ನೂತನ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಬೆಂಗಳೂರಿನ ಹೆಚ್.ಎಂ.ಟಿ ಕಾರ್ಖಾನೆ ಮತ್ತು ಭದ್ರಾವತಿ ಯಲ್ಲಿರುವ ವಿಶ್ವೇಶ್ವರಯ್ಯ ಉಕ್ಕು ಕಾರ್ಖಾನೆಗಳಿಗೆ ಜೀವ ತುಂಬಿ ಪುನಶ್ಚೇತನ ನೀಡುತ್ತೇನೆ ಎಂದು ಹೇಳಿರುವುದು ನಿಜಕ್ಕೂ ದುರದೃಷ್ಟಕರ ವಿಚಾರವಾಗಿದೆ.
ಕುಮಾರಸ್ವಾಮಿ ಅವರ ಹೇಳಿಕೆಯಂತೆ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳಿಗೆ ಜೀವ ತುಂಬಿದರೆ ಖಂಡಿತ ಖುಷಿ ಪಡಬಹುದಾಗಿತ್ತು, ಆದರೆ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೈಗಾರಿಕಾ ನೀತಿ ಏನು ಹೇಳುತ್ತದೆ ಎಂಬುದನ್ನು ಕುಮಾರಸ್ವಾಮಿ ಅವರು ತಿಳಿದುಕೊಂಡಿಲ್ಲ ಅಥವಾ ತಿಳಿದಿದ್ದರೂ ಸುಳ್ಳು ಹೇಳುತ್ತಿದ್ದಾರೆ ಎಂದಷ್ಟೇ ಹೇಳಬಹುದು.
ಮೋದಿ ಅವರ ಸರ್ಕಾರದ ಕೈಗಾರಿಕಾ ನೀತಿಯಲ್ಲಿ, ಸಾರ್ವಜನಿಕ ಉದ್ದಿಮೆಗಳಲ್ಲಿ ಇರುವ ಕೇಂದ್ರದ ಬಂಡವಾಳವನ್ನು ತೆಗೆಯಬೇಕೆಂದಿದೆ. ಅದಕ್ಕಾಗಿಯೇ ಡಿಸ್ ಇನ್ವೆಸ್ಟ್ ಮಿನಿಸ್ಟರ್ ಅವರನ್ನು ತೆಗೆದುಕೊಳ್ಳಲಾಗಿದೆ.
ಲಾಭದಾಯಕವಾಗಿದ್ದ ಉದ್ದಿಮೆಗಳಿಂದ ಕೇಂದ್ರ ಸರ್ಕಾರ ತನ್ನ ಪಾಲನ್ನು ಹಂತ ಹಂತವಾಗಿ ವಾಪಸ್ಸು ಪಡೆಯುತ್ತಿರುವಾಗ ಕುಮಾರಸ್ವಾಮಿ ರೋಗಗ್ರಸ್ತವಾಗಿರುವ ಉದ್ದಿಮೆಗಳನ್ನು ಪುನರುಜ್ಜೀವನಗೊಳಿಸುವುದು ಹೇಗೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮನೆ ಮಾಡಿದೆ. ಇದಕ್ಕೆ ಕಾಲವೇ ಉತ್ತರಿಸಲಿದೆ.




