Thursday, September 19, 2024

ಪ್ರಾಯೋಗಿಕ ಆವೃತ್ತಿ

ಬೆಳಗಾವಿ ವಿಷಯದಲ್ಲಿ ಧಮ್- ತಾಕತ್ತಿದ್ದರೆ ಪ್ರಧಾನ ಮಂತ್ರಿ ಬಳಿ ತೋರಿಸಿ : ಎಚ್.ಡಿ.ಕೆ

ಬಿಜೆಪಿ ಸರ್ಕಾರಕ್ಕೆ ಬೆನ್ನು ಇಲ್ಲ, ಮೂಳೆನೂ ಇಲ್ಲ. ಬೆಳಗಾವಿ ವಿಷಯದಲ್ಲಿ ಧಮ್, ತಾಕತ್ತಿದ್ದರೆ ಪ್ರಧಾನ ಮಂತ್ರಿ ಬಳಿ ತೋರಿಸಿ ಬನ್ನಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದರು.

ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಬಳಿ ಪಂಚರತ್ನ ರಥಯಾತ್ರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಹಾರಾಷ್ಟ್ರದ ಹಲವು ಪಕ್ಷಗಳು, ಸರ್ಕಾರದ ಜೊತೆಗೆ ಬಿಜೆಪಿ ಪಕ್ಷವು ಬೆಳಗಾವಿ ಜಿಲ್ಲೆಯನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆಗೊಳಿಸಲು ಒತ್ತಾಯಿಸುತ್ತಿದೆ. ಇದು ದೇಶದ ಒಕ್ಕೂಟ ವ್ಯವಸ್ಥೆಗೆ ಅಡ್ಡಿ ಪಡಿಸುವಂತಹ, ಅನಾಹುತ ತರುವಂತಹ ವಿಚಾರ ಎಂದು ಕಿಡಿಕಾರಿದರು.

ಯಾವುದೇ ವಿವಾದ ಇಲ್ಲ

‘ಒಂದು ದೇಶ ಒಂದು ಭಾಷೆ’, ‘ಒಂದು ದೇಶ ಒಂದು ಚುನಾವಣೆ’ ಅನ್ನೋ ಬಿಜೆಪಿ ನಾಯಕರಿಗೆ ಒಂದು ಸ್ವಲ್ಪ ಕಾಮನ್ ಸೆನ್ಸ್ ಇದ್ರೆ, ಇಂತಹ ವಿಷಯಗಳಲ್ಲಿ ಪ್ರಚೋದನೆ ಮಾಡುವುದು ಸರಿಯಲ್ಲ. ಈಗಾಗಲೇ ಕರ್ನಾಟಕದ ಸ್ವತ್ತು ಬೆಳಗಾವಿಯಾಗಿದೆ. ಇಲ್ಲಿ ಯಾವುದೇ ವಿವಾದ ಇಲ್ಲ. ಆದರೆ ನಮ್ಮ ಮುಖ್ಯಮಂತ್ರಿ ಬೆಳಗಾವಿ ವಿವಾದ ಅಂತ ಪದ ಬಳಸಿದ್ದಾರೆ. ತಕ್ಷಣವೇ ವಿವಾದ ಅನ್ನೋ ಪದವನ್ನು ಸಿಎಂ ವಾಪಸು ಪಡೆಯಬೇಕು ಎಂದರು.

ಬೆಳಗಾವಿ ವಿಷಯ ವಿವಾದವಲ್ಲ. ಬೆಳಗಾವಿ ವಿಷಯವನ್ನು ಮಹಾರಾಷ್ಟ್ರದವರು ಎತ್ತಿಕೊಂಡಿದ್ದಾರೆ. ಅವರು ವಿವಾದ ಸೃಷ್ಟಿ ಮಾಡ್ಕೊಂಡ್ರೆ, ನಾವು ಯಾಕೆ ವಿವಾದ ಅಂತ ಅಂದುಕೊಳ್ಳೋಣಾ.? ಕರ್ನಾಟಕದ ಏಕೀಕರಣದಲ್ಲಿ ಕರ್ನಾಟಕದ ಭಾಗದ ತೀರ್ಮಾನವಾಗಿದೆ. ಬೆಳಗಾವಿಗೆ ಅತ್ಯಂತ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಗೆ ಕನ್ನಡಿಗರ ದುಡ್ಡನ್ನ ಬಂಡವಾಳ ಹಾಕಿದ್ದೇವೆ. ಸಕ್ಕರೆ ಕಾರ್ಖಾನೆ ನಡೆಯುತ್ತಿದ್ರೆ ಕನ್ನಡಿಗ ಕೊಟ್ಟಿರುವಂತ ಕೊಡುಗೆ ಅದು. ಮಹಾರಾಷ್ಟ್ರದಲ್ಲಿ ಪಕ್ಷಗಳು ಬೆಳಗಾವಿಯ ಆರ್ಥಿಕ ಶಕ್ತಿ ಗಮನಿಸಿ ಲಪಟಾಯಿಸಲು ಹೊರಟಿದ್ದಾರೆ ಎಂದರು.

ಸರ್ಕಾರ ಡ್ರಮ್ ಹೊಡೆಯಲು ಹೊರಟಿದೆ

ಉದ್ಧವ್ ಠಾಕ್ರೆ ಮಾತಿನ ಜಾಗಟೆಗೆ ಸರ್ಕಾರ ಡ್ರಮ್ ಹೊಡೆಯಲು ಹೊರಟಿದೆ. ಇದು ಬಿಜೆಪಿಯ ನಾಚಿಕೆಗೇಡಿನ ಕೆಲಸ ಇದು. ಈ ದೇಶದಲ್ಲಿ ಒಕ್ಕೂಟದ ವ್ಯವಸ್ಥೆ, ಪ್ರಜಾಪ್ರಭುತ್ವ, ಸಂವಿಧಾನದ ಗೌರವ ಕಾಪಾಡಬೇಕಾದರೆ,
ಮಹಾರಾಷ್ಟ್ರ ಸರ್ಕಾರ ಜವಾಬ್ದಾರಿಯುತವಾಗಿ ನಡೆಯುವುದನ್ನ ಕಲಿಯಬೇಕು. ಅಕ್ಕ ಪಕ್ಕದ ರಾಜ್ಯದಲ್ಲಿ ದ್ವೇಷ ಉಂಟು ಮಾಡಿ, ಸಂಘರ್ಷ ಮಾಡ್ತಾರೆ‌. ಮುಖ್ಯಮಂತ್ರಿಗಳೇ ಗಡಿ ವಿಷಯವನ್ನು ಸುಲಭವಾಗಿ ತೆಗೆದುಕೊಳ್ಳಬೇಡಿ.
ಮಹಾರಾಷ್ಟ್ರದವರು ಮಾಡುವ ಕುತಂತ್ರಕ್ಕೆ ಬಲಿಯಾಗುತ್ತೀರಿ ಎಂದು ಎಚ್ಚರಿಕೆ ನೀಡಿದರು.

ದೆಹಲಿಯಲ್ಲಿರುವ ನಿಮ್ಮ ಕೇಂದ್ರ ಸರ್ಕಾರ, ಡಬಲ್ ಇಂಜಿನ್ ಸರ್ಕಾರ, ಕರ್ನಾಟಕದವರನ್ನ ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. 25 ಜನ ಲೋಕಸಭಾ ಸದಸ್ಯರಿದ್ದಾರೆ, ಅವರನ್ನು ಎಲ್ಲಿಟ್ಟಿದ್ದಾರೆ ಎಂಬುದು ಗೊತ್ತಿದೆ.
ಧಮ್, ತಾಕತ್ ಬಗ್ಗೆ ಸಿಎಂ ಪ್ರತಿನಿತ್ಯ ಭಾಷಣ ಮಾಡುವ ಸಿಎಂ ಬಸವರಾಜ ಬೊಮ್ಮಾಯಿಗೆ
ಗಡಿ ವಿಷಯದಲ್ಲಿ ಧಮ್, ತಾಕತ್ ಇದ್ರೆ, ಅದನ್ನು ಪ್ರಧಾನಿ ಮೋದಿಯವರ ಹತ್ರ ತೋರಿಸಿ ಬನ್ನಿ ಎಂದು ಗುಡುಗಿದರು.

ಈ ಸಂದರ್ಭದಲ್ಲಿ ಶಾಸಕ‌ ಸುರೇಶ್ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಅಪ್ಪಾಜಿಗೌಡ, ಮನ್ಮುಲ್ ನಿರ್ದೇಶಕ ನೆಲ್ಲಿಗೆರೆ ಬಾಲು ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!