Thursday, September 19, 2024

ಪ್ರಾಯೋಗಿಕ ಆವೃತ್ತಿ

ಐಐಟಿ, ಐಐಎಂಗಳಲ್ಲಿ ಹಿಂದಿ ಹೇರಿಕೆ : ಕೇಂದ್ರದ ವಿರುದ್ಧ ಸ್ಟಾಲಿನ್ ಕಿಡಿ


ಹಿಂದಿಗೆ ಹಾಲೂಣಿಸಿ ಇತರೆ ಭಾಷೆಗಳಿಗೆ ವಿಷವೇಕೆ ?

ಕೇಂದ್ರ ಸರ್ಕಾರದ ವಿರುದ್ದ ತಮಿಳುನಾಡು ಸಿಎಂ ಸ್ಟಾಲಿನ್ ಕಿಡಿ


ಐಐಟಿ, ಐಐಎಂ ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಹಿಂದಿಯನ್ನು ಬೋಧನಾ ಮಾಧ್ಯಮವಾಗಿ ಶಿಫಾರಸು ಮಾಡಿರುವ ಅಧಿಕೃತ ಭಾಷೆಯ ಸಂಸತ್ ಸಮಿತಿಯ ವರದಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ನೀಡಿರುವುದನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಉಗ್ರವಾಗಿ ಖಂಡಿಸಿದ್ದಾರೆ.

ಬಿಜೆಪಿಯು ಒಂದು ರಾಷ್ಟ್ರ, ಒಂದು ಭಾಷೆ, ಒಂದು ಧರ್ಮ, ಒಂದು ಆಹಾರ ಮತ್ತು ಒಂದು ಸಂಸ್ಕೃತಿಯನ್ನು ಜಾರಿಗೊಳಿಸಲು ಹೊರಟಿದೆ ಎಂದು ಆರೋಪಿಸಿದ ಅವರು, ಇದು ಭಾರತೀಯ ಒಕ್ಕೂಟಕ್ಕೆ ಹಾನಿ ಮಾಡುತ್ತದೆ ಎಂದು ಹೇಳಿದರು.

22 ಅಧಿಕೃತ ಭಾಷೆಗಳಿಗೆ ಇನ್ನೂ ಹೆಚ್ಚಿನ ಭಾಷೆಗಳನ್ನು ಸೇರಿಸಬೇಕೆಂದು ಜನರು ಒತ್ತಾಯಿಸುತ್ತಿರುವಾಗ ಇಂತಹ ವರದಿಯ ಅಗತ್ಯವೇನು? ಕೇಂದ್ರ ಸರ್ಕಾರದ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಂದ ಇಂಗ್ಲಿಷ್ ಅನ್ನು ತೆಗೆದುಹಾಕಲು ಏಕೆ ಶಿಫಾರಸು ಮಾಡಲಾಗಿದೆ? ಎಂದು ಸ್ಟಾಲಿನ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಂಸತ್ತಿನಲ್ಲಿ ಭಾರತ್ ಮಾತಾಕೀ ಜೈ ಎಂದು ಹೇಳುವುದು, ಅದನ್ನು ರಾಜಕೀಯ ಪಕ್ಷಗಳ ಘೋಷಣೆಯಾಗಿಸುವುದು, ಇತರ ಭಾಷೆಗಳಿಗೆ ವಿಷವನ್ನು ನೀಡಿ, ಹಿಂದಿಗೆ ಹಾಲು ಉಣಿಸಿದಂತಿದೆ. ಇದು ಸಂವಿಧಾನಕ್ಕೆ ವಿರುದ್ಧವಾಗಿದೆ. ಕಳೆದ ಸೆ.16 ರಂದು ಗೃಹ ಸಚಿವ ಅಮಿತ್ ಶಾ ಅವರು ಹಿಂದಿ ದಿವಸ್ ಆಚರಿಸಿ, ಹಿಂದಿ ಅಧಿಕೃತ ಭಾಷೆ ಎಂದು ಹೇಳಿದ್ದರು ಮತ್ತು ಅವರ ನೇತೃತ್ವದ ಸಮಿತಿ ಈಗ ಶಿಕ್ಷಣ ಸಂಸ್ಥೆಗಳ ಮೇಲೆ ಹಿಂದಿ ಹೇರಲು ಪ್ರಯತ್ನಿಸುತ್ತಿದೆ ಎಂದು ಸ್ಟಾಲಿನ್ ಹರಿಹಾಯ್ದಿದ್ದಾರೆ.

ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಭಾರತದಲ್ಲಿ ತಮಿಳು ಮತ್ತು ಇತರ ಭಾಷೆಗಳನ್ನು ಸಮಾನವಾಗಿ ಕಾಣಬೇಕು. ಎಲ್ಲಾ ಭಾಷೆಗಳನ್ನು ಸರ್ಕಾರದ ಅಧಿಕೃತ ಭಾಷೆಗಳಾನ್ನಾಗಿ ಮಾಡಬೇಕು. ಹಿಂದಿಯನ್ನು ಹೇರುವ ಮತ್ತು ಇನ್ನೊಂದು ಭಾಷಾಯುದ್ಧವನ್ನು ನಮ್ಮ ಮೇಲೆ ಹೇರುವ ನಿಲುವು ತೆಗೆದುಕೊಳ್ಳಬೇಡಿ. ಮಾತೃಭಾಷಾ ಭಾವನೆ ಎಂಬ ಬೆಂಕಿ ಹಚ್ಚುವ ಪ್ರಯತ್ನ ಮಾಡಬೇಡಿ ಎಂದು ತಮಿಳುನಾಡು ಸಿಎಂ ಎಚ್ಚರಿಕೆ ನೀಡಿದ್ದಾರೆ.

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!