Wednesday, October 23, 2024

ಪ್ರಾಯೋಗಿಕ ಆವೃತ್ತಿ

ಒಂದು ತಪ್ಪನ್ನು ತಪ್ಪೆನ್ನುವ ಭರಾಟೆಯಲ್ಲಿ ಮತ್ತೊಂದು ತಪ್ಪಿಗೆ ಸರಿಯ ಮನ್ನಣೆ ಕೊಡುವುದು ಎಷ್ಟು ಸರಿ?

ಮಾಚಯ್ಯ ಎಂ ಹಿಪ್ಪರಗಿ

ನಟ ದರ್ಶನ್ ಮಾಡಿದ್ದು ತಪ್ಪು. ಇದನ್ನು ನೀವು ಮೆದುವಾಗಿ ಹೇಳಿದರೂ ಅದು ತಪ್ಪೇ; ಉಗ್ರ ಪದಗಳ ಕಠೋರ ಭಾಷೆಯಲ್ಲಿ ಖಂಡಿಸಿದರೂ ಅದು ತಪ್ಪೇ! ಆ ತಪ್ಪಿಗೆ ತಕ್ಕ ಶಿಕ್ಷೆ ಆತನಿಗೆ ಆಗಲೇಬೇಕು. ಹತ್ರಾಸ್‌ನಲ್ಲಿ ಅತ್ಯಾಚಾರ ಸಂತ್ರಸ್ತೆಯ ಶವವನ್ನು ಆಕೆಯ ಮನೆಯವರಿಗೂ ಕೊಡದೆ, ಯೋಗಿ ಆದಿತ್ಯನಾಥನ ಪೊಲೀಸರು ರಾತ್ರೋರಾತ್ರಿ ಸುಟ್ಟುಹಾಕಿದ ರೀತಿಗೆ; ಇಡೀ ಊರಿಗೆ ನಿರ್ಬಂಧ ಹೇರಿ, ಪತ್ರಕರ್ತರ್‍ಯಾರೂ ಸಂತ್ರಸ್ತೆಯ ಮನೆಯವರನ್ನು ಭೇಟಿಯಾಗದಂತೆ ಸರ್ಪಗಾವಲು ಹಾಕಿದ ರೀತಿಗೆ ಹೋಲಿಸಿ ನೋಡಿದಾಗ, ದರ್ಶನ್ ಪ್ರಕರಣದಲ್ಲಿ ಅಂತಹ ಯಾವ ಷಡ್ಯಂತ್ರವೂ ಕರ್ನಾಟಕ ಪೊಲೀಸರ ತನಿಖೆಯಲ್ಲಿ ಕಾಣುತ್ತಿಲ್ಲ. ಸಾಧ್ಯವಾದಷ್ಟು ಕಟ್ಟುನಿಟ್ಟಾಗಿ, ಕರಾರುವಕ್ಕಾಗಿ, ಕಾನೂನುಬದ್ಧವಾಗಿ, ಪಾರದರ್ಶಕವಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಾಗಾಗಿ ದರ್ಶನ್ ಮಾಡಿರುವ ತಪ್ಪಿಗೆ ತಕ್ಕ ಶಿಕ್ಷೆ ಆಗುತ್ತದೆಂದು ನಾವು ಭಾವಿಸಬಹುದು.

ಕೃತ್ಯ ನಡೆದು ವಾರದ ಮೇಲಾಯ್ತು. ಈ ಅವಧಿಯಲ್ಲಿ ದರ್ಶನ್ ಮಾಡಿದ ಕೃತ್ಯವನ್ನು ಎಷ್ಟು ಖಂಡಿಸಬಹುದೊ ಅಷ್ಟೂ ಖಂಡಿಸಿದ್ದೇವೆ. ಆತನ ಶಿಕ್ಷೆಗಾಗಿ ಆಗ್ರಹಿಸಿದ್ದೇವೆ. ಈಗ ಕೊಂಚ ಬಿಡುವು ಪಡೆದು, ದರ್ಶನ್ ಎಂಬ ಸೆಲೆಬ್ರಿಟಿಯ ಆಚೆಗೂ ಈ ಘಟನೆಯ ಭಿನ್ನ ಆಯಾಮಗಳನ್ನು ನೋಡಲು ಸಾಧ್ಯವಾದರೆ, ಒಂದು ಸಮಾಜವಾಗಿ ನಾವು ಈ ಘಟನೆಯಿಂದ ಒಂದಷ್ಟು ಪಾಠಗಳನ್ನು ಕಲಿಯಬಹುದು ಅನ್ನಿಸುತ್ತೆ.

ನಮ್ಮ ಗೃಹಮಂತ್ರಿಗಳಾದ ಡಾ ಜಿ ಪರಮೇಶ್ವರರು, ಚಿತ್ರದುರ್ಗದ ಸಂತ್ರಸ್ತನ ಮನೆಗೆ ಭೇಟಿ ನೀಡಿ, ಆ ಕುಟುಂಬಕ್ಕೆ ಧೈರ್ಯ ಹೇಳಿಬಂದರು. ಪ್ರಭಾವಿ ವ್ಯಕ್ತಿಗಳು ಕೃತ್ಯ ನಡೆಸಿದ್ದರೂ, ನಾವು ಪಾರದರ್ಶಕವಾಗಿ ತನಿಖೆ ನಡೆಸುತ್ತೇವೆ ಎಂಬ ವಿಶ್ವಾಸವನ್ನು ಆ ಕುಟುಂಬದವರಿಗೆ ತುಂಬುವ ಸರ್ಕಾರದ ನಡೆಯಾಗಿರಬಹುದು ಅವರ ಭೇಟಿಯ ಉದ್ದೇಶ. ಅದಾದ ಬೆನ್ನಿಗೆ, ಬಿಜೆಪಿಯ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕೂಡಾ, ಸಂತ್ರಸ್ತನ ಕುಟುಂಬ ಭೇಟಿ ಮಾಡಿದರು. ಅಷ್ಟೇ ಅಲ್ಲ, ಹತ್ಯೆಯಾದ ವ್ಯಕ್ತಿಯ ಹೆಂಡತಿಗೆ ಸರ್ಕಾರ ಉದ್ಯೋಗ ಕೊಡಬೇಕು ಎಂಬ ಒತ್ತಾಯವನ್ನೂ ಅವರು ಮುಂದಿಟ್ಟಿದ್ದಾರೆ.

ಹೊಟ್ಟೆಯಲ್ಲಿ, ಇನ್ನೂ ಹುಟ್ಟದ ಕಂದಮ್ಮನನ್ನು ಹೊತ್ತಿರುವ ಆ ವಿಧವೆ ಹೆಣ್ಣುಮಗಳ ಕಷ್ಟವನ್ನು ನೋಡಿ ಅವರ ಮನಸು ಕರಗಿ ಹಾಗೆ ಹೇಳಿರಬಹುದು. ಇವೆರಡೂ ಘಟನೆಗೂ ಮುನ್ನ, ಕರ್ನಾಟಕ ಚಲನಚಿತ್ರ ಮಂಡಳಿಯ ಒಂದು ತಂಡ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿ, ಐದು ಲಕ್ಷ (ಸುಮಾರು) ರೂಪಾಯಿಯ ನೆರವು ನೀಡಿ ಬಂದಿತ್ತು. ಈಗೀಗ ಸಾಕಷ್ಟು ಸೆಲೆಬ್ರಿಟಿಗಳು ಕೂಡಾ ಹತ್ಯೆಯಾದ ರೇಣುಕಾಸ್ವಾಮಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ದರ್ಶನ್ ಗೆ ಶಿಕ್ಷೆಯಾಗಬೇಕೆನ್ನುವ ನ್ಯಾಯಪರ ಹೋರಾಟಗಳ ಬ್ಯಾನರ್ ಗಳಲ್ಲೂ ಸತ್ತ ವ್ಯಕ್ತಿಯ ಫೋಟೊಕ್ಕೆ ಜಾಗ ಮಾಡಿಕೊಡಲಾಗುತ್ತಿದೆ; ಕೆಲವು ಕಡೆ ಘೋಷಣೆಗಳ ಮೂಲಕ ಆತನನ್ನು ಅಮಾಯಕ ಸಂತ್ರಸ್ತನನ್ನಾಗಿಸಿ ಅಮರಗೊಳಿಸುವ ಪ್ರಯತ್ನವನ್ನೂ ನಡೆಸಲಾಗುತ್ತಿದೆ.

ದರ್ಶನ್ ಮಾಡಿದ್ದು ತಪ್ಪೆನ್ನುವ ಭರಾಟೆಯಲ್ಲಿ ನಾವು, ಹತ್ಯೆಯಾದ ವ್ಯಕ್ತಿಯ ತಪ್ಪನ್ನು ಗೌಣವಾಗಿಸಿ, ಸಮಾಜದಲ್ಲಿ ಆತನ ಪರ ಸಂತಾಪವನ್ನು ಉತ್ಪಾದಿಸುತ್ತಿರುವುದು ಎಷ್ಟು ಸರಿ? ಆತ ಎಸಗಿದ ತಪ್ಪಿಗೆ `ಅಮಾಯಕತೆ’ಯ ಮುದ್ರೆ ಒತ್ತುವುದರಿಂದ ಮುಂದೆ ಆಗಬಹುದಾದ ಪರಿಣಾಮ ಏನು? ಅಂಕೆಯಿರದ ಇವತ್ತಿನ ಸೋಶಿಯಲ್ ಮೀಡಿಯಾದ Parallel ಜಗತ್ತಿನಲ್ಲಿ ಖಾಸಗಿತನ ಅಥವಾ ನೈತಿಕತೆಗಳಿಗೆ ಯಾವ ಗಡಿಯೂ ಇಲ್ಲದಂತಾಗಿದೆ.

ಅದರಲ್ಲೂ ಮಹಿಳೆಯರ ಮೇಲೆ ನಡೆಯುತ್ತಿರುವ ಸೈಬರ್ ಶೋಷಣೆಗಳು ಹೀನ ಎನ್ನುವಷ್ಟು ಕರಾಳಗೊಂಡಿವೆ. ಟ್ರೋಲ್ ಹೆಸರಿನಲ್ಲಿ, ನಕಲಿ ಅಕೌಂಟುಗಳನ್ನು ಸೃಷ್ಟಿಸಿಕೊಂಡು ಬೇರೆಯವರ ಮಾನಸಿಕ ನೆಮ್ಮದಿಯನ್ನು ಹಾಳುಗೆಡವುವ ವಿಕೃತಿಗಳಿಗೆ ಲೆಕ್ಕವಿಲ್ಲ. 2017ರಲ್ಲಿ ಅಮ್ನೆಸ್ಟಿ ಇಂಟರ್ ನ್ಯಾಶನಲ್ ಸಂಸ್ಥೆ study on online violence against women ಎನ್ನುವ ಸಮೀಕ್ಷೆ ನಡೆಸಿತು. ಅದರಲ್ಲಿ 70% ಮಹಿಳೆಯರು ತಾವು ಆನ್ ಲೈನ್ ಟ್ರೋಲ್ ಶೋಷಣೆಗೆ ಒಳಗಾಗುತ್ತಿರುವುದಾಗಿ ಹೇಳಿಕೊಂಡಿದ್ದರು. ಮಾತ್ರವಲ್ಲ, ಅಷ್ಟೂ ಮಹಿಳೆಯರು ಆ ಟ್ರೋಲ್ ಕಾಟಕ್ಕೆ ಬೇಸತ್ತು ತಾವು ಸೋಷಿಯಲ್ ಮೀಡಿಯಾ ಬಳಸುವ ವಿಧಾನವನ್ನೇ ಬದಲಿಸಿಕೊಂಡಿದ್ದರು. ಅಂದರೆ ತಮ್ಮ ಅಕೌಂಟ್ ಕ್ಲೋಸ್ ಮಾಡಿ, ಮತ್ತೊಂದು ಅಕೌಂಟ್ ಓಪನ್ ಮಾಡಿಕೊಳ್ಳುವುದೋ, ತಮ್ಮ ಐಡೆಂಟಿಟಿಯನ್ನು ಮುಚ್ಚಿಟ್ಟು ಬೇರೆ ಹೆಸರಿನಲ್ಲಿ ಅಕೌಂಟ್ ತೆರೆಯವುದೋ ಇತ್ಯಾದಿ.

ಇದರಲ್ಲಿ ಮೂರನೇ ಒಂದರಷ್ಟು ಮಹಿಳೆಯರಂತೂ ಟ್ರೋಲಿಗರ ಕಿರಿಕಿರಿ ತಾಳದೆ, ತಾವು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವುದನ್ನೇ ಬಿಟ್ಟಿದ್ದೇವೆ ಎಂದು ಹೇಳಿಕೊಂಡಿದ್ದರು. ಈಗಿರುವ ಮಾಹಿತಿ ಪ್ರಕಾರ ಹತ್ಯೆಯಾದ ರೇಣುಕಾಸ್ವಾಮಿ, ಪವಿತ್ರಾ ಗೌಡಳಿಗೆ ನೀಡಿದ ಕಿರಿಕಿರಿಯೂ ಇಂತದ್ದೇ ಎನ್ನಲಾಗುತ್ತಿದೆ. ಅಶ್ಲೀಲ ಮೆಸೇಜುಗಳು, ಗುಪ್ತಾಂಗದ ಫೋಟೊ, ರತಿಕ್ರೀಡೆಗೆ ಆಹ್ವಾನ… ಇಂತಹ ವಿಕೃತ ಮನೋಭಾವದ ವ್ಯಕ್ತಿಯೊಬ್ಬ ಸಾವಿನ ಕಾರಣಕ್ಕೆ ಅಮಾಯಕನೆನಿಸಬಹುದೆ? ತಮ್ಮ political presenceಗಾಗಿ ನಮ್ಮ ರಾಜಕೀಯ ನೇತಾರರು ಅಥವಾ ಪ್ರಖ್ಯಾತ-ಪ್ರಭಾವಿಗಾರರು, ತಮಗರಿವಿದ್ದೋ ಇಲ್ಲದೆಯೋ `ಆ’ ತಪ್ಪಿಗೆ sympathy ತಂದುಕೊಡುತ್ತಿದ್ದಾರೆ ಅನ್ನಿಸುತ್ತಿಲ್ಲವೇ?

ನೋ ಡೌಟ್! ದರ್ಶನ್ ಕೃತ್ಯದೆದುರು, ಹತ್ಯೆಯಾದವನ ತಪ್ಪು ಕೆಲವರಿಗೆ ಸಣ್ಣದಾಗಿಯೇ ಕಾಣಿಸಬಹುದು. ಇನ್ ಫ್ಯಾಕ್ಟ್, ಆ ತಪ್ಪಿಗೆ ಶಿಕ್ಷೆ ಕೊಡುವ ಯಾವ ಹಕ್ಕೂ ದರ್ಶನ್‌ಗೆ ಇರಲಿಲ್ಲ. ಅವರು ಪೊಲೀಸರ ಮೊರೆ ಹೋಗಬೇಕಿತ್ತು. ಒಂದುವೇಳೆ, ದರ್ಶನ್ ಹಾಗೆ ಮಾಡಿದ್ದರೆ, ಪ್ರಭಾವಿಯಾದ ಕಾರಣಕ್ಕೆ ದರ್ಶನ್ ದೂರನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದ ಪೊಲೀಸರು ರೇಣುಕಾಸ್ವಾಮಿಯನ್ನು ಅರೆಸ್ಟ್ ಮಾಡಿ ನ್ಯಾಯಾಲಯದೆದುರು ನಿಲ್ಲಿಸುತ್ತಿದ್ದರು. ಆಗ, ಇವತ್ತು ರೇಣುಕಾಸ್ವಾಮಿಯನ್ನು ಅಮಾಯಕಗೊಳಿಸುತ್ತಿರುವ ಜನರೇ ಆತನನ್ನು ವಿಕೃತ ಆರೋಪಿಯೆಂದು ಹೀಗಳೆಯುತ್ತಿದ್ದರು. ಅರ್ಥಾತ್, ಹತ್ಯೆಯಾಗಿರುವ ವ್ಯಕ್ತಿ ಮಾಡಿದ್ದು ನೈತಿಕವಾಗಿ, ಕಾನೂನಾತ್ಮಕವಾಗಿ ಮತ್ತು ಸಾಮಾಜಿಕ ಮೌಲ್ಯಗಳಿಂದಲೂ ತಪ್ಪು. ಆ ತಪ್ಪು, ಸಾವಿನ ಕಾರಣಕ್ಕೆ ಸರಿ ಆಗಬಹುದೇ?

ಹಾಗಂತ, ಆತನನ್ನು ಕೊಂದು ದರ್ಶನ್ ಸರಿಯಾದ ಕೆಲಸ ಮಾಡಿದ್ದಾರೆ ಎಂದು ಖಂಡಿತ ಸಮರ್ಥಿಸಿಕೊಳ್ಳಲಾಗದು. ಯಾಕೆಂದರೆ ಮತ್ತೊಬ್ಬರ ಹಕ್ಕುಗಳ ಮೇಲೆ ದಾಳಿ ನಡೆಸುವುದೇ ದೊಡ್ಡ ಅಪರಾಧ. ಆದರೆ ದರ್ಶನ್ ಮಾಡಿರುವ ತಪ್ಪನ್ನು ಎತ್ತಿತೋರುವ ಭರದಲ್ಲಿ ಸತ್ತವನ ತಪ್ಪಿಗೆ ಸಂತಾಪ ಹುಟ್ಟಲು ನಾವು ಕಾರಣರಾಗಬಾರದೆನ್ನುವ ಎಚ್ಚರಿಕೆಯೂ ನಮಗಿರಬೇಕಾಗುತ್ತದೆ?

ಇವತ್ತು ಸೋಷಿಯಲ್ ಮೀಡಿಯಾದ ಟ್ರೋಲರ್ ಗಳಿಂದ ಅದೆಷ್ಟು ಅಮಾಯಕ ಹೆಣ್ಮಕ್ಕಳು ತಮ್ಮ ನೆಮ್ಮದಿಯನ್ನು ಕಳೆದುಕೊಂಡಿಲ್ಲ; ಅದೆಷ್ಟು ಹೆಣ್ಮಕ್ಕಳು ಮಾನಕ್ಕೆ ಅಂಜಿ ಆತ್ಮಹತ್ಯೆಯ ಹಾದಿ ತುಳಿದಿಲ್ಲ; ಅದೆಷ್ಟು ಸಂಸಾರಗಳು ಬೀದಿಗೆ ಬಂದಿಲ್ಲ…… ಅದೊಂದು ವಿಕೃತ ಅಪರಾಧ. ಅಷ್ಟೆ! ಅದರಾಚೆಗೆ ನಾವು, ದರ್ಶನ್ ಅಥವಾ ಮತ್ತ್ಯಾರದೋ ಪ್ರಭಾವಿ ಇಮೇಜನ್ನು ನಿಲ್ಲಿಸಿ ಆ ಅಪರಾಧವನ್ನು ಅಳತೆ ಮಾಡಹೋಗುವುದೇ ಅಸಂಬದ್ಧ!

ಅಂದಹಾಗೆ, ಪ್ರಗತಿಪರ ಪೋಷಾಕಿನ ಬ್ರಾಹ್ಮಣ್ಯಶಾಹಿ ಚಿಂತಕರಲ್ಲಿ ಒಂದು ಮನವಿ… ದರ್ಶನ್ ಒಬ್ಬ ಶೂದ್ರ, ಆ ಕಾರಣಕ್ಕಾಗಿ ಅವನ ಕೃತ್ಯವನ್ನು ಮೆದುವಾಗಿಸಲು ಕೆಲಸವಿಲ್ಲದವರು ಹೀಗೆಲ್ಲ ವಾದ ಹುಟ್ಟಿಸುತ್ತಿದ್ದಾರೆ ಅಂತ ನಿಮ್ಮನ್ನು ನೀವು ಸಂತೈಸಿಕೊಳ್ಳುವುದಾದರೆ, ನಿಮ್ಮ ಆ ಆತ್ಮರತಿಗೆ ಈ ಬರಹಗಾರ ಖಂಡಿತ ಅಡ್ಡಬರಲಾರ. ಆದರೆ `ಸರ್ವಂ ಜಾತಿ ಮಯಂ’ ಎನ್ನುವ ಈ ನಮ್ಮ ಭರತಖಂಡದಲ್ಲಿ ಶೂದ್ರನೊಬ್ಬನ ಏಳಿಗೆಯನ್ನು ಮಟ್ಟಹಾಕಲು ಅವನದೇ ಅವಗುಣಗಳನ್ನು ಹೇಗೆಲ್ಲಾ ಬಳಸಿಕೊಳ್ಳುತ್ತಾ ಬರಲಾಗುತ್ತಿದೆ ಎನ್ನುವುದು ಹೊಸದೇನೂ ಅಲ್ಲ. ಇಂತದ್ದಕ್ಕೆಲ್ಲ ವ್ಯಕ್ತಿಗತ ಅಸಹನೆಯೇ ಮೂಲ ಕಾರಣ. ಆ ಅಸಹನೆಗೆ ಜಾತಿಯೇ ಪರೋಕ್ಷ ಅಡಿಪಾಯ!

ಮೂಲ ನಿವಾಸಿಗಳನ್ನು ಮಟ್ಟಹಾಕಲು `ಅಸುರ ಸಂಹಾರ’ ಎಂಬ ರಂಜನೆಯ ಕಥೆಗಳನ್ನು ಕಟ್ಟಿದವರೇ ಇವತ್ತು ಮೀಡಿಯಾಗಳ ಲಗಾಮು ಹಿಡಿದು ಕೂತಿದ್ದಾರೆ. ದರ್ಶನ್ ಎಂಬ ಹುಂಬ-ದುರಹಂಕಾರಿ ಶೂದ್ರ, ಇಂತವರ ಕೈಗೆ ಸಿಕ್ಕಿ `ರಾಕ್ಷಸನಾಗಿ’ ರೂಪಾಂತರಗೊಳ್ಳುವುದು ಎಷ್ಟೊತ್ತಿನ ಮಾತು!

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!