Thursday, September 19, 2024

ಪ್ರಾಯೋಗಿಕ ಆವೃತ್ತಿ

ದುಬೈನಲ್ಲಿ ಕನ್ನಡ ಸಂಸ್ಕೃತಿ ಅನಾವರಣ ಹೆಮ್ಮೆ ತಂದಿದೆ- ಹೆಚ್.ಡಿ ಕುಮಾರಸ್ವಾಮಿ

ಕನ್ನಡ ನಾಡಿನಲ್ಲಿ ಜನಿಸಿ ಉದ್ಯೋಗವನ್ನರಸಿಕೊಂಡು ದುಬೈಗೆ ಬಂದು ನೆಲೆಸುವ ಮೂಲಕ ಉತ್ತಮ ಜೀವನ ಕಟ್ಟಿಕೊಂಡಿರುವ ಅನಿವಾಸಿ ಕನ್ನಡಿಗರು, ದುಬೈನಗರದಲ್ಲಿ ಕನ್ನಡ ನಾಡಿನ ಸಂಸ್ಕತಿ, ಹಿರಿಮೆ- ಗರಿಮೆ ಅನಾವರಣ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಣ್ಣಿಸಿದರು.

ದುಬೈನಗರದಲ್ಲಿ ಯುಎಇ ಒಕ್ಕಲಿಗರ ಸಂಘದ ವತಿಯಿಂದ ನಡೆದ ನಾಡಪ್ರಭು ಕೆಂಪೇಗೌಡ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದೇಶಗಳಲ್ಲಿ ಬಂದು ನೆಲೆಸಿದ್ದರೂ ತಮ್ಮ ಮನದ ತುಡಿತ ಕನ್ನಡವೇ ಆಗಿರುತ್ತದೆ ಎಂಬುದನ್ನು ಇಲ್ಲಿನ ಕನ್ನಡಿಗರು ತೋರಿಸಿಕೊಟ್ಟಿದ್ಧಾರೆ, ಅಲ್ಲದೇ ಅನುಭವಿ ಕಲಾವಿದರಂತೆ ನೃತ್ಯ ಪ್ರದರ್ಶನ, ಗೀತಾ ಗಾಯನ ಇನ್ನಿತರೆ ಕಾರ್ಯಕ್ರಮಗಳ ಪ್ರದರ್ಶನ ನೀಡುತ್ತಿರುವುದು, ತಾನು ಕನ್ನಡ ನಾಡಿನಲ್ಲೇ ಇದ್ದೇನೆ ಎಂಬ ಭಾವನೆಯನ್ನು ಮೂಡಿಸುತ್ತಿದೆ ಎಂದು ತಮ್ಮ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದರು.

ನಾಡಪ್ರಭು ಕೆಂಪೇಗೌಡರು 16ನೇ ಶತಮಾತನದಲ್ಲಿ ಬೆಂಗಳೂರಿಗೆ ಭದ್ರ ಬುನಾದಿ ಹಾಕಿದ್ದರು, ಇಂದು ಬೆಂಗಳೂರು ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿದೆ, ಇದಕ್ಕೆ ನಮ್ಮ ಪೂರ್ವಿಕರು ನೀಡಿದ ಕೊಡುಗೆಯೇ ಕಾರಣವಾಗಿದೆ. ಕರ್ನಾಟಕದ ಜಿಡಿಪಿ ಹಾಗೂ ದೇಶದ ಜಿಡಿಪಿಗೆ ಒಕ್ಕಲಿಗ ಸಮುದಾಯದ ಕೊಡುಗೆ ಸಲ್ಲುತ್ತದೆ ಎಂದರು.

ಭಾರತ ಇನ್ನೂ ಏಳೆಂಟು ವರ್ಷಗಳಲ್ಲಿ ವಿಶ್ವದ ಮೂರನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ, ಪ್ರತಿ ವರ್ಷ ಸುಮಾರು 25 ಲಕ್ಷ ಕೋಟಿ ಹಣ ಬ್ಲಾಕ್ ಮನಿ ರೂಪದಲ್ಲಿ ವಿದೇಶಗಳನ್ನು ಸೇರಿತ್ತಿದೆ ಎಂಬ ವಿಷಯವನ್ನು ವೈದ್ಯನಾಥನ್ ಅವರು ಬರೆದಿರುವ ಕೃತಿಯಿಂದ ತಿಳಿದಿದ್ದೇನೆ, ಇಂತಹ ಬ್ಲಾಕ್ ಮನಿಯನ್ನು ತಡೆಗಟ್ಟಿದರೆ ದೇಶದಲ್ಲಿ ಬಡತನವನ್ನು ತಗ್ಗಿಸಿ, ಇನ್ನಷ್ಟು ಅಭಿವೃದ್ದ ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು.

ಉದ್ಯಮಿ ಹಾಗೂ ಚಿತ್ರ ನಿರ್ಮಾಪಕ ಉಮಾಪತಿ ಗೌಡ ಮಾತನಾಡಿ, ಒಕ್ಕಲಿಗ ಸಮುದಾಯಕ್ಕೆ ಹೇಗೆ ಗೌರವ ಸಲ್ಲಿಸಬೇಕೆಂಬುದನ್ನು ದುಬೈ ಕನ್ನಡಿಗರರಿಂದ ನೋಡಿ ಕಲಿಯಬೇಕಿದೆ. ನಮ್ಮ ಸಮುದಾಯ ಬೆವರು ಸುರಿಸಿ ದುಡಿದು ಬದುಕುವ ವರ್ಗವಾಗಿದೆ, ಯಾರಿಗೂ ಮೋಸ ಮಾಡುವ ಪ್ರವೃತ್ತಿಯನ್ನು ಹೊಂದಿಲ್ಲ, ಅದಕ್ಕಾಗಿಯೆ ಮಾರವಾಡಿಗಳು ನಮ್ಮ ಸಮುದಾಯದವರಿಗೆ ಹೆಚ್ಚು ಪ್ರಮಾಣದಲ್ಲಿ ಸಾಲ ನೀಡುತ್ತಾರೆ. ನಮ್ಮ ಸಮುದಾಯಕ್ಕೆ ಯಾರೂ ಗಾಡ್ ಫಾದರ್ ಗಳಿಲ್ಲ, ನಮ್ಮ ಪರಿಶ್ರಮದಿಂದ ನಾವು ಮೇಲೆ ಬಂದಿದ್ದೇವೆ ಎಂದರು.

ಸಮಾರಂಭದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಪ್ರೊ.ಕೃಷ್ಣಗೌಡ, ಯುಎಇ ಒಕ್ಕಲಿಗರ ಸಂಘದ ಅಧ್ಯಕ್ಷೆ ಡಾ.ರಶ್ನಿ ಸೇರಿದಂತೆ ಕರ್ನಾಟರ ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!