Friday, September 20, 2024

ಪ್ರಾಯೋಗಿಕ ಆವೃತ್ತಿ

ಸುರೇಶ್ ಗೌಡ ವರ್ತನೆಯಿಂದ ನಾಗಮಂಗಲದ ಘನತೆ ಮಣ್ಣುಪಾಲು- ಕೃಷ್ಣೇಗೌಡ

ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರನ್ನು ಟೀಕಿಸುವ ಭರದಲ್ಲಿ ಮಾಜಿ ಶಾಸಕ ಕೆ.ಸುರೇಶ್ ಗೌಡ ಬಳಸಿರುವ ಕೀಳಮಟ್ಟದ ಪದಗಳು, ನಾಗಮಂಗಲ ವಿಧಾನಸಭಾ ಕ್ಷೇತ್ರ ಹಾಗೂ ಅಲ್ಲಿನ ಜನತೆಗೆ ಕೆಟ್ಟ ಹೆಸರು ತಂದಿದ್ದು, ಘನತೆ ಮಣ್ಣುಪಾಲಾಗಿದೆ ಎಂದು ರಾಜ್ಯ ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷ ಹೆಚ್.ಟಿ.ಕೃಷ್ಣೇಗೌಡ ಹಾಗೂ ಮನ್ ಮುಲ್ ಮಾಜಿ ಅಧ್ಯಕ್ಷ ಜವರೇಗೌಡ ಕಿಡಿಕಾರಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಆರೋಪಗಳು ನೈತಿಕ ನೆಲೆಗಟ್ಟಿನಲ್ಲಿರಬೇಕು. ಭಾಷಾ ಬಳಕೆಯೂ ಉತ್ತಮವಾಗಿರಬೇಕು ಎಂಬ ಕನಿಷ್ಟ ತಿಳುವಳಿಕೆ ಇಲ್ಲದ ಸುರೇಶ್ ಗೌಡರಿಂದ ತಾಲ್ಲೂಕಿನ ಹಿರಿಯ ರಾಜಕಾರಣಿಗಳಾಗಿದ್ದ ಟಿ.ಎನ್.ಮಾದಪ್ಪಗೌಡ, ಚಿಗರಿಗೌಡ, ಶಂಕರಲಿಂಗೇಗೌಡ, ಹೆಚ್.ಟಿ.ಕೃಷ್ಣಪ್ಪ ಅವರು ಗಳಿಸಿದ್ದ ಘನತೆಗೆ ಕುಂದು ಉಂಟಾಗಿದೆ ಎಂದು ದೂರಿದರು.

2008ರಲ್ಲಿ ಬಿಜೆಪಿ ಪಕ್ಷ ಸೇರ್ಪಡೆಯಾಗಲು ಬೆಂಗಳೂರಿನ ಖಾಸಗಿ ಹೋಟೇಲ್ ನಲ್ಲಿ ಆರ್.ಅಶೋಕ್ ಅವರ ಕಾಲು ಹಿಡಿಯಲು ಮುಂದಾಗಿದ್ದ ಸುರೇಶ್ ಗೌಡರಿಗೆ ಎಸ್.ಎಂ.ಕೃಷ್ಣ ಅವರನ್ನು ಪರಿಚಯಿಸಿ ಕಾಂಗ್ರೆಸ್ ಗೆ ಕರೆತಂದವರಿಗೆ ವಂಚಿಸಿ, ಬಿ.ಫಾರಂ ಕಬಳಿಸಿದ ಭೂಪ ಎಂದು ಜರಿದರು.

2008ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪರವಾಗಿ ಚುನಾವಣಾ ಖರ್ಚು ಮಾಡಿದ್ದ ಹಲವರಿಗೆ ಹಣ ನೀಡದೇ ವಂಚಿಸಿರುವ ಸುರೇಶ್ ಗೌಡರಿಂದ ಚಲುವರಾಯಸ್ವಾಮಿ ಪಾಠ ಕಲಿಯುವ ಅಗತ್ಯವಿಲ್ಲವಾಗಿದ್ದು, ಟೀಕಿಸುವ ಭರದಲ್ಲಿ ಕೀಳುಪದ ಪ್ರಯೋಗಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸರ್ಕಾರಿ ಜಾಗ ಕಬಳಿಸಿ ಕಾಂಪೌಂಡ್ ನಿರ್ಮಿಸಿದ್ದನ್ನು ವಿರೋಧಿಸಿದ್ದಕ್ಕೆ ಚಲುವರಾಯಸ್ವಾಮಿ ಅವರ ಮೇಲೆ ವೈಯಕ್ತಿಕ ದ್ವೇಷ ಸಾರುವ ಸುರೇಶ್ ಗೌಡರ ಭೂ ಕಬಳಿಕೆ ಹೊರ ತೆಗೆಯಲು ಜಿಲ್ಲೆಯ ಕಂದಾಯ ಅಧಿಕಾರಿಗಳು ಮುಂದಾಗಬೇಕೆಂದು ಒತ್ತಾಯಿಸಿದರು.

ಜಾಹೀರಾತು

ತಮ್ಮ ಶಾಸಕತ್ವದ ಅವಧಿಯಲ್ಲಿ ಕೇವಲ ಮೂರ್‍ನಾಲ್ಕು ಮಂದಿ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನೀಡಿ, ವಂಚಿಸಿರುವ ಪ್ರಕರಣದ ಬಗ್ಗೆ ತನಿಖೆಯಾಗಬೇಕು, ಈ ಬಗ್ಗೆ ತನಿಖೆ ನಡೆಸಲು ಜಿಲ್ಲಾಡಳಿತಕ್ಕೆ ಉಸ್ತುವಾರಿ ಸಚಿವ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು.

2018ರ ಚುನಾವಣೆಯಲ್ಲಿ ಸುಮಾರು 47 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದ ನೀವು, ಈ ಬಾರಿಯ ಚುನಾವಣೆಯಲ್ಲಿ 5 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದೀರಿ, ಮತದಾರರ ತೀರ್ಮಾನದಿಂದ ಹತಾಶರಾಗಿ ರಾಜಕೀಯವಾಗಿ ಆರೋಪಿಸುವುದನ್ನು ಅಸ್ತ್ರ ಮಾಡಿಕೊಂಡಿರುವುದು, ಶಾಸಕರಾದವರಿಗೆ ತರವಲ್ಲವೆಂದರು.

ಜಮೀನು ಒತ್ತುವರಿ ಸಮಿತಿಯ ಅರ್ಜಿಗಳ ವಿಲೇವಾರಿ ಹೆಸರಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿರುವುದು ಕಂಡು ಬಂದಿದ್ದು, ಅಕ್ರಮದ ವಾರಸುದಾರರಾಗಿರುವ ನೀವು ಇನ್ನೊಬ್ಬರ ಮೇಲೆ ಸುಳ್ಳು ಆರೋಪ ಮಾಡಿದರೆ ಜನತೆ ನಂಬುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕೆಂದರು.

ಪಿಎಲ್’ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ತಿಮ್ಮರಾಯಿಗೌಡ ಮಾತನಾಡಿ, ಬಿ.ಇ ಪದವೀಧರರಾದ ಮಾಜಿ ಶಾಸಕರು ನಾಲಿಗೆ ನಿಯಂತ್ರಣ ತಪ್ಪಿ ಮಾತನಾಡಬಾರದು, ರಾಜಕೀಯ ಎದುರಾಳಿಗೆ ಬಳಸುವ ಕೀಳು ಭಾಷೆ, ಮತದಾರರಿಗೆ ಮಾಡಿದ ದ್ರೋಹವಾಗುತ್ತದೆ, ನಿಮ್ಮ ಅವಧಿಯಲ್ಲಿ ನಡೆದಿರುವ ಕಾಮಗಾರಿಗಳಿಗೆ ಕಮಿಷನ್ ಪಡೆದಿಲ್ಲವೆಂದು, ಪ್ರಸಿದ್ದ ಧಾರ್ಮಿಕ ಕ್ಷೇತ್ರ ಕಾಲಭೈರವೇಶ್ವರ ಸನ್ನಿಧಿಯಲ್ಲಿ ಆಣೆ ಮಾಡಲು ಸಿದ್ದರಿದ್ದೀರಾ ಎಂದು ಸವಾಲು ಹಾಕಿದರು.

2 ಬಾರಿ ಕ್ಷೇತ್ರದ ಶಾಸಕರಾಗಿ ಕಾರ್ಯನಿರ್ವಹಿಸಿರುವ ನೀವು ನಿಮ್ಮ ಅವಧಿಯಲ್ಲಿ ತಾಲ್ಲೂಕಿಗೆ ತಂದಿರುವ ಯೋಜನೆಗಳನ್ನು ಹಾಗೂ ಮಂಜೂರು ಮಾಡಿಸಿರುವ ಸರ್ಕಾರಿ ಕಚೇರಿಗಳ ಮಾಹಿತಿ ನೀಡುವಂತೆ ಆಗ್ರಹಿಸಿದ ತಿಮ್ಮರಾಯಿಗೌಡರು, ನಿಮ್ಮ ಅವಧಿಯಲ್ಲಿ ಕಾರ್ಯನಿರ್ವಹಿಸಿರುವ ಕೃಷಿ ಅಧಿಕಾರಿಗಳನ್ನು ಸಿಲುಕಿಸುತ್ತಾರೆಂಬ ಅನುಮಾನ ಏಕೆ ಕಾಡುತ್ತಿದೆ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಪ್ರಸನ್ನ, ರಾಜೇಗೌಡ, ಸಿ.ಎಂ.ದ್ಯಾವಪ್ಪ, ನವೀನ್ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!