Thursday, September 19, 2024

ಪ್ರಾಯೋಗಿಕ ಆವೃತ್ತಿ

ಪವಿತ್ರ ಮೃತ್ತಿಕೆ ಸಮರ್ಪಿಸಿ ಕೆಂಪೇಗೌಡರಿಗೆ ಗೌರವ ಸಲ್ಲಿಸಿ: ಗೋಪಾಲಯ್ಯ

ಬೆಂಗಳೂರು ನಿರ್ಮಾಣ ಮಾಡಿದ ನಾಡಪ್ರಭು ಕೆಂಪೇಗೌಡ ಅವರ 108 ಅಡಿ ಕಂಚಿನ ಪ್ರತಿಮೆ ಹಾಗೂ ಥೀಮ್ ಪಾರ್ಕ್ ಉದ್ಘಾಟನೆ ಕಾರ್ಯಕ್ರಮದ ಅಂಗವಾಗಿ ಪವಿತ್ರ ಮೃತ್ತಿಕೆ ಸಂಗ್ರಹಿಸುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪವಿತ್ರ ಮೃತ್ತಿಕೆ ಸಮರ್ಪಿಸುವಂತೆ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ತಿಳಿಸಿದರು.

ಮಂಡ್ಯ ನಗರದ ಕಾಳಿಕಾಂಭ ದೇವಾಲಯದ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಆಯೋಜಿಸಿದ್ದ ಮಂಡ್ಯ ಜಿಲ್ಲೆಯ ಪವಿತ್ರ ಮೃತ್ತಿಕೆ (ಮಣ್ಣು) ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಾಡಪ್ರಭು ಕೆಂಪೇಗೌಡ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರಲಿಲ್ಲ. ಎಲ್ಲಾ ಸಮುದಾಯ ಹಾಗೂ ಎಲ್ಲಾ ಕಸುಬುಗಳಿಗೆ ಬೆಂಗಳೂರಿನಲ್ಲಿ ಮಾರುಕಟ್ಟೆಯನ್ನು ಕಲ್ಪಿಸಿಕೊಟ್ಟರು. ನಾಡ ಪ್ರಭು ಕೆಂಪೇಗೌಡರ ರಥ ಅ.29 ರಿಂದ ನವೆಂಬರ್ 6 ರವರೆಗೆ ಜಿಲ್ಲೆಯ 233 ಗ್ರಾಮ ಪಂಚಾಯಿತಿಯ 1500 ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಸಂಚರಿಸಿ ಪವಿತ್ರ ಮೃತ್ತಿಕೆ ಸಂಗ್ರಹಿಸಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ವ್ಯಾಪ್ತಿಯಲ್ಲಿರುವ ಧಾರ್ಮಿಕ, ಪಾರಂಪರಿಕ, ಕಲ್ಯಾಣಿ ಇನ್ನಿತರ ಪ್ರಸಿದ್ಧ ಸ್ಥಳದಲ್ಲಿ ಮಣ್ಣು ಸಂಗ್ರಹಿಸಿ ಸಮರ್ಪಿಸಿ ಎಂದರು.

ಕೆಂಪೇಗೌಡರು ಸದಾ ಸ್ಮರಣೀಯ 

ಸಣ್ಣ ಪುಟ್ಟ ಗ್ರಾಮಗಳಿಂದ ಉದ್ಯೋಗಕ್ಕಾಗಿ ಬೆಂಗಳೂರಿಗೆ ತೆರಳಿ ಜೀವನ ನಡೆಸುತ್ತಿರುವ ಜನರು ಬಹಳಷ್ಟಿದ್ದಾರೆ. ಇಲ್ಲಿ ಉದ್ಯೋಗ ಪಡೆಯಲು ವಿವಿಧ ರೀತಿಯಲ್ಲಿ ಅವಕಾಶ ಕಲ್ಪಿಸಿಕೊಟ್ಟ ನಾಡಪ್ರಭು ಕೆಂಪೇಗೌಡರ ಹೆಸರು ಸದಾ ಸ್ಮರಣೀಯ ಎಂದು ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಡಾ: ಕೆ.ಸಿ.ನಾರಾಯಣಗೌಡ ಹೇಳಿದರು.

ಇಂದು ಬೆಂಗಳೂರು ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಸಾಧನೆಗೈದಿದೆ ಎಂದರೆ, ಅದರ ಕೀರ್ತಿ ನಾಡಪ್ರಭು ಕೆಂಪೇಗೌಡ ಅವರುಗೆ ಸಲ್ಲಬೇಕು. ಸಿಲಿಕಾನ್ ವ್ಯಾಲಿ ಎಂಬ ಗರಿಮೆಗೆ ಪಾತ್ರವಾಗಿರುವ ಬೆಂಗಳೂರಿನಲ್ಲಿ ವಿಶ್ವ ಹೂಡಿಕೆದಾರರ ಸಮ್ಮೇಳನ ಆಯೋಜನೆಯಾಗುತ್ತಿರುವುದು ಬೆಂಗಳೂರಿನ ಹಿರಿಮೆಯನ್ನು ಸಾಬೀತುಪಡಿಸುತ್ತದೆ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು, ಬೃಹತ್ ಬೆಂಗಳೂರು ನಿರ್ಮಾತೃವಿಗೆ ಗೌರವ ಸಲ್ಲಿಸಲು ಸರ್ಕಾರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಹಾಗೂ ಥೀಂ ಪಾರ್ಕ್ ನಿರ್ಮಾಣಕ್ಕೆ ಮೃತ್ತಿಕೆ ಸಂಗ್ರಹಣೆಗೆ ಮುಂದಾಗಿದ್ದು, ಜನರು ಅಭಿಮಾನ ಹಾಗೂ ಭಕ್ತಿ ಗೌರವದಿಂದ ಈ ಕಾರ್ಯ ಯಶಸ್ವಿಗೆ ಸಹಕರಿಸುವಂತೆ ಮನವಿ ಮಾಡಿದರು.

ವೇದಿಕೆ ಕಾರ್ಯಕ್ರಮದ ನಂತರ ಎಲ್ಲಾ ಗಣ್ಯರು ಕಾಳಿಕಾಂಭ ದೇವಸ್ಥಾನದಿಂದ ಪವಿತ್ರ ಮೃತ್ತಿಕೆಯನ್ನು ಸಂಗ್ರಹಿಸಿ ಪೂಜೆ ಸಲ್ಲಿಸಿ ನಾಡ ಪ್ರಭು ಕೆಂಪೇಗೌಡರ ರಥಕ್ಕೆ ಸಮರ್ಪಿಸಿ ಚಾಲನೆ ನೀಡಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಆದಿಚುಂಚನಗಿರಿ ಶಾಖಾ ಮಠದ ಶ್ರೀಪುರುಷೋತ್ತಮಾನಂದನಾಥ ಸ್ವಾಮೀಜಿ, ಚಂದ್ರವನ ಆಶ್ರಮದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಜಂಗಮ ಮಠದ ರೇಣುಕಾಶಿವಚಾರ್ಯ ಸ್ವಾಮೀಜಿ ವಹಿಸಿದ್ದರು.

ವೇದಿಕೆಯಲ್ಲಿ ಶಾಸಕ ಎಂ.ಶ್ರೀನಿವಾಸ್, ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಲ್ಲಾಧಿಕಾರಿ ಡಾ.ಎಚ್.ಎನ್
ಗೋಪಾಲಕೃಷ್ಣ, ಜಿ.ಪಂ. ಸಿಇಒ ಶಾಂತಾ ಎಲ್.ಹುಲ್ಮನಿ, ತಹಶೀಲ್ದಾರ್ ಕುಂ‍‍ಞ ಅಹಮದ್, ಡಿ.ಒ.ಎಸ್.ಪಿ ವೇಣುಗೋಪಾಲ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!