Thursday, September 19, 2024

ಪ್ರಾಯೋಗಿಕ ಆವೃತ್ತಿ

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ| 7ನೇ ವೇತನ ಆಯೋಗದ ವರದಿ ಜಾರಿಗೆ ಸಚಿವ ಸಂಪುಟ ಅಸ್ತು

ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ 7ನೇ ರಾಜ್ಯ ವೇತನ ಆಯೋಗದ ಅಂತಿಮ ವರದಿ ಶಿಫಾರಸು ಜಾರಿಗೆ ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಆಗಸ್ಟ್‌ 1ರಿಂದ ಪರಿಷ್ಕೃತ ವೇತನ ಜಾರಿಗೆ ಬರಲಿದೆ. ಇದರಿಂದ ನೌಕರರ ವೇತನ ಶೇಕಡಾ 10 ರಷ್ಟು ಹೆಚ್ಚಳವಾಗಿದೆ.

7 ನೇ ವೇತನ ಆಯೋಗವು ಶೇಕಡಾ 27.5 ವೇತನ ಪರಿಷ್ಕರಣೆಗೆ ಶಿಫಾರಸು ಮಾಡಿತ್ತು. ಹಿಂದಿನ ಸರ್ಕಾರ ದ ಅವಧಿಯಲ್ಲಿ ಶೇಕಡಾ 17 ರ ಮಧ್ಯಂತರ ಪರಿಹಾರ ನೀಡಲಾಗಿತ್ತು. ಈಗ ಉಳಿದ ಶೇಕಡಾ 10.5 ವೇತನ ಪರಿಷ್ಕರಣೆಯಾಗಲಿದೆ.

5.20 ಲಕ್ಷ ಸರ್ಕಾರಿ ನೌಕರರಿಗೆ ಅನುಕೂಲ

ವೇತನ ಆಯೋಗದ ಅಂತಿಮ ಶಿಫಾರಸ್ಸುಗಳು ಜಾರಿಯಿಂದ ರಾಜ್ಯದ ಸುಮಾರು 5.20 ಲಕ್ಷ ಸರ್ಕಾರಿ ನೌಕರರು, ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳಲ್ಲಿ 2.50 ಲಕ್ಷ ನೌಕರರು ಹಾಗೂ 4.50 ಲಕ್ಷ ನಿವೃತ್ತ ನೌಕರರು ಸೇರಿ ಒಟ್ಟು 12.20 ಲಕ್ಷ ನೌಕರ ಕುಟುಂಬಗಳಿಗೆ ಅನುಕೂಲವಾಗಲಿದೆ.

ವೇತನ ಮತ್ತು ಭತ್ಯೆ ಪರಿಷ್ಕರಣೆಗೆ ಸಂಪುಟ ಅಸ್ತು ನೀಡಿದೆ. ಆದರೆ, ವೇತನ ಪರಿಷ್ಕರಣೆ ಪೂರ್ವಾನ್ವಯ ಜಾರಿಯಾಗಬೇಕು ಎಂಬ ನೌಕರರ ಬೇಡಿಕೆಗೆ ಮಾನ್ಯತೆ ಸಿಕ್ಕಿಲ್ಲ. ಜತೆಗೆ ನೌಕರ ಸಮುದಾಯದ ಇನ್ನೂ ಎರಡು ಪ್ರಮುಖ ಬೇಡಿಕೆಗಳ ವಿಚಾರದಲ್ಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಎನ್‌ಪಿಎಸ್‌ ಯೋಜನೆ ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡಬೇಕು ಹಾಗೂ ಆರೋಗ್ಯ ಸಂಜೀವಿನಿ ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸಬೇಕು ಎಂಬ ಬೇಡಿಕೆಗಳಿಗೆ ಸ್ಪಂದನೆ ಸಿಕ್ಕಿಲ್ಲ.

ಕೊನೆಗೂ ಮಣಿದ ಸರ್ಕಾರ

ಸಂಪನ್ಮೂಲ ಕೊರತೆ ಕಾರಣಕ್ಕೆ ಹೆಚ್ಚುವರಿ ಆರ್ಥಿಕ ಹೊರೆ ಭರಿಸಲು ಸಾಧ್ಯವಿಲ್ಲಎಂಬ ಹಣಕಾಸು ಇಲಾಖೆ ತಕರಾರು ಕಾರಣಕ್ಕೆ 7ನೇ ವೇತನ ಆಯೋಗದ ಶಿಫಾರಸು ಜಾರಿಗೆ ಸರ್ಕಾರ ಹಿಂದೇಟು ಹಾಕಿತ್ತು. ಹಾಗಾಗಿ ಸರ್ಕಾರಿ ನೌಕರರು ಅಸಮಾಧಾನಗೊಂಡಿದ್ದರು. ವೇತನ ಆಯೋಗದ ವರದಿಯ ಯಥಾವತ್‌ ಜಾರಿಗೆ ಆಗ್ರಹಿಸಿ ಈ ತಿಂಗಳ 29ರಿಂದ ಕರ್ತವ್ಯಕ್ಕೆ ಗೈರಾಗುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿ ನೌಕರ ಸಂಘಟನೆಗಳ ಪ್ರತಿನಿಧಿಗಳು ಕಳೆದ ಶುಕ್ರವಾರ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ನೀಡಿದ್ದರು.

18,000 ಕೋಟಿ ಹೊರೆ

ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರರಾವ್‌ ಅಧ್ಯಕ್ಷತೆಯ ವೇತನ ಆಯೋಗದ ಅಂತಿಮ ವರದಿಯಲ್ಲಿ ಶೇಕಡಾ 27.5 ವೇತನ ಹೆಚ್ಚಳಕ್ಕೆ ಶಿಫಾರಸ್ಸು ಮಾಡಿದೆ. ಈ ಶಿಫಾರಸ್ಸು ಜಾರಿಯಿಂದ ವಾರ್ಷಿಕ 18,000 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!