Thursday, September 19, 2024

ಪ್ರಾಯೋಗಿಕ ಆವೃತ್ತಿ

ಜಿಎಸ್‌ಟಿ ಹಣ ಬಡವರ ಬದುಕಿಗೋ?, ಒಂದೆರಡು ಕಂಪನಿಗಳ ಉದ್ಧಾರಕ್ಕೋ? – ಹೆಚ್.ಡಿ.ಕುಮಾರಸ್ವಾಮಿ

ದೇಶದ ಜನರು ಇಂತಹ ಕಷ್ಟದ ಸಮಯದಲ್ಲೂ ತೆರಿಗೆ ಕಟ್ಟುತ್ತಿದ್ದಾರೆ. ಆ ಹಣ ಬಡವರ ಬದುಕಿಗೆ ಉಪಯೋಗ ಆಗುತ್ತಿದೆಯೋ ಅಥವಾ ಒಂದೆರಡು ಕಂಪನಿಗಳ ಉದ್ಧಾರ ಮಾಡಲು ಬಳಕೆಯಾಗುತ್ತಿದೆಯೋ ಎಂಬುದನ್ನು ಜನರ ಮುಂದಿಡಬೇಕು. ಏಕೆಂದರೆ ದೇಶದಲ್ಲಿ ಜಿಎಸ್‌ಟಿ ತೆರಿಗೆ ದಾಖಲೆ ಪ್ರಮಾಣದಲ್ಲಿ ಸಂಗ್ರಹ ಆಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ರಾಯಚೂರಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ”ಕರ್ನಾಟಕದ 10 ಜಿಲ್ಲೆಯಲ್ಲಿ ಬಡತನವಿದೆ ಎಂದು ಕೇಂದ್ರದ ವರದಿಯಲ್ಲಿದೆ. ರಾಯಚೂರು ಜಿಲ್ಲೆಯ ಅಪೌಷ್ಟಿಕತೆ ಸಮಸ್ಯೆಗೆ ಬಿಜೆಪಿ ಸರ್ಕಾರ ಏನು ಪರಿಹಾರ ಕಲ್ಪಿಸಿದೆ ಎನ್ನುವುದನ್ನು ಪ್ರಧಾನಮಂತ್ರಿ ರಾಯಚೂರು ಜಿಲ್ಲೆಯ ಸಿಂಧನೂರಿಗೆ ಬಂದಾಗ ಹೇಳಬೇಕು” ಎಂದು ಒತ್ತಾಯಿಸಿದರು.

ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ರಾಷ್ಟ್ರೀಯ ನಾಯಕರು ರಾಜ್ಯ ಚುನಾವಣಾ ಪ್ರಚಾರಕ್ಕೆ ಬರುತ್ತಿರುವ ಬಗ್ಗೆ ಮಾತನಾಡಿದ ಅವರು, ”ಎರಡೂ ರಾಷ್ಟ್ರೀಯ ಪಕ್ಷಗಳ ಉತ್ತರ‌ ಭಾರತದ ನಾಯಕರಿಗೆ ಕರ್ನಾಟಕದ ಮೇಲೆ ಇತ್ತೀಚೆಗೆ ಪ್ರೀತಿ ಹೆಚ್ಚಾಗಿದೆ. ಪ್ರಧಾನಮಂತ್ರಿ ಹಾಗೂ ಕೇಂದ್ರ ಗೃಹ ಸಚಿವರು ರಾಜ್ಯ ಬಿಟ್ಟು ಅಲಗಾಡುತ್ತಿಲ್ಲ. ಈ ಬಾರಿ ಕರ್ನಾಟಕದ ಜನರು ಹಣಬಲಕ್ಕಿಂತ ಜನಬಲ ಗೆಲ್ಲುತ್ತದೆ ಎಂಬುದನ್ನು ತೋರಿಸಲಿದ್ದಾರೆ” ಎಂದರು.

”ಬಿಜೆಪಿಯವರು 70 ಸೀಟು ಪಡೆಯಲು ಬೆವರು ಹರಿಸಬೇಕಾಗುತ್ತದೆ. ಈ ಸಲ ಪ್ರತಿ ಜಿಲ್ಲೆಯಲ್ಲಿ ಜೆಡಿಎಸ್ ಖಾತೆ ತೆರೆಯಲಿದೆ. ಉತ್ತರ ಕರ್ನಾಟಕ ಭಾಗದಲ್ಲಿಯೇ ಕನಿಷ್ಠ‌ 35 ಸ್ಥಾನಗಳನ್ನು ಪಡೆಯುತ್ತಿದ್ದೇವೆ. ದೇವೇಗೌಡರನ್ನು ಭೇಟಿ ಮಾಡಿದ ಧೂತರು ಯಾರು ಎಂಬುದು ಚುನಾವಣೆ ಬಳಿಕ ಬಹಿರಂಗವಾಗಲಿದೆ” ಎಂದು ಮೈತ್ರಿ ಸರ್ಕಾರ ರಚನೆಯ ಬಗ್ಗೆ ಸುಳಿವು ನೀಡಿದರು.

”ಸಮೀಕ್ಷೆಗಳನ್ನು ಹಣ ಕೊಟ್ಟು ಮಾಡಿಸುತ್ತಾರೆ. ಈ ಮೂಲಕ ಜನರ‌ ಭಾವನೆಗಳನ್ನು ಕದಡುವ ಯತ್ನ‌ ಮಾಡುತ್ತಿದ್ದಾರೆ. ಬಿಜೆಪಿ ಪ್ರಣಾಳಿಕೆಯಲ್ಲಿ ಜೆಡಿಎಸ್ ಪಂಚರತ್ನ ಯೋಜನೆಗಳನ್ನೇ ಬಹುತೇಕ ನಕಲು ಮಾಡಿಕೊಂಡಿದ್ದಾರೆ” ಎಂದು ಆರೋಪಿಸಿದರು.

ಈ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ”ಬಿಜೆಪಿಯವರ ಹೆಲಿಕಾಪ್ಟರ್ ಹಾರಿದ ನಂತರ ಬೇರೆ ಪಕ್ಷದವರ ಹೆಲಿಕಾಪ್ಟರ್ ಹಾರಲು ಅನುಮತಿ ನೀಡುತ್ತಿದ್ದಾರೆ. ಚುನಾವಣೆ ಆಯೋಗ ಈ ಬಗ್ಗೆ ಗಮನಹರಿಸಬೇಕಾಗಿತ್ತು. ಆದರೆ ಅದು ಆಗುತ್ತಿಲ್ಲ” ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!