Wednesday, September 18, 2024

ಪ್ರಾಯೋಗಿಕ ಆವೃತ್ತಿ

ಬಜೆಟ್ ನಲ್ಲಿ ಪರಿಷತ್ತಿನ ಶಾಸಕರ ನಿಧಿಯನ್ನು ₹ 10 ಕೋಟಿಗೆ ಹೆಚ್ಚಿಸಿ : ಶಾಸಕರ ಮನವಿ


  • ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಈಗಿನ ₹ 2 ಕೋಟಿ ಸಾಲುತ್ತಿಲ್ಲ 

  • ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ಹೆಚ್ಚಳಕ್ಕೆ ಸರ್ಕಾರಕ್ಕೆ ಮನವಿ

ವಿಧಾನ ಪರಿಷತ್ತಿನ ಶಾಸಕರಿಗೆ ಬಿಡುಗಡೆ ಮಾಡುತ್ತಿರುವ ಕ್ಷೇತ್ರಾಭಿವೃದ್ಧಿ ನಿಧಿಯನ್ನು 2 ಕೋಟಿ ರೂಪಾಯಿಯಿಂದ 25 ಕೋಟಿ ರೂಪಾಯಿಗಳಿಗೆ ಹೆಚ್ಚು ಮಾಡಬೇಕು. ಇಲ್ಲವೇ ಕನಿಷ್ಠ 10 ಕೋಟಿ ರೂಪಾಯಿಯನ್ನಾದರೂ ಹೆಚ್ಚು ಮಾಡಬೇಕಿದೆ. ಈ ಮೂಲಕ ಸ್ಥಳೀಯ ಅಭಿವೃದ್ಧಿಗೆ ಹಾಗೂ ಅವಶ್ಯಕತೆಗಳನ್ನು ಈಡೇರಿಸಲು ಅನುವು ಮಾಡಿಕೊಡಬೇಕಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಈ ನಿರ್ಧಾರವನ್ನು ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಸದಸ್ಯರು ಮನವಿ ಮಾಡಿದ್ದಾರೆ.

ಇದಕ್ಕೂ ಮೊದಲು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಸಭಾ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿಯಾದ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಸದಸ್ಯರು ಮನವಿ ಮಾಡಿದ್ದಾರೆ.

ಪತ್ರದ ಸಾರಾಂಶ 

ಡಿ.28,2022 ರಂದು ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ವಿಧಾನ ಪರಿಷತ್ತಿನ ಶಾಸಕರಿಗೆ ಬಿಡುಗಡೆ ಮಾಡುತ್ತಿರುವ ಕ್ಷೇತ್ರಾಭಿವೃದ್ಧಿ ನಿಧಿಯನ್ನು ರೂ. 2 ಕೋಟಿಯಿಂದ ರೂ. 25 ಕೋಟಿಗಳಿಗೆ ಹೆಚ್ಚುಮಾಡುವಂತೆ ಸರ್ಕಾರವನ್ನು ಒತ್ತಾಯಿಸಿರುವುದು ಸರಿಯಷ್ಟೆ: ಪ್ರತಿಯೊಬ್ಬ ಶಾಸಕರ ಕ್ಷೇತ್ರ ವ್ಯಾಪ್ತಿಯಲ್ಲಿ 350 ರಿಂದ 400 ಗ್ರಾಮ ಪಂಚಾಯಿತಿಗಳು ಬರುತ್ತಿದ್ದು, ನಾವುಗಳು ಪ್ರವಾಸ ಮಾಡುವಂತಹ ಸಮಯದಲ್ಲಿ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಶಾಲಾ ಕೊಠಡಿ, ರಸ್ತೆ ಮತ್ತು ಚರಂಡಿ ಕಾಮಗಾರಿ, ವಿದ್ಯುತ್‌ ದೀಪಗಳು, ಕುಡಿಯುವ ನೀರು ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಮನವಿ ಸಲ್ಲಿಸುತ್ತಿರುತ್ತಾರೆ.

nudikarnataka.com

ಆದರೆ ಸರ್ಕಾರ ಪ್ರತಿಯೊಬ್ಬ ಶಾಸಕರುಗಳಿಗೆ ಬಿಡುಗಡೆ ಮಾಡುವಂತಹ ರೂ.2 ಕೋಟಿಗಳ ಕ್ಷೇತ್ರಾಭಿವೃದ್ಧಿ ನಿಧಿಯು ಯಾವುದಕ್ಕೂ ಸಾಲದ್ದಾಗಿದ್ದು, ಈ ಮೊತ್ತದಿಂದ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದಕ್ಕೆ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಈ ಸಂಬಂಧವಾಗಿ ಕ್ಷೇತ್ರಾಭಿವೃದ್ಧಿ ನಿಧಿಯನ್ನು ಹೆಚ್ಚಿಸುವಂತೆ ಹಲವು ಭಾರಿ ಮನವಿ ಮಾಡಿರುತ್ತೇವೆ. ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ ಎಲ್ಲ 25 ಜನ ಜನಪ್ರತಿನಿಧಿಗಳಾದ ನಾವುಗಳು ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಗ್ರಾಮಗಳ ಜೊತೆ ನಮಗಳಿಗೆ ಹೆಚ್ಚಿನ ಒಡನಾಟ ಇರುವುದರಿಂದ ಜನರ ಮೂಲಭೂತ ಆವಶ್ಯಕತೆಗಳನ್ನು ಈಡೇರಿಸುವ ಬಗ್ಗೆ ನಾವು ಹೆಚ್ಚು ಗಮನಿಸಬೇಕಾದ ಅನಿವಾರ್ಯತೆ ಎದುರಾಗಿರುತ್ತದೆ.

ಕಾರಣ ವಿಧಾನ ಪರಿಷತ್ತಿನ ಸ್ಥಳೀಯ ಸಂಸ್ಥೆಗಳ ಜನ ಪ್ರತಿನಿಧಿಗಳಿಗೆ ಸೀಮಿತವಾಗಿ ಈಗ ನೀಡುತ್ತಿರುವ ಕ್ಷೇತ್ರಾಭಿವೃದ್ಧಿ ರೂ. 2 ಕೋಟಿ ಅನುದಾನವನ್ನು ಕನಿಷ್ಠ ರೂ 10 ಕೋಟಿಗಳಿಗೆ ಹೆಚ್ಚಿಸುವ ಬಗ್ಗೆ ಈ ಆಯವ್ಯಯದಲ್ಲಿ ಘೋಷಣೆ ಮಾಡಲು ತಾವು ಮಾನ್ಯ ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಮಾಡಬೇಕಾಗಿ ವಿಧಾನ ಪರಿಷತ್ ಶಾಸಕರಾದ ದಿನೇಶ್ ಗೂಳಿಗೌಡ, ಶರಣಗೌಡ ಪಾಟೀಲ್, ಮಂಜುನಾಥ್ ಭಂಡಾರಿ, ಸುನೀಲ್ ಗೌಡ ಪಾಟೀಲ್, ರಾಜೇಂದ್ರ ರಾಜಣ್ಣ, ಎಸ್. ರವಿ ಸೇರಿದಂತೆ ಇತರ ಪ್ರಮುಖರು ಮನವಿ ಮಾಡಿದ್ದಾರೆ.

ಅನುದಾನ ಹೆಚ್ಚಿಸಿ, ಇಲ್ಲವೇ ರದ್ದು ಮಾಡಿ

ಸ್ಥಳೀಯ ಸಂಸ್ಥೆಗಳ ಶಾಸಕರಾಗಿರುವ ನಾವುಗಳು ಎರಡು-ಮೂರು ಜಿಲ್ಲೆಯನ್ನು ಪ್ರತಿನಿಧಿಸುತ್ತೇವೆ. ನಮ್ಮ ವ್ಯಾಪ್ತಿಗೆ 250 ರಿಂದ 400 ಪಂಚಾಯಿತಿಗಳು ಬರುತ್ತವೆ. ಹೀಗಾಗಿ ಈಗಿರುವ ಅನುದಾನ ಯಾವ ರೀತಿಯ ಅಭಿವೃದ್ಧಿಗೂ ಸಾಲದು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯವರು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಅನುದಾನ ಹೆಚ್ಚಿಸಿ ಘೋಷಣೆ ಮಾಡಬೇಕು. ಇಲ್ಲದೇ ಇದ್ದರೆ ಇರುವ ಅನುದಾನವನ್ನು ವಾಪಸ್‌ ಪಡೆಯಬೇಕೆಂದು ಪರಿಷತ್ ಶಾಸಕ ಎಸ್‌. ರವಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!