Saturday, May 18, 2024

ಪ್ರಾಯೋಗಿಕ ಆವೃತ್ತಿ

ದೇಶದ ಭವಿಷ್ಯ ಶಾಲಾ ಕೊಠಡಿಯಲ್ಲಿ ರೂಪುಗೊಳ್ಳಲಿದೆ – ಈ ಜವಾಬ್ದಾರಿಯನ್ನು ಶಿಕ್ಷಕರು ನಿರ್ವಹಿಸಲಿ : ಪ್ರೊ.ಕೃ‍ಷ್ಣೇಗೌಡ

ವರದಿ : ನ.ಲಿ. ಕೃಷ್ಣ, ಕೃಷಿಕರು


  • ಉದಯ ಚಾರಿಟಬಲ್ ಟ್ರಸ್ಟ್ ನಿಂದ ಗುರುಗಳಿಗೆ ಗುರುವಂದನೆ ಸಲ್ಲಿಕೆ 

  • ಶಿಕ್ಷಕರು ತಮ್ಮ ಬೋಧನಾ ಕೌಶಲ್ಯ ಹೆಚ್ಚಿಸಿಕ್ಕೊಳ್ಳಬೇಕಾಗಿದೆ

ದೇಶದ ಭವಿಷ್ಯ ಶಾಲೆಯ ಕೊಠಡಿಯಲ್ಲಿ ರೂಪುಗೊಳ್ಳಲಿದೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ ಅದರಂತೆ, ಮಕ್ಕಳ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ, ಅಂತಹ ಜವಾಬ್ದಾರಿಯನ್ನು ಶಿಕ್ಷಕರು ಯಶಸ್ವಿಯಾಗಿ ನಿಭಾಯಿಸಬೇಕು ಎಂದು ಹರಟೆ ಖ್ಯಾತಿಯ ಪ್ರೊ.ಕೃಷ್ಣೇಗೌಡ ಹೇಳಿದರು.

ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ
ಎಂಬ ವಾಣಿಯಂತೆ ಮದ್ದೂರು ತಾಲ್ಲೂಕಿನ ಎಲ್ಲಾ ಶಿಕ್ಷಕರಿಗೆ ಕದಲೂರು ಉದಯ ಚಾರಿಟಬಲ್ ಟ್ರಸ್ಟಿನ ಅಧ್ಯಕ್ಷ ಉದಯ್ ಅವರ ನೇತೃತ್ವದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬದಲಾದ ಕಾಲಮಾನ ಮತ್ತು ತಂತ್ರಜ್ಞಾನದ ವೇಗಕ್ಕೆ ಶಿಕ್ಷಕರು ಹೊಂದಿಕ್ಕೊಳ್ಳಬೇಕಾದ ಅಗತ್ಯ ಇದೆ, ಇಲ್ಲವಾದರೆ, ತಂತ್ರಜ್ಞಾನ ಆಧಾರಿತ ಬೋಧನಾ ಕ್ರಮದ ಮುಂದೆ, ಶಿಕ್ಷಕರ ಅಗತ್ಯವಿಲ್ಲಎನ್ನವಂತಾಗುತ್ತದೆ. ಪ್ರಸ್ತುತ ಶಿಕ್ಷಕರ ಅಗತ್ಯತೆಯನ್ನು ಸಾಬೀತು ಮಾಡಬೇಕಾದ ಜರೂರಿದೆ, ಶಿಕ್ಷಕರು ತಮ್ಮ ಬೋಧನಾ ಕೌಶಲ್ಯ ಹೆಚ್ಚಿಸಿಕ್ಕೊಳ್ಳಬೇಕಾಗಿದೆ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.

ಶಿಕ್ಷಕರು ಮಕ್ಕಳನ್ನು ಶೈಕ್ಷಣಿಕವಾಗಿ ಮುಂದೆ ತರುವುದಲ್ಲದೆ ಶಿಕ್ಷಕರು ತಾವು ವೃತ್ತಿಪರತೆ ಹಾಗೂ ಬೋಧನಾ ಕೌಶಲ್ಯದಿಂದ ಮುಂದೆ ಬರಬೇಕು, ಇಲ್ಲವಾದಲ್ಲಿ ಶಿಕ್ಷಕರು ಇದ್ದಲ್ಲಿ ನಿಂತು ಬಿಡುವ ಅಪಾಯವಿದೆ.
ಆನ್ಲೈನ್ ಶಿಕ್ಷಣದ ಮೊರೆ ಹೋಗಿರುವ ಕಾಲಮಾನದಲ್ಲಿ ವಿದ್ಯಾರ್ಥಿಗಳಿಗೆ ಈಗಾಗಲೇ ಮಾಹಿತಿ ಇದೆ. ಅದನ್ನು ಅರ್ಥ ಮಾಡಿಸುವ ಪ್ರಕ್ರಿಯೆಯಷ್ಟೆ ಶಿಕ್ಷಕರ ಮೇಲಿದೆ. ಆ ಕಾರಣ ಗುರು ಶಿಕ್ಷಕ ಪಾತ್ರ ಹೋಗಿ, ಇದೀಗ ಸುಗಮಕಾರನಾಗಿ ಶಿಕ್ಷಕರು ನಿಂತಿದ್ದಾರೆ. ಇದು ಅತ್ಯಂತ ಕೆಟ್ಟ ಸಮಯ ಎಂದು ಆನ್ಲೈನ್ ಶಿಕ್ಷಣದ ಕುರಿತು ವಿಷಾದಿಸಿದರು.

ಶಿಕ್ಷಕರ ಬದುಕು ಸಾರ್ಥಕವಾಗಬೇಕು ಎಂದರೆ, ನೀವು ನಿಮ್ಮೊಳಗಿನ ಜ್ಞಾನವನ್ನು ಬಸಿದು ಮಕ್ಕಳಿಗೆ ಕೊಡಿ, ಮಕ್ಕಳ ಹೃದಯದಲ್ಲಿ ನೆಲೆಸಿ, ಇದಕ್ಕಾಗಿ ನೀವು ವೃತ್ತಿ ಪೂರ್ಣ ಶಿಕ್ಷಕರಾಗಿ ಉಳಿಯಿರಿ, ಉಳಿದಿದ್ದೆಲ್ಲವನ್ನು ಮರೆಯಿರಿ, ಶಾಲಾ ಕೊಠಡಿ ಪ್ರವೇಶಿಸುವಾಗ ಗೆಲುವಾಗಿರಿ, ಸ್ಪೂರ್ತಿಯಿಂದಿರಿ  ಎಂದು ಶಿಕ್ಷಕರಿಗೆ ಸಲಹೆ ನೀಡಿದರು.

ಉದಯ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಉದಯ್ ಅವರು ಗುರುವಂದನಾ ಕಾರ್ಯಕ್ರಮದ ಮೂಲಕ ತಮ್ಮೊಳಗಿನ ಹೃದಯವಂತಿಕೆ ತೋರಿದ್ದಾರೆಂದು ಶ್ಲಾಘಿಸಿದರು.

ಸಮಾಜಸೇವಕ ಕದಲೂರು ಉದಯ್ ಮಾತನಾಡಿ, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ನಾನು ವಿದ್ಯಾರ್ಥಿಯಾಗಿದ್ದಾಗ ಕಂಡುಂಡ ಮೂಲ ಸೌಲಭ್ಯಗಳ ಕೊರತೆ ಮತ್ತು ಗ್ರಾಮೀಣ ಮಕ್ಕಳು ಅನುಭವಿಸಿದ ನೋವನ್ನು ನಾನೂ ಅನುಭವಿಸಿದ್ದೇನೆ. ಶೈಕ್ಷಣಿಕ ಸಾಧನೆಗೆ ನೆರವಾಗುವ ಗುರುಗಳನ್ನು ನೆನೆಯುವ ಉದ್ದೇಶಿದಿಂದ ಈ ಗುರುವಂದನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

ಸಮಾಜದ ಏಳಿಗೆಗಾಗಿ ನಿಮ್ಮ ಕಾರ್ಯತತ್ಪರತೆ ನಿರಂತರವಾಗಿರಲಿ, ಶೈಕ್ಷಣಿಕ ಅಭಿವೃದ್ಧಿಗಾಗಿ ನಾನು ಶಿಕ್ಷಕರ ನೆರವಿಗೆ ನಿಲ್ಲುತ್ತೇನೆ, ಶಾಲೆಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕೂಡ ಕಲ್ಪಿಸುತ್ತೆನೆ, ನಾವು ನೀವು ಜೊತೆಗೂಡಿ ಮಕ್ಕಳ ಹಾಗೂ ಸಮಾಜದ ಭವಿಷ್ಯಕ್ಕಾಗಿ ಶ್ರಮಿಸೋಣ ಎಂದರು.

ಉಪನ್ಯಾಸಕರ ಸಂಘದ ಅಧ್ಯಕ್ಷ ಅಂಕೇಗೌಡ ಬ್ಯಾಡರಹಳ್ಳಿ ಉದ್ಘಾಟನಾ ನುಡಿಗಳನ್ನಾಡಿ, ಕದಲೂರು ಉದಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರ ಸೇವಾಪರತೆ ಮಾದರಿಯಾದದ್ದು, ಉದಯ್ ಅವರು ಕೊಡುಗೈ ದಾನಿ ಆಗಿದ್ದಾರೆ.  ಸಹಾಯ ಕೇಳಿ ಬಂದವರಿಗೆ ಇಲ್ಲಾ ಎನ್ನದೇ ನೆರವು ನೀಡುತ್ತಿದ್ದಾರೆ ಎಂದರು.

ಸಭೆಯಲ್ಲಿ ರಾಜ್ಯಮಟ್ಟದ ಸಾಧನೆ ಮಾಡಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವಿಕರಿಸಿ ಮಾತನಾಡಿದ ಕೆ.ಬೆಳ್ಳೂರು ಶಾಲೆಯ ಶಿಕ್ಷಕ ಶಿವಲಿಂಗಯ್ಯ ಮಾತನಾಡಿ, ಗುರುವಂದನಾ ಕಾರ್ಯಕ್ರಮ ಮಾಡುವ ಮೂಲಕ ಶಿಕ್ಷಕರ ಜವಾಬ್ದಾರಿ ಹೆಚ್ಚಿಸಲಾಗಿದೆ ಎಂದರು.

ಶಿಕ್ಷಕ ಸಮುದಾಯಕ್ಕೆ ಸಲ್ಲಿಸಿದ ಗೌರವಾರ್ಪಣೆ ಇದಾಗಿದೆ, ಇಂತಹ ಮಾದರಿ ಕಾರ್ಯವನ್ನು ಈವರೆಗೂ ನಾನು ಕಂಡಿಲ್ಲ ಎಂದು ಉದಯ ಚಾರಿಟಬಲ್ ಟ್ರಸ್ಟ್ ಕಾರ್ಯವನ್ನು ಶಿಕ್ಷಕ ಗೋಪಾಲ್ ಬಣ್ಣಿಸಿದರು.

ಸಮಾರಂಭದಲ್ಲಿ ಮುಖಂಡರಾದ ವಳಗೆರೆಹಳ್ಳಿ ಶಂಕರೇಗೌಡ, ಟ್ರಸ್ಟಿಗಳಾದ ವಿನುತಾ ಉದಯ್, ರವಿ, ಸಿಪಾಯಿ ಶ್ರೀನಿವಾಸ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!