Thursday, November 19, 2026

ಪ್ರಾಯೋಗಿಕ ಆವೃತ್ತಿ

ಉಚ್ಚೆ ಹೊಯ್ದವರು

ನಮ್ಮೊಳಗಿನ
ಬೆಂಕಿಯ ಕುರಿತು
ವಿಪರೀತ ಭಯ
ಅವರಿಗೆ,
ನಂದಿಸಲು
ಏನೇನೋ ಕಸರತ್ತು
ಮಾಡುತ್ತಾರೆ,
ಈಗ, ಮೈಮೇಲೆ
ಉಚ್ಚೆ ಹೊಯ್ಯುವ
ಹಾಳು ಪ್ರಪಾತಕ್ಕೂ
ಕುಸಿದಿದ್ದಾರೆ…
ಯಕಶ್ಚಿತ್ ಉಚ್ಚೆಯಿಂದ
ನಮ್ಮೊಡಲ ಬೆಂಕಿಯ
ನಂದಿಸಲಾಗದೆಂಬ
ಅರಿವಿಲ್ಲದ
ಅಯೋಗ್ಯರು
ಅವರು!

ಅವರ
ಹೇಲು, ಉಚ್ಚೆ
ಕೀವು, ಕಲ್ಮಶ, ಕೊಳೆ…
ಇವ್ಯಾವುದೂ
ಹೊಸದಲ್ಲ ನಮಗೆ;
ಅವುಗಳನೆಲ್ಲ
ಹೊತ್ತು, ತೊಳೆದು
ನಾವು ಶುದ್ಧ ಮಾಡಿದ್ದರಿಂದ
ತಾವು ಶುದ್ಧರೆಂದುಕೊಂಡು
ಬೀಗಿದವರು ಅವರು;
ಆದರೂ ಮನದೊಳಗಿನ
ಮಲಿನತೆಯಿಂದ
ಅಶುದ್ಧವಾಗಿಯೇ
ಉಳಿದವರು ಅವರು;
ಉಚ್ಚೆ ಹೊಯ್ದಿದ್ದಾರೆ
ಇವತ್ತು ನಮ್ಮ ಮೈಮೇಲೆ,
ಹೊಯ್ಯುವ ಮೊದಲು
ಈ ಜಗತ್ತಿನೆದುರು
ಬೆತ್ತಲಾಗಿದ್ದಾರೆ
ಅವರು!

ಅವರಿಗೂ
ಹೊಸದಲ್ಲ ಉಚ್ಚೆ;
ಉಚ್ಚೆಯ ಕುಡಿದು,
ಉಚ್ಚೆಯ ಬಗ್ಗೆ
ಉಪದೇಶ ಬಿಗಿದು,
ಮೆದುಳಿಲ್ಲದ ನೆತ್ತಿಗೆ
ಉಚ್ಚೆಯ ಸುರಿದು,
ಉಚ್ಛ್ರಾಯದ ಭ್ರಮೆಯಲಿ
ಹುಚ್ಚರಂತಾದವರು ಅವರು;
ಇವತ್ತು ನಮ್ಮ ಮೈಮೇಲೆ
ಉಚ್ಚೆ ಹೊಯ್ದಿದ್ದಾರೆ,
ಅಲ್ಲಲ್ಲ….
ನಮ್ಮೊಳಗಿನ
ಬೆಂಕಿಗೆ ಹೆದರಿ
ಉಚ್ಚೆ ಹೊಯ್ದುಕೊಂಡಿದ್ದಾರೆ
ಅವರು!!!

ಮಾಚಯ್ಯ ಎಂ. ಹಿಪ್ಪರಗಿ

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ