Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ರೈಲ್ವೆ ಅಧಿಕಾರಿಗಳ ಬೇಜಾವಾಬ್ದಾರಿಗೆ ಇನ್ನೆಷ್ಟು ಬಲಿ ಬೇಕು ?

✍️ ಸಂತೋಷ್ ಜಿ.


  • ಮಂಡ್ಯ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಯಾವುದೇ ಕ್ರಮಗಳಿಲ್ಲ 

  • ಪೋಲಿಸ್ ಹಾಗೂ ರೈಲ್ವೆ ಸಿಬ್ಬಂದಿ ಹಳಿ ದಾಟುವ ಪ್ರಯಾಣಿಕರನ್ನು ತಡೆಯುವುದು ಇಲ್ಲ

ಇಂದು ಬೆಳಗ್ಗೆಯೇ ಮಂಡ್ಯದ ಇಬ್ಬರು ಮಹಿಳೆಯರು ರೈಲ್ವೆ ಹಳಿ ಕ್ರಾಸಿಂಗ್ ಮಾಡುವ ವೇಳೆ ರೈಲಿಗೆ ಸಿಲುಕಿ ಬಲಿಯಾಗಿದ್ದಾರೆ. ಇಂತಹ ಹಲವು ಸಾವುಗಳು ದೇಶದಲ್ಲಿ ಆಗಾಗ್ಗೆ ವರದಿಯಾಗುತ್ತಲೆ ಇರುತ್ತದೆ, ನಾಗರೀಕರ ಜೀವಕ್ಕೆ ನಯಾಪೈಸಾ ಬೆಲೆಯೇ ಇಲ್ಲದಂತಾಗಿದೆ. ಇಂತಹ ಮಾನವ ಜೀವಗಳು ರೈಲಿಗೆ ಆಹುತಿಯಾಗುತ್ತಿರು ವುದಕ್ಕೆ ಯಾರು ಹೊಣೆ? ಪ್ರಯಾಣಿಕರು ಈ ಕಡೆ ಏಕೆ ದಾಟಬೇಕು, ನೋಡಿಕೊಳ್ಳಬೇಕಿತ್ತು, ಬೇರೆ ಬೇರೆ ಕಾರಣಗಳನ್ನಿಟ್ಟು ಎಲ್ಲಾ ಅರೋಪಗಳನ್ನು ನಾಗರೀಕರ ಮೇಲೆ ಹಾಕುವುದು ಎಷ್ಟು ಸರಿ? ಆಗಿದ್ದರೆ, ರೈಲ್ವೆ ಇಲಾಖೆಯ ಮತ್ತು ಸಿಬ್ಬಂದಿಯ ಪಾತ್ರವೇನು? ಇಂತಹ ಜೀವಗಳ ಉಸಿರು ನಿಲ್ಲದೆ ಇರುವುದಕ್ಕೆ ಇಲಾಖೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ? ಕ್ರಮ ಕೈಗೊಂಡಿದ್ದರೆ, ಪ್ಲಾಟ್ ಫಾರಂನಿಂದ ಪ್ರವೇಶಿಸುವ ಮತ್ತು ನಿರ್ಗಮಿಸುವ ದ್ದಾರಗಳು ಏಕೆ ನಿರ್ದಿಷ್ಟವಾಗಿಲ್ಲ? ಇದು ಇದ್ದಿದ್ದರೆ ಇಂತಹ ಅಮೂಲ್ಯ ಜೀವಗಳು ಬೆಲೆ ತೆರಬೇಕಿರಲಿಲ್ಲ.

ಹಳಿಗಳ ಮೇಲೆ ಸಂಚರಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲವೇ ? 

ಒಮ್ಮೆ ಮಂಡ್ಯ ನಿಲ್ದಾಣದ ರಚನೆಯನ್ನು ಊಹಿಸಿಕೊಳ್ಳಿ. ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವ  ರೈಲುಗಳು ಬರುವುದು ಎರಡನೇ ಪ್ಲಾಟ್ ಫಾರಂಗೆ. ಮೈಸೂರಿನಿಂದ ಬೆಂಗಳೂರು ಕಡೆಗೆ ಹೋಗುವ ರೈಲುಗಳು ಬರುವುದು ಮೂರನೇ ಪ್ಲಾಟ್ ಫಾರಂಗೆ. ಮುಖ್ಯದ್ವಾರ ಇರುವುದು ಒಂದನೇ ಪ್ಲಾಟ್ ಫಾರಂನಲ್ಲಿ ಮತ್ತು ಟಿಕೆಟ್ ಕೌಂಟರ್ ಇರುವುದು ಇಲ್ಲಿಯೇ. ಕೆಲವೊಮ್ಮೆ ಒಂದನೇ ಪ್ಲಾಟ್ ಫಾರಂ ನಿಂದ ಪ್ರವೇಶಿಸುವ ಪ್ರಯಾಣಿಕರು, ಮೇಲ್ಸೇತುವೆಯನ್ನು ಬಳಸುವುದಿಲ್ಲ, ನೇರವಾಗಿ ರೈಲು ಹಳಿಗಳ ಮೇಲೆ ಇಳಿಯುತ್ತಾರೆ. ಇನ್ನೂ ನಂದಾ ಚಿತ್ರಮಂದಿರದಿಂದ ಪ್ರವೇಶಿಸುವವರು ರೈಲ್ವೇ ಹಳಿಯನ್ನ ದಾಟಲೇಬೇಕು, ಅಲ್ಲಿ ಯಾವುದೇ ಬ್ರಿಡ್ಜ್ ಇಲ್ಲ.

ಪ್ರಯಾಣಿಕರು ಒಂದನೇ ಪ್ಲಾಟ್ ಪಾರಂಗೆ ಬರಲು ಮೇಲ್ಸೇತುವೆ ಮಾರುಕಟ್ಟೆ ಕಡೆಗೆ ಇರುವುದರಿಂದ ಪ್ರಯಾಣಿಕರು ನಂದಾ‌ ಚಿತ್ರ‌ಮಂದಿರದ ಕಡೆ ಇಳಿದಾಗ ಮೇಲ್ಸೇತುವೆ ಬಳಸದೆ ಹಳಿಗಳನ್ನು ದಾಟಲು‌ ಪ್ರಯತ್ನಿಸುವುದು, ಪೋಲಿಸ್ ಮತ್ತು ರೈಲ್ವೆ ಸಿಬ್ಬಂದಿ ಪ್ಲಾಟ್ ಫಾರಂ ನಲ್ಲಿ ಇಳಿಯುವ ಪ್ರಯಾಣಿಕರನ್ನು ತಡೆಯುವುದು ಇಲ್ಲ. ಇಂತಹುವುಗಳು ಹಲವು ದುರಂತಗಳಿಗೆ ಕಾರಣವಾಗಿದೆ.

ಮಂಡ್ಯ ರೈಲ್ವೇ ಸ್ಟೇಷನ್ ನಲ್ಲಿ ಹೊರ ಹೋಗುವುದಕ್ಕೆ ಮತ್ತು ಪ್ರಯಾಣಿಕರು ಒಳ ಬರುವುದಕ್ಕೆ ನಿಗದಿತವಾದ ದ್ವಾರಗಳಿಲ್ಲ. ಸಾರ್ವಜನಿಕರು ದಶದಿಕ್ಕುಗಳಿಂದಲೂ ಪ್ರವೇಶಿಸಬಹುದು, ನಿರ್ಗಮಿಸಬಹುದು. ರೈಲ್ವೇ ಹಳಿಯ ಪಕ್ಕದಲ್ಲಿರುವ ಗೋಡೆಗಳು ಎತ್ತರಲ್ಲಿರಬೇಕು ಮತ್ತು ಪ್ರಯಾಣಿಕರು ಅದನ್ನು ದಾಟಲು ಆಗದಂತೆ ನಿರ್ಮಿಸಿ, ಅತಿಕ್ರಮಿಸಿದರೆ ದಂಡ ಮತ್ತು ಅದನ್ನು ಆಗಾಗ್ಗೆ ಮೇಲ್ವಿಚಾರಣೆ ಮಾಡಬೇಕು. (ಬೆಂಗಳೂರು ಮತ್ತು ಮೈಸೂರಿನಲ್ಲಿ ಪ್ಲಾಟ್ ಫಾರಂ ಹಳಿಯ ಅಕ್ಕಪಕ್ಕದ ಗೋಡೆಗಳು ಎಷ್ಟು ಎತ್ತರದಲ್ಲಿದೆ ಎನ್ನುವುದು ಕಲ್ಪಿಸಿಕೊಳ್ಳಬಹುದು) ಮಂಡ್ಯ ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ರೈಲ್ವೆ ಹಳಿ ದಾಟುವಾಗ ( ರೈಲು ಬರುವ ಸಂದರ್ಭದಲ್ಲಿ ) ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಗಮನಿಸಿ ಎಚ್ಚರಿಕೆ ನೀಡುವುದರೊಂದಿಗೆ ಹಳಿ ದಾಟುವುದನ್ನು ತಡೆಯಬೇಕು.

ಮೆಟ್ರೊ ರೈಲುಗಳಲ್ಲಿರುವ ಸುರಕ್ಷತೆ ಭಾರತೀಯ ರೈಲ್ವೆಯಲ್ಲೇಕಿಲ್ಲ ? 

ನಿಮಗೆ ತಿಳಿದಂತೆ ಬೆಂಗಳೂರಿನ ಮೆಟ್ರೊ ರೈಲು ನಿಲ್ದಾಣದಲ್ಲಿ ಹೆಚ್ಚು ಕಡಿಮೆ ವಿಮಾನದಲ್ಲಿ ಪ್ರಯಾಣಿಸುವ ರೀತಿಯಲ್ಲಿ ತಪಾಸಣೆ ನಡೆಸಿ, ರೈಲು ಬರುವ ಮುನ್ನ ಅಂತರ ಕಾಪಾಡಿಕೊಳ್ಳಲು ಆಗಾಗ್ಗೆ ಅಲ್ಲಿನ ಸಿಬ್ಬಂದಿ ಪ್ರಯಾಣಿಕರಿಗೆ ಸೂಚನೆ ಕೊಡುತ್ತಿರುತ್ತಾರೆ. ರೈಲು ಚಲಿಸುವಾಗ ಎಲ್ಲಾ ಬಾಗಿಲುಗಳನ್ನು ಸ್ವಯಂ ಚಾಲಿತವಾಗಿ ಮುಚ್ಚಿಕೊಳ್ಳುತ್ತವೆ ಮತ್ತು ರೈಲು ನಿಂತಾಗ ಮಾತ್ರ ಬಾಗಿಲುಗಳು ತೆರೆದುಕೊಳ್ಳುತ್ತದೆ. ಇದರಿಂದ ಎಷ್ಟೋ ಅಪಾಯಗಳು, ಕಳ್ಳತನಗಳು ಇವೆಲ್ಲವನ್ನು ತಡೆಗಟ್ಟಬಹುದು. ಮೆಟ್ರೋ ರೈಲಿನಲ್ಲಿ ಪ್ರಯಾಣಿಸಲು, ಟಿಕೆಟ್ ಕೊಳ್ಳುವ ರೀತಿ, ನಿಲ್ದಾಣದಿಂದ ಹೊರ ಹೋಗುವುದು, ಒಳ ಪ್ರವೇಶಿಸುವ ವಿಧಾನ, ಅಲ್ಲಿನ ವಾತಾವರಣ ಶುಚಿತ್ವ, ಮುಂಜಾಗ್ರತಾ ಕ್ರಮಗಳು ನಿರಂತರವಾಗಿ ದೂರದಿಂದ ಓಡಾಡುವ ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಏಕಿಲ್ಲ ?

ತಂತ್ರ‍ಜ್ಙಾನ ಮುಂದುವರೆದಿದೆ. ಹೆಚ್ಚಿನ ಸಿಬ್ಬಂದಿ ಇಟ್ಟುಕೊಂಡು ಬೆಂಗಳೂರು-ಮೈಸೂರಿನಂತ ಮಹಾ ನಗರಗಳಲ್ಲಿ ಇರುವ ಸೌಲಭ್ಯಗಳು ಸೇರಿದಂತೆ ಎಚ್ಚರಿಕೆಯ ಕ್ರಮಗಳನ್ನು ಮಂಡ್ಯ ಜಿಲ್ಲೆಯಲ್ಲಿರುವ ರೈಲು ನಿಲ್ದಾಣದಲ್ಲಿ ಏಕೆ ಅಳವಡಿಸಲು ಸಾಧ್ಯವಾಗುತ್ತಿಲ್ಲ ?

ಈಗಾಗಲೇ ಮಂಡ್ಯ ದಲ್ಲಿ ಹಲವು ನಾಗರೀಕ ಜೀವಗಳು, ಪ್ರಾಣಿಗಳು, ರೈಲ್ವೆ ಹಳಿಗಳಿಗೆ ಸಿಕ್ಕಿ ಬಲಿಯಾಗಿವೆ. ಇನ್ನೂ ಮುಂದಾದರೂ ಮುಂಜಾಗ್ರತಾ ಕ್ರಮಗಳನ್ನು ವಹಿಸಿ, ನಾಗರೀಕರ ಪ್ರಾಣವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆ ಮೇಲಿದೆ. ಇದು ಮಂಡ್ಯದ ಜೀವಗಳ ಕಥೆಯಾದರೆ, ದೇಶದಲ್ಲಿ ಸರಾಸರಿ ಎಷ್ಟು ನಾಗರೀಕರು ತಮ್ಮ ಜೀವವನ್ನು ಕಳೆದು ಕೊಳ್ಳುತ್ತಿದ್ದಾರೆ ಎನ್ನುವುದನ್ನು ದಿ ಸ್ಟೇಟ್ಸ್ ಮ್ಯಾನ್  ವೆಬ್  ವರದಿ ಮಾಡಿದೆ.

41,596 ರೈಲು ಪ್ರಯಾಣಿಕರ ಬಲಿ

ದೇಶದಲ್ಲಿ ಯಾವುದೇ ರೈಲು ಅಪಘಾತಗಳಿಲ್ಲದೆ ಕಳೆದ ದಶಕದಲ್ಲಿ 41,596 ರೈಲು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿ 2,580 ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಪ್ರತಿ ವರ್ಷ ಸರಾಸರಿ 250 ಕ್ಕೂ ಹೆಚ್ಚು ಪ್ರಯಾಣಿಕರು ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವೆ ಬರುವ ಮೂಲಕ ಸಾವನ್ನಪ್ಪಿದ್ದಾರೆ.

ಅದೇ ವೇಳೆ ಚಲಿಸುತ್ತಿದ್ದ ರೈಲಿನಿಂದ ಬಿದ್ದು ಸಾವಿಗೀಡಾಗಿರುವವರ ಪ್ರಮಾಣವು ಈ ಅವಧಿಯಲ್ಲಿ 39,015 ಅನ್ನು ಮೀರುತ್ತದೆ. ಹೀಗಾಗಿ ದೇಶದಲ್ಲಿ ಪ್ರತಿದಿನ 10 ಮಂದಿ ರೈಲ್ವೇ ಪ್ರಯಾಣಿಕರು ಚಲಿಸುತ್ತಿರುವ ರೈಲಿನಿಂದ ಬಿದ್ದು ಸಾವನ್ನಪ್ಪುತ್ತಿದ್ದಾರೆ ಎಂದು ದಿ ಸ್ಟೇಟ್ಸ್ ಮ್ಯಾನ್ ವೆಬ್ ವರದಿ ಮಾಡಿದೆ.

ಸಾರಿಗೆ ಮತ್ತು ಪ್ರವಾಸೋದ್ಯಮದ ಸಂಸದೀಯ ಸ್ಥಾಯಿ ಸಮಿತಿಯು ಸಂಸತ್ತಿನಲ್ಲಿ ಈ ಹಿಂದೆ ವರದಿಯನ್ನು ಮಂಡಿಸಿತ್ತು, ಇದು ದೇಶದಲ್ಲಿ ರೈಲುಗಳ ಕಾರ್ಯಾಚರಣೆಯ ಬಗ್ಗೆ ನಿರ್ಣಾಯಕ ಡೇಟಾವನ್ನು ಒಳಗೊಂಡಿದೆ. ರೈಲ್ವೆ ಸುರಕ್ಷತಾ ಆಯೋಗಕ್ಕೆ (ಸಿಆರ್‌ಎಸ್) ಸಲ್ಲಿಸಿರುವ ಈ ವರದಿಯಲ್ಲಿ 2012 ರಿಂದ 2021ರ ವರೆಗೆ 2581 ಪ್ರಯಾಣಿಕರು ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಅಂತರದಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ರೈಲ್ವೆ ಮಂಡಳಿ ಬಹಿರಂಗಪಡಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!