Thursday, September 19, 2024

ಪ್ರಾಯೋಗಿಕ ಆವೃತ್ತಿ

ಹಿಂದಿ ಹೇರಿಕೆ : ಭಾಷಾಹತ್ಯೆಯ ಅಸ್ತ್ರ

✍️ರಂಗನಾಥ ಕಂಟನಕುಂಟೆ, ಸಾಹಿತಿಗಳು
9591001646


  • ‘ಹಿಂದಿ’ ಗಿಂತ ಭಾರತ ದೇಶ ಸಾಂಸ್ಕೃತಿಕವಾಗಿ ದೊಡ್ಡದು
  • ದ್ರಾವಿಡ ಭಾಷೆಗಳಿಗಿಂತ, ಉತ್ತರ ಭಾರತದ ಭಾಷೆಗಳಿಗೆ ಹೆಚ್ಚು ಹಾನಿ
  • ಹಿಂದಿ ಭಾಷೆಯೆಂದರೆ ಅದು ದಬ್ಬಾಳಿಕೆ ಮತ್ತು ಯಜಮಾನಿಕೆಗಳ ಸ್ಥಾಪನೆಯ ಚರಿತ್ರೆ
  • ಹಿಂದಿ ಹೇರಿಕೆ ಬಹುಭಾಷಿಕ ಸಂಸ್ಕೃತಿಯನ್ನು ನಾಶ ಮಾಡುತ್ತಿದೆ

ದೇಶದಲ್ಲಿ ಹಿಂದಿ ‘ಹೇರಿಕೆ’ಯ ವಿರೋಧದ ಅಲೆ ಮತ್ತೊಮ್ಮೆ ಎದ್ದಿದೆ. ಈ ವಿರೋಧ ಎಂದಿನಂತೆ ದ್ರಾವಿಡ ನಾಡಿನಲ್ಲಿ ತೀವ್ರವಾಗಿದೆ. ನಂತರದಲ್ಲಿ ಪಶ್ಚಿಮ ಬಂಗಾಳ, ಈಶಾನ್ಯ ಭಾರತದಿಂದಲೂ ಕೇಳಿಬಂದಿದೆ. ಕೇಂದ್ರ ಸರ್ಕಾರದ ಭಾಷಿಕ ಧೋರಣೆಯೇ ವಿರೋಧಕ್ಕೆ ಕಾರಣ. ಸದ್ಯದಲ್ಲಿ ಕೇಂದ್ರದ ಗೃಹಸಚಿವರ ‘ಒಂದು ದೇಶ ಒಂದು ಭಾಷೆ’ ಎಂಬ ಹೇಳಿಕೆ ತೀವ್ರ ಪ್ರತಿಭಟನೆಗೆ ಒಳಗಾಗಿದೆ. ಮುಖ್ಯಸಂಗತಿಯೆಂದರೆ ಹಿಂದಿ ‘ಹೇರಿಕೆ’ಯಿಂದ ದ್ರಾವಿಡ ಭಾಷೆಗಳಿಗಿಂತ, ಉತ್ತರ ಭಾರತದ ಭಾಷೆಗಳಿಗೆ ಹೆಚ್ಚು ಹಾನಿ. ಆದರೆ ಉತ್ತರ ಭಾರತದ ಜನರು ಪ್ರತಿರೋಧ ವ್ಯಕ್ತಪಡಿಸದಿರುವುದು ಆತಂಕಕಾರಿ ವಿಚಾರ. ಯಾಕೆಂದರೆ, ಯಾವುದನ್ನು ‘ಹಿಂದಿ ನಾಡು’(ಹಿಂದಿ ಹಾರ್ಟ್ ಲ್ಯಾಂಡ್) ಎಂದು ಕರೆಯಲಾಗುತ್ತಿದೆಯೋ ಅಂತಹ ನಾಡಿನ ಕಲ್ಪನೆಯೇ ಕೃತಕವಾದುದು. ‘ಹಿಂದಿ ನಾಡು’ ಪ್ರದೇಶದಲ್ಲಿ 9 ರಾಜ್ಯಗಳಿವೆ. ಈ ರಾಜ್ಯಗಳಲ್ಲಿ ಅನೇಕ ಸ್ವತಂತ್ರ ಭಾಷೆಗಳಿವೆ. ಅವನ್ನು ಹಿಂದಿಯ ಡೈಲೆಕ್ಟ್ಗಳೆಂದು ಕರೆಯಲಾಗುತ್ತಿದೆ.

ಉದಾಹರಣೆಗೆ ರಾಜಸ್ಥಾನಿ ಭಾಷೆ. ಇದನ್ನು ರಾಜಸ್ಥಾನದಲ್ಲಿ 1.8 ಕೋಟಿ ಜನರು ಮಾತನಾಡುತ್ತಿದ್ದಾರೆ. ಈ ಭಾಷೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ, ಯುಜಿಸಿಗಳು ಸ್ವತಂತ್ರ ಭಾಷೆಯ ಮಾನ್ಯತೆ ನೀಡಿವೆ. ಅಕಾಡೆಮಿ ಮಾನ್ಯ ಮಾಡಿರುವ 24 ಭಾಷೆಗಳಲ್ಲಿ ರಾಜಸ್ಥಾನಿಯೂ ಒಂದು. ಆದರೆ ಕೇಂದ್ರ ಸರ್ಕಾರ ಇದನ್ನು ಸ್ವತಂತ್ರ ಭಾಷೆಯೆಂದು ಗುರುತಿಸದೆ ಹಿಂದಿಯ ಉಪಭಾಷೆಗಳ ಪಟ್ಟಿಗೆ ಸೇರಿಸಿದೆ. ಯುಜಿಸಿ ಕೂಡ ರಾಜಸ್ಥಾನಿಗೆ ಸ್ವತಂತ್ರ ಭಾಷೆಯ ಸ್ಥಾನಮಾನ ನೀಡಿದೆ. ಅನೇಕ ವಿಶ್ವವಿದ್ಯಾಲಯಗಳಲ್ಲಿ ಕಲಿಸಲು ಅವಕಾಶವನ್ನು ಕಲ್ಪಿಸಿದೆ. ಈ ಭಾಷೆಯನ್ನು ಸಂವಿಧಾನದ 8ನೇ ಅನುಚ್ಚೇದದಲ್ಲಿ ಸೇರಿಸಬೇಕೆಂಬ ಒತ್ತಡವಿದ್ದು ರಾಜ್ಯ ವಿಧಾನ ಸಭೆಯಲ್ಲಿ ವಿಧೇಯಕ ಮಂಡಿಸಲಾಗಿದೆ. ಆ ಬೇಡಿಕೆ ಇನ್ನೂ ಈಡೇರಿಲ್ಲ. ಆದರೆ ಇದನ್ನು ಹಿಂದಿಯ ಉಪಭಾಷೆ ಎಂದು ಕರೆಯುತ್ತಿರುವುದರಿಂದ ಅದರ ಪ್ರತ್ಯೇಕ ಅಸ್ತಿತ್ವವನ್ನು ನಿರಾಕರಿಸಿದಂತಾಗಿದೆ.

ಇದರ ನಂತರ ಬೋಜ್ಪುರಿಯನ್ನು 3.3 ಕೋಟಿ, ಮಾಗಧಿಯನ್ನು 1.3 ಕೋಟಿ, ಚತ್ತೀಸ್‌ಘರಿ ಭಾಷೆಯನ್ನು 1.3 ಕೋಟಿ, ಹರಿಯಾನ್ವಿಯನ್ನು 80 ಲಕ್ಷ ಜನರು ನಿತ್ಯ ಬಳಸುತ್ತಿದ್ದಾರೆ. ಇವುಗಳಷ್ಟೇ ಅಲ್ಲದೆ ಅವಧಿ, ಬಗೇಲಿ, ಬ್ರಜ್, ಅವಧಿ ಮುಂತಾದ ಭಾಷೆಗಳು ಬಳಕೆಯಲ್ಲಿವೆ. ಆದರೆ ಇವುಗಳ ಸ್ವತಂತ್ರ ಅಸ್ಮಿತೆಯನ್ನು ನಿರಾಕರಿಸಿ ಹಿಂದಿಯ ಉಪಭಾಷೆಗಳು ಎಂದು ಕರೆಯಲಾಗಿದೆ. ಇವುಗಳಲ್ಲದೇ ಅನೇಕ ಬುಡಕಟ್ಟು ಜನರ ಭಾಷೆಗಳು ‘ಹಿಂದಿ ನಾಡಿ’ನಲ್ಲಿದ್ದು ಅವು ಹಿಂದಿ ಹೇರಿಕೆಯಿಂದ ನಾಶಗೊಳ್ಳುತ್ತಿವೆ. ಹೀಗೆ ಸ್ವತಂತ್ರ ಭಾಷೆಗಳ ಅಸ್ಮಿತೆಯನ್ನು ನಿರಾಕರಿಸಿ ದೇಶದಲ್ಲಿ ಹಿಂದಿ ಮಾತೃಭಾಷಿಕರ ಸಂಖ್ಯೆ ಶೇ.43.63 (52.83 ಕೋಟಿ ಜನರು)ರಷ್ಟಿದೆಯೆಂದು ತೋರಿಸುವ ಅಂಕಗಣಿತದ ಮ್ಯಾಜಿಕ್ ಆಟವನ್ನು ಆಡುತ್ತ ಬರಲಾಗಿದೆ. ಸರ್ಕಾರಗಳು ಹೇಳುವ ಶೇ.43 ರಷ್ಟು “ಹಿಂದಿ ಭಾಷಿಕರು” ಸ್ವತಂತ್ರ ಅಸ್ತಿತ್ವವನ್ನು ಕಳೆದುಕೊಂಡ ಭಾಷೆಗಳ ಜನರಾಗಿದ್ದಾರೆ. ದೆಹಲಿ ಸುತ್ತಮುತ್ತ ಬಳಕೆಯಲ್ಲಿದ್ದ ಖಡಿಬೋಲಿ ಎಂಬ ಭಾಷೆಗೆ ಸಂಸ್ಕೃತದ ಪದಕೋಶವನ್ನು ಸೇರಿಸಿ ಕೃತಕವಾಗಿ ಸೃಷ್ಟಿಸಿದ ಹಿಂದಿಯಿಂದಾಗಿ ಜನರು ತಮ್ಮ ಭಾಷೆಗಳನ್ನು ಬಲಿಗೊಡಬೇಕಾಗಿದೆ. ಇದು ಪ್ರಭುತ್ವ ನಡೆಸುವ ಭಾಷಾ ಹತ್ಯೆಯ ಕೆಲಸವಾಗಿದೆ. ಹಿಂದಿ ‘ಸಾಮ್ರಾಜ್ಯಶಾಹಿಯ’ದ ನಾಡು ವಿಸ್ತಾರವಾಗುತ್ತ ಉತ್ತರ ಭಾರತದಲ್ಲಿರುವ ಸ್ವತಂತ್ರ ಜನಭಾಷೆಗಳು ಅವಸಾನದತ್ತ ಸಾಗಿವೆ. ಹೀಗೆ ಅವಸಾನದತ್ತ ಸಾಗಿರುವ ಸ್ವತಂತ್ರ ಭಾಷೆಗಳ ಜನಸಂಖ್ಯೆಯನ್ನು ಹಿಂದಿ ಭಾಷಿಕರ ಸಂಖ್ಯೆಯಿಂದ ಹೊರಗಿಟ್ಟು ಲೆಕ್ಕ ಮಾಡಿದರೆ ಈಗ ಇರುವ ಶೇ.43.63ರಷ್ಟು ಪ್ರಮಾಣದ ಹಿಂದಿ ಮಾತೃಭಾಷಿಕರು ಖಂಡಿತ ಇರಲು ಸಾಧ್ಯವಿಲ್ಲ.

ಆದರೆ ಹಿಂದಿಯ ಈ ವಿಸ್ತರಣವಾದಿ ರಾಜಕಾರಣದ ವಿರುದ್ದ ಉತ್ತರ ಭಾರತದ ಜನರು ಹೆಚ್ಚು ಪ್ರತಿಭಟಿಸಿಲ್ಲ. ಇಲ್ಲಿ ವಿರೋಧ ವ್ಯಕ್ತವಾಗದಿರುವುದಕ್ಕೂ ಆ ಪ್ರದೇಶ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವುದಕ್ಕೂ ಕಾರಣವಿರಬಹುದೇ? ‘ಹಿಂದಿ ನಾಡು’ ಬೇರೆಡೆಗಳಿಗಿಂತ ಹೆಚ್ಚು ಹಿಂದೂತ್ವವಾದಿ ವಿಚಾರಗಳಿಗೆ ಮಾರುಹೋಗಿರುವುದು ಕಾರಣವಿರಬಹುದೇ? “ಹಿಂದಿ, ಹಿಂದೂ ಮತ್ತು ಹಿಂದೂಸ್ಥಾನ” ಎಂಬ ಭ್ರಮಾತ್ಮಕ ರಾಷ್ಟ್ರ ಕಲ್ಪನೆಯಲ್ಲಿ ತೇಲುತ್ತಿರುವುದು ಕಾರಣವಿರಬಹುದೇ? ಅಂದರೆ ‘ಒಂದು ದೇಶ ಒಂದು ಭಾಷೆ’ ಎಂಬ ಕಲ್ಪನೆಯೊಂದಿಗೆ ಹಿಂದಿಯನ್ನು ಬೆಳೆಸಲು ಪ್ರಭುತ್ವ ಮುಂದಾದ ನಂತರ ಎಷ್ಟೊಂದು ಭಾಷೆಗಳನ್ನು ನಾಶಮಾಡಿ ಜನರ ಮನಸ್ಸಿನಲ್ಲಿ ಭ್ರಮೆಗಳನ್ನು ತುಂಬಿರುವುದನ್ನು ಇದು ಖಚಿತಪಡಿಸುತ್ತದೆ.

ಈ ದೇಶವನ್ನು ಆಳುವವರಿಗೆ ನಿಜಕ್ಕೂ ಪ್ರಜಾಪ್ರಭುತ್ವದ ಬಗೆಗೆ ಪ್ರಾಮಾಣಿಕ ಕಾಳಜಿಯಿದ್ದರೆ ಈ ದೇಶದ ಜನಭಾಷೆಗಳನ್ನು ಗುರುತಿಸಿ ಅವುಗಳ ಬೆಳವಣಿಗೆಗೆ ಶ್ರಮಿಸಬೇಕು. ಆ ಮೂಲಕ ಜನರ ಭಾವನೆಗಳಿಗೆ ಗೌರವ ತೋರಿಸಿ ನಿಜವಾದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜಾರಿಗೊಳಿಸಲು ಮುಂದಾಗಬೇಕು. ಆದರೆ ಅದನ್ನು ಮಾಡದೆ ‘ಒಂದು ದೇಶ ಒಂದು ಭಾಷೆ’ ಎಂಬ ಅಚ್ಚಿನಲ್ಲಿ ಹೊಯ್ದು ಭಾಷೆಗಳನ್ನು ಕರಗಿಸಿ ಕೊಲ್ಲಲಾಗುತ್ತಿದೆ. ಆ ಮೂಲಕ ಸ್ವತಂತ್ರ ಅಸ್ಮಿತೆಯುಳ್ಳ ಸಮುದಾಯಗಳ ಭಾಷೆ, ಆಲೋಚನೆ, ಜ್ಞಾನ ಮತ್ತು ಅಸ್ಮಿತೆಗಳನ್ನು ನಾಶ ಮಾಡಲಾಗುತ್ತಿದೆ. ಇದನ್ನು ಮೊದಲಿನಿಂದಲೂ ಅರಿತುಕೊಂಡಿರುವ ದಕ್ಷಿಣ ಭಾರತ ಹಿಂದಿ ದಬ್ಬಾಳಿಕೆಯನ್ನು ವಿರೋಧಿಸುತ್ತಲೇ ಬರುತ್ತಿದೆ. ಆದರೆ ಈ ಬಗೆಗೆ ಉತ್ತರದ ಜನತೆ ಹೆಚ್ಚು ದನಿಯೆತ್ತಲಿಲ್ಲ. ಇದರಿಂದಾಗಿ ಹಿಂದಿ ಹೇರಿಕೆ ಬಿಕ್ಕಟ್ಟು ಬಂದಾಗಲೆಲ್ಲ ಇದು ಉತ್ತರ ಭಾರತ ವರ್ಸಸ್ ದಕ್ಷಿಣ ಭಾರತ ಎಂದು ಎರಡು ಹೋಳಾಗಿ ಚಿಂತಿಸುವ ವಿದ್ಯಮಾನ ಸೃಷ್ಟಿಯಾಗುತ್ತಿದೆ. ನಿಜವೆಂದರೆ ಉತ್ತರ ಭಾರತದ ಭಾಷೆಗಳು ಹೆಚ್ಚು ಬಾಧಿತವಾಗಿ ವ್ಯವಸ್ಥಿತವಾಗಿ ಹತ್ಯೆಯಾಗುತ್ತಿವೆ.

ಬಹುಭಾಷೆಗಳು ನಮ್ಮ ದೇಶದ ಸಂಪತ್ತು; ಅವನ್ನು ರಕ್ಷಿಸಿಕೊಳ್ಳಬೇಕಾದ ಅಗತ್ಯವರಿಯದೆ ಹಿಂದಿಯನ್ನು ಬೆಳೆಸುತ್ತ ದೇಶದ ಭಾಷಾ ವೈವಿಧ್ಯತೆಯನ್ನು ನಾಶಮಾಡಲಾಗುತ್ತದೆ. ಅಲ್ಲದೆ ಉರ್ದು, ಪರ್ಶಿಯನ್ ಮತ್ತು ಹಿಂದೂಸ್ಥಾನಿಗಳ ಬಳಕೆಯಿಂದ ರೂಪುಗೊಂಡಿರುವ ಸಾಂಸ್ಕೃತಿಕ ಬಹುತ್ವವನ್ನು ನಾಶಮಾಡುತ್ತದೆ. ಪ್ರಮಾಣೀಕರಣಗೊಂಡ ಹಿಂದಿಗೆ ಬಹುತ್ವವನ್ನು ಒಳಗೊಳ್ಳುವ ಗುಣವಿಲ್ಲ. ಅದು ಏಕರೂಪೀಕರಣಗೊಂಡ ಪ್ರಮಾಣೀಕೃತ ಸಂಸ್ಕೃತ ಭೂಯಿಷ್ಟ ಶಿಷ್ಟ ಮಾದರಿಯನ್ನು ಮಾತ್ರ ಒಪ್ಪುತ್ತದೆ. ಇದು ಹಿಂದಿಯ ಬೆಳವಣಿಗೆಗೂ ಒಳ್ಳೆಯದಲ್ಲ. ಆದ್ದರಿಂದ ಪ್ರಭುತ್ವ, ಉತ್ತರದ ಜಾತಿವಾದಿ ಮೇಲ್ವರ್ಗಗಳು ಮತ್ತು ಮತೀಯವಾದಿಗಳಿಂದ ಹಿಂದಿಯನ್ನು ರಕ್ಷಿಸಬೇಕಿದೆ. ಇಲ್ಲವಾದರೆ ಸಂಸ್ಕೃತ ಶುಷ್ಕಗೊಂಡಂತೆ ಹಿಂದಿಯೂ ಶುಷ್ಕ ಭಾಷೆಯಾಗಿ ದೇಶದ ಜನರ ಸೃಜನಶೀಲತೆಯನ್ನು ಹಾಳುಮಾಡುತ್ತದೆ. ಯಾವುದೇ ಪ್ರಮಾಣೀಕರಣವಾದ ಭಾಷೆ ವ್ಯವಹಾರಿಕ ಅಗತ್ಯಕ್ಕೆ ಬೇಕಾಗಿದೆಯೇ ಹೊರತು ಸೃಜನಶೀಲ ಅಭಿವ್ಯಕ್ತಿಗಲ್ಲ.

ಹಾಗಾಗಿ ಹಿಂದಿ ಮಾತ್ರವಲ್ಲದೇ ಭಾರತದಂತಹ ದೇಶದಲ್ಲಿ ಕನ್ನಡ, ತಮಿಳು, ಬಂಗಾಳಿ ಇತ್ಯಾದಿ ಯಾವುದೇ ಒಂದು ಭಾಷೆ ಪ್ರಭುತ್ವ ಭಾಷೆಯಾಗಿ ಹೇರಿಕೆಯಾಗುವುದನ್ನು ವಿರೋಧಿಸಬೇಕಿದೆ. ವೈವಿಧ್ಯಮಯವಾದ ಸಸ್ಯಗಳಿಂದ ಕೂಡಿದ ಕಾಡಿಗೆ ಇರುವಷ್ಟು ತಾಳಿಕೆ ಶಕ್ತಿ ಒಂದೇ ಜಾತಿಯ ಸಸ್ಯಗಳಿಂದ ರೂಪುಗೊಂಡ ತೋಪುಗಳಿಗೆ ಇರುವುದಿಲ್ಲ. ಭಾಷೆಗಳ ವಿಚಾರದಲ್ಲಿಯೂ ಇದು ನಿಜ. ಹಿಂದಿ ಹೇರಿಕೆ ಬಹುಭಾಷಿಕ ಸಂಸ್ಕೃತಿಯನ್ನು ನಾಶ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಹಿಂದಿ ಹೇರಿಕೆಗೆ ಜನರು ತೋರುತ್ತಿರುವ ಪ್ರತಿರೋಧ ನ್ಯಾಯಯುತವಾಗಿದೆ.

ಸ್ವತಂತ್ರ ಭಾರತದ ಸಂಕೇತಗಳಾಗಿ ರಾಷ್ಟ್ರಪಕ್ಷಿ, ರಾಷ್ಟ್ರಪ್ರಾಣಿ, ರಾಷ್ಟ್ರಗೀತೆ, ರಾಷ್ಟ್ರಧ್ವಜಗಳನ್ನು ರೂಪಿಸಿದಂತೆ “ರಾಷ್ಟ್ರಭಾಷೆ”ಯನ್ನು ರೂಪಿಸಲು ಪ್ರಯತ್ನಿಸುತ್ತಲೇ ಬರಲಾಗುತ್ತದೆ. ಇಂತಹ ಸಂಕೇತಗಳ ಮೂಲಕ ಜನರನ್ನು ಭಾವನಾತ್ಮಕವಾಗಿ ಕಟ್ಟಿಹಾಕಲು ಪ್ರಯತ್ನಿಸಲಾಗುತ್ತಿದೆ. ಕುತೂಹಲಕಾರಿಯಾದ ಸಂಗತಿಯೆಂದರೆ, ಹಿಂದಿಯನ್ನು ಅಭಿವೃದ್ಧಿಪಡಿಸುವ ಹೊಣೆಯನ್ನು ಗೃಹ ಸಚಿವಾಲಯಕ್ಕೆ ನೀಡಲಾಗಿದೆ. ರಾಷ್ಟ್ರದ ಭದ್ರತೆಯ ಜೊತೆಗೆ ಹಿಂದಿಯನ್ನು ತಳುಕು ಹಾಕಿರುವುದು ಇಲ್ಲಿ ಖಚಿತವಾಗುತ್ತದೆ. ಹಿಂದಿ ಹೇರಿಕೆಯ ವಂಚನೆಯನ್ನು ಅರಿತು ಅದನ್ನು ವಿರೋಧಿಸುತ್ತ ದಕ್ಷಿಣ ಭಾರತ ತನ್ನ ಅಸ್ಮಿತೆಯನ್ನು ಕಾಪಾಡಿಕೊಳ್ಳುತ್ತಲೇ ಬಂದಿದೆ. ಆದರೆ ಯಾವುದೇ ವಿರೋಧವಿಲ್ಲದೆ ಭಾಷಿಕ ಮತ್ತು ಸಾಂಸ್ಕೃತಿಕ ಬಹುತ್ವವನ್ನು ಹೆಚ್ಚು ಕಳೆದುಕೊಳ್ಳುತ್ತಿರುವುದು ಉತ್ತರ ಭಾರತವೇ ಆಗಿದೆ.

ಹಿಂದಿ ಹೇರಿಕೆಯನ್ನು ದಕ್ಷಿಣ ಭಾರತ ನಿರಂತರವಾಗಿ ವಿರೋಧಿಸುತ್ತಿದ್ದರೂ ಇದನ್ನು ಮತ್ತೆ ಮತ್ತೆ ಕೇಂದ್ರ ಸರ್ಕಾರಗಳು ಮುನ್ನೆಲೆಗೆ ತರುವ ಉದ್ದೇಶವಾದರೂ ಏನು? ಎಂಬ ಪ್ರಶ್ನೆ ಇಲ್ಲಿ ಮುಖ್ಯವಾಗುತ್ತದೆ. ಆಧುನಿಕ ಭಾರತದಲ್ಲಿ ಹಿಂದಿ ಭಾಷೆಯೆಂದರೆ ಅದು ದಬ್ಬಾಳಿಕೆ ಮತ್ತು ಯಜಮಾನಿಕೆಗಳ ಸ್ಥಾಪನೆಯ ಚರಿತ್ರೆಯೇ ಆಗಿದೆ. ಇಂತಹ ಯಜಮಾನಿಕೆ ಕೇವಲ ಹಿಂದಿ ಭಾಷೆಯ ಮೇಲಿನ ಅಭಿಮಾನದಿಂದ ನಡೆಯುವಂತಹದಲ್ಲ. ಬದಲಿಗೆ ಭಾಷೆಯೆಂಬ ಭಾವನಾತ್ಮಕ ಸಾಧನದಿಂದ ದೇಶವನ್ನು ಬೆಸೆದು ಆ ಮೂಲಕ ಆ ದೇಶದ ಸಂಪತ್ತು ಮತ್ತು ಅಧಿಕಾರವನ್ನು ನಿಯಂತ್ರಿಸುವ ಉದ್ದೇಶ ಪ್ರಭುತ್ವಕ್ಕಿದೆ. ಪ್ರಭುತ್ವದಲ್ಲಿ ಪ್ರಮುಖ ಪಾತ್ರ ವಹಿಸುವ ಉತ್ತರ ಭಾರತದ ಮೇಲ್ಜಾತಿ ಮತ್ತು ಮೇಲ್ವರ್ಗವೂ ‘ಅಖಂಡ ಭಾರತ’ವನ್ನು ವಶಕ್ಕೆ ತೆಗೆದುಕೊಳ್ಳಲು ನಡೆಸುತ್ತಿರುವ ಪ್ರಯತ್ನದ ಭಾಗವಾಗಿ ಹಿಂದಿಯನ್ನು ಒಂದು ಅಸ್ತ್ರವನ್ನಾಗಿಸಿ ಅದನ್ನು ಹೇರುವ ಕೆಲಸ ನಡೆಯುತ್ತಿದೆ. ಹಾಗಾಗಿ ಭಾವುಕವಾಗಿ ಹಿಂದಿಯ ಹೇರಿಕೆಯನ್ನು ವಿರೋಧಿಸುವ ಬದಲು ಹಿಂದಿ ‘ಹೇರಿಕೆ’ಯ ಹಿಂದಿರುವ ರಾಜಕೀಯ ಆರ್ಥಿಕ ಮತ್ತು ಸಾಂಸ್ಕೃತಿಕ ಹುನ್ನಾರಗಳನ್ನು ಅರ್ಥಮಾಡಿಕೊಂಡು ರಾಜಕೀಯ ಹೋರಾಟದ ಮೂಲಕ ಬಗೆಹರಿಸಿಕೊಳ್ಳಬೇಕಿದೆ.

‘ಹಿಂದಿ’ಗಿಂತ ಭಾರತ ದೇಶ ಸಾಂಸ್ಕೃತಿಕವಾಗಿ ದೊಡ್ಡದು. ಅಲ್ಲಿನ ಜನರು ಸಾವಿರಾರು ವರ್ಷಗಳಿಂದ ಕಟ್ಟಿರುವ ಬದುಕು ಸಂಕೀರ್ಣ ಮತ್ತು ವೈವಿಧ್ಯಮಯವಾದುದು. ಉತ್ತರ ಭಾರತದ ಕೆಲವರ ಸ್ವಾರ್ಥಕ್ಕಾಗಿ ಭಾಷೆಯ ಹೆಸರಲ್ಲಿ ದಬ್ಬಾಳಿಕೆ ನಡೆಸುವ, ಆ ಮೂಲಕ ದೇಶದ ಐಕ್ಯತೆಗೆ ಮತ್ತೆ ಮತ್ತೆ ಬೆಂಕಿ ಹಚ್ಚುವ ಕೆಲಸವನ್ನು ನಿಲ್ಲಿಸಬೇಕು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!