Thursday, September 19, 2024

ಪ್ರಾಯೋಗಿಕ ಆವೃತ್ತಿ

ಜಿಲ್ಲೆಯ ಏಳು ಕ್ಷೇತ್ರದಲ್ಲೂ ಕಮಲ ಅರಳಿಸುವುದು ಗುರಿ

ಈಗಾಗಲೇ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಕಮಲ ಅರಳಿದ್ದು,ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಾ ಏಳು ಕ್ಷೇತ್ರದಲ್ಲಿ ಕಮಲ ಅರಳಿಸುವುದು ನಮ್ಮ ಗುರಿ ಎಂದು ನೂತನ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್ ಘೋಷಣೆ ಮಾಡಿದರು.

ಮಂಡ್ಯದ ಸುಭಾಶ್ ನಗರದಲ್ಲಿರುವ ಬಿಜೆಪಿ ವಿಕಾಸ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಜಿಲ್ಲಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದರು.

ಮುಂಬರುವ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆಗೆ ಜಿಲ್ಲೆಯಾದ್ಯಂತ ಸಂಚರಿಸಿ ಒತ್ತು ನೀಡಲಾಗುವುದು.ಪಕ್ಷ ನನಗೆ ನೀಡಿರುವ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದು ತಿಳಿಸಿದರು.

ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷದ ಕಾರ್ಯಕರ್ತರಲ್ಲಿ ಮೂಲ ಮತ್ತು ಹೊಸ ಕಾರ್ಯಕರ್ತರು ಅಂತ ಇರುವುದಿಲ್ಲ.ಎಲ್ಲರೂ ನಮ್ಮ ಪಕ್ಷದ ಕಾರ್ಯಕರ್ತರೇ. ನಾನು ಮುಖಂಡರು, ಪರಿವಾರದ ಸಹಕಾರದಿಂದ ಸಂಘಟನೆ ಮಾಡುವುದಾಗಿ ತಿಳಿಸಿದರು.

ಕೇಂದ್ರದ ವರಿಷ್ಠರು ಹಳೇ ಮೈಸೂರು ಭಾಗಕ್ಕೆ ಹೆಚ್ಚಿನ ಗಮನ ನೀಡಿದ್ದಾರೆ.ಅದರಲ್ಲಿ ಮಂಡ್ಯ ಜಿಲ್ಲೆಯೂ ಸೇರಿದೆ.ಈ ಭಾಗದಲ್ಲಿ ಬಿಜೆಪಿ ಪಕ್ಷ ಮತ್ತಷ್ಟು ಎತ್ತರಕ್ಕೆ ಬೆಳೆಯಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಜಿಲ್ಲೆಯ ಏಳೂ ವಿಧಾನ ಸಭಾ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗುವ ನಿಟ್ಟಿನಲ್ಲಿ ಸಂಘಟನೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ‍್ಯಕರ್ತರೊಂದಿಗೆ ಕಾರ‍್ಯಕರ್ತನಾಗಿ ದುಡಿಯುವುದಾಗಿ ಭರವಸೆ ನೀಡಿದರು.

ಮಂಡ್ಯದಲ್ಲಿ ಕಮಲ ಅರಳುವುದೇ ಎಂದು ಮೂಗು ಮುರಿಯುತ್ತಿದ್ದವರಿಗೆ ಕೆ.ಆರ್. ಪೇಟೆ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ಕೆ.ಸಿ. ನಾರಾಯಣಗೌಡ ಅವರು ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ನಾವು ಗೆದ್ದು ತೋರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕೆ.ಆರ್.ಪೇಟೆ ಮಾತ್ರವಲ್ಲದೆ, ಎಲ್ಲ ಏಳೂ ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ. ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಜಿಲ್ಲೆಯಲ್ಲೇ ಮೊಕ್ಕಾಂ ಹೂಡಿ ಪಕ್ಷವನ್ನು ಸಂಘಟಿಸಿ ಹೆಚ್ಚು ಮಂದಿ ಆಯ್ಕೆಯಾಗುವ ನಿಟ್ಟಿನಲ್ಲಿ ಕಾರ‍್ಯಕ್ರಮ ರೂಪಿಸಲಿದ್ದಾರೆ. ಈ ಎಲ್ಲ ಕಾರ್ಯಗಳಿಗೆ ಪಕ್ಷದ ಕಾರ್ಯಕರ್ತರು ನನ್ನೊಡನೆ ಕೈ ಜೋಡಿಸಿ ಕೆಲಸ ಮಾಡಬೇಕೆಂದು ಮನವಿ ಮಾಡಿದರು.

ನೂತನ ಅಧ್ಯಕ್ಷ ಸಿ.ಪಿ. ಉಮೇಶ್‌ಗೆ ಅಧಿಕಾರ ಹಸ್ತಾಂತರ ಮಾಡಿದ ನಿರ್ಗಮಿತ ಅಧ್ಯಕ್ಷ ಕೆ.ಜೆ. ವಿಜಯಕುಮಾರ್, ಕಳೆದ ಎರಡೂವರೆ ವರ್ಷಗಳಿಂದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷನಾಗಿ ಹಲವಾರು ಸವಾಲುಗಳ ನಡುವೆ ಕೆಲಸ ಮಾಡಿರುವ ತೃಪ್ತಿ ನನಗಿದೆ. ಪಕ್ಷದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ಆದರೆ ಚುನಾವಣೆ ಅಥವಾ ಪಕ್ಷ ಸಂಘಟನೆ ವಿಚಾರದಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣ ಎಂದರು.

ಬಿಜೆಪಿ ಯುವನಾಯಕ ಅಶೋಕ್ ಜಯರಾಂ,ಕಾರ‍್ಯದರ್ಶಿ ಜೆ.ಕೃಷ್ಣ, ರಾಜ್ಯ ಕಾರ‍್ಯಕಾರಿಣಿ ಸದಸ್ಯ ಡಾ. ಸಿದ್ದರಾಮಯ್ಯ, ಮಹಿಳಾ ಘಟಕದ ಅಧ್ಯಕ್ಷೆ ಯಶೋಧಮ್ಮ, ಮನ್‌ಮುಲ್ ನಿರ್ದೇಶಕಿ ಸುಜಾತಕೃಷ್ಣ, ನಗರ ಘಟಕದ ಅಧ್ಯಕ್ಷ ವಿವೇಕ್, ಜಿಲ್ಲಾ ಪ್ರಧಾನ ಕಾರ‍್ಯದರ್ಶಿ ಪ.ನಾ. ಸುರೇಶ್, ಮುಖಂಡರಾದ ಹೊಸಹಳ್ಳಿ ನಾಗೇಶ್,ಬೇಕರಿ ಅರವಿಂದ್,ವಸಂತ್ ಕುಮಾರ್,ಚಾಮರಾಜು,ಹರ್ಷ ಸೇರಿದಂತೆ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!