Thursday, September 19, 2024

ಪ್ರಾಯೋಗಿಕ ಆವೃತ್ತಿ

ಭಾರಿ ಮಳೆ : ಹಾಲಹಳ್ಳಿ ಸ್ಲಂ ಜನರ ಪರದಾಟ

ಒಂದು ಸಣ್ಣ ಮಳೆ ಬಂದರೂ ಮಂಡ್ಯದ ಹಾಲಹಳ್ಳಿ ಸ್ಲಂ ಜನರು ತತ್ತರಿಸಿ ಹೋಗುತ್ತಾರೆ.  ಅದರಲ್ಲೂ ಭಾರೀ ಮಳೆ ಬಂದರೆ ಅವರ ಪರಿಸ್ಥಿತಿ ಯಾರಿಗೂ ಬೇಡ.ಅಕ್ಷರಶಃ ಅವರ ಬದುಕು ಚಿಂತಾಜನಕ ವಾಗುತ್ತದೆ.

ಕಳೆದ 4-5 ದಿನಗಳಿಂದ ಎಡೆಬಿಡದೆ ಸತತ‌ವಾಗಿ ಸುರಿಯುತ್ತಿರುವ ಭಾರೀ ಮಳೆ ಮಂಡ್ಯ ನಗರದ ಹಾಲಳ್ಳಿ ಸ್ಲಂ ಜನರ ಬದುಕನ್ನು ಮೂರಾಬಟ್ಟೆ ಮಾಡಿದೆ.

ಮಳೆ ಬಂದು ಪ್ರತಿ ಮನೆಗಳಿಗೆ ನೀರು ನುಗ್ಗಿ ಜನರು ನಿದ್ದೆಯಿಲ್ಲದೆ ದಿನ ಕಳೆಯುವಂತಾಗಿದೆ. ಈ ಜನರಿಂದ ಮತ ಪಡೆದು ಜನಪ್ರತಿನಿಧಿಗಳಾದವರು ಮಳೆ ಬಂದರೆ ಬೆಚ್ಚಗೆ ಕಂಬಳಿ ಹೊದ್ದು ಮಲಗಿಕೊಂಡರೆ, ಇಂತಹ ಜನರ‌ ಬವಣೆ ಕೇಳಬೇಕಾದ ಆಡಳಿತಾಧಿಕಾರಿಗಳು ಕೂಡ ಬೆಚ್ಚಗೆ ಮನೆಯಲ್ಲಿರುತ್ತಾರೆ.

ಆದರೆ ಸ್ಲಂಜನರು ಅಂತಹ ಸುಖ ಜೀವನವನ್ನು ಮಾತ್ರ ಕೇಳಿಕೊಂಡು ಬಂದಿಲ್ಲ. ಅವರು ಮಾತ್ರ ಮಳೆ,ಚಳಿ,ಗಾಳಿ,ಬಿಸಿಲು ಎನ್ನದೆ ಎಲ್ಲವನ್ನೂ ಅನುಭವಿಸಬೇಕಾದ ಕರ್ಮ ಅವರದ್ದು.ಮಳೆ ಬಂದರೆ ಇವರ ಪಾಡು ಮಾತ್ರ ನಾಯಿ ಪಾಡೇ ಸರಿ.

ಸ್ಲಂ ಜನರ ಜೊತೆ ಅವರು ಸಾಕಿರುವ ಕುರಿ,ಮೇಕೆ,ಕೋಳಿ,ನಾಯಿ ಎಲ್ಲವೂ ಮಳೆಯಲ್ಲಿ ನೆಂದು ನಡುಗಬೇಕಾದ ಹೀನಾಯ ಸ್ಥಿತಿ ಅವುಗಳದ್ದು.

ಮಂಡ್ಯ ನಗರದ ಹಾಲಹಳ್ಳಿಯ ಸ್ಲಂ ಜನರಿಗೆ ಮನೆ ಕಟ್ಟಿ ಮೂರು ವರ್ಷಗಳೇ ಮುಗಿದರೂ ಕೂಡ ಅವರಿಗೆ ಮನೆ ಹಂಚಿಕೆಯ ಭಾಗ್ಯ ಸಿಕ್ಕಿಲ್ಲ. ಸುಮಾರು 700ಕ್ಕೂ ಹೆಚ್ಚು ಕುಟುಂಬಗಳಿರುವ ಅತಿ ದೊಡ್ಡ ಸ್ಲಮ್ ಆಗಿರುವ ಹಾಲಹಳ್ಳಿ ಸ್ಲಂ ಜನರು ಮಳೆ ಬಂದರೆ ಚಳಿಯಲ್ಲೂ ಬೆವರುವಂತಾಗುತ್ತದೆ.

ಮಳೆ ಬಂದರೆ ಹಾಲಹಳ್ಳಿ ಸ್ಲಂ ಸಂಪೂರ್ಣ ಜಲಾವೃತವಾಗಿ ಅಕ್ಷರಶಃ ಕೆರೆಯಂತಾಗಿ ಹೋಗುತ್ತದೆ. ಮನೆ ನಿರ್ಮಾಣದ ಸಂದರ್ಭದಲ್ಲಿ ಕಟ್ಟಿಕೊಟ್ಟಿರುವ ತಾತ್ಕಾಲಿಕ ಶೆಡ್ಗಳು ಮಳೆ ಬಂದರೆ ಸೋರುತ್ತದೆ‌‌  ಓದಿಕೊಳ್ಳಬೇಕಾದ ಮಕ್ಕಳು ಮನೆಯೊಳಗೆ ತುಂಬಿರುವ ನೀರನ್ನು ಪೋಷಕರ ಜೊತೆ ನಿಂತು ಆಚೆಗೆ ಚೆಲ್ಲಬೇಕು

ರಾಜಕಾಲುವೆ ನೀರು ತುಂಬಿ ಹರಿದು ಶೆಡ್ ಗಳಿಗೆ ನುಗ್ಗುತ್ತದೆ. ಜನ ರಾತ್ರಿ ಪೂರ ನಿದ್ದೆಯಿಲ್ಲದೆ ಮನೆಯೊಳಗೆ ತುಂಬಿರುವ ನೀರನ್ನು ಹೊರಹಾಕುವ ಹೀನಾಯ ಸ್ಥಿತಿ ಅವರದು.

ಮುಂಗಾರು ಮಳೆ ಬರುವುದರೊಳಗೆ ಹಾಲಹಳ್ಳಿ ಸ್ಲಂ ಜನರಿಗೆ ಸರ್ಕಾರ ಕಟ್ಟಿಸಿಕೊಟ್ಟಿರುವ ಮನೆಗಳನ್ನು ಹಂಚಬೇಕಾಗಿತ್ತು.

ಆದರೆ ಜಿಲ್ಲಾಡಳಿತ ಮತ್ತು ಕೊಳಗೇರಿ ಅಭಿವೃದ್ಧಿ ಮಂಡಳಿ ಸಾಕಷ್ಟು ತಡ ಮಾಡಿದ ಕಾರಣ ಇದುವರೆಗೂ ಜನರಿಗೆ ಮನೆಗಳು ಹಂಚಿಕೆಯಾಗಿಲ್ಲ. ಈಗ ಆಗ ಎಂದು ಮೀನಾಮೇಷ ಎಣಿಸುತ್ತಿರುವಾಗ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಬಂದು ನೀತಿ ಸಂಹಿತೆ ಎಂದು ಒಂದು ತಿಂಗಳು ಹಂಚಿಕೆ ಪ್ರಕ್ರಿಯೆಯನ್ನು ಮುಂದೆ ಹಾಕಿದ್ದಾರೆ.

ಈಗಾಗಲೇ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಹೈರಾಣಾಗಿ ಹೋಗಿರುವ ಜನರು ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳಿಗೆ ಶಾಪ ಹಾಕುತ್ತಿದ್ದಾರೆ.

ಜಿಲ್ಲಾಡಳಿತ ಕೂಡಲೇ ಹಾಲಹಳ್ಳಿಯ ಜನರಿಗೆ ಸ್ಪಂದಿಸಿ ನೀತಿ ಸಂಹಿತೆ ಉಲ್ಲಂಘನೆ ಎಲ್ಲಾ ಬದಿಗಿಟ್ಟು ಅವರಿಗೆ ಮನೆ ಕೊಡಬೇಕು. ಮುಂದಿನ ತಿಂಗಳು ನೀತಿ ಸಂಹಿತೆ ಮುಗಿಯಬೇಕು ಎಂದರೆ ಎಲ್ಲಿಗೆ ಹೋಗಬೇಕು?

ಜಿಲ್ಲಾಧಿಕಾರಿ ಅಶ್ವಥಿಯವರುಈ ಬಗ್ಗೆ ನಾಳೆಯೇ ವಿಶೇಷ ಅನುಮತಿ ಎಂದು ಪರಿಗಣಿಸಿ ಸ್ಲಂ ಜನರಿಗೆ ಮನೆ ಕೊಡಬೇಕು. ಇಲ್ಲದಿದ್ದರೆ ಜನರೇ ಕಟ್ಟಿರುವ ಮನೆಗಳ ಬೀಗ ಒಡೆದು ಸೇರಿಕೊಳ್ಳುತ್ತಾರೆ ಅಷ್ಟೇ. ಏಕೆಂದರೆ ಅವರು ಅಷ್ಟೊಂದು ರೋಸಿಹೋಗಿದ್ದಾರೆ.

ಕಳೆದ ಆರೇಳು ವರ್ಷಗಳಿಂದ ಮಳೆ ಬಂದಾಗಲೆಲ್ಲ ಸಂಕಟ ಅನುಭವಿಸುವ ಈ‌ ಜನರ ಗೋಳಾಟಕ್ಕೆ ಎಂದು ಮುಕ್ತಿ ಸಿಗುವುದೋ?

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!