ಹದಿಹರೆಯದಲ್ಲಿ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಗಳು ನಿಮ್ಮನ್ನು ಅನಾರೋಗ್ಯಕರ ಸ್ಥಿತಿಯೊಳಗೆ ತಳ್ಳುವ ಸಾಧ್ಯತೆ ಇದೆ, ಹಾಗಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಬಹು ಮುಖ್ಯ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ ಹೇಳಿದರು.
ಶ್ರೀರಂಗಪಟ್ಟಣ ತಾಲ್ಲೂಕಿನ ನಗುವನಹಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಆರ್ಗನೈಜೇಶನ್ ಫಾರ್ ಡೆವಲಪ್ಮೆಂಟ್ ಆಫ್ ಪೀಪಲ್ ಸಂಸ್ಥೆ ಮೈಸೂರು ವತಿಯಿಂದ ಆಯೋಜಿಸಿದ್ದ “ಹದಿಹರೆಯದ ಹೆಣ್ಣು ಮಕ್ಕಳಿಗೆ ಆರೋಗ್ಯದ ಅರಿವು” ಮೂಡಿಸುವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
10 ರಿಂದ 19ರ ವಯಸ್ಸು, ಇದು ಬಾಲ್ಯ ಮತ್ತು ವಯಸ್ಕತನದ ಮಧ್ಯದ ಅವಧಿ. ಈ ಸಮಯದಲ್ಲಿ ನಿಮ್ಮಲ್ಲಿ ಸಾಕಷ್ಟು ಪ್ರಶ್ನೆಗಳು ಏಳಬಹುದು, ಅದನ್ನು ನಿಮ್ಮ ಪೋಷಕರು, ಶಿಕ್ಷಕರು ಅಥವಾ ನೀವು ಭರವಸೆ ಇಡುವವರೊಂದಿಗೆ ಹಂಚಿಕೊಂಡು, ಉತ್ತರಗಳನ್ನು ಕಂಡುಕೊಳ್ಳಿ ಎಂದು ಸಲಹೆ ನೀಡಿದರು.
ಪ್ರಭಾರಿ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಬಿ ಮಂಗಳ ಮಾತನಾಡಿ, ವೈಯಕ್ತಿಕ ಶುಚಿತ್ವ, ಸ್ವಚ್ಛತೆ, ರಕ್ತ ಹೀನತೆಯ ನಿಯಂತ್ರಣಕ್ಕಾಗಿ ಅನಿಮಿಯಾ ಮುಕ್ತ ಭಾರತ ಹಾಗೂ ಸ್ಥಳೀಯವಾಗಿ ದೊರೆಯುವ ಪೋಷಕಾಂಶ ಯುಕ್ತ ಆಹಾರ ಸೇವನೆ ಕುರಿತು ವಿವರವಾಗಿ ತಿಳಿಸಿದರು.
ಹರಿಹರೆಯದಲ್ಲಿ ತೀವ್ರತರವಾದ ದೈಹಿಕ ಬೆಳವಣಿಗೆ ಹಾಗೂ ಹೆಚ್ಚಿನ ದೈಹಿಕ ಚಟುವಟಿಕೆಗಳಿರುವದರಿಂದ ಹೆಚ್ಚಿನ ಪೌಷ್ಠಿಕಾಂಶಗಳ ಅವಶ್ಯಕತೆ ಇದೆ, ಹಾಗಾಗಿ ಹೆಚ್ಚು ಪೌಷ್ಠಿಕಾಂಶ ಇರುವ ಆಹಾರ ಪದಾರ್ಥಗಳನ್ನು ಸೇವಿಸಿ ಏನಾದರೂ ಆರೋಗ್ಯ ಸಮಸ್ಯೆಗಳು ಕಂಡು ಬಂದಲ್ಲಿ, ಪ್ರತಿ ಗುರುವಾರ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಮಧ್ಯಾಹ್ನ3 ಗಂಟೆಯಿಂದ 5 ಗಂಟೆವರೆಗೆ ಸ್ನೇಹ ಕ್ಲಿನಿಕ್ ನಲ್ಲಿ ಹದಿಹರೆಯದವರಿಗಾಗಿ ಸೇವೆ ನೀಡಲಾಗುತ್ತಿದ್ದು ಭೇಟಿ ನೀಡಿ ಸೇವೆ ಪಡೆಯಬಹುದು ಎಂದರು.
ಮಾನಸಿಕ ಒತ್ತಡ ಇದ್ದಲ್ಲಿ ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ಟೆಲಿ ಮನಸ್ ಶುಲ್ಕ ರಹಿತ ದೂರವಾಣಿ ಸಂಖ್ಯೆ 14416 ಗೆ ಕರೆ ಮಾಡಿ ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.ವಿದ್ಯಾರ್ಥಿನಿಯರು ಆರೋಗ್ಯದ ಬಗ್ಗೆ ಪ್ರಶ್ನೆಗಳನ್ನು ಕೇಳಿ ಸಂವಾದದ ಮೂಲಕ ಚರ್ಚಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಬಿ ನಾಗರಾಜು, ಸಹ ಶಿಕ್ಷಕ ಮಂಜುನಾಥ, ಓ ಡಿ ಪಿ ಕಾರ್ಯಕರ್ತೆ ಶ್ರುತಿ ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು.




