Wednesday, September 18, 2024

ಪ್ರಾಯೋಗಿಕ ಆವೃತ್ತಿ

ಆರೋಗ್ಯ ಕಾಪಾಡಿಕೊಳ್ಳಿ : ರವೀಂದ್ರ ಶ್ರೀಕಂಠಯ್ಯ

ಜನರು ಆರೋಗ್ಯ ಮೇಳದ ಪ್ರಯೋಜನ ಪಡೆದು, ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಸಲಹೆ ನೀಡಿದರು.

75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಪಟ್ಟಣದ ಗಂಜಾಂ ರಸ್ತೆಯಲ್ಲಿನ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರದ ಯೋಜನೆಯಾದ ಆರೋಗ್ಯ ಮೇಳವನ್ನು ಪ್ರತಿಯೊಬ್ಬರೂ ಸದ್ಬಳಕೆ ಮಾಡಿಕೊಳ್ಳಬೇಕು.

ಸರ್ಕಾರದ ವತಿಯಿಂದ ಉಚಿತವಾಗಿ ದೊರಕುವ ಔಷಧೋಪಚಾರಗಳನ್ನು ಬಳಸಿಕೊಂಡು ತಮ್ಮ ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದರು.

ಇದೇ ವೇಳೆ ಕೊರೊನ ಸಮಯದಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ ವೈದ್ಯರ ತಂಡ ಹಾಗೂ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಶ್ರವಣ ಉಪಕರಣಗಳನ್ನು ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ವಿತರಣೆ ಮಾಡಲಾಯಿತು.

ಆರೋಗ್ಯ ಮೇಳದಲ್ಲಿ, ಮಕ್ಕಳ ಆರೋಗ್ಯ ತಪಾಸಣೆ, ಕಿವಿ, ಮೂಗು, ಗಂಟಲು ಪರೀಕ್ಷೆ, ಮೂಳೆ ಮತ್ತು ಕೀಲು ಪರೀಕ್ಷೆ, ಚರ್ಮರೋಗ ಪರೀಕ್ಷೆ, ದಂತ ಪರೀಕ್ಷೆ ,ಕಣ್ಣಿನ ಪರೀಕ್ಷೆ, ಆಯುಷ್ ಸೇವೆ, ಹೃದಯ ಪರೀಕ್ಷೆ, ಸ್ತ್ರೀ ಆರೋಗ್ಯ ತಪಾಸಣೆ, ಸಕ್ಕರೆ ಕಾಯಿಲೆ, ರಕ್ತದೊತ್ತಡ, ಮೊದಲಾದ ಪರೀಕ್ಷೆಗಳನ್ನ ನಡೆಸಲಾಯಿತು.

ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್‌ಗಳ ಉಚಿತ ಸೌಲಭ್ಯ, ಕೋವಿಡ್ ಲಸಿಕೆ ಹಾಗೂ ಯೋಗ ಶಿಬಿರ, ಆಹಾರ ಸುರಕ್ಷತೆ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು. ಸಾರ್ವಜನಿಕರಿಗೆ ಅಗತ್ಯ ಔಷದಿಗಳನ್ನು ಉಚಿತವಾಗಿ ವಿತರಿಸಲಾಯಿತು.

ಮೇಳದಲ್ಲಿ 4430 ಜನ ತಪಾಸಣೆಗೊಳಪಟ್ಟು, 2680 ಜನ ಅಸಾಂಕ್ರಾಮಿಕ ರೋಗಗಳ ತಪಾಸಣೆಗೊಳಪಟ್ಟರು, 310 ಜನ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್‌ಗಳ ಉಚಿತ ಸೌಲಭ್ಯ ಪಡೆದರು.

150 ಜನ ಡಿಜಿಟಲ್ ಆರೋಗ್ಯ ಕಾರ್ಡ್ ಸೌಲಭ್ಯ ಪಡೆದರು. ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ, ಕರಪತ್ರ ವಿತರಿಸಲಾಯಿತು.

ಜಿಲ್ಲಾಧಿಕಾರಿ ಎಸ್. ಆಶ್ವಥಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ದಿವ್ಯ ಪ್ರಭು, ತಹಶೀಲ್ದಾರ್ ಶ್ವೇತಾ ಎನ್. ರವೀಂದ್ರ ತಾ.ಪಂ ಪ್ರಭಾರ ಇಒ ನಿಶಾಂತ್ ಕೀಲಾರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎನ್. ಕೆ.ವೆಂಕಟೇಶ್, ಮುಖ್ಯ ವೈದ್ಯಾಧಿಕಾರಿ ಡಾ.ಮಾರುತಿ, ಪುರಸಭೆ ಅಧ್ಯಕ್ಷೆ ನಿರ್ಮಲಾ, ಉಪಾಧ್ಯಕ್ಷ ಕೃಷ್ಣಪ್ಪ, ಮುಖ್ಯಾಧಿಕಾರಿ ಮಹದೇವಯ್ಯ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!