Thursday, September 19, 2024

ಪ್ರಾಯೋಗಿಕ ಆವೃತ್ತಿ

ಯುವಜನರ ಹೋರಾಟದಿಂದ ಸಮಾಜದಲ್ಲಿ ಪರಿವರ್ತನೆ ಸಾಧ್ಯ: ಹೆಚ್.ಎಂ ರೇವಣ್ಣ

ಯುವಜನರಲ್ಲಿ ಹೋರಾಟದ ಮನಸ್ಸು, ಧ್ಯೇಯ ಮತ್ತು ಕೆಚ್ಚು ಹೆಚ್ಚಿರುತ್ತದೆ. ಇಂತಹ ಯುವಜನರ ಹೋರಾಟದಿಂದ ಸಮಾಜದಲ್ಲಿ ಪರಿವರ್ತನೆ ಸಾಧ್ಯ ಎಂದು ಮಾಜಿ ಸಚಿವ ಹೆಚ್.ಎಂ. ರೇವಣ್ಣ ಅಭಿಪ್ರಾಯಪಟ್ಟರು.

ಜನಪರ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಕರ್ನಾಟಕ ಸಂಘದ ಕೆವಿಎಸ್ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚರಣೆ, ವಿವೇಕ ರತ್ನ ಪ್ರಶಸ್ತಿ ಪ್ರದಾನ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಯುವಜನರ ಹೋರಾಟಗಳಿಂದ ಸಮಾಜದಲ್ಲಿ ಅನೇಕ ಬದಲಾವಣೆಗಳಾಗಿವೆ ಎಂದು ನುಡಿದರು.

ಭಾರತದ ಇಡೀ ರಾಜಕೀಯ ಚಿತ್ರಣ ಬದಲಿಸಿದ ಜಯಪ್ರಕಾಶ್ ನಾರಾಯಣ್, ಗಾಂಧಿಜೀಯವರು, ಸ್ವಾಮಿ ವಿವೇಕಾನಂದರು ಯುವಜನರ ಮೂಲಕ ಚಳವಳಿಗೆ ಕರೆ ನೀಡಿ ಯಶಸ್ವಿಯಾದವರು. ಯುವಜನರ ಹೋರಾಟದಿಂದ ಸರ್ಕಾರಗಳು ಉರುಳಿ ಬಿದ್ದಿರುವ ಇತಿಹಾಸವಿದೆ. ಯವಶಕ್ತಿ ದೇಶದ ಮುಖ್ಯ ಶಕ್ತಿ ಎಂದರು.

ನಾವು ದೊಡ್ಡವರಾಗುತ್ತ ಹೋದಂತೆ ರಾಜೀಯಾಗುವ ಗುಣವಿರುತ್ತದೆ. ಹಾಗೇ ಸಂಕಟಗಳು ಹೆಚ್ಚಿರುತ್ತದೆ. ಆದರೆ ಯುವಜನರಲ್ಲಿ ಹೋರಾಟಗಳಿಗೆ ಸ್ಪಂದಿಸುವ ಮನೋಭಾವವಿರುತ್ತದೆ. ಇಂತಹ ಯುವಜನರ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಸರ್ಕಾರ ಬಳಕೆ ಮಾಡಿಕೊಳ್ಳಲು ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.

ಇಡೀ ಭಾರತದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಉತ್ಕೃಷ್ಟವಾಗಿದೆ. ಜೈನ ಸಂಸ್ಕೃತಿ, ಬಸವ ಸಂಸ್ಕೃತಿ, ದಲಿತ ಸಾಹಿತ್ಯವನ್ನೂ ಒಳಗೊಂಡಿದೆ. ಇಂತಹ ಭಾಷೆಯನ್ನು ಮಾತನಾಡಲು ಹಿಂಜರಿಯಬಾರದು. ಕುವೆಂಪು ಹೇಳಿದಂತೆ “ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ಕನ್ನಡ’ವಾಗಿರಬೇಕು ಎಂದು ಕರೆ ನೀಡಿದರು.

ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಮಾತನಾಡಿ, ಕನ್ನಡ ಚಟುವಟಿಕೆಗಳನ್ನು ನಿರ್ವಹಿಸಲು ಎಷ್ಟೇ ಸಂಘಟನೆಗಳಿದ್ದರೂ ಸಾಲದು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಜನಪದ ಪ್ರಚಾರ ಮಾಡುವ ದಿಕ್ಕಿನಲ್ಲಿ, ಮತ್ತಷ್ಟು ಗಟ್ಟಿಯಾಗಿ ಕಟ್ಟುವ ನಿಟ್ಟಿನಲ್ಲಿ ಸಂಘಟನೆಗಳು ಕೆಲಸ ಮಾಡುವ ಜರೂರತ್ತಿದೆ ಎಂದರು.

ನಗರ ಕೇಂದ್ರಿತವಾಗಿರುವ ಸಾಂಸ್ಕೃತಿಕ ಚಟುವಟಿಕೆಗಳನ್ನು ವಿಕೇಂದ್ರೀಕರಿಸಿ ಗ್ರಾಮೀಣ ಜನರಿಗೂ ಹೆಚ್ಚು ಉಣಬಡಿಸಬೇಕು. ಆಗ ಅವರಿಗೂ ರಂಜನೆ ಮತ್ತು ಬೋಧನೆ ಲಭಿಸುತ್ತದೆ ಎಂದ ಅವರು, ಆರಂಭದಲ್ಲಿ ಸಾಹಿತ್ಯ ರಾಜಪ್ರಭುತ್ವದ ಪರವಾಗಿತ್ತು. ಮನುಷ್ಯ ಜಾತಿ ತಾನೊಂದೇ ವೊಲಂ ಎಂಬ ಸಂದೇಶ ಕೊಟ್ಟ ಪಂಪನ ನಂತರ ಸಾಹಿತ್ಯ ಜನಸಾಮಾನ್ಯರ ಪರವಾಗಿ ನಿಲ್ಲತೊಡಗಿತು ಎಂದು ತಿಳಿಸಿದರು.

ಸಾಹಿತ್ಯ ಜನಸಾಮಾನ್ಯರ ದನಿಯಾಗಬೇಕು. ಅವರ ನೋವುಗಳ ಪ್ರತಿಫಲಿಸಬೇಕು. ಜೊತೆಗೆ ಬೆನ್ನೆಲುಬಾಗಿ ಕಾಯಬೇಕು. ಇದಕ್ಕೆ ಪೂರಕವಾಗಿ ಕನ್ನಡ ಸಾಹಿತ್ಯ ಶ್ರಮಿಕರ ಪರವಾಗಿದೆ. ಜನರನ್ನು ಒಗ್ಗೂಡಿಸುವ ಕಾಯಕ ಮಾಡುತ್ತಿದೆ. ವೈಚಾರಿಕತೆಯ ಬೀಜಗಳನ್ನು ಬಿತ್ತುತ್ತಿದೆ. ಕುವೆಂಪು, ಅಬ್ರಾಹಂ ಕವೂರ್, ಪ್ರೊ. ಎಚ್ಚೆಲ್ಕೆಯವರಂತಹವರಿಂದ ಮಂಡ್ಯ ನೆಲ ಕೋಮು ಗಲಭೆಗೆ ಸಿಲುಕಿ ನಲುಗದೆ ಸಾಮರಸ್ಯವನ್ನು ಉಳಿಸಿಕೊಂಡಿದೆ ಎಂದರು.

ಕೊಳ್ಳೇಗಾಲದ ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಎಸ್. ದತ್ತೇಶ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು. ಅಹಲ್ಯಾಭಾಯಿ ಹೋಳ್ಕರ್ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಕೆ.ಆರ್. ಪ್ರಭಾವತಿ ಪ್ರಭಾವತಿ ಪ್ರತಿಭಾ ಪುರಸ್ಕಾರ ವಿತರಣೆ ಮಾಡಿದರು. ಕನ್ನಡಪ್ರಭ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಅಂಶಿ ಪ್ರಸನ್ನಕುಮಾರ್, ಸಾಹಿತಿ ಡಾ. ಲಿಂಗದಹಳ್ಳಿ ಹಾಲಪ್ಪ, ಪರಿಷತ್ತಿನ ಗೌರವಾಧ್ಯಕ್ಷ ಡಾ.ಡಿ. ರವಿ, ರಾಜ್ಯಾಧ್ಯಕ್ಷ ಡಾ.ಎಂ. ಮಹೇಶ್ ಚಿಕ್ಕಲ್ಲೂರು, ಕುರುಬರ ಸಂಘದ ಜಿಲ್ಲಾಧ್ಯಕ್ಷ ಎಂ.ಎಲ್. ಸುರೇಶ್, ಸಹ ಪ್ರಾಧ್ಯಾಪಕ ಡಾ.ಆರ್. ನಾಗಭೂಷಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರದ ಸಾಧಕರಾದ ಡಾ.ಎಸ್. ಶಿವರಾಜಪ್ಪ (ಸಾಹಿತ್ಯ), ಅಂಶಿ ಪ್ರಸನ್ನಕುಮಾರ್ (ಮಾಧ್ಯಮ), ಎಂ. ಮಹದೇವಸ್ವಾಮಿ, ಡಾ.ಡಿ.ಕೆ. ರವಿಶಂಕರ್ (ವಿಜ್ಞಾನ), ಡಾ.ಆರ್. ನಾಗಭೂಷಣ್ (ಉನ್ನತ ಶಿಕ್ಷಣ), ಗುರುಬಸಪ್ಪ (ಆರಕ್ಷಕ), ಎನ್. ದೊಡ್ಡಯ್ಯ, ಆರ್. ನಾಗರಾಜು, ಮತ್ತು ಪಿ.ವೈ. ಶಾರದಾ (ಸಂಘಟನೆ), ಎಂ.ಸಿ. ಬೋರೇಗೌಡ, ಇ. ಕಂದವೇಲು ಮತ್ತು ಎ. ದೇವಮ್ಮಣಿ, ಡಿ.ಪಿ. ಚಿಕ್ಕಣ್ಣ (ಸಾಹಿತ್ಯ) ಅವರಿಗೆ ವಿವೇಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದ ನಡುವೆ ಮಿಮಿಕ್ರಿ ಗೋಪಿ ಅವರಿಂದ ಹಾಸ್ಯ ಕಾರಂಜಿ ನಡೆಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!