ನಾಗಮಂಗಲ ತಾಲ್ಲೂಕಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಯುವ ಜನತೆಗೆ ಉದ್ಯೋಗ ನೀಡುತ್ತೇವೆ.ದಯಮಾಡಿ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಿ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಮನವಿ ಮಾಡಿದರು.
ನಾಗಮಂಗಲ ಪಟ್ಟಣದ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರ ಆಶಯದಂತೆ ನಮ್ಮ ನಡೆ ಪ್ರಗತಿಯ ಕಡೆ ಎಂಬಂತೆ ನವ ನಾಗಮಂಗಲ ನಿರ್ಮಾಣದತ್ತ ದಿಟ್ಟ ಹೆಜ್ಜೆ ಇಟ್ಟಿದ್ದೇವೆ.
ಭಾರತೀಯ ಜನತಾ ಪಕ್ಷದ ನಮ್ಮ ನೆಚ್ಚಿನ ನಾಯಕ ನರೇಂದ್ರ ಮೋದಿಜಿ ಅವರ ನಾಯಕತ್ವದಲ್ಲಿ ಮುನ್ನಡೆಯುತ್ತಾ ಬಂದಿದೆ. ಮೂವತ್ತು ವರ್ಷಗಳ ಸಂಘಟನೆಯಲ್ಲಿ ದುಡಿಯುವ ಮೂಲಕ 11ವರ್ಷ ಗಳ ಕಾಲ ಮುಖ್ಯಮಂತ್ರಿಯಾಗಿ 9ವರ್ಷ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿ ಸರಳವಾಗಿ ಜೀವನ ರೂಪಿಸಿ ಕೊಂಡು ಸಮಾಜದ ಅಭಿವೃದ್ಧಿಗೆ ದುಡಿದವರು ಮೋದಿಜಿ. ಗುಜರಾತ್ ರಾಜ್ಯದಲ್ಲಿ ಕುಡಿಯುವ ನೀರಿನ ಯೋಜನೆ,ವ್ಯವಸಾಯಕ್ಕೆ ಪೂರಕ ಸೌಲಭ್ಯ ಕಲ್ಪಿಸಿಕೊಟ್ಟ ಮಹಾನ್ ವ್ಯಕ್ತಿ ಮನೆ ಮನೆ ಬಾಗಿಲಿಗೆ ನೀರನ್ನ ಕಲ್ಪಿಸಿಕೊಡುವ ಉದ್ದೇಶದಲ್ಲಿ ಭಾರತೀಯ ಜನತಾ ಪಕ್ಷ ಶ್ರಮಿಸುತ್ತಿದೆ. ನದಿ ಮೂಲದ ನೀರನ್ನು ಜನರಿಗೆ ತಂದುಕೊಟ್ಟ ಜಲ ಭಗೀರಥ ಮೋದಿಜಿ ಎಂದರು.
ಕರ್ನಾಟಕಕ್ಕೆ ಕುಡಿಯುವ ನೀರಿನ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿದ್ದೇವೆ.ಜಲಜೀವನ್ ಯೋಜನೆಯಡಿಯಲ್ಲಿ ಪ್ರತಿ ಗ್ರಾಮಗಳಿಗೂ ಕುಡಿಯುವ ನೀರಿನ ಅವಕಾಶ ಕಲ್ಪಿಸಿದ್ದೇವೆ. ಸ್ವಚ್ಛ ಭಾರತ್ ಯೋಜನೆ ಗ್ರಾಮೀಣ ಮಟ್ಟದಲ್ಲಿ ಅನುಷ್ಠಾನಕ್ಕೆ ತಂದು, ಮಹಿಳಾ ಸ್ವ ಸಹಾಯ ಸಂಘಗಳ ನೆರವಿನಿಂದ ಕಸ ವಿಲೇವಾರಿ ಮಾಡುವ ಮೂಲಕ ಮಹಿಳೆಯರಿಗೆ ಉದ್ಯೋಗ ಅವಕಾಶ ಕಲ್ಪಿಸಿದ್ದೇವೆ. ಪ್ರತಿಯೊಂದು ಮನೆಗಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಮಹಿಳಾ ಸಬಲೀಕರಣ ಮಾಡುವ ಉದ್ದೇಶದಿಂದ ಸಂಜೀವಿನಿ ಯೋಜನೆ ಜಾರಿಗೆ ತಂದು 44 ಸಾವಿರ ಕೋಟಿ ಹಣ ಬಿಡುಗಡೆ ಮಾಡಿದ್ದೇವೆ.50ಕೋಟಿ ಬ್ಯಾಂಕ್ ಅಕೌಂಟ್ ತೆರೆದು ಸರ್ಕಾರದ ಯೋಜನೆಯ ಹಣ ನೇರವಾಗಿ ಜನರ ಖಾತೆಗೆ ಜಮಾ ಮಾಡುವಂಥ ಗಣಕೀಕೃತ ಯೋಜನೆ ರೂಪಿಸಿದ್ದೇವೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ ನಾರಾಯಣ ಗೌಡ ಅವರನ್ನು ಕೆ.ಆರ್. ಪೇಟೆಯಲ್ಲಿ ಗೆಲ್ಲಿಸಿ ಜಯಭೇರಿ ಭಾರಿಸುವ ಮೂಲಕ ಬಿಜೆಪಿ ರಣ ಕಹಳೆ ಊದಿದೆ. ಮುಂದಿನ ದಿನಗಳಲ್ಲಿ ಮಂಡ್ಯ ಜಿಲ್ಲಾದ್ಯಂತ ಕಮಲ ಅರಳಿಸುವ ಗುರಿ ನಮ್ಮದು. ಜನರ ಅಭಿವೃದ್ಧಿಗಾಗಿ ನಾಗಮಂಗಲದಲ್ಲಿ ಕೈಗಾರಿಕೆಗಳನ್ನು ಅಭಿವೃದ್ಧಿ ಮಾಡಿ ನಾಗಮಂಗಲ ಜನತೆಗೆ ಕಲ್ಪಿಸಿಕೊಡುವ ಮೂಲಕ ಶಾಶ್ವತವಾಗಿ ಇಲ್ಲಿಯ ಜನ ಇಲ್ಲೇ ಬದುಕನ್ನು ಕಟ್ಟಿಕೊಳ್ಳುವ ಅವಕಾಶವನ್ನು ಭಾರತೀಯ ಜನತಾ ಪಕ್ಷ ಕಲ್ಪಿಸಿಕೊಡುತ್ತದೆ. ದಯವಿಟ್ಟು ಈ ಬಾರಿ ಬಿಜೆಪಿಗೆ ಮತ ನೀಡಿ ನಿಮ್ಮ ಸೇವೆ ಮಾಡಲು ನಮಗೊಂದು ಅವಕಾಶ ಮಾಡಿಕೊಡಿ ಎಂದ ಅವರು,ಫೈಟರ್ ರವಿ ಯವರು ಮಾತು ಕಡಿಮೆ ಕೆಲಸ ಹೆಚ್ಚು ಮಾಡುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು
ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕ್ ಮಾತನಾಡಿ, ಪ್ರತಿಯೊಂದು ಕ್ಷೇತ್ರಕ್ಕೆ ಮಹಿಳೆಯರ ಪಾತ್ರ ಎಷ್ಟಿದೆಯೋ, ಅದೇ ರೀತಿ ರಾಜಕೀಯ ಕ್ಷೇತ್ರದಲ್ಲೂ ಅವಕಾಶ ಇದೆ. ಇಲ್ಲಿ ಯಾವುದೇ ಕುಟುಂಬ ರಾಜಕೀಯ ವ್ಯವಸ್ಥೆ ಇಲ್ಲ, ಬದಲಾಗಿ ಎಲ್ಲ ವರ್ಗದ ಜನರಿಗೆ ಅವಕಾಶ ಕಲ್ಪಿಸುವ ಏಕೈಕ ಪಕ್ಷ ಬಿಜೆಪಿ. ಇಂದು ಕೇಂದ್ರ ಸಂಪುಟದಲ್ಲಿ 11ಮಂದಿ ಮಹಿಳಾ ಮಂತ್ರಿಗಳಾಗಿದ್ದಾರೆ, ಬುಡಕಟ್ಟು ಜನಾಂಗದ ಮಹಿಳೆ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಹುದ್ದೆ ಅಲಂಕರಿಸಿ ಆಡಳಿತ ನಡೆಸುತ್ತಿದ್ದಾರೆ. ಇಷ್ಟೆಲ್ಲ ಅವಕಾಶ ಕಲ್ಪಿಸಿರುವ ಏಕೈಕ ಪಕ್ಷ ಬಿಜೆಪಿ. ಟೀ ಮಾರುತ್ತಿದ್ದ ಸಾಮಾನ್ಯ ವ್ಯಕ್ತಿ ನರೇಂದ್ರ ಮೋದಿಜಿಯವರು ದೇಶದ ಪ್ರಧಾನ ಮಂತ್ರಿಯಾಗಿ ದೇಶದ ಅಭಿವೃದ್ಧಿಯ ಕನಸು ಕಂಡು ಹಲವಾರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಾರ್ವಜನಿಕ ಕಲ್ಯಾಣಕ್ಕಾಗಿ ಶ್ರಮಿಸಿದ ಮಹಾನ್ ನಾಯಕ ಎಂದರು.
ರಾಜ್ಯದ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ, ಸಮಾಜ ಸೇವಕ, ಬಿ ಜೆ ಪಿ ಮುಖಂಡ ಪೈಟರ್ ರವಿ, ಬಿಜೆಪಿ ಜಿಲ್ಲಾಧ್ಯಕ್ಷ ಉಮೇಶ್, ಯಶೋದ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಯಶೋಧ, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಅನುರಾಧ,ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಉಮಾದೇವಿ, ತಾಲೂಕು ಮಂಡಲ ಅಧ್ಯಕ್ಷ ಸೋಮಶೇಖರ್,ವಿಷ್ಣು ಮೂರ್ತಿ ಭಟ್, ದಾಸಪ್ಪ ಇತರರು ಪಾಲ್ಗೊಂಡಿದ್ದರು.




