Friday, September 20, 2024

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್‌ ಪಕ್ಷಕ್ಕೆ ರಾಜ್ಯ ದಸಂಸ ಐಕ್ಯ ಸಮಿತಿಯ ಪರತ್ತುಬದ್ದ ಬೆಂ”ಬಲ” – ಇಂದೂಧರ ಹೊನ್ನಾಪುರ

ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಮತ್ತು ಜನದ್ರೋಹಿ ಆರ್.ಎಸ್.ಎಸ್ ಬಿಜೆಪಿಯನ್ನು ಹಿಮ್ಮೆಟ್ಟಿಸುವುದಕ್ಕಾಗಿ ಕಾಂಗ್ರೆಸ್‌ ಪಕ್ಷಕ್ಕೆ, ‘ಪರತ್ತುಬದ್ಧ  ಬೆಂಬಲ ನೀಡಲು ಕರ್ನಾಟಕ ರಾಜ್ಯ ದ.ಸಂ.ಸ ಐಕ್ಯ ಹೋರಾಟ ಚಾಲನಾ ಸಮಿತಿ ತೀರ್ಮಾನಿಸಿದೆ ಎಂದು ದಲಿತ ನಾಯಕ ಇಂದೂಧರ ಹೊನ್ನಾಪುರ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮುಂದೆ ಆಯ್ಕೆಯಾಗಿ ಸರ್ಕಾರ ರಚಿಸಿದ ನಂತರ ಜನಪರ ಆಡಳಿತ ನೀಡುವುದರೊಂದಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿ ಹಿಡಿಯಬೇಕೆಂದು ಆಗ್ರಹಿಸುತ್ತೇವೆ. ಕಾಂಗ್ರೆಸ್ ಪಕ್ಷ ದಲಿತ ಸಂಘರ್ಷ ಸಮಿತಿ ಆಯ್ಕೆ ಮಾಡಿಕೊಂಡ ಈ ಹೊತ್ತಿನ ಅನಿವಾರ್ಯ ಚುನಾವಣಾ ಆಯ್ಕೆಯೇ ಹೊರತು, ರಾಜಕೀಯ ಪರ್ಯಾಯವಲ್ಲ ಎಂಬುದನ್ನೂ ಇಲ್ಲಿ ಸ್ಪಷ್ಟ ಪಡಿಸಬಯಸುತ್ತದೆ ಎಂದರು.

ಮಂಡ್ಯದಲ್ಲಿ ‘ಕೈ’ ಅಭ್ಯರ್ಥಿಗಳಿಗೆ ಬೆಂಬಲ
ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲ ಅಭ್ಯರ್ಥಿಗಳ ಗೆಲುವಿಗಾಗಿ ಕರ್ನಾಟಕ ರಾಜ್ಯ ದ.ಸಂ.ಸ ಐಕ್ಯ ಹೋರಾಟ ಚಾಲನಾ ಸಮಿತಿ ಕೆಲಸ ಮಾಡಲಿದೆ. ಅದೇ ರೀತಿ ಮೇಲುಕೋಟೆ ಕ್ಷೇತ್ರದ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣಯ್ಯ ಅವರ ಗೆಲುವಿಗೂ ಶ್ರಮಿಸಲಿದೆ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ದಸಂಸ ಐಕ್ಯ ಹೋರಾಟ ಚಾಲನಾ ಸಮಿತಿಯ ಷರತ್ತುಗಳು

ಪರಿಶಿಷ್ಟ ಜಾತಿ/ವರ್ಗಗಳಿಗೆ SCEP/TSP ಕಾಯ್ದೆಯ ಅನುಗುಣವಾಗಿ ರಾಜ್ಯ ಬಜೆಟ್ಟಿನ ಶೇ. 24.10 ರಷ್ಟು  ಅನುದಾನವನ್ನು ಕಡ್ಡಾಯವಾಗಿ ಮೀಸಲಿಡಬೇಕು. ಈ ಅನುದಾನವನ್ನು ಸಂಪೂರ್ಣವಾಗಿ ‘ಏಕಗವಾಕ್ಷಿ ಯೋಜನೆ’ ಯಲ್ಲಿ ಅನುಷ್ಠಾನಗೊಳಿಸಬೇಕು. ದಲಿತರ ಅವಶ್ಯಕತೆಗೆ ತಕ್ಕಂತೆ ಯೋಜನೆ ರೂಪಿಸುವುದರ ಮೂಲಕ ಅನುದಾನ ದುರ್ಬಳಕೆಯನ್ನು ಕೂಡಲೇ ನಿಲ್ಲಿಸಬೇಕು. ಇತರೆ ವೆಚ್ಚಕ್ಕಾಗಿ ಹಣ ಬಳಸಲು ಅವಕಾಶವಿರುವ 7ಡಿ ಸೆಕ್ಷನ್’ ಅನ್ನು ಕಾಯ್ದೆಯಿಂದ ತೆಗೆದು ಹಾಕಬೇಕು. ಕೇಂದ್ರ ಸರ್ಕಾರವೂ ಸಹ ಇದೇ ಮಾದರಿಯ ಕಾಯಯನ್ನು ರೂಪಿಸಬೇಕು.

ಕೇವಲ ಆರ್ಥಿಕ ಮಾನದಂಡದಲ್ಲಿ ಎಸ್ಸಿ,ಎಸ್ಸಿ,ಒಬಿಸಿ ಯವರನ್ನು ಹೊರತುಪಡಿಸಿ ವಾರ್ಷಿಕ ಎಂಟು ಲಕ್ಷ ವರಮಾನವಿರುವ ಮೇಲ್ಮಾತಿಯವರಿಗೆ ನೀಡಿರುವ EWS ಮೀಸಲಾತಿಯನ್ನು ವಿರೋಧಿಸಬೇಕು. ಖಾಸಗಿಯಲ್ಲಿಯೂ ಸಾಮಾಜಿಕ ನ್ಯಾಯದ ಹಿನ್ನೆಲೆಯ ಮೀಸಲಾತಿಯನ್ನು ಜಾರಿಗೊಳಿಸಬೇಕು,

ರಾಜ್ಯ ಸರ್ಕಾರಗಳಲ್ಲಿ ಬಹುಕಾಲದಿಂದ ಖಾಲಿಯಾಗಿಯೇ ಉಳಿದಿರುವ ಲಕ್ಷಾಂತರ ಎಸ್ಸಿ,ಎಸ್ಟಿ ಬ್ಯಾಕ್ ಲಾಗ್ ಹುದ್ದೆಗಳನ್ನು ಈ ಕೂಡಲೇ ಭರ್ತಿ ಮಾಡಿಕೊಳ್ಳಬೇಕು, ಹೊರಗುತ್ತಿಗೆ ನೇಮಕಾತಿಯನ್ನು ರದ್ದುಗೊಳಿಸಬೇಕು, ಖಾಲಿ ಹುದ್ದೆಗಳನ್ನು ಕೂಡಲೇ ತುಂಬಬೇಕು.

ಪಿ.ಟಿ.ಸಿ.ಎಲ್ ಕಾಯ್ದೆ’ಯನ್ನು ಬಲಪಡಿಸಬೇಕು. ದಲಿತರ ಭೂಮಿಯು ದಲಿತರಲ್ಲಿಯೇ ಉಳಿಯುವಂತೆ ಮಾಡಬೇಕು. ಈ ಕಾಯ್ದೆಯ ಮೂಲ ಉದ್ದೇಶವಾದ ದಲಿತರು ಭೂಮಿ ಹೊಂದುವ ಗುರಿಯನ್ನು ಸಮರ್ಥವಾಗಿ ಅನುಷ್ಠಾನಕ್ಕೆ ತರಬೇಕು.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಗೋ ಹತ್ಯಾ ನಿಷೇಧ ಕಾಯ್ದೆ’ ಮತ್ತು ‘ಮತಾಂತರ ನಿಷೇಧ ಕಾಯ್ಕೆ’ಗಳನ್ನು ಈ ಕೂಡಲೇ ರದ್ದುಗೊಳಿಸಬೇಕು.

ಎಸ್ಸಿ,ಎಸ್ಟಿ, ಅಲೆಮಾರಿ, ಅರೆ-ಅಲೆಮಾರಿ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳ ಸಮಸ್ಯೆಗಳನ್ನು ಬಗೆಹರಿಸಲು ‘ಹಿಂದುಳಿದ ವರ್ಗಗಳ ಶಾಶ್ವತ ಆಯೋಗ’ದ ಮಾದರಿಯಲ್ಲಿ ಪ್ರತ್ಯೇಕ ಆಯೋಗವನ್ನು ರಚಿಸಿ ಕಾಲಕಾಲಕ್ಕೆ ಸಮೀಕ್ಷೆ ಮಾಡಿ ಸೌಲಭ್ಯ ಒದಗಿಸಬೇಕು. ಡಿ.ಎನ್.ಟಿ (ಡಿನೋಟಿಫೈಯ್ಡ್ ಟ್ರೆಬ್) ಸಮುದಾಯಗಳಿಗೆ ವಿಶೇಷ ಸೌಲಭ್ಯ ಒದಗಿಸಬೇಕು.

ಹಿಂದುಳಿದ ವರ್ಗಗಳಲ್ಲಿ ಇರುವಂತೆ ಪರಿಶಿಷ್ಟ ಜಾತಿ, ವರ್ಗಗಳಲ್ಲೂ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಜಾರಿಗೆ ತರಬೇಕು. ವೈಜ್ಞಾನಿಕ ಅಧ್ಯಯನದ ಅಂಕಿ ಅಂಶಗಳ ಆಧಾರದ ಮೇಲೆ, ಎಲ್ಲ ಸಮುದಾಯಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಳಮೀಸಲಾತಿ ಜಾರಿಗೊಳಿಸಲು ಒಕ್ಕೂಟ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು, ಮತ್ತು ಅದಕ್ಕಾಗಿ ಸಂವಿಧಾನ ತಿದ್ದುಪಡಿಗಾಗಿ ಒತ್ತಡ ಹೇರಬೇಕು.

ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ರೈತಾಪಿ ಜನರ ವಿರೋಧಿ ಭೂ ಸುಧಾರಣಾ ತಿದ್ದು ಪಡಿ ಕಾಯ್ದೆ, ಎ.ಪಿ.ಎಮ್.ಸಿ. ತಿದ್ದುಪಡಿ ಕಾಯ್ದೆ ಹಾಗೂ ವಿದ್ಯುತ್ ಖಾಸಗೀಕರಣ ಮಸೂದೆಯನ್ನು ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಈ ಕೂಡಲೇ ರದ್ದುಗೊಳಿಸಬೇಕು.

ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತಂದಿರುವ, ಅಸಮಾನತೆಯನ್ನು ಹಾಗೂ ಚಾತುರ್ವಣ ಪದ್ದತಿ ಯನ್ನು ಎತ್ತಿ ಹಿಡಿಯುವ ರಾಷ್ಟ್ರೀಯ ಶಿಕ್ಷಣ ನೀತಿ – 2020 ಅನ್ನು ಈ ಕೂಡಲೇ ರದ್ದುಗೊಳಿಸಬೇಕು.

ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ ದಲಿತ ಮಕ್ಕಳಿಗೆ ಸ್ಕಾಲರ್ಶಿಪ್ ಮೊತ್ತವನ್ನು ಹೆಚ್ಚಿಸಬೇಕು. ಎಸ್ಸಿ/ಎಸ್ಟಿ ಮೀಸಲಾತಿಗೆ ನಿಗದಿಪಡಿಸುರುವ ವಾರ್ಷಿಕ ಆದಾಯ ಮಿತಿಯನ್ನು ಹತ್ತು ಲಕ್ಷಕ್ಕ ಏರಿಸಬೇಕು.

ಅರ್ಚಕ ಮತ್ತು ಪೌರಕಾರ್ಮಿಕ ವೃತ್ತಿಯನ್ನು ಸಾರ್ವತ್ರಿಕಗೊಳಿಸಬೇಕು. ಈ ಎರಡೂ ವೃತ್ತಿಗಳಲ್ಲಿ ಮೀಸಲಾತಿ ನೀತಿಯನ್ನು ಅನುಷ್ಠಾನಕ್ಕೆ ತರಬೇಕು. ಮಲ ಹೊರುವ ಪದ್ಧತಿ ನಿಷೇಧಗೊಂಡಿದ್ದರೂ ಸಹ ನೂರಾರು ಸಾವುಗಳು ಇದರಿಂದ ಸಂಭವಿಸಿ, ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿದೆ. ಮಲ ಹೊರುವ ಪದ್ಧತಿ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು.

ದಲಿತರು, ಮಹಿಳೆಯರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆದಿರುವ ದೌರ್ಜನ್ಯಗಳನ್ನು ಕೂಡಲೇ ನಿಲ್ಲಿಸಬೇಕು. ಹಾಗೂ ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಕನ್ನಡ ನಾಡಿನ ಬಹುತ್ವವನ್ನು ಹಾಳುಗೆಡುವುತ್ತಿರುವ ಕೋಮುವಾದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ಭಾರತವು ವೈವಿದ್ಯಮಯವಾದ ಸೌಹಾರ್ದಯುತ ಮತ್ತು ಬಹು ಸಂಸ್ಕೃತಿಯ ನೆಲೆ ವೀಡು. ಇಂತಹ ದೇಶದ ಮೇಲೆ ತಾರತಮ್ಯ ಭರಿತ ವೈದಿಕಶಾಹಿಯು ಏಕ ಸಂಸ್ಕೃತಿಯನ್ನು ಹೇರುತ್ತಾ ದಬ್ಬಾಳಿಕೆ ನೀತಿಯನ್ನು ಅನುಸರಿಸುತ್ತಿದೆ. ಇಂತಹ ದೇಶದ್ರೋಹಿ ಬೆಳವಣಿಗೆಯನ್ನು ದಲಿತ ಸಂಘರ್ಷ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ವೈವಿಧ್ಯಮಯ, ಸೌಹಾರ್ದಯುತ, ಸಾಮರಸ್ಯ ಮತ್ತು ಬಹುತ್ವದ ಸಾಂಸ್ಕೃತಿಕ ಅಸ್ಮಿತೆಯ ಬದುಕನ್ನು, ಉಳಿಸಿಕೊಳ್ಳುವ ಸಲುವಾಗಿ ಭಾರತದ ಸಂವಿಧಾನ ಎತ್ತಿಹಿಡಿದಿರುವ ಮೂಲಭೂತ ಹಕ್ಕುಗಳನ್ನು ಸಮಸ್ತ ಭಾರತೀಯರೂ ಅನುಭವಿಸುವಂತಹ ವಾತಾವರಣವನ್ನು ನಿರ್ಮಾಣ ಮಾಡಬೇಕು.

ಗೋಷ್ಠಿಯಲ್ಲಿ ದಲಿತ ಮುಖಂಡರಾದ ಗುರುಪ್ರಸಾದ್ ಕೆರಗೋಡು, ಮಾವಳ್ಳಿ ಶಂಕರ್, ಜೀವನಹಳ್ಳಿ ವೆಂಕಟೇಶ್, ಪ್ರಸನ್ನ ತೂಬಿನಕೆರೆ, ಎನ್.ವೆಂಕಟೇಶ್ ಎನ್.ಮುನಿಸ್ವಾಮಿ, ವಿ.ನಾಗರಾಜು, ರಮಾನಂದ ಹಾಗೂ ಅಂಕಯ್ಯ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!