Thursday, July 25, 2024

ಪ್ರಾಯೋಗಿಕ ಆವೃತ್ತಿ

ಸ್ತನ ಪ್ರದರ್ಶನ ಅಶ್ಲೀಲವೇ ಅಥವಾ ಲಿಂಗ ಸಮಾನತೆಯ ಸಂಕೇತವೇ……

ವಿವೇಕಾನಂದ ಎಚ್.ಕೆ

ಜಗತ್ತಿನ ಅತ್ಯಂತ ಶುದ್ಧ, ಸುಂದರ, ಮಾಲಿನ್ಯ ಮುಕ್ತ, ಭ್ರಷ್ಟಾಚಾರ ಮುಕ್ತ, ಶಾಂತಿಯುತ ನಾಗರಿಕ ದೇಶಗಳಲ್ಲಿ ಪ್ರಮುಖ ಸ್ಥಾನದಲ್ಲಿ ನಿಲ್ಲುವುದು ನಾರ್ವೆ‌. ತೀರ ಆಳಕ್ಕಿಳಿದು ಆ ದೇಶವನ್ನು ನೋಡಿ ಅಧ್ಯಯನ ಮಾಡಿದರೆ ಅಲ್ಲಿಯೂ ಕೆಲವು ಕೊರತೆಗಳು ಕಾಣಬಹುದು. ಮತ್ತು ಇರುತ್ತದೆ ಕೂಡ…..

ಆದರೆ ಅಂತರಾಷ್ಟ್ರೀಯವಾಗಿ ವಿಶ್ವದ ಅನೇಕ ಬಡ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳನ್ನು, ಅತ್ಯಧಿಕ ಜನಸಂಖ್ಯಾ ರಾಷ್ಟ್ರಗಳನ್ನು
ಹೋಲಿಕೆ ಮಾಡಿದಾಗ ನಿಜಕ್ಕೂ ನಾರ್ವೆ ಒಂದು ರೀತಿಯ ಸ್ವರ್ಗ ಸಮಾನ ಎಂದು ಕಲ್ಪಿಸಿಕೊಳ್ಳಬಹುದು. ಅಂತಹ ದೇಶದಲ್ಲಿ ಅದರ ರಾಜಧಾನಿ ಓಸ್ಲೋದಲ್ಲಿ ಅಲ್ಲಿನ ಸಾಂಸ್ಕೃತಿಕ ಮತ್ತು ಲಿಂಗ ಸಮಾನತೆಯ ಮಹಿಳಾ ಸಚಿವೆ ಲುಬ್ನಾ ಜಾಫ್ರಿ, ‘ ಓಸ್ಲೋ ಫ್ರೈಡ್ ಇವೆಂಟ್ ‘ ಎಂಬ ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ ಪ್ರಜ್ಞಾಪೂರ್ವಕವಾಗಿ ತನ್ನ ಮೇಲುಡುಪನ್ನು ಎತ್ತಿ ಸ್ತನ ಪ್ರದರ್ಶನ ಮಾಡಿದ್ದಾರೆ. ಆಗಲೇ ಹೇಳಿದಂತೆ ಇದು ಅತ್ಯಂತ ಪ್ರಜ್ಞಾಪೂರ್ವಕ ನಡೆ….

ಬಹುಶಃ ಮಹಿಳೆಯರನ್ನು, ಮಹಿಳೆಯರ ಎದೆಯ ಭಾಗವನ್ನು ಗಂಡು ಸಂಕುಲ ಅಶ್ಲೀಲ, ಅಸಮಾನತೆಯ, ಭೋಗದ ಒಂದು ಸೂಕ್ಷ್ಮ ಅಂಗ ಎಂಬುದಾಗಿ ಪರಿಗಣಿಸಿ ನಿಜವಾದ ಅಸಮಾನ ನಡೆಗೆ ಇದೂ ಒಂದು ಕಾರಣ ಆಗಿರಬಹುದು ಎಂದು ಭಾವಿಸಿ, ಅದರ ವಿರುದ್ಧ ಅಥವಾ ಧೈರ್ಯದಿಂದ ಮಹಿಳಾ ಸಮಾನತೆಯ ಸಾರ ಹೇಳಲು ಈ ರೀತಿಯ ಒಂದು ಪ್ರಯತ್ನ ಮಾಡಿರಬಹುದು….

“>

 

ಈ ಸುದ್ದಿ ಭಾರತದ ಸಾಮಾಜಿಕ ಜಾಲತಾಣಗಳು, ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ಸಂಪ್ರದಾಯವಾದಿಗಳು ಇದೊಂದು ಅಶ್ಲೀಲ, ಅತಿರೇಕದ, ಅನಾವಶ್ಯಕ ನಡೆ ಎಂದು ಟೀಕಿಸುತ್ತಿದ್ದಾರೆ. ಸ್ವಲ್ಪ ಮುಕ್ತ ವಾತಾವರಣ ಬಯಸುವ ಪ್ರಗತಿಪರರು ಇದೊಂದು ಕ್ರಾಂತಿಕಾರಕ, ಸಹಜ ಪ್ರತಿಕ್ರಿಯೆ ಮತ್ತು ಮಹಿಳಾ ಸಮಾನತೆಯ ಸಾರುವ ಸಾಂಕೇತಿಕತೆ ಎಂಬುದಾಗಿ ಹೇಳುತ್ತಿದ್ದಾರೆ….

ವಾಸ್ತವದಲ್ಲಿ ಗಂಡು – ಹೆಣ್ಣಿನ ಎದೆಯ ಭಾಗ ಬಹುತೇಕ ಒಂದೇ ರೀತಿ ಇರುತ್ತದೆ. ಸಂತಾನೋತ್ಪತ್ತಿ ಮತ್ತು ಮಗುವಿನ ಹಾಲುಣಿಸುವಿಕೆಯ ಪ್ರಾಕೃತಿಕ ಸಹಜಕ್ರಿಯೆಗಾಗಿ ಹೆಣ್ಣಿನ ಸ್ತನಗಳು ಸ್ವಲ್ಪ ದಪ್ಪವಾಗಿರುತ್ತದೆ. ಅನೇಕ ಪುರುಷ ಬಾಡಿ ಬಿಲ್ಡರ್ ಗಳ ಎದೆಯು ಸಹ ಗಾತ್ರದಲ್ಲಿ ಮಹಿಳೆಯರಷ್ಟೇ ದಪ್ಪವಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ, ಪುರುಷನೊಬ್ಬ ಮೇಲುಡುಪನ್ನು ತೆಗೆದು ಯಾವುದೇ ಸಂಕೋಚವಿಲ್ಲದೆ ತನ್ನ ದೇಹವನ್ನು ಪ್ರದರ್ಶಿಸುವಾಗ, ಮಹಿಳೆಗೆ ಮಾತ್ರ ಅದೊಂದು ಅಶ್ಲೀಲ, ಮುಚ್ಚಿಕೊಳ್ಳಬೇಕಾದ ಭಾಗ ಎನ್ನುವುದು ಸ್ವಲ್ಪಮಟ್ಟಿಗೆ ಅಸಹಜವೋ ಅಥವಾ ಸ್ವಾಭಿಮಾನಿ ಹೆಣ್ಣಿಗೆ ತನ್ನನ್ನು ಅನಾವಶ್ಯಕವಾಗಿ ನಿಯಂತ್ರಿಸುವ
ಪ್ರಯತ್ನವೋ ಎಂದು ಅನಿಸುವುದು ಸಹಜ……

ನಾವೆಲ್ಲರೂ ಬಹುತೇಕ ತಾಯಿಯ ಎದೆಯ ಹಾಲನ್ನು ಕುಡಿದೇ ಬೆಳೆದವರು. ನಮ್ಮ ಮಕ್ಕಳು ಕುಡಿಯುವುದು ಸಹ ನಮ್ಮ ಹೆಂಡತಿಯ ಎದೆಯ ಹಾಲನ್ನೇ. ಪ್ರತಿನಿತ್ಯ ಹಸುವಿನ ಹಾಲನ್ನು ಸಹ ಎಷ್ಟೋ ಮಹಿಳೆಯರು ಬಹಿರಂಗವಾಗಿಯೇ ಕೆಚ್ಚಲಿಗೆ ಕೈ ಹಾಕಿ ಹಾಲು ಕರೆಯುತ್ತಾರೆ. ಅದರಲ್ಲಿ ಯಾವುದೇ ವಿಶೇಷ ಇರುವುದಿಲ್ಲ……

ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ, ದೇಹಗಳ ಮಿಲನ ಮಹೋತ್ಸವದಲ್ಲಿ ಎದೆಯ ಭಾಗದ ಸ್ಪರ್ಶ ಒಂದಷ್ಟು ಸುಖದ ರೋಮಾಂಚನ ನೀಡಬಹುದು. ಆದರೆ ಅದನ್ನು ಅಶ್ಲೀಲವೋ, ಅಸಹ್ಯವೋ ಎಂದು ಭಾವಿಸುವುದೇ ತಪ್ಪಾಗುತ್ತದೆ…..

ಆಧುನಿಕ ಸಮಾಜ ಹೆಚ್ಚು ಹೆಚ್ಚು ಮುಕ್ತವಾದಂತೆ, ಹೆಚ್ಚು ಹೆಚ್ಚು ಮಹಿಳಾ ಸಬಲೀಕರಣವಾದಂತೆ, ಗಂಡು ಹೆಣ್ಣಿನ ನಡುವಿನ ಸಂಪರ್ಕಗಳು ಹೆಚ್ಚಾದಂತೆ, ಅವಲಂಬನೆಗಳು ಜಾಸ್ತಿಯಾದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಾ ರೀತಿಯ ದೃಶ್ಯಗಳು ಮುಕ್ತ ನೋಡುವ ಅವಕಾಶವಾದಂತೆ, ಅವರು ನಡುವಿನ ಅಂತರ ಕಡಿಮೆಯಾದಂತೆ, ಮಹಿಳೆಯ ಸ್ತನಗಳು ಗುಪ್ತ ಅಂಗಗಳೆಂದು ಪರಿಗಣಿಸಬೇಕಾದ ಅಗತ್ಯತೆ ಕಾಣುತ್ತಿಲ್ಲ……

ಹಿಂದಿನ ಅನೇಕ ಬುಡಕಟ್ಟು ಸಮುದಾಯಗಳಲ್ಲಿ ಮತ್ತು ಈಗಲೂ ಸಹ ಆಫ್ರಿಕಾ ಮತ್ತು ಭಾರತದ ಕೆಲವು ಆದಿವಾಸಿ ಸಮುದಾಯಗಳಲ್ಲಿ ಹೆಣ್ಣು ಮಕ್ಕಳು ಮೇಲುಡುಪುಗಳನ್ನು ಧರಿಸುವುದೇ ಇಲ್ಲ. ಸಹಜವಾಗಿಯೇ ಬಹಿರಂಗವಾಗಿ ತಮ್ಮ ಸ್ತನ ಪ್ರದರ್ಶನ ಮಾಡುತ್ತಾರೆ ಮತ್ತು ಮಕ್ಕಳಿಗೆ ಹಾಲುಣಿಸುತ್ತಾರೆ…..

ಇದು ಒಂದು ರೀತಿಯ ಒಳ್ಳೆಯ ಬೆಳವಣಿಗೆಯೇ ಸಹ ಅಲ್ಲವೇ. ಈಗಲೂ ಎಷ್ಟು ಸಿನಿಮಾ ನಟಿಯರು, ಮಾಡೆಲ್ ಗಳು ಶೇಕಡ 90ಕ್ಕೂ ಹೆಚ್ಚು ಸ್ತನದ ಭಾಗವನ್ನು ಬಹಿರಂಗವಾಗಿಯೇ ಪ್ರದರ್ಶಿಸುತ್ತಾರೆ. ಹಾಗಿದ್ದ ಮೇಲೆ ಸ್ತನ ಎಂಬುದು ಒಂದು ಗುಪ್ತ ಅಂಗವಾಗಿ ಹೇಗೆ ಪರಿಗಣಿಸುವುದು…..

ಸಂಪ್ರದಾಯವಾದಿಗಳಿಗೆ ಇದನ್ನು ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟವಾಗಬಹುದು. ಆದರೆ ಈಗಾಗಲೇ ಈ ಪ್ರಕ್ರಿಯೆಗಳು ಸಾಕಷ್ಟು ಮುಂದೆ ಬಂದಿದೆ. ಇದು ಮತ್ತೊಂದು ಆಯಾಮದ ಚರ್ಚೆ ಮತ್ತು ಅಭಿಪ್ರಾಯ ಮಾತ್ರ. ಇದು ಹೆಚ್ಚು ಪ್ರಾಯೋಗಿಕವಾಗಿ ಅನುಷ್ಠಾನವಾದರೆ ನಮ್ಮ ತಾಯಿ ಅಕ್ಕ ತಂಗಿ ಹೆಂಡತಿ ಮುಂತಾದ ಮಹಿಳೆಯರಿಗೆ ಮತ್ತಷ್ಟು ಸ್ವಾತಂತ್ರ್ಯ, ಸಮಾನತೆ ಮತ್ತು ಮಾನಸಿಕ ಹಿಂಸೆ ಕಡಿಮೆಯಾಗಬಹುದು. ಬದುಕು ಇನ್ನಷ್ಟು ಸಹಜವಾಗಬಹುದು…..

ಸ್ತನಗಳು ನಮ್ಮ ದೇಹದ ಸಹಜ ಭಾಗಗಳು ಎನಿಸಿ ಪ್ರತಿಕ್ಷಣವೂ ಅವುಗಳನ್ನು ಮುಚ್ಚಿಕೊಳ್ಳವುದೇ ಮಹಾನ್ ಕೆಲಸ ಎನ್ನುವ ಭಾರ ಕಡಿಮೆಯಾಗಿ ಮನಸ್ಸು ಹಗುರವಾಗಬಹುದು. ಸ್ವಲ್ಪ ಯೋಚಿಸಿ. ಇತರ ಗುಪ್ತಾಂಗಗಳಿಗೆ ಈ ರೀತಿಯ ಮುಕ್ತತೆ ನಿಯಮ ಬೇಡವೇ ಎನ್ನುವ ಅತಿರೇಕದ ಕಲ್ಪನೆ ಬೇಡ. ಸ್ವಾತಂತ್ರ್ಯಕ್ಕೆ ಮಿತಿ ಇದೆ. ಅದು ಸ್ವೇಚ್ಛೆಯಲ್ಲ. ವಾಸ್ತವ ಪ್ರಜ್ಞೆ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!