Thursday, September 19, 2024

ಪ್ರಾಯೋಗಿಕ ಆವೃತ್ತಿ

ಜಿಲ್ಲೆಯಲ್ಲೀಗ ಸಮಾಜ ಸೇವಕರ ಚುನಾವಣಾ ಅಬ್ಬರ


  • ವಿವಿಧ ಪಕ್ಷಗಳ ಆಕಾಂಕ್ಷಿತರು ಮತದಾರರನ್ನು ಸೆಳೆಯುವ ಚುನಾವಣಾ ಕಸರತ್ತು

  • ಗಣೇಶ ಮೂರ್ತಿಗಳ ಉಚಿತ ಹಂಚಿಕೆ
  • ಬೃಹತ್ ಆರೋಗ್ಯ ಶಿಬಿರ ನಡೆಸಿ ಹಲವರಿಗೆ ಶಸ್ತ್ರಚಿಕಿತ್ಸೆ
  • ಒಂದೆರಡು ಸಾವಿರ ಹಣವನ್ನು ಉಡುಗೊರೆ ರೂಪದಲ್ಲಿ ನೀಡಿ ಓಲೈಕೆ

2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧವಾಗಿರುವ ವಿವಿಧ ಪಕ್ಷಗಳ ಆಕಾಂಕ್ಷಿತರು ಜಿಲ್ಲೆಯಾದ್ಯಂತ ಅಬ್ಬರ ಎಬ್ಬಿಸುತ್ತಿದ್ದಾರೆ. ಸಮಾಜ ಸೇವಕರ ಗೆಟಪ್ಪಿನಲ್ಲಿ ದಿನನಿತ್ಯ ವಿವಿಧ ಉಡುಗೊರೆಗಳನ್ನು ನೀಡುತ್ತಾ ಯುವಜನರು ಹಾಗೂ ಸಾಮಾನ್ಯ ಮತದಾರರನ್ನು ಸೆಳೆಯುವ ಚುನಾವಣಾ ಕಸರತ್ತು ಮಾಡುತ್ತಿದ್ದಾರೆ.

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳಾದ ಮನ್ಮುಲ್ ಅಧ್ಯಕ್ಷ ಬಿ. ಆರ್. ರಾಮಚಂದ್ರು, ಜಿ.ಪಂ. ಸ್ಥಾಯಿ ಸಮಿತಿ ಮಾಜಿ ಮಾಜಿ ಅಧ್ಯಕ್ಷ ಯೋಗೇಶ್, ಕೀಲಾರ ರಾಧಾಕೃಷ್ಣ, ಮುದ್ದನಘಟ್ಟ ಮಹಾಲಿಂಗೇಗೌಡ, ಡಾ. ಕೃಷ್ಣ, ಗಣಿಗ ರವಿಕುಮಾರ್, ಅಶೋಕ್ ಜಯರಾಮ್ ಸೇರಿದಂತೆ ಮತ್ತಿತರರು ಈಗಾಗಲೇ ಕ್ಷೇತ್ರಾದ್ಯಂತ ಜನಸಾಮಾನ್ಯರನ್ನು ಹಾಗೂ ಯುವಜನರನ್ನು ಸೆಳೆಯಲು ನಾನಾ ರೀತಿಯ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.

ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್,ಬುಕ್ಸ್, ಹಿರಿಯರಿಗೆ ಧರ್ಮಸ್ಥಳ ಯಾತ್ರೆ,ನೀರಿನ ಕ್ಯಾನ್ ವಿತರಣೆ, ಮೃತರಾದ ಕುಟುಂಬಕ್ಕೆ ಹಣ,ಮಳೆಹಾನಿಯಾದ ಕುಟುಂಬಗಳಿಗೆ ನೆರವು,ದೇವಸ್ಥಾನಗಳ ಜೀರ್ಣೋದ್ಧಾರ, ಆರೋಗ್ಯ ಶಿಬಿರ ಸೇರಿದಂತೆ ಇವ ಬಳಿ ಹತ್ತು ಹಲವು ಆಮಿಷಗಳ ಪಟ್ಟಿ ಇದೆ.

ಅದರಲ್ಲೂ ಈ ಬಾರಿಯ ಗಣೇಶೋತ್ಸವದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದ ಎಲ್ಲೆಡೆ ಗಣೇಶ ಮೂರ್ತಿಗಳ ಉಚಿತ ಹಂಚಿಕೆ ನಡೆದಿದೆ. ಗಣಪತಿ ಹಂಚದೇ ಇರುವವರು 5000, 10,000, 15,000 ಹೀಗೆ ತಮ್ಮ ಸಾಮರ್ಥ್ಯ ಅನುಸಾರ ಗಣೇಶೋತ್ಸವಗಳಿಗೆ ಹಣ ನೀಡಿದ್ದಾರೆ. ಒಟ್ಟಿನಲ್ಲಿ ಎಲ್ಲಾ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಹಣವನ್ನು ಖರ್ಚು ಮಾಡುತ್ತಾ ಜನರ ಮನವೊಲಿಸಲು ಕಸರತ್ತು ನಡೆಸುತ್ತಿದ್ದಾರೆ.

ಹಾಗೆಯೇ ಮದ್ದೂರಿನಲ್ಲಿ ಆಕಾಂಕ್ಷಿತರಾಗಿರುವ ಮನ್ಮುಲ್ ನಿರ್ದೇಶಕ ಎಸ್‌.ಪಿ.ಸ್ವಾಮಿ ಹಾಗೂ ಕದಲ್ಲೂರು ಉದಯ್ ಅಬ್ಬರ ಜೋರಾಗಿ ನಡೆಯುತ್ತಿದೆ. ಇಬ್ಬರೂ ಆರೋಗ್ಯ ಮೇಳ, ಕ್ರಿಕೆಟ್ ಪಂದ್ಯಾವಳಿಗಳು ಹಾಗೂ ತಮ್ಮ ಅಭಿಮಾನಿಗಳ ಸಂಘದ ಉದ್ಘಾಟನೆಗೆ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದಾರೆ.  ಗಣೇಶ ವಿಗ್ರಹಗಳ ಹಂಚಿಕೆಯಲ್ಲಿ ಇಬ್ಬರು ಪೈಪೋಟಿಗೆ ಬಿದ್ದು ಹಂಚಿಕೆ ಮಾಡಿದ್ದಾರೆ.ಇವರಿಬ್ಬರ ಹವಾ ಮುಂದೆ ಹಾಲಿ ಶಾಸಕ ಡಿ.ಸಿ.ತಮ್ಮಣ್ಣ,ಗುರುಚರಣ್ ಮಂಕಾಗಿ ಹೋಗಿದ್ದಾರೆ.

ಪಾಂಡವಪುರದಲ್ಲಿ ಬಿಜೆಪಿಯ ಡಾ. ಇಂದ್ರೇಶ್ ಬೃಹತ್ ಆರೋಗ್ಯ ಶಿಬಿರ ನಡೆಸಿ ಹಲವರಿಗೆ ಶಸ್ತ್ರಚಿಕಿತ್ಸೆ ಮಾಡಿಸಿ ಕೊಟ್ಟಿದ್ದಾರೆ. ರೈತ ಸಂಘದ ದರ್ಶನ್ ಪುಟ್ಟಣ್ಣಯ್ಯ, ಸಿ.ಎಸ್. ಪುಟ್ಟರಾಜು, ತ್ಯಾಗರಾಜು,ಕೆ.ಆರ್. ಪೇಟೆಯಲ್ಲಿ ಕಾಂಗ್ರೆಸ್ ಮುಖಂಡ ವಿಜಯ ರಾಮೇಗೌಡ, ಜೆಡಿಎಸ್ ಮುಖಂಡ ಬಸ್ ಸಂತೋಷ್ ಕುಮಾರ್,ಮನ್ಮಲ್ ನಿರ್ದೇಶಕ ಹೆಚ್.ಟಿ. ಮಂಜು, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಇಂಡುವಾಳು ಸಚ್ಚಿದಾನಂದ, ನಾಗಮಂಗಲದಲ್ಲಿ ಫೈಟರ್ ರವಿ ಮೊದಲಾದವರು ವಿವಿಧ ಸೇವೆಗಳನ್ನು ಜನರಿಗೆ ಕೊಡುತ್ತಾ ಆರ್ಭಟಿಸುತ್ತಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಲೇಬೇಕೆಂದು ಹಠಕ್ಕೆ ಬಿದ್ದಿರುವ ಆಕಾಂಕ್ಷಿಗಳು ಕೋಟ್ಯಾಂತರ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದ್ದಾರೆ ಚುನಾವಣೆಗೂ ಮುನ್ನವೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣವನ್ನು ಖರ್ಚು ಮಾಡುತ್ತಿರುವ ಆಕಾಂಕ್ಷಿತರು ಮುಂದೆ ತಾವು ಬಯಸಿದ ಪಕ್ಷಗಳ ಟಿಕೆಟ್ ಸಿಕ್ಕರೆ ಇನ್ನೆಷ್ಟು ಹಣವನ್ನು ಖರ್ಚು ಮಾಡಬಹುದು ಊಹಿಸಿ.

ಶಾಸಕರಾಗಲು ಹೊರಟಿರುವ ಆಕಾಂಕ್ಷಿತರು ಖರ್ಚು ಮಾಡುತ್ತಿರುವ ಹಣದ ಹೊಳೆಯನ್ನು ಕಂಡು ಹಾಲಿ ಶಾಸಕರೇ ದಂಗಾಗಿ ಹೋಗಿದ್ದಾರೆ.

ಮಕ್ಕಳಿಗೆ ನಾಲ್ಕು ಪುಸ್ತಕ, ಪೆನ್ಸಿಲ್, ಬ್ಯಾಗು ಕೊಡುವ ಮೂಲಕ ಅವರ ಪೋಷಕರನ್ನು ಭಿಕ್ಷುಕರ ರೀತಿ ಕಾಣಲಾಗುತ್ತಿದೆ. ಒಂದೆರಡು ಸಾವಿರ ರೂಪಾಯಿಗಳನ್ನು ನೀಡಿದ ಮಾತ್ರಕ್ಕೆ ಮತದಾರರ ಎಲ್ಲಾ ಸಮಸ್ಯೆಗಳು ಬಗೆಹರಿಯುವುದೇ? ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಏನೆಲ್ಲಾ ಮಾಡಬಹುದಿತ್ತೋ ಅದನ್ನು ಮಾಡುವುದನ್ನು ಬಿಟ್ಟು ಈ ರೀತಿ ಒಂದೆರಡು ಸಾವಿರ ಹಣವನ್ನು ಉಡುಗೊರೆ ರೂಪದಲ್ಲಿ ನೀಡಿ ಅವರನ್ನು ಓಲೈಸಲು ಹೊರಟಿರುವುದು ಅಕ್ಷಮ್ಯ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಗೌಡ ಅಭಿಪ್ರಾಯ ಪಡುತ್ತಾರೆ.

ಇಷ್ಟೆಲ್ಲಾ ಹಣವನ್ನು ಖರ್ಚು ಮಾಡಿ ಶಾಸಕನಾಗುವವನು ಮೊದಲು ತನ್ನ ಅಭಿವೃದ್ಧಿ ಮಾಡಿಕೊಂಡು ನಂತರ ಕ್ಷೇತ್ರದ ಅಭಿವೃದ್ಧಿಯ ಕಡೆ ನೋಡುತ್ತಾನೆ. ಆಮಿಷಗಳನ್ನು ಒಡ್ಡುವ ಬದಲು ಈ ಸಮಾಜದ ಅಭಿವೃದ್ಧಿ ಬಗ್ಗೆ ಕಳಕಳಿಯಿಂದ ಮಾತನಾಡಬೇಕು, ಯುವಕರಿಗೆ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ ಅದನ್ನು ಬಗೆಹರಿಸಬೇಕು, ಒಂದು ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯಾವ ಹೊಸ ಯೋಜನೆಗಳನ್ನು ನಮ್ಮಿಂದ ತರಲು ಸಾಧ್ಯವೊ ಆ ಬಗ್ಗೆ ಜನರ ಗಮನವನ್ನು ಸೆಳೆಯುವಂತಹ ಕೆಲಸವನ್ನು ಮಾಡಬೇಕಿತ್ತು. ಆದರೆ ಇವರೆಲ್ಲ ವಿವಿಧ ಆಮಿಷಗಳನ್ನು ಕೊಟ್ಟು ಮತದಾರರಿಗೆ ಮೋಸ ಮಾಡಲು ಹೊರಟಿರುವುದು ಸರಿಯಲ್ಲ ಎಂಬುದು ಕರ್ನಾಟಕ ಜನಶಕ್ತಿ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು ಅಭಿಪ್ರಾಯ.

ಮತದಾರರಿಗೆ ಪುಕ್ಕಟೆ ವಸ್ತುಗಳನ್ನು ಹಂಚುವ ಮೂಲಕ ಅವರನ್ನು ಬಲಿಕೊಡಲು ಆಕಾಂಕ್ಷಿಗಳು ಹೊರಟಿದ್ದಾರೆ‌. ಬಗೆ ಬಗೆಯ ಆಮಿಷಗಳನ್ನು ಜನರಿಗೆ ನೀಡುತ್ತಾ ಮತ ಖರೀದಿಸಲು ಹೊರಟಿರುವ ಇವರಿಂದ ಜಿಲ್ಲೆಯ ಅಭಿವೃದ್ಧಿ ಸಾಧ್ಯವಿಲ್ಲ. ಇಂದು ಯುವಜನತೆ ಅನುಭವಿಸುತ್ತಿರುವ ಸಮಸ್ಯೆಗಳೇನು ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಯಾವ ರೀತಿ ಕಾರ್ಯ ಪ್ರವೃತ್ತರಾಗಬೇಕು, ಜಿಲ್ಲೆಯಲ್ಲಿರುವ ಜ್ವಲಂತ ಸಮಸ್ಯೆಗಳು ಯಾವುದು?

ಅದನ್ನು ಪರಿಹರಿಸಲು ನಮ್ಮಲ್ಲಿ ಯಾವ ಯೋಜನೆ ಇದೆ ಎಂಬುದನ್ನು ಜನರಿಗೆ ತಿಳಿಸಬೇಕಾದ ಅಭ್ಯರ್ಥಿಗಳು ಈ ರೀತಿ ಯುವಜನರನ್ನು ದಾರಿ ತಪ್ಪಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಪ್ರಾಂತ ಕೃಷಿ ಕೂಲಿಕಾರರ ಸಂಘದ ಪುಟ್ಟಮಾಧು ಹೇಳುತ್ತಾರೆ.

ಒಟ್ಟಾರೆ ಇವರೆಲ್ಲ ಒಂದು ವೇಳೆ ತಾವು ಬಯಸಿದ ಪಕ್ಷದ ಟಿಕೆಟ್ ಸಿಗದಿದ್ದರೆ ಆಗಲೂ ಕೂಡ ಈಗ ಮಾಡುತ್ತಿರುವ ಸೇವೆಗಳನ್ನು ಮಾಡುತ್ತಾರಾ? ಖಂಡಿತಾ ಮಾಡೋದಿಲ್ಲ ಎಂಬುದು ಜನರಿಗೂ ಗೊತ್ತಿದೆ. ಸಮಾಜ ಸೇವಕರಿಗೂ ಗೊತ್ತಿದೆ.ಹಿಂಗೆಲ್ಲಾ ಮಾಡುವುದು ಬಿಟ್ಟು, ಅಗತ್ಯ ವಸ್ತುಗಳ ಬೆಲೆಯೇರಿಕೆ,ನಿರುದ್ಯೋಗ ಮೊದಲಾದ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಜನರ ಜೊತೆ ಕೈ ಜೋಡಿಸಲಿ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!