Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಹೇಶ್ ಜೋಶಿ ಸರ್ವಾಧಿಕಾರಿ ಧೋರಣೆ ವಿರುದ್ದ ನಾಳೆ ಪ್ರತಿಭಟನಾ ಸಮಾವೇಶ

೮೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ವೆಚ್ಚದ ೨.೫೦ ಕೋಟಿಯ ಲೆಕ್ಕವನ್ನು ನೀಡದೆ, ಉದ್ಧಟತನ ಮೆರೆಯುತ್ತಿರುವ ಕಸಾಪ ರಾಜ್ಯಾಧ್ಯಕ್ಷ ಮಹೇಶ ಜೋಶಿ ಅವರ ಆರ್ಥಿಕ ಅಶಿಸ್ತು ಮತ್ತು ಸರ್ವಾಧಿಕಾರಿ ಧೋರಣೆ ವಿರುದ್ಧ ಮೇ ೧೭ರಂದು ಮಂಡ್ಯದಲ್ಲಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಪ್ರತಿಭಟನಾ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವು ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಡಾ.ಮಹೇಶ್‌ಜೋಶಿ ಅಮಾನತು ಮಾಡಿ – ಕಸಾಪ ಉಳಿಸಿ’ ಘೋಷಣೆಯಡಿ ನಡೆಯುವ ಜಾಗೃತಿ ಸಮಾವೇಶದಲ್ಲಿ ನಾಡಿನ ಕಸಾಪ ಅಜೀವ ಸದಸ್ಯರು, ಪ್ರಗತಿಪರ ಸಂಘಟನೆಯ ಮುಖಂಡರು ಹಾಗೂ ಕೆಲವು ಜನಪ್ರತಿನಿಧಿಗಳು ಪಕ್ಷಾತೀತವಾಗಿ ಭಾಗವಹಿಸುವಂತೆ ಮನವಿ ಮಾಡಿದರು.

ವಿವಿಧ ಕನ್ನಡಪರ, ಜನಪರ ಸಂಘಟನೆಗಳ ಮುಖ್ಯಸ್ಥರು, ಪದಾಧಿಕಾರಿಗಳು ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ. ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಸಾಹಿತ್ಯಾಭಿಮಾನಿಗಳು ಪ್ರತಿಭಟನೆಗೆ ಬೆಂಬಲ ನೀಡಬೇಕು ಎಂದು ಕೋರಿದರು.

ಮಂಡ್ಯ ಜಿಲ್ಲೆಯ ಅಮೂಲ್ಯ ರತ್ನದಂತಿದ್ದ ಪ್ರೊ.ಹೆಚ್.ಎಸ್.ಮುದ್ದೇಗೌಡ ಅವರು ಮಹೇಶ್ ಜೋಶಿ ಅವರ ಬಾಲಂಗೋಚಿಯಂತೆ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದು, ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಸಮ್ಮೇಳನ ಮುಗಿದ ಮರುದಿನವೇ ಜಿಲ್ಲಾ ಸಮಿತಿ ವಜಾ ಮಾಡಿದ್ದೇಕೆ ? ಮೀರಾ ಶಿವಲಿಂಗಯ್ಯ ಅವರನ್ನು ಹೊರಹಾಕಿದ್ದನ್ನು ಪ್ರಶ್ನಿಸಲು ಬಂದವರ ವಿರುದ್ಧ ದೂರು ನೀಡಿದ್ದೇಕೆ ? ಬೈಲಾ ತಿದ್ದುಪಡಿ ಮೂಲಕ ಜಿಲ್ಲಾಧ್ಯಕ್ಷರ ಅಧಿಕಾರ ಕೇಂದ್ರೀಕರಣಗೊಳಿಸುತ್ತಿರುವುದೇಕೆ ? ನ್ಯಾಯಬದ್ದವಾಗಿ ಪ್ರಶ್ನಿಸಿದವರ ವಿರುದ್ಧ ನೋಟಿಸ್ ನೀಡಿ ವಜಾಗೊಳಿಸುತ್ತಿರುವುದೇಕೆ ?, ತಾವು ಜಿಲ್ಲಾ ಕಸಾಪಗೆ ನೇರವಾಗಿ ಚುನಾವಣೆಯಿಂದ ಅಧಿಕಾರ ಪಡೆದಿವರಾಗಿದ್ದರೂ, ಈಗ ಹಿಂಬಾಗಿಲಿನಿಂದ ಅಧ್ಯಕ್ಷ ಸ್ಥಾನ ಪಡೆಯಲು ಪ್ರಯತ್ನಿಸುತ್ತಿರುವುದೇಕೆ ಎಂದು ಪ್ರಶ್ನಿಸಿದರು.

ಮಂಜು ಮಾತನಾಡಿ, ಮಹೇಶ್ ಜೋಶಿ ಅವಶ್ಯಕತೆ ಮತ್ತು ಆಡಳಿತ ದೃಷ್ಠಿಯಿಂದ ಬೇಲಾ ತಿದ್ದುಪಡಿ ಮಾಡುತ್ತಿರುವುದಾಗಿ ಹೇಳಿದ್ದು, ಕಸಾಪದ 108 ವರ್ಷ ಇತಿಹಾಸದಲ್ಲಿ ಇದುವರೆಗೂ 6 ಬಾರಿ ಬೈಲಾ ತಿದ್ದುಪಡಿಯಾಗಿದ್ದರೆ, ಜೋಶಿ ಅಧಿಕಾರ ವಹಿಸಿಕೊಂಡು ಮೂರು ವರ್ಷದಲ್ಲಿ ೩ನೇ ಬಾರಿ ತಿದ್ದುಪಡಿ ಮಾಡುತ್ತಿರುವುದು ಎಷ್ಟು ಸರಿ ? ಶ್ರೀಕಂಠೇಗೌಡರು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಯಾಗಿ ಕೋಶಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದು, ಜೋಶಿಯನ್ನು ಪ್ರಶ್ನೆ ಮಾಡಿದರೆ ಹೇಗೆ ರಾಜಕೀಯವಾಗುತ್ತದೆ ಎಂದು ಪ್ರಶ್ನಿಸಿದರು.

ಮಹೇಶ್ ಜೋಶಿಯಿಂದ ಮೀರಾ ಶಿವಲಿಂಗಯ್ಯ ಅವರಿಗೆ ಅವಮಾನ ಮಾಡಿದ್ದು, ರಾಜ್ಯದಲ್ಲಿ ಮಹಿಳಾ ಆಯೋಗ ಎಂಬುದಿದ್ದರೆ ಕೂಡಲೇ ಅವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಬೇಕು ಎಂದ ಅವರು, ಪ್ರೊ.ಹೆಚ್.ಎಸ್.ಮುದ್ದೇಗೌಡರ ಹೆಗಲ ಮೇಲೆ ಬಂದೂಕು ಇರಿಸಿರುವ ಜೋಶಿ ಅವರನ್ನು ಗುರಾಣಿಯಂತೆ ಬಳಸಿಕೊಂಡು ಗುಂಡು ಹಾರಿಸುತ್ತಿದ್ದಾರೆ ಎಂದು ಎಚ್ಚರಿಸಿದರು.

ಸರ್ಕಾರ ಇಂತಹ ಸಂದರ್ಭದಲ್ಲಿ ಕೂಡಲೇ ಮಧ್ಯಪ್ರವೇಶಿಸಿ ಕಳಂಕಿತ ಅಧ್ಯಕ್ಷನನ್ನು ಅಮಾನತಿನಲ್ಲಿಟ್ಟು, ಆಡಳಿತಾಧಿಕಾರಿ ನೇಮಕ ಮಾಡಬೇಕು. ಇಲ್ಲವಾದಲ್ಲಿ ಆಡಳಿತ ಮಂಡಳಿಯ ಸೂಪರ್‌ಸೀಡ್ ಮಾಡಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಸುಂಡಹಳ್ಳಿ ಮಹೇಶ್, ಉಮಾಕಾಂತ್, ಕುಮಾರ್, ಅಭಿನಂದನ್ ಇದ್ದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ