Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಹೊಸ ಬೂದನೂರು ಗ್ರಾಮದಲ್ಲಿ ಐದು ಆನೆಗಳು ಪ್ರತ್ಯಕ್ಷ

ಮಂಡ್ಯ ತಾಲ್ಲೂಕಿನ ಹೊಸ ಬೂದನೂರು ಹಾಗೂ ಹಳೆ ಬೂದನೂರು ನಡುವೆ ಇರುವ ಕಬ್ಬಿನ ಗದ್ದೆಯಲ್ಲಿ ಐದು ಆನೆಗಳು ಪ್ರತ್ಯಕ್ಷವಾಗಿವೆ.

ಚನ್ನಪಟ್ಟಣದ ಅರಣ್ಯ ಪ್ರದೇಶಗಳಿಂದ ಆಗಮಿಸಿರುವ ಈ ಆನೆಗಳ ಹಿಂಡು ಶನಿವಾರ ರಾತ್ರಿ ತಾಲೂಕಿನ ಅಂಬರ ಹಳ್ಳಿ ಸಮೀಪದ ಜಮೀನುಗಳಲ್ಲಿ ಕಾಣಿಸಿಕೊಂಡ ಆನೆಗಳನ್ನು ಕಾಡಿಗೆ ಅಟ್ಟಲು ಅರಣ್ಯ ಇಲಾಖೆಯ ಸಿಬ್ಬಂದಿ ಪ್ರಯತ್ನಿಸಿದರಾದರೂ ಆನೆಗಳ ಹಿಂಡು, ಕಾಡಿನತ್ತ ಹೋಗದೆ ಹಳೆ ಬೂದನೂರು ಗ್ರಾಮದಲ್ಲಿನ ಕಬ್ಬಿನ ಗದ್ದೆಯನ್ನು ಸೇರಿಕೊಂಡವು.

ಮಧ್ಯರಾತ್ರಿವರೆಗೂ ಮಂಡ್ಯ ಅರಣ್ಯ ಇಲಾಖೆಯ ಎಸಿಎಫ್ ಮಹದೇವಸ್ವಾಮಿ ಮತ್ತು ತಂಡ ಆನೆಗಳನ್ನು ಕಾಡಿನತ್ತ ಅಟ್ಟಲು ಪ್ರಯತ್ನಿಸಿದರಾದರೂ ಅದು ಸಫಲವಾಗಲಿಲ್ಲ. ಇದರಿಂದಾಗಿ ಭಾನುವಾರ ಕಾರ್ಯಾಚರಣೆ ನಡೆಸಲು ನಿರ್ಧರಿಸಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.

ಭಾನುವಾರ ಬೆಳಿಗ್ಗೆ ಹೊಸ ಬೂದನೂರು ಗ್ರಾಮದ ಸಮೀಪವಿರುವ ಲೆಮನ್ ಗ್ರಾಸ್ ಹೋಟೆಲ್ ಹಿಂಭಾಗದ ಜಮೀನುಗಳಲ್ಲಿ ಕಾಣಿಸಿಕೊಂಡ ಆನೆಗಳ ಹಿಂಡನ್ನು ನೋಡಿ ಸಾರ್ವಜನಿಕರು ಭಯಭೀತರಾಗಿ ತಕ್ಷಣ ಅರಣ್ಯ ಇಲಾಖೆಯವರಿಗೆ ವಿಷಯ ಮುಟ್ಟಿಸಿದರು.

ತಕ್ಷಣ ಎಸಿಎಫ್ ಮಹಾದೇವಸ್ವಾಮಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರಾದರೂ ಆನೆಗಳ ಹಿಂಡು, ಕಬ್ಬಿನ ಗದ್ದೆಯನ್ನು ಸೇರಿಕೊಂಡ ಕಾರಣ ಅವುಗಳನ್ನು ಕಾಡಿಗೆ ಅಟ್ಟಲು ಸಾಧ್ಯವಾಗಲಿಲ್ಲ. ಇಂದು ಸಂಜೆ 6 ಗಂಟೆಗೆ ಕಾರ್ಯಾಚರಣೆ ನಡೆಸಿ ಮಳವಳ್ಳಿ ತಾಲೂಕಿನ ಮುತ್ತತ್ತಿ ಅರಣ್ಯ ಪ್ರದೇಶ ಅಥವಾ ಚನ್ನಪಟ್ಟಣದ ಅರಣ್ಯ ಪ್ರದೇಶಕ್ಕೆ ಅಟ್ಟಲು ನಿರ್ಧರಿಸಲಾಯಿತು.

ವಿಷಯ ತಿಳಿದ ಮಂಡ್ಯ ತಹಶೀಲ್ದಾರ್ ಬಿರಾದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಎಸಿಎಫ್ ಮಹಾದೇವಸ್ವಾಮಿ ಹಾಗೂ ಸಿಬ್ಬಂದಿ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದು ಜನರು ಆನೆಗಳತ್ತ ಸುಳಿಯದಂತೆ ಎಚ್ಚರಿಕೆ ವಹಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!