Thursday, September 19, 2024

ಪ್ರಾಯೋಗಿಕ ಆವೃತ್ತಿ

ನರೇಗಾದಲ್ಲಿ ಹಿಂದುಳಿದ ಮಂಡ್ಯ : ಜನಪ್ರತಿನಿಧಿಗಳು-ಅಧಿಕಾರಿಗಳೇ ಕಾರಣ – ಪುಟ್ಟಮಾದು

ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ)ಯಲ್ಲಿ ಮಂಡ್ಯ ಜಿಲ್ಲೆಯು ಅತ್ಯಂತ ಕಳಪೆ ಸ್ಥಾನಕ್ಕೆ ಇಳಿಯಲು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಎಂ.ಪುಟ್ಟಮಾದು ಆರೋಪಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಿಲ್ಲೆಯಲ್ಲಿ ನರೇಗಾ ಯೋಜನೆಯ ಬಗ್ಗೆ ಜಾಗೃತಿ ಆಗಿಲ್ಲ, ಇದರಿಂದಾಗಿ ಹೆಚ್ಚಿನ ಜನರು ಈ ಯೋಜನೆ ವ್ಯಾಪ್ತಿಗೆ ಒಳಪಟ್ಟಿಲ್ಲ, ಜನಪ್ರತಿನಿಧಿಗಳು ರಾಜಕೀಯದಲ್ಲಿ ನಿರತರಾಗಿದ್ದಾರೆಯೇ ಹೊರತು ಅಭಿವೃದ್ಧಿಯ ಬಗ್ಗೆ ಚಿಂತಿಸುತಿಲ್ಲ ಎಂದು ದೂರಿದರು.

ಸಂಸದರು ಜಂಟಿ ಸಭೆ ಕರೆಯಲಿ 

ಸಂಸದೆ ಸುಮಲತ ಅವರು ನೆಪಮಾತ್ರ ಅಧಿಕಾರಿಗಳ ಸಭೆ ಕರೆದರೆ ನರೇಗಾ ಯೋಜನೆ ಜಾರಿಗೊಳ್ಳುವುದಿಲ್ಲ, ಅವರು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಪದಾಧಿಕಾರಿಗಳು ಹಾಗೂ ಅಧಿಕಾರಿಗಳ ಜಂಟಿ ಸಭೆಯನ್ನು ಕರೆಯಲಿ, ಆಗ ಈ ಯೋಜನೆಯಲ್ಲಿ ಯಾರ ಲೋಪದೋಷಗಳಿವೆ ಎಂದು ಅವರ ಗಮನಕ್ಕೆ ತರುತ್ತೇವೆ ಎಂದು ಹೇಳಿದರು.

ನರೇಗಾ ಕೂಲಿ 600 ರೂ.ಗೆ ಹೆಚ್ಚಿಸಿ 

ಉದ್ಯೋಗ ಖಾತ್ರಿಯಲ್ಲಿ 600 ರೂ. ಕೂಲಿ, 200 ಮಾನವ ದಿನಗಳಿಗೆ ಉದ್ಯೋಗವನ್ನು ಹೆಚ್ಚಳ ಮಾಡಬೇಕು. ಅಲ್ಲದೇ ಕೃಷಿ ಸಲಕರಣೆ ವೆಚ್ಚ ಕಡಿತ ವಾಪಸ್‌ ಪಡೆಯಬೇಕು, ಆನ್‌ ಲೈನ್ ಹಾಜರಾತಿ ನಿಲ್ಲಿಸಿ, ನಗರಪ್ರದೇಶಕ್ಕೂ ಯೋಜನೆಯನ್ನು ವಿಸ್ತರಿಸಬೇಕೆಂದು ಆಗ್ರಹಿಸಿದರು.

ಸಿಳ್ಳೇಕ್ಯಾತ ದೊಂಬಿದಾಸರು, ಹಕ್ಕಿಪಿಕ್ಕಿ ಅಲೆಮಾರಿ ಸಮುದಾಯದ ಸಮಗ್ರ ಅಭಿವೃದ್ಧಿ ಮಾಡಬೇಕು, ಭಾಗ್ಯಜ್ಯೋತಿ ಹಾಗೂ ರೈತರ ಪಂಪ್‌ಸೆಟ್‌ ಗಳ ಮೀಟರೀಕರಣ ಕೈಬಿಡಬೇಕು. ಟನ್ ಕಬ್ಬಿಗೆ 4500 ರೂ. ಬೆಲೆ ನಿಗದಿಗೊಳಿಸಿ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಹದಗೆಟ್ಟ ರಸ್ತೆಗಳ ಸರಿಪಡಿಸಬೇಕೆಂದು ಒತ್ತಾಯಿಸಿದರು.

ರೈತರ ಹೋರಾಟಕ್ಕೆ ಬೆಂಬಲ

ಕಳೆದ 13 ದಿನಗಳಿಂದ 4,500 ರೂ. ಕಬ್ಬು ಬೆಲೆ ನಿಗದಿಗಾಗಿ ಮಂಡ್ಯದಲ್ಲಿ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸುವುದಾಗಿ ತಿಳಿಸಿದ ಅವರು, ಕೂಡಲೇ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ಪದಾಧಿಕಾರಿಗಳಾದ ಬಿ.ಎಂ.ಶಿವಮಲ್ಲಯ್ಯ, ಅರುಣ್ ಕುಮಾರ್, ಎನ್.ಸುರೇಂದ್ರ, ಆರ್.ರಾಜು, ಟಿ.ಹೆಚ್.ಆನಂದ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!