ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 2 ಬಾರಿ ಶಾಸಕರಾಗಿದ್ದ ಅನ್ನದಾನಿ ಅವಧಿಯಲ್ಲೇ ಮಳವಳ್ಳಿ ತಾಲ್ಲೂಕಿನಲ್ಲಿ ಸುಮಾರು 2,500 ಎಕರೆ ಸರ್ಕಾರಿ ಜಮೀನು ಭೂಗಳ್ಳರ ಪಾಲಾಗಿದೆ, ಇದಕ್ಕೆ ಹೊಣೆ ಯಾರು ? ಎಂದು ಮಳವಳ್ಳಿ ತಾಲ್ಲೂಕಿನ ಕಾಂಗ್ರೆಸ್ ಮುಖಂಡರು, ಅನ್ನದಾನಿಯತ್ತ ಬೊಟ್ಟು ಮಾಡಿದರು.
ಮಂಡ್ಯನಗರದ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗ್ರಾಮಾಂತ್ರರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ಮಾಜಿ ಶಾಸಕ ಅನ್ನದಾನಿಯವರ ಅಧಿಕಾರಾವಧಿಯಲ್ಲಿ ಅಕ್ರಮ ಖಾತೆಯಾಗಿರುವ 2.500 ಎಕರೆ ಪೈಕಿ ಈಗಾಗಲೇ 800 ಎಕರೆ ಜಮೀನಿನ ಖಾತೆ ರದ್ದುಪಡಿಸಲಾಗಿದ್ದು, ತಮ್ಮ ಜೊತೆಯಲ್ಲೇ ಭೂಗಳ್ಳರನ್ನು ಇಟ್ಟುಕೊಂಡಿರುವ ಮಾಜಿ ಶಾಸಕರ ನಿರ್ಲಕ್ಷ್ಯದಿಂದ ಭೂಮಿಯ ಮೇಲೆ ಹಣ ಹಾಕಿರುವ ಅಮಾಯಕ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆಂದು ಆರೋಪಿಸಿದರು.
ನಾಲ್ಕೈದು ರಸ್ತೆಗಳ ಅಭಿವೃದ್ದಿ
ಮನ್ ಮುಲ್ ನಿರ್ದೇಶಕ ಆರ್.ಎನ್.ವಿಶ್ವಾಸ್ ಮಾತನಾಡಿ, ಮಾಜಿ ಶಾಸಕ ಅನ್ನದಾನಿಯವರು ಇತ್ತಿಚೇಗೆ ಸುದ್ದಿಗೋಷ್ಠಿ ನಡೆಸಿ ಮಳವಳ್ಳಿ ತಾಲ್ಲೂಕಿನ ನಾಲ್ಕೈದು ರಸ್ತೆಗಳ ಅಭಿವೃದ್ದಿ ಬಗ್ಗೆ ಚರ್ಚೆ ಮಾಡಿ, ಇವು ನನ್ನ ಅಧಿಕಾರಾವಧಿಯಲ್ಲಿ ಅಭಿವೃದ್ದಿ ಕಂಡಿದ್ದವು ಎಂದು ತಿಳಿಸಿದ್ದಾರೆ. ಅದು ಸತ್ಯ. ಅವರ ಶಾಸಕತ್ವದ ಅವಧಿಯಲ್ಲಿ ಕೇವಲ ನಾಲ್ಕೈದು ರಸ್ತೆಗಳನ್ನು ಮಾತ್ರ ಅಭಿವೃದ್ದಿಪಡಿಸಲಾಗಿತ್ತು. ಇದನ್ನು ಹೊರತುಪಡಿಸಿ ಯಾವುದೇ ಶಾಶ್ವತ ಯೋಜನೆ ಜಾರಿಗೊಳಿಸಲು ಅವರಿಂದ ಸಾಧ್ಯವಾಗಿಲ್ಲ ಎಂದು ವ್ಯಂಗ್ಯವಾಡಿದರು.
ಸ್ವಪಕ್ಷೀಯರ ಸೋಲಿಗೆ ತಂತ್ರ ಮಾಡಿದ ಅನ್ನದಾನಿ ; ಚಿಕ್ಕಲಿಂಕಯ್ಯ
ಮಳವಳ್ಳಿ ತಾಲ್ಲೂಕಿನ ಅಭಿವೃದ್ದಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ಯಾವುದೇ ಶಾಶ್ವತ ಯೋಜನೆ ತರಲಾಗದ ಅನ್ನದಾನಿಯವರ ಬೆದರಿಕೆ ಮತ್ತು ದಬ್ಬಾಳಿಕೆಗೆ ಯಾರೂ ಹೆದರುವುದಿಲ್ಲ. ಹಸಿ ಸುಳ್ಳನ್ನೇ ಪದೇ ಪದೇ ಉಚ್ಚರಿಸುವ ಮಾಜಿ ಶಾಸಕರು ಕಳೆದ ಮನ್ ಮುಲ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯ ಸೋಲಿಗೆ ತಾವೇ ತಂತ್ರಗಾರಿಕೆ ರೂಪಿಸಿದ್ದರು ಎಂದು ತಾಲ್ಲೂಕಿನಲ್ಲಿ ಸ್ವಪಕ್ಷೀಯರೇ ಮಾತನಾಡುತ್ತಿದ್ದಾರೆ. ಇದು ಅನ್ನದಾನಿಯವರ ಕುತಂತ್ರದ ರಾಜಕಾರಣ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಚಿಕ್ಕಲಿಂಗಯ್ಯ ಹರಿಹಾಯ್ದರು
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿರುವ ನಮ್ಮ ಶಾಸಕರ ಬಗ್ಗೆ, ಹಣ ಮಾಡುವ ಹುದ್ದೆ ಎಂದು ಗೇಲಿ ಮಾಡುವುದನ್ನು ಮಾಜಿ ಶಾಸಕರು ನಿಲ್ಲಿಸಬೇಕು. ಸದರಿ ಅಧಿಕಾರ ಬಳಸಿ ನಿರುದ್ಯೋಗಿಗಳಿಗೆ ಉದ್ಯೋಗ ಹಾಗೂ ಕೈಗಾರಿಕೆಗಳ ಸಿ.ಎಸ್.ಆರ್ ನಿಧಿಯಿಂದ ಸರ್ಕಾರಿ ಶಾಲೆಗಳ ಡಿಜಿಟಲೀಕರಣಕ್ಕೆ ಒತ್ತು ನೀಡಲಾಗಿದೆ ಎಂಬುದು ಟೀಕಾಕಾರರಿಗೆ ಮುಂದಿನ ದಿನಗಳಲ್ಲಿ ತಿರುಗುಬಾಣವಾಗಲಿದೆ ಎಂದು ಎಚ್ಚರಿಸಿದರು.
ನರೇಂದ್ರಸ್ವಾಮಿ ಅಭಿವೃದ್ದಿ ಪರ್ವ
ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ದೇವರಾಜು ಮಾತನಾಡಿ, ಮಳವಳ್ಳಿ ತಾಲ್ಲೂಕಿನಲ್ಲಿ ನರೇಂದ್ರಸ್ವಾಮಿ ಅವರ ಅಧಿಕಾರಾವಧಿಯಲ್ಲಿ ನಡೆದಿರುವ ಅಭಿವೃದ್ದಿ ಪರ್ವದ ಬಗ್ಗೆ ಪಕ್ಷಾತೀತವಾಗಿ ಜನ ಮೆಚ್ಚುಗೆ ಸೂಚಿಸುತ್ತಾರೆ. ಅಭಿವೃದ್ದಿ ಶೂನ್ಯವೆಂಬ ಮಾಜಿ ಶಾಸಕ ಆರೋಪ ಸತ್ಯಕ್ಕೆ ದೂರವಾಗಿದ್ದು, ಅವರು ಹಾಕಿರುವ ಸವಾಲಿನ ಆರ್ಥಿಕ ಇಲಾಖೆಯ ಮಂಜೂರಾತಿ ಆದೇಶದೊಂದಿಗೆ ಲಿಖಿತ ಉತ್ತರ ನೀಡಲು ಬದ್ದರಾಗಿರುವುದಾಗಿ ಪ್ರತಿ ಸವಾಲು ಹಾಕಿದರು.
ಶಾಸಕ ಸ್ಥಾನದ ಅನರ್ಹತೆ ವಿಚಾರವಾಗಿ ಪದೇ ಪದೇ ಕುಮಾರಸ್ವಾಮಿ ಅವರ ಹೆಸರು ಪ್ರಸ್ತಾಪಿಸುವ ಮಾಜಿ ಶಾಸಕರು ಸತ್ಯಾಂಶ ಮರೆಮಾಚಿದ್ದಾರೆ. ಕುಮಾರಸ್ವಾಮಿ ಅವರಿಗೆ ಒಳಿತು ಮಾಡಲು ಮುಂದಾದ ಅಂದಿನ ಪಕ್ಷೇತರ ಶಾಸಕರು ಬಿಜೆಪಿಯ ಷಡ್ಯಂತ್ರಕ್ಕೆ ಬಲಿಯಾದರು, ಅನರ್ಹತೆಗೆ ಒಳಗಾದರು. ಆಗ ಸಂಕಷ್ಟದಲ್ಲಿದ್ದ 6 ಮಂದಿಯನ್ನು ಕ್ಯಾರೇ ಎನ್ನದ ಕುಮಾರಸ್ವಾಮಿ ನಡೆಯಿಂದ ಬೇಸತ್ತು ಸುಪ್ರೀಂ ಕದ ತಟ್ಟಿ ಶಾಸಕ ಸ್ಥಾನ ಮರಳಿ ಪಡೆಯಲಾಗಿದೆ ಎಂಬ ಸತ್ಯವನ್ನು ಅರಿಯಲಿ ಎಂದರು.
ಅನ್ನದಾನಿ ಬೆಂಬಲಿಗರಿಗೆ ಮಾಡಿದ್ದೇನು ?
ಜಿಲ್ಲಾ ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಚಿಕ್ಕಲಿಂಗಯ್ಯ ಮಾತನಾಡಿ, ಹತ್ತು ವರ್ಷಗಳ ಕಾಲ ಶಾಸಕರಾಗಿದ್ದ ಅನ್ನದಾನಿಯವರು ಸರ್ಕಾರದ ನಿಗಮ /ಮಂಡಳಿಗಳಲ್ಲಿ ಯಾವ ಜನಾಂಗದವರಿಗೆ ಸ್ಥಾನ ಮಾನ ಕಲ್ಪಿಸಿದ್ದಾರೆಂದು ಬಹಿರಂಗಪಡಿಸಲು ಎಂದು ಸವಾಲು ಹಾಕಿದರು.
ಶಾಸಕ ನರೇಂದ್ರಸ್ವಾಮಿ ಅವರು ತಮಗೆ ಅಧಿಕಾರ ದೊರಕಲು ಶ್ರಮಿಸಿದ ಮುಖಂಡರಿಗೆ ಟಿಎಪಿಸಿಎಂಎಸ್, ಮನ್ ಮುಲ್, ಡಿಸಿಸಿ ಬ್ಯಾಂಕ್, ಕೆಎಸ್ಆರ್’ಟಿಸಿ, ಜಂಗಲ್ & ರೆಸಾರ್ಟ್ ನಿಗಮ ಸೇರಿದಂತೆ ಹಲವು ಹುದ್ದೆಗಳನ್ನು ನೀಡಿ ತಮ್ಮ ಸಾಮರ್ಥ್ಯ ತೋರಿದ್ದಾರೆಂದರು.
ಪಿಎಲ್’ಡಿ ಬ್ಯಾಂಕ್ ನಿರ್ದೇಶಕ ಪ್ರಭು ಮಾತನಾಡಿ, ಎಸ್ಸಿ, ಎಸ್ಟಿ ಜನಾಂಗಕ್ಕೆ ಬ್ಯಾಕ್ ಲಾಗ್ ಹುದ್ದೆ ಕೊಡಿಸುವಲ್ಲಿ ನರೇಂದ್ರಸ್ವಾಮಿ ಕಾರ್ಯದಕ್ಷತೆ ಎಷ್ಟು ಎಂಬುದು ಆ ಜನಾಂಗದ ನೌಕರರು ಮತ್ತು ಅಧಿಕಾರಿಗಳಿಗೆ ತಿಳಿದಿದೆ. ಮಾಜಿ ಶಾಸಕರ ಸಲಹೆ ಪಡೆದು ಆ ಜನಾಂಗಕ್ಕೆ ನ್ಯಾಯ ಕೊಡಿಸುವ ಅಗತ್ಯವಿಲ್ಲವೆಂದರು.
ಅನುದಾನ ತರುವಲ್ಲಿ ನರೇಂದ್ರಸ್ವಾಮಿ ಯಶಸ್ವಿ
ಮನ್ ಮುಲ್ ನಿರ್ದೇಶಕ ಕೃಷ್ಣೇಗೌಡ ಮಾತನಾಡಿ, ಮಳವಳ್ಳಿ ತಾಲ್ಲೂಕಿನ ಸಮಗ್ರ ಅಭಿವೃದ್ದಿಗೆ ವಿವಿಧ ಇಲಾಖೆಗಳ ಅನುದಾನ ತರುವಲ್ಲಿ ನರೇಂದ್ರಸ್ವಾಮಿ ಯಶಸ್ವಿಯಾಗಿದ್ದಾರೆ. ಶಾಸಕರ ಕಾರ್ಯ ವೈಖರಿ ಬಗ್ಗೆ ಪ್ರಚಾರದ ಮಾತನಾಡುವುದು ಮಾಜಿ ಶಾಸಕರಿಗೆ ಶೋಭೆ ತರುವುದಿಲ್ಲ ಎಂದು ತಿರುಗೇಟು ನೀಡಿದರು..
ನರೇಂದ್ರಸ್ವಾಮಿ ಸಾಧನೆಗಳು
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ, ಮಳವಳ್ಳಿ ತಾಲ್ಲೂಕಿನಲ್ಲಿ ಅಭಿವೃದ್ದಿ ಶೂನ್ಯ ಎಂಬ ಆರೋಪ ಸರಿಯಲ್ಲ. ಮಳವಳ್ಳಿ ಪಟ್ಟಣದಲ್ಲಿ ಸುಸಜ್ಜಿತ ಸ್ತ್ರೀಶಕ್ತಿ ಭವನ, ಡಾ.ಬಿ.ಆರ್ ಅಂಬೇಡ್ಕರ್ ಭವನ, ಕೆಎಸ್ಆರ್’ಟಿಸಿ ತರಬೇತಿ ಕೇಂದ್ರ, ಉದ್ಯಾನವನಗಳ ಅಭಿವೃದ್ಧಿ, ಸೆಸ್ಕ್ ವಿಭಾಗೀಯ ಕಚೇರಿ, ಎಪಿಎಂಸಿ ವಿಭಾಗ ನಿರ್ಮಾಣ, ಮೈಸೂರು ರಸ್ತೆ ಅಗಲೀಕರಣ, ಬಾಲ ಭವನ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಪುರಸಭೆ ವ್ಯಾಪ್ತಿಗೆ 24 x 7 ಕುಡಿಯುವ ನೀರಿನ ಯೋಜನೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಒಂದೇ ಒಂದು ಜನಪರ ಯೋಜನೆ ತರದ ಮಾಜಿ ಶಾಸಕರು 24 X 7 ಕುಡಿಯುವ ನೀರಿನ ಯೋಜನೆ ಪೂರ್ಣಗೊಳ್ಳುವ ಮುನ್ನ ಪುರಸಭೆಗೆ ಹಸ್ತಾಂತರ ಮಾಡಿಸಿದ್ದು ತಪ್ಪಲ್ಲವೇ? ಎಂದು ಹರಿಹಾಯ್ದರು.
ಮುಖ್ಯಮಂತ್ರಿಗಳಿಗೆ ಕಾಟ ಕೊಟ್ಟು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರ ಪಡೆಯಲಾಗಿದೆ ಎಂಬ ಆರೋಪ ನಿರಾಧಾರವಾಗಿದ್ದು, ನೀವು ಶಾಸಕರಾಗಿದ್ದ ವೇಳೆ ನಾನೂ ಸೇರಿದಂತೆ ಹತ್ತಾರು ಮಂದಿ ಮುಖಂಡರು, ಮಾಜಿ ಪ್ರದಾನಿ ದೇವೇಗೌಡರ ಬಳಿ ಮನವಿ ಮಾಡಿ, ಡಿ. ದೇವರಾಜು ಅರಸು ಅಭಿವೃದ್ದಿ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಲು ಪ್ರಯತ್ನ ಪಟ್ಟೇವು , ತಮ್ಮ ಅಧಿಕಾರಾವಧಿಯಲ್ಲಿ ತಾಲ್ಲೂಕಿನ ಎಷ್ಟು ಜನರಿಗೆ ಸಾಲ ಸೌಲಭ್ಯ ನೀಡಿದ್ದೀರಿ ? ಎಂದು ಶ್ವೇತ ಪತ್ರ ಹೊರಡಿಸಿ ಎಂದು ಸವಾಲು ಹಾಕಿದರು.




