್ಯ ಮತ್ತು ಸಹಬಾಳ್ವೆಯ ಹಾದಿಯಲ್ಲಿ ಧೃಢವಾಗಿ ಹೆಜ್ಜೆ ಹಾಕೋಣ. ಇಂತಹ ದುರಿತ ಕಾಲದಲ್ಲಿ ನಾಡಿನ ಚಾರಿತ್ರಿಕ ನೆಲವಾದ ಶ್ರೀರಂಗಪಟ್ಟಣದಲ್ಲಿ ಸೌಹಾರ್ದ ಮನಸುಗಳ ಅಪೂರ್ವ ಸಂಗಮ ಜರುಗಲಿದೆ. ಹೆಗಲಿಗೆ ಹೆಗಲಾಗಿ ಜೊತೆಗೂಡಿ ನಡೆಯಲು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬನ್ನಿ ಸತ್ಯವನ್ನು ಅರಿತು ಭಯ ಮುಕ್ತ ನಾಡಿಗಾಗಿ ಮುನ್ನಡೆಯೋಣ….ಎಂಬುದು ಈ ಸಮಾವೇಶದ ಸಂದೇಶವಾಗಿದೆ.

ಗೋಷ್ಠಿಯಲ್ಲಿ ಸಮಾನ ಮನಸ್ಕರ ವೇದಿಕೆಯ ಮುಖಂಡರಾದ ಎಂ.ಪುಟ್ಟಮಾದು, ಮುಖ್ತಿಯಾರ್ ಅಹಮದ್, ಟಿ.ಡಿ.ನಾಗರಾಜು, ಎಂ.ವಿ.ಕೃಷ್ಣ, ‍ಷಣ್ಮುಖೇಗೌಡ ಹಾಗೂ ಶಿಲ್ಪ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!