Thursday, September 19, 2024

ಪ್ರಾಯೋಗಿಕ ಆವೃತ್ತಿ

ಸರ್ಕಾರದ ನಿರ್ಲಕ್ಷ್ಯದಿಂದ ನಾಡಿಗೆ ಸಂಕಷ್ಟ- ಹೆಚ್.ಡಿ.ಕುಮಾರಸ್ವಾಮಿ

ರಾಜ್ಯ ಸರ್ಕಾರ ನಮ್ಮ ಬರ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವಲ್ಲಿ ಹಾಗೂ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಎಡವಿದ ಹಿನ್ನೆಲೆಯಲ್ಲಿ ಕರುನಾಡಿಗೆ ಕಾವೇರಿ ಸಂಕಷ್ಟ ಎದುರಾಗಿದೆ, ಇದಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅತೃಪ್ತಿ ಹೊರಹಾಕಿದರು.

ಮಂಡ್ಯ ಜಿಲ್ಲೆಯ ಮಾಜಿ ಸಚಿವರು ಹಾಗೂ ಶಾಸಕರೊಂದಿಗೆ ಕನ್ನಂಬಾಡಿ ಅಣೆಕಟ್ಟೆ ವೀಕ್ಷಣೆ ಮಾಡಿದ ತರುವಾಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಧಿಕಾರದ ಸಭೆಯಲ್ಲಿ ಪ್ರತಿನಿತ್ಯ ಐದು ಸಾವಿರ ಕ್ಯೂಸೆಕ್  ಬಿಡಬೇಕು ಎಂದು ಆದೇಶಿಸಿದೆ. ನಮ್ಮವರು ಲಘುವಾಗಿ ಈ ವಿಚಾರವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ತಮಿಳುನಾಡು ಅಧಿಕಾರಿಗಳು 15 ಜನ ಇರ್ತಾರೆ. ಸಭಾತ್ಯಾಗ ಮಾಡಿ ಕೋರ್ಟ್‌ಗೆ ಅರ್ಜಿ ಹಾಕಿದ್ದಾರೆ. ನಮ್ಮವರಿಗೆ ನೀವು ನೀರು ಬಿಡಬೇಡಿ, ನಾವು ಕೋರ್ಟ್‌ಗೆ ಹೋಗೋಣಾ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದೆ, ಕೂಡಲೇ ಸರ್ವ ಪಕ್ಷಗಳ ಸಭೆ ಕರೆಯಲು ತಿಳಿಸಿದ್ದೆ, ನಮಗೆ ಪೇಪರ್, ಪೆನ್ ಕೊಡಿ ನಿಮ್ಮ ಉಳಿಸುತ್ತೇವೆ ಎಂದು ನೀರಾವರಿ ಸಚಿವರು ಕೇಳಿದ್ರು. ರೈತರು ಅವರಿಗೆ ಅಧಿಕಾರ ಕೊಟ್ಟರು. ಇದೀಗ ರೈತರನ್ನೇ ಕೋರ್ಟ್‌ಗೆ ಹೋಗಿ ಅಂತಾರೆ ಇದು ಸರ್ಕಾರದ ನಡೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾವೇರಿ ಜಲಾನಯನ ಪ್ರದೇಶ ವ್ಯಾಪ್ತಿಯ ರೈತರ ಬೆಳೆ ಉಳಿಸಿಕೊಳ್ಳಲು ಎರಡು ಕಟ್ಟು ನೀರು ಬಿಡಬೇಕಾದ ಅನಿವಾರ್ಯತೆ ಇದೆ, ಐದು ವರ್ಷಕ್ಕೊಮ್ಮೆ ಈ ರೀತಿ ಬರ ಪರಿಸ್ಥಿತಿ ಎದುರಾಗುತ್ತದೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯತನದಿಂದ ತಮಿಳುನಾಡಿಗೆ ನೀರು ಹರಿದು ಹೋಗುತ್ತಿದೆ, ಇದರಿಂದ ಬೇಸತ್ತ ರೈತ, ಕನ್ನಡ ಪರ ಸಂಘಟನೆಗಳು ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿವೆ ಎಂದು ತಿಳಿಸಿದರು.

ಕಳೆದ ಒಂದು ತಿಂಗಳಿನಿಂದ ತಮಿಳುನಾಡಿಗೆ ಹರಿದು ಹೋಗಿರುವ ನೀರನ್ನು ನಿಲ್ಲಿಸಿದ್ರೆ, ನಮ್ಮ ರೈತರನ್ನು ಉಳಿಸಬಹುದಿತ್ತು. ಆದ್ರೆ ಇವರು ಪ್ರಾಧಿಕಾರ ಹೇಳಿದ ತಕ್ಷಣ ನೀರು ಬಿಟ್ಟರು, ಕೋರ್ಟ್ ನಮ್ಮ ಮುಂದೆ ಬರಬೇಡಿ, ನೀವು ಕೂತು ತೀರ್ಮಾನ ಮಾಡಿಕೊಳ್ಳಿ ಅಂತಾ ತಿಳಿಸಿದೆ, ನ್ಯಾಯಾಂಗ ನಿಂದನೆ ಬೆದರಿಕೆಯಿಂದ ಇವರು ನೀರು ಹರಿಸಲು ಮುಂದಾಗಿದ್ದಾರೆ, ಇದು ಸರಿಯಲ್ಲವೆಂದರು.

2013ರಲ್ಲಿ ಜ್ಞಾನಿಚಂದ್ ಎಂಬಾತ ಸುಪ್ರೀಂಕೋರ್ಟ್‌ಗೆ ಆಂಧ್ರ ಪ್ರದೇಶದ ನೀರಾವರಿ ವಿಚಾರವಾಗಿ ಅರ್ಜಿ ಹಾಕಿದ್ದ. ಅಲ್ಲಿ ಕೋರ್ಟ್ ಆದೇಶ ಪಾಲನೆ ಮಾಡಿಲ್ಲ ಎಂದು‌ ಹೇಳಿದ್ರು. ಆಗ ಪಾಲಿಸಲಾಗದ ಆದೇಶವನ್ನು ಪಾಲಿಸಲು ಆಗದೇ ಇರುವುದು, ನ್ಯಾಯಾಂಗ ನಿಂದನೆ ಆಗಲ್ಲ ಎಂದು ಕೋರ್ಟ್ ತೀರ್ಪು ನೀಡಿತ್ತು.
ಇದನ್ನು ಉದಾಹರಣೆ ತೆಗೆದುಕೊಂಡು ರಾಜ್ಯ ಸರ್ಕಾರ ಧೃಡ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ತಮಿಳುನಾಡಿನ ಅಧಿಕಾರಿಗಳು ದಾಖಲೆ ಸಮೇತ ಸಭೆಗೆ ಹೋಗ್ತಾರೆ. ನಮ್ಮವರು ವರ್ಚುವಲ್ ಮೀಟಿಂಗ್‌ನಲ್ಲಿ ಕೂರುತ್ತಾರೆ. ತಮಿಳುನಾಡು ಅಧಿಕ ಪ್ರಮಾಣದಲ್ಲಿ ಕೃಷಿ ಭೂಮಿ ವಿಸ್ತಾರ ಮಾಡಿಕೊಂಡಿದೆ. ಇದು  ಕಾನೂನು‌ ಬಾಹಿರವಾಗಿದೆ. ಈ ವಿಚಾರವನ್ನು ನಮ್ಮ ಅಧಿಕಾರಿಗಳು ಪ್ರಶ್ನೆಯೇ ಮಾಡಿಲ್ಲ  ಎಂದರು.

2007ರಲ್ಲಿ ಅಂತಿಮ ತೀರ್ಪು ಪ್ರಕಟವಾಯಿತು, ಆಗ ನಾನು ಸಿಎಂ ಆಗಿದ್ದೆ. ಆಗ ನಾವು ಹೆಚ್ಚುವರಿ ನೀರು ಬೇಕು ಅಂತಾ ಸುಪ್ರೀಂಕೋರ್ಟ್‌ಗೆ ಅರ್ಜಿ ಹಾಕಿದ್ದೋ. ಆಗ ನಮಗೆ 14.5 ಟಿಎಂಸಿ ಹೆಚ್ಚುವರಿ ನೀರು ಲಭ್ಯವಾಯಿತು.
ನಮ್ಮ ರಾಜ್ಯದಲ್ಲಿ ಹಲವು ನಿವೃತ್ತ ಮುಖ್ಯ ನ್ಯಾಯಾಧೀಶರಿದ್ದು, ಅವರ ಸಲಹೆಗಳನ್ನು ಸ್ವೀಕರಿಸಬೇಕು. ಅವರ ಜೊತೆ ಚರ್ಚಿಸಿ ಕೋರ್ಟಿಗೆ ಅರ್ಜಿ ಸಲ್ಲಿಸಿ ನ್ಯಾಯ ಪಡೆಯಬೇಕೆಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಜಿ.ಟಿ.ದೇವೇಗೌಡ, ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಮಾಜಿ ಶಾಸಕ ರಾದ ರವೀಂದ್ರ ಶ್ರೀಕಂಠಯ್ಯ, ಕೆ.ಸುರೇಶ್ ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮುಖಂಡ ಬಿ.ಆರ್.ರಾಮಚಂದ್ರು ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!