Thursday, September 19, 2024

ಪ್ರಾಯೋಗಿಕ ಆವೃತ್ತಿ

ಹಾಸನ ಅಭಿವೃದ್ಧಿಯಾದರೆ ಸಾಕೇ ? ಮಂಡ್ಯ ಅಭಿವೃದ್ಧಿ ಆಗಬೇಡವೇ ? : ಪಿ‌.ಎಂ.ನರೇಂದ್ರಸ್ವಾಮಿ

ಕಳೆದ 20 ವರ್ಷಗಳಿಂದ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾದರೂ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ ಎಂದು ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ವಾಗ್ದಾಳಿ ನಡೆಸಿದರು.

ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷದ ಶಾಸಕರು ಆಯ್ಕೆಯಾದರೂ ಹಾಸನದ ಅಭಿವೃದ್ಧಿಯಾಗಿದೆಯೇ ಹೊರತು ಮಂಡ್ಯ ಅಭಿವೃದ್ಧಿಯಾಗಿಲ್ಲ. ಈ ಬಗ್ಗೆ ಜನರು ಯೋಚಿಸಿ ನಿರ್ಧರಿಸಬೇಕು. ಎಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆ ಅಭಿವೃದ್ಧಿಗೆ ಎಂಟು ಸಾವಿರ ಕೋಟಿ ಕೊಟ್ಟಿದ್ದೆ ಎಂದಿದ್ದರು. ಮಂಡ್ಯದ ಜನ ಎಚ್.ಡಿ.ಕುಮಾರಸ್ವಾಮಿ ಅವರನ್ನು 8,000 ಕೋಟಿ ಎಲ್ಲಿ ಎಂದು ಕೇಳಬೇಕು. ಕೇವಲ ಹಾಸನದ ಅಭಿವೃದ್ಧಿ ಆದರೆ ಸಾಕೇ? ಮಂಡ್ಯ ಅಭಿವೃದ್ಧಿ ಆಗುವುದು ಬೇಡವೇ ಎಂದು ಪ್ರಶ್ನಿಸಿದರು.

ಒಂದು ಮನೆ ತಂದಿಲ್ಲ

ಮಳವಳ್ಳಿ ಕ್ಷೇತ್ರಕ್ಕೆ ಕಳೆದ ಐದು ವರ್ಷಗಳಿಂದ ಒಂದು ಮನೆಯನ್ನು ಅನ್ನದಾನಿ ತಂದಿಲ್ಲ. ಅಂಬೇಡ್ಕರ್ ಭವನಕ್ಕೆ ಯಾರ ಅವಧಿಯಲ್ಲಿ ಹಣ ಮಂಜೂರು ಆಗಿದೆ ಎಂಬುದಕ್ಕೆ ಸದನದಲ್ಲಿಯೇ ಸರ್ಕಾರ ಉತ್ತರ ನೀಡಿದೆ. ಅಂಬೇಡ್ಕರ್ ಭವನ ಶಂಕುಸ್ಥಾಪನೆ, ಉದ್ಘಾಟನೆ ಎರಡು ಕೂಡ ನನ್ನ ಅವಧಿಯಲ್ಲಿಯೇ ಆಗಿದ್ದರೂ, ಅನ್ನದಾನಿ ಅಂಬೇಡ್ಕರ್ ಭವನದಲ್ಲಿ ಎರಡೆರಡು ಕಲ್ಲು ಹಾಕಿಸಿದ್ದಾರೆ. ಪಾಲಿಟೆಕ್ನಿಕ್ ಕಾಲೇಜು ನನ್ನ ಅವಧಿಯಲ್ಲಿ ಮಂಜೂರು ಮಾಡಿಸಿದ್ದರೂ, ಅಲ್ಲಿಗೆ ಕಲ್ಲು ಹಾಕಲು ಹೋಗಿದ್ದ ಅನ್ನದಾನಿಗೆ ಇದಕ್ಕೆ ಜನರೇ ಸರಿಯಾದ ಉತ್ತರ ನೀಡಿದ್ದಾರೆ. ಸ್ಲಂ ಬೋರ್ಡ್ ನಿಂದ 500 ಮನೆ ಮಂಜೂರು ಮಾಡಿಸಿದರೆ ಅದನ್ನು ನಾನೇ ಮಾಡಿದೆ ಅಂತ ಬೋರ್ಡು ಹಾಕಿದ್ದಾನೆ‌. ಕನಕ ಭವನಕ್ಕೆ 2 ಕೋಟಿ ಹಣ ಮಂಜೂರು ಮಾಡಿಸಿದ್ದೆ ನಾನು. ಆದರೆ ಈತ ನಾನೇ ಮಾಡಿಸಿದ್ದು ಎಂದು ಹೇಳಿಕೊಂಡು ತಿರುಗುತ್ತಿದ್ದಾನೆ ಎಂದು ಟೀಕಿಸಿದರು.

ಮಳವಳ್ಳಿಯ ಡ್ಯಾನ್ಸ್ ಮಾಸ್ಟರ್, ಸಿಂಗರ್ ಈಗ ಇನ್ನೊಂದು ನಾಟಕ ಶುರು ಮಾಡಿದ್ದಾನೆ. ತನ್ನದೇ ಪಕ್ಷದ ಜನರಿಗೆ ಹಾರ ಹಾಕಿ ಕಾಂಗ್ರೆಸ್ ಪಕ್ಷ ತ್ಯಜಿಸಿ ಜೆಡಿಎಸ್ ಸೇರ್ಪಡೆಯಾದರು ಎಂದು ನಾಟಕ ಮಾಡಿಕೊಂಡು ತಿರುಗುತ್ತಿದ್ದಾನೆ ಎಂದು ಕಿಡಿಕಾರಿದರು.

ಸುಮಲತಾಗೆ ನೀಡಲು ಸಾಧ್ಯವಿರಲಿಲ್ಲ

ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರಿಗೆ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಟಿಕೆಟ್ ಕೇಳಿದಾಗ ನಿರಾಕರಿಸಿದರು ಎಂಬುದು ಸರಿಯಲ್ಲ. ಅಂದು ಮೈತ್ರಿ ಪಕ್ಷದ ಸರ್ಕಾರ ಇತ್ತು. ಹಾಗಾಗಿ ಸುಮಲತಾ ಅವರಿಗೆ ಟಿಕೆಟ್ ನೀಡಲು ಸಾಧ್ಯವಿರಲಿಲ್ಲ. ಆದರೂ ಮಂಡ್ಯದ ಜನ ಪಕ್ಷಾತೀತವಾಗಿ ನಮ್ಮ ಯಾರ ಮಾತಿಗೆ ಬೆಲೆ ಕೊಡದೆ ಮೈತ್ರಿ ಅಭ್ಯರ್ಥಿಯನ್ನು ತಿರಸ್ಕರಿಸಿದರು ಎಂದರು.

ಕಾಂಗ್ರೆಸ್ ಪಕ್ಷ ಅಭಿವೃದ್ಧಿಗೋಸ್ಕರ ಇದ್ದು, ಮಂಡ್ಯ ಜಿಲ್ಲೆಯ ಅಭಿವೃದ್ಧಿಗಾಗಿ ಒಂದು ಬಾರಿ ಜನರು ಕಾಂಗ್ರೆಸ್ ಪಕ್ಷದ ಕೈ ಹಿಡಿಯಬೇಕು ಎಂದು ಮನವಿ ಮಾಡಿದರು. ಸಿದ್ದರಾಮಯ್ಯನವರ ಕ್ಷೇತ್ರದ ಆಯ್ಕೆಯಲ್ಲಿ ಯಾವುದೇ ಗೊಂದಲವಿಲ್ಲ. ಮೂಢನಂಬಿಕೆಗೆ ಅವರು ಎಂದು ಪ್ರೋತ್ಸಾಹ ನೀಡಲ್ಲ. ಅವರು ಒಂದೇ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು ಸೇರಿದಂತೆ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!