ಮುಂ
ಮಂಡ್ಯನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಮಾದರಿ ನೀತಿ ಸಂಹಿತೆ ವಿಷಯದ ಬಗ್ಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಆಯೋಜಿಸಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚುನಾವಣಾ ವಿಷಯದಲ್ಲಿ ಸ್ವಂತ ವಿವೇಚನಗೆ ಅವಕಾಶವಿಲ್ಲ, ವಿವಿಧ ರೀತಿಯ ಕಾಯ್ದೆಗಳಿದ್ದು, ಅವುಗಳನ್ನು ಅನುಸರಿಸಿ ನಿಷ್ಪಕ್ಷಪಾತವಾಗಿ, ನಿರ್ಭಯವಾಗಿ, ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು ಎಂದರು.
ಮತದಾರರಿಗೆ ಆಮಿಷ
ಚುನಾವಣಾ ವೇಳಪಟ್ಟಿ ಪ್ರಕಟವಾದ ದಿನಾಂಕದಿಂದ ಮಾದರಿ ನೀತಿ ಸಂಹಿತೆ ಜಾರಿಗೆ ಬರುತ್ತಿತ್ತು, ಈ ಬಾರಿ ಮಾದರಿ ನೀತಿ ಸಂಹಿತೆ ಜಾರಿಗೂ ಮುನ್ನವೇ ಸಂಭಾವ್ಯ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಹಾಗೂ ಇನ್ನಿತರೆ ಮೂಲಗಳಿಂದ ಮತದಾರರಿಗೆ ಹಣದ ಆಮಿಷ ಒಡ್ಡುವುದು, ಬೇರೆ ವಸ್ತುಗಳನ್ನು ಹಂಚಿಕೆ ಮಾಡುವುದು ಕಂಡುಬಂದಿದೆ. ಆದ್ದರಿಂದ ದಾಳಿ ನಡೆಸಿ ನಿಯಮಾನುಸಾರ ಕ್ರಮ ಕೈಗೊಳ್ಳಿ ಎಂದು ಸೆಕ್ಟರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಚುನಾವಣಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾನೂನುಬದ್ಧವಾಗಿ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಚುನಾವಣಾ ಕೆಲಸದಲ್ಲಿ ಸಮಯಪ್ರಜ್ಞೆ ಅತಿಮುಖ್ಯ, ಯಾವುದೇ ಕಾರಣಕ್ಕೂ ಚುನಾವಣಾ ಕೆಲಸದಲ್ಲಿ ವಿಳಂಬ ಮಾಡಕೂಡದು, ವಿಳಂಬ ನೀತಿ ಅಥವಾ ಯಾವುದೇ ರೀತಿಯ ಅಶಿಸ್ತು ಕಂಡು ಬಂದಲ್ಲಿ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕ್ರಮಗಳನ್ನು ಸರಿಯಾಗಿ ಅನುಸರಿಸಿ
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಯತೀಶ್ ಎನ್ ಮಾತನಾಡಿ, ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಚುನಾವಣಾಧಿಕಾರಿಗಳು ಜಾರಿ ಮಾಡುತ್ತಾರೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದಾಗ ಬಹಳಷ್ಟು ಪ್ರಕರಣಗಳನ್ನು ಆರ್.ಪಿ ಆಕ್ಟ್, ಐ.ಪಿ.ಸಿ 171 ವ್ಯಾಪ್ತಿಗೆ ಬರುತ್ತದೆ ಅವುಗಳನ್ನು ದಾಖಲಿಸುವಾಗ ಎಫ್.ಐ.ಆರ್ ಯನ್ನು ನೇರವಾಗಿ ಪೊಲೀಸರು ದಾಖಲಿಸಲು ಬರುವುದಿಲ್ಲ. ಕೆಲವು ಪ್ರಕರಣಗಳನ್ನು ಮಾತ್ರ ಪೊಲೀಸ್ ಇಲಾಖೆ ನೇರವಾಗಿ ಎಫ್.ಐ.ಆರ್. ದಾಖಲಿಸಬಹುದು. ಎಫ್.ಎಸ್.ಟಿ, ಸೆಕ್ಟರ್ ಆಫೀಸರ್ ಗಳು ತಮ್ಮ ಬಳಿ ಇರುವ ದಾಖಲೆಗಳ ಬಗ್ಗೆ ಪೊಲೀಸರಿಗೆ ತಿಳಿಸಿ ಹಿಂಬರಹ ಪಡೆದು ತಮ್ಮ ವ್ಯಾಪ್ತಿಗೆ ಬರುವ ಜೆ.ಎಂ.ಎಫ್.ಸಿಯಲ್ಲಿ ದೂರು ಸಲ್ಲಿಸಬೇಕು. ನಂತರ ನ್ಯಾಯಾಲಯದ ನಿರ್ದೇಶನದ ಮೇಲೆ ಪೊಲೀಸ್ ಇಲಾಖೆಯಿಂದ ಎಫ್.ಐ.ಆರ್ ದಾಖಲಿಸಲಾಗುವುದು. ಎಫ್.ಐ.ಆರ್. ದಾಖಲಿಸುವಾಗ ಇರುವ ಕ್ರಮಗಳನ್ನು ಸರಿಯಾಗಿ ಅನುಸರಿಸಬೇಕು ಎಂದರು.
ನಿಯಮಗಳು ಹಾಗೂ ಕಾಯ್ದೆಗಳ ಬಗ್ಗೆ ತಿಳಿದುಕೊಳ್ಳಿ
ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್ ಹುಲ್ಮನಿ ಮಾತನಾಡಿ, ಚುನಾವಣಾ ವೇಳಾಪಟ್ಟಿ ಪ್ರಕಟವಾದ ನಂತರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಬೇಕಾಗುತ್ತದೆ. ಈಗಿನಿಂದಲೇ ಚುನಾವಣೆಗೆ ಸಂಬಂಧಿಸಿದಂತೆ ಇರುವ ನಿಯಮಗಳು ಹಾಗೂ ಕಾಯ್ದೆಗಳ ಬಗ್ಗೆ ತಿಳಿದುಕೊಳ್ಳಿ ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜು ಮಾತನಾಡಿ, ಚುನಾವಣಾ ಅಕ್ರಮಗಳು ನಡೆದಾಗ ಹಣ ಅಥವಾ ವಸ್ತುಗಳನ್ನು ಆಮಿಷದ ರೀತಿ ನೀಡುವ ವ್ಯಕ್ತಿ ಹಾಗೂ ಪಡೆಯುವ ವ್ಯಕ್ತಿಗಳು ಇಬ್ಬರೂ ಸಹ ಅಪರಾಧಿಗಳಾಗುತ್ತಾರೆ. ಇಬ್ಬರ ಮೇಲೂ ಕ್ರಮ ಜರುಗಿಸಬೇಕಾಗುತ್ತದೆ ಎಂದರು.
ತರಬೇತುದಾರ ಡಾ.ಶಶಿಧರ್ ರೆಡ್ಡಿ ಮಾತನಾಡಿ, ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ, ಶಾಂತಿಯುತ ಪಾರದರ್ಶಕವಾಗಿ ನಡೆಸಲು ರಾಜಕೀಯ ಪಕ್ಷ ಮತ್ತು ಅಭ್ಯರ್ಥಿಗಳಿಗೆ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಹಾಗೂ ನಿಯಮಗಳನ್ನು ಚುನಾವಣಾ ಆಯೋಗ ರೂಪಿಸಿದೆ. ಅವುಗಳನ್ನು ಅವರು ಕಟ್ಟುನಿಟ್ಟಾಗಿ ಪಾಲಿಸಬೇಕು. ಚುನಾವಣೆಗೆ ನಿಯೋಜಿಸಿರುವ ಸೆಕ್ಟರ್ ಅಧಿಕಾರಿಗಳು, ಫ್ಲಯಿಂಗ್ ಸ್ಕ್ವಾಡ್ ಗಳು ಹಾಗೂ ಇನ್ನಿತರೆ ಸಿಬ್ಬಂದಿಗಳು ಪರಿಶೀಲಿಸಿ ಚುನಾವಣಾ ಆಯೋಗ ನಿಗದಿಪಡಿಸಿರುವ ನಮೂನೆ ಹಾಗೂ ಸಮಯಕ್ಕೆ ವರದಿ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಕೀರ್ತನಾ, ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್, ಜಿಲ್ಲಾ ವಾರ್ತಾಧಿಕಾರಿ ಎಸ್. ಎಚ್ ನಿರ್ಮಲಾ, ಜಿ.ಪಂ.ಉಪ ಕಾರ್ಯದರ್ಶಿ ಬಾಬು ಎಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಾಗರಾಜು ಆರ್, ಮಂಡ್ಯ ತಹಶೀಲ್ದಾರ್ ವಿಜಯ್ ಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.




