Thursday, September 19, 2024

ಪ್ರಾಯೋಗಿಕ ಆವೃತ್ತಿ

ಷೇರು ಮಾರುಕಟ್ಟೆಯ ಅಕ್ರಮದ ತನಿಖೆಗೆ ಆಗ್ರಹ| ಟಿಎಂಸಿ ನಿಯೋಗದಿಂದ ಸೆಬಿ ಅಧಿಕಾರಿಗಳ ಭೇಟಿ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದರ ನಿಯೋಗ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ(ಸೆಬಿ) ಅಧಿಕಾರಿಗಳನ್ನು ಇಂದು ಭೇಟಿ ಮಾಡಿ ಚುನಾವಣೋತ್ತರ ಸಮೀಕ್ಷೆಯ ನಂತರ ಷೇರು ಮಾರುಕಟ್ಟೆಯಲ್ಲಿ ಉಂಟಾದ ಅಕ್ರಮಗಳನ್ನು ತನಿಖೆಗೊಳಪಡಿಸುವಂತೆ ಆಗ್ರಹಿಸಿದೆ.

ಟಿಎಂಸಿ ಸಂಸದರಾದ ಕಲ್ಯಾಣ್ ಬ್ಯಾನರ್ಜಿ, ಸಾಗರೀಕ ಘೋಷ್ ಹಾಗೂ ಸಾಕೇತ್‌ ಗೋಖಲೆ ಅವರೊಂದಿಗೆ ಉದ್ಧವ್‌ ಬಣದ ಶಿವಸೇನೆ ಸಂಸದ ಅರವಿಂದ್‌ ಸಾವಂತ್‌ ಹಾಗೂ ಮಾಜಿ ಎನ್‌ಸಿಪಿ ಶಾಸಕ ವಿದ್ಯಾ ಚವಾಣ್ ಕೂಡ ನಿಯೋಗದಲ್ಲಿದ್ದರು.

ಸೆಬಿ ಅಧಿಕಾರಿಗಳನ್ನು ಭೇಟಿ ಮಾಡಿದ ನಂತರ ಮಾತನಾಡಿದ ಕಲ್ಯಾಣ್ ಬ್ಯಾನರ್ಜಿ, ಸಿಬಿ ಈ ಹಿಂದೆ ಅತ್ಯುತ್ತಮ ಪಾತ್ರವನ್ನು ವಹಿಸಿದೆ. 2024ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಎಕ್ಸಿಟ್ ಪೋಲ್‌ಗಳನ್ನು ದಾರಿತಪ್ಪಿಸಿ ಷೇರು ಮಾರುಕಟ್ಟೆಯಲ್ಲಿ ಅಕ್ರಮವೆಸಗಿರುವ ಬಗ್ಗೆ ತನಿಖೆ ನಡೆಸುವಂತೆ ನಮ್ಮ ಕೋರಿಕೆಯ ಮನವಿವನ್ನು ಸೆಬಿ ಈಡೇರಿಸಲಿದ್ದು, ಈ ಬಗ್ಗೆ ನಾವು ಆತ್ಮವಿಶ್ವಾಸ ಹೊಂದಿದ್ದೇವೆ ಎಂದು ತಿಳಿಸಿದರು.

ಎಕ್ಸಿಟ್‌ ಪೋಲ್‌ ಸಂಸ್ಥೆಗಳು ರಾಜಕೀಯ ನಾಯಕರೊಂದಿಗೆ ಸಂಬಂಧ ಹೊಂದಿದ್ದಾರೆಯೇ ಎಂಬುದರ ಬಗ್ಗೆಯೂ ತನಿಖೆಗೊಳಪಡಿಸುವಂತೆ ನಿಯೋಗ ಬೇಡಿಕೆಯಿಟ್ಟಿದೆ.

ಜೂನ್‌ 3 ರಂದು ಏರಿದ್ದ ಷೇರು ಮಾರುಕಟ್ಟೆ ಒಂದು ದಿನದ ನಂತರ ಪಾತಾಳಕ್ಕಿಳಿದಿತ್ತು. 24 ಗಂಟೆಗಳಲ್ಲಿ  ಸಣ್ಣ ಹೂಡಿಕೆದಾರರು 30 ಲಕ್ಷ ಕೋಟಿ ನಷ್ಟ ಮಾಡಿಕೊಂಡಿದ್ದರು. ಷೇರು ಮಾರುಕಟ್ಟೆಯಲ್ಲಿ ನಡೆದ ಅಕ್ರಮದಿಂದ ರಾಜಕಾರಣಿಗಳ ಕುಟುಂಬದವರು ಸಾವಿರಾರು ಕೋಟಿ ಲಾಭ ಗಳಿಸಿದ್ದರು ಎಂದು ಸಂಸದರ ನಿಯೋಗ ಆರೋಪಿಸಿದೆ.

“ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹಲವು ಕಡೆ ಅಮಿತ್‌ ಶಾ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಎಂದು ಹೇಳಿದ್ದರು. ತನಿಖೆಯನ್ನು ಆರಂಭಿಸಿದರೆ ಹೂಡಿಕೆದಾರರಲ್ಲಿ ಆತ್ಮವಿಶ್ವಾಸ ಬರಲಿದೆ” ಎಂದು ಕಲ್ಯಾಣ್ ಬ್ಯಾನರ್ಜಿ ತಿಳಿಸಿದರು.

ಒಂದು ದಿನದ ಹಿಂದಷ್ಟೆ ಟಿಎಂಸಿ ನಿಯೋಗ ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಅವರನ್ನು ಭೇಟಿ ಮಾಡಿ ಷೇರು ಮಾರುಕಟ್ಟೆಯಲ್ಲಾಗಿರುವ ಅಕ್ರಮದ ಬಗ್ಗೆ ತನಿಖೆಗೆ ಆಗ್ರಹಿಸುವ ನಮ್ಮ ನಿಯೋಗಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಿದ್ದರು.

ಈ ಹಿಂದೆ ಷೇರು ಮಾರುಕಟ್ಟೆ ಅಕ್ರಮದ ಬಗ್ಗೆ ಮಾತನಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ,  ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇದರಲ್ಲಿ ನೇರವಾಗಿ ಭಾಗಿಯಾಗಿದ್ದು, ಅತ್ಯಂತ ದೊಡ್ಡ ಮಾರುಕಟ್ಟೆ ಹಗರಣದಿಂದ ಸಣ್ಣ ಹೂಡಿಕೆದಾರರು 30 ಲಕ್ಷ ಕೋಟಿ ನಷ್ಟ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!