ಅನ್ನಕ್ಕೆ ಆಧಾರವಾಗಿದ್ದ ನೂರಾರು ತೆಂಗಿನ ಮರಗಳು ಬುಡಸಮೇತ ಉರುಳಿವೆ, ನಮ್ಮ ಬದುಕನ್ನು ನೋಡೋರ್ಯಾರು, ಮುಂದೆ ಜೀವನ ನಡೆಯೋದ್ಯಾಗೆ ಅಂತ ಈರಾಜಮ್ಮ ಎಂಬ ವೃದ್ಧ ಮಹಿಳೆ ಕಣ್ಣೀರು ಸುರಿಸುತ್ತಿದ್ದರೆ ಎಂತಹವರಿಗೂ ಸಂಕಟವಾಗುತ್ತಿತ್ತು.
ಇದಕ್ಕೆ ಕಾರಣವೇನೆಂದರೆ, ಅಂಚನಹಳ್ಳಿ ಗ್ರಾಮದ ಹೊರವಲಯದ ಎಂ.ಹೊಸೂರಿನ ರಾಜಮ್ಮನವರ ಎರಡು ಎಕರೆ ತೋಟದಲ್ಲಿ 90ಕ್ಕೂ ಹೆಚ್ಚಿನ ತೆಂಗಿನ ಮರಗಳು ಬುಡಸಮೇತ ಉರುಳಿ ಲಕ್ಷಾಂತರ ರೂಪಾಯಿ ನಷ್ಠ ಸಂಭವಿಸಿದೆ.
ಕೆ.ಆರ್. ಪೇಟೆ ತಾಲೂಕಿನ ಬೂಕನಕೆರೆ ಹೋಬಳಿ ವ್ಯಾಪ್ತಿಯಲ್ಲಿ ಮಳೆಯ ರುದ್ರನರ್ತನಕ್ಕೆ ಅಪಾರ ಪ್ರಮಾಣದಲ್ಲಿ ತೆಂಗಿನಮರಗಳು ನೆಲಕ್ಕುರುಳಿವೆ. ಹಾನಿಗೀಡಾಗಿದ್ದ ಪ್ರದೇಶಗಳಿಗೆ ಇಂದು ರೇಷ್ಮೆ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಅವರು ಭೇಟಿ ನೀಡಿದ ವೇಳೆ ಸುಮಾರು 90ಕ್ಕೂ ಹೆಚ್ಚು ತೆಂಗಿನ ಮರಗಳನ್ನು ಕಳೆದುಕೊಂಡಿದ್ದ ವೃದ್ಧ ಮಹಿಳೆ ರಾಜಮ್ಮನಿಗೆ ಸಚಿವ ನಾರಾಯಣಗೌಡ ಸಾಂತ್ವನ ಹೇಳಿ, ನೀವು ಕಣ್ಣೀರು ಹಾಕಬೇಡಿ, ಭಯಪಡಬೇಡಿ ನಿಮ್ಮೊಂದಿಗೆ ನಾನಿದ್ದೇನೆ ಎಂದು ಭರವಸೆ ನೀಡಿದರು.
ಬೂಕನಕೆರೆ ವ್ಯಾಪ್ತಿಯ ಅಂಚನಹಳ್ಳಿ, ತೆಂಡೇಕೆರೆ ಸೇರಿದಂತೆ ವಿವಿಧೆಡೆ ನೂರಾರು ತೆಂಗಿನಮರಗಳು ಧರೆಗುರುಳಿದ್ದು, ಹಲವು ಮನೆಗಳು ಹಾನಿಗೊಳಗಾಗಿವೆ. ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಡಾ.ನಾರಾಯಣಗೌಡ ಅವರು, ಫಲಕೊಡುತ್ತಿದ್ದ ತೆಂಗಿನಮರಗಳು ಧರೆಗುರುಳಿರುವುದುನ್ನು ಕಂಡು ಮರುಕ ವ್ಯಕ್ತಪಡಿಸಿದರು.
ರೈತರಿಗೆ ಭಾರಿ ಪ್ರಮಾಣದಲ್ಲಿ ಹಾನಿಯಾಗಿದ್ದು, ಶೀಘ್ರವೇ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸ್ಥಳದಲ್ಲೇ ವೈಯುಕ್ತಿಕ ಪರಿಹಾರ ನೀಡಿದ ಸಚಿವ ಡಾ.ನಾರಾಯಣಗೌಡ ಅವರು, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಹೆಚ್ಚುವರಿ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ತಹಶೀಲ್ದಾರ್ ರೂಪಾ, ಜಿ.ಪಂ.ಮಾಜಿ ಸದಸ್ಯ ಶೀಳನೆರೆ ಅಂಬರೀಶ್ ಈ ಸಂದರ್ಭದಲ್ಲಿದ್ದರು.