Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಧಿಕಾರ ದುಬರ್ಳಕೆ ಮಾಡಿ, ಅಮಾಯಕರ ಮೇಲೆ ದೌರ್ಜನ್ಯ: HDK

ಕೆರಗೋಡು ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಅಧಿಕಾರಿ ವರ್ಗವನ್ನು ದುರುಪಯೋಗಪಡಿಸಿಕೊಂಡು ಅಮಾಯಕ ರೈತರು ಹಾಗೂ ಮಹಿಳೆಯರ ಮೇಲೆ ನಡೆಸಿರುವ ದೌರ್ಜನ್ಯ ನಡೆಸಿದ್ದು, ನನ್ನ ಹೋರಾಟ ನಿಲ್ಲುವುದಿಲ್ಲವೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ-ಜೆಡಿಎಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ನಡವಳಿಕೆಯನ್ನು ಹಿಂದೂ ಸಂಘಟನೆ ಹಾಗೂ ಹನುಮ ಭಕ್ತರು ಎಂದಿಗೂ ಸಹಿಸುವುದಿಲ್ಲ, ಅಮಾಯಕರ ಮೇಲಿನ ದೌರ್ಜನ್ಯವನ್ನು ಸುಲಭವಾಗಿ ಅರಗಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಸರ್ಕಾರ ಮನಗಾಣಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಚರ್ಚಿಸುವ ಮುಖ್ಯಮಂತ್ರಿಗಳ ಹೆಸರಿನಲ್ಲಿ ರಾಮ ಎಂಬ ಪದವಿದ್ದರೆ ಸಾಲದು, ಶ್ರೀರಾಮನ ತತ್ವ ಅನುಕರಣೆಯಾಗಬೇಕು, ಜನರ ಭಾವನೆ ಹಾಗೂ ಪ್ರಾಣದ ವಿರುದ್ದ ನಡೆಸುವ ದಬ್ಬಾಳಿಕೆಗೆ ನಮ್ಮ ಹೋರಾಟ ನಿರಂತರವಾಗಲಿದೆ ಎಂದರು.

ಹನುಮನ ಧ್ವಜ ಹಾಗೂ ರಾಷ್ಟ್ರ ಧ್ವಜಕ್ಕೆ ಅಧಿಕಾರಿಗಳು ಅವಮಾನ ಮಾಡಿದ್ದಾರೆ, ಪ್ರಶ್ನಿಸಲು ಮುಂದಾದ ಮಹಿಳೆಯರು ಹಾಗೂ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ. ಇದರ ಹೊಣೆಗಾರಿಕೆಯನ್ನು ಜಿಲ್ಲಾಡಳಿತ ಹೊರಬೇಕು. ಆಗಿರುವ ಅವಿವೇಕತನಕ್ಕೆ ಜಿಲ್ಲಾಧಿಕಾರಿ ವರ್ಗಾವಣೆಯಾಗಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ವಿಧಿಸಿರುವ 144 ನೇ ಸೆಕ್ಷನ್ ರದ್ದುಗೊಳಿಸಿ ಧ್ವಜ ಹಾರಾಟಕ್ಕೆ ಅನುವು ಮಾಡಿಕೊಡಬೇಕು. ಕೆರಗೋಡು ಗ್ರಾಮದ ರಕ್ಷಣೆ ಹೊಣೆಗಾರಿಕೆಯನ್ನು ನಾನೇ ಹೊರುತ್ತೇನೆಂದು ತಿಳಿಸಿದರು.

ಬಿಜೆಪಿ ಮುಖಂಡ ಸಿ.ಟಿ.ರವಿ ಮಾತನಾಡಿ, ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿ ವಿರುದ್ದ ಶ್ರೀರಾಮ ಮತ್ತು ಹನುಮ ಭಕ್ತರನ್ನು ಕೆಣಕಿದ ಸರ್ಕಾರದ ನಡವಳಿಕೆ ವಿರುದ್ದ ನಮ್ಮ ಹೋರಾಟ ನಡೆದಿದೆ, ರಾಮಾಯಣದ ಹನುಮಂತ ಜನಿಸಿದ ನಾಡಿನಲ್ಲಿ ಹನುಮ ಧ್ವಜ ಹಾರಿಸುವುದು ಅಪರಾಧವೇ ಎಂದು ಪ್ರಶ್ನಿಸಿದ ಅವರು, ಶ್ರೀರಾಮ ಮತ್ತು ಹನುಮನನ್ನು ಕೆಣಕಿದ ಸರ್ಕಾರ ನಾಶವಾಗಲಿದೆ ಎಂದು ಎಚ್ಚರಿಸಿದರು.

ವೇದಿಕೆಯಲ್ಲಿ ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಕೆ.ಸಿ.ನಾರಾಯಣಗೌಡ, ಶಾಸಕ ಹೆಚ್.ಟಿ.ಮಂಜು, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಪ್ರೀತಮ್ ಗೌಡ, ಕೆ.ಸುರೇಶ್ ಗೌಡ, ಕೆ.ಸುರೇಶ್ ಗೌಡ, ಡಾ.ಅನ್ನದಾನಿ, ಮುಖಂಡರಾದ ಬಿ.ಆರ್.ರಾಮಚಂದ್ರು, ಲಕ್ಷ್ಮಿ ಅಶ್ವಿನ್ ಗೌಡ, ಡಾ.ಸಿದ್ದರಾಮಯ್ಯ, ಎಸ್.ಪಿ.ಸ್ವಾಮಿ, ಸಚ್ಚಿದಾನಂದ, ಅಶೋಕ್ ಜಯರಾಂ, ಡಿ.ರಮೇಶ್, ಡಾ.ಇಂದ್ರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!