-
ಮುಖ್ಯಮಂತ್ರಿ ಹುದ್ದೆ 2500 ಕೋಟಿ ರೂ. ಗೆ ಮಾರಾಟದ ಆರೋಪ
- ಭ್ರಷ್ಟಾಚಾರದ ಬಗ್ಗೆ ತುಟಿಬಿಚ್ಚದ ಪ್ರಧಾನಿ ನರೇಂದ್ರ ಮೋದಿ
ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಹುದ್ದೆ ಸೇರಿದಂತೆ ಎಲ್ಲವೂ ಮಾರಾಟಕ್ಕಿಟ್ಟಿದ್ದು, ಇಂತಹ ಜನ ವಿರೋಧಿ ಸರ್ಕಾರವನ್ನು ಕಿತ್ತುಹಾಕಿ, ಜನಪರ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣಜಿತ್ ಸಿಂಗ್ ಸುರ್ಜೆವಾಲ ತಿಳಿಸಿದರು.
ಮಂಡ್ಯ ನಗರದ ಕರ್ನಾಟಕ ಸಂಘದ ಆವರಣದಲ್ಲಿರುವ ಕೆ.ವಿ.ಶಂಕರಗೌಡ ಸಭಾಂಗಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ಮನೆ ಮನೆಗೆ ಭರವಸೆ ಬಾಂಡ್ ಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಸರ್ಕಾರದಲ್ಲಿ ವರ್ಗಾವಣೆ, ನೇಮಕಾತಿ ದಂಧೆ ನಡೆಯುತ್ತಿದೆ. ಮುಖ್ಯಮಂತ್ರಿ ಹುದ್ದೆಗೆ 2500 ಕೋಟಿ ನೀಡಬೇಕೆಂದು ಅವರ ಪಕ್ಷದ ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್ ಅವರೇ ತಿಳಿಸಿದ್ದಾರೆ. ಶಿಸ್ತಿನ ಪಕ್ಷ ಎಂದು ಹೇಳುವ ಬಿಜೆಪಿ ಇದುವರೆಗೂ ಯತ್ನಾಳ್ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ. ಪಿಎಸ್ಐ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದು ಪೋಲಿಸ್ ಇಲಾಖೆಯ ಡಿಜಿಪಿ ಒಬ್ಬರು ಜೈಲಿನಲ್ಲಿರುವುದು 75 ವರ್ಷಗಳ ಇತಿಹಾಸ ದಲ್ಲಿಯೇ ಪ್ರಥಮ. ಇದಕ್ಕಿಂತ ಅವಮಾನ ಬೇಕೆ? ಈ ಪ್ರಕ್ರಿಯೆ ನಡೆದಾಗ ಬಸವರಾಜ ಬೊಮ್ಮಾಯಿಯವರೇ ಗೃಹ ಸಚಿವರಾಗಿದ್ದರು. ಈಗ ಅವರೇ ಸಿಎಂ ಆಗಿದ್ದು ಇದರ ತನಿಖೆ ಏನಾಗುತ್ತದೆ ಎಂಬುದು ತಿಳಿಯಬೇಕಿದೆ. ವಿವಿ ಕುಲಪತಿ ಹುದ್ದೆ ಕೂಡ ಮಾರಾಟವಾಗಿದೆ ಎಂದು ದೂರಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಹಲವು ಮುಖಗಳನ್ನು ಹೊಂದಿದೆ. ಪಿಎಸ್ಐ, ಸಹಾಯಕ ಉಪನ್ಯಾಸಕ, ಜೆಇ, ಎಇ ಹಾಗೂ ಡಿಸಿಸಿ ಬ್ಯಾಂಕ್ ಹುದ್ದೆಗಳು ಮಾರಾಟದಲ್ಲಿದ್ದು, 40 ಪರ್ಸೆಂಟ್ ಕಮೀಷನ್ ಸರ್ಕಾರವೆಂದು ಪ್ರಧಾನಮಂತ್ರಿಗೆ ಗುತ್ತಿಗೆದಾರರು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಪತ್ರ ಬರೆದಿದೆ. ಇದರಿಂದ ರಾಜ್ಯಕ್ಕೆ ಅಪಖ್ಯಾತಿ ಬಂದಿದೆ ಎಂದು ಆರೋಪಿಸಿದರು.
ರಾಜ್ಯದ ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮೀಷನ್ ಸರ್ಕಾರವೆಂದು ರಾಜ್ಯ ಗುತ್ತಿಗೆದಾರರ ಸಂಘ ಹಾಗೂ ಖಾಸಗೀ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಪ್ರಧಾನ ಮಂತ್ರಿಗೆ ಪತ್ರ ಬರೆದಿದೆ. ಈ ನಡುವೆ ರಾಜ್ಯಕ್ಕೆ ಎಂಟು ಬಾರಿ ಭೇಟಿ ನೀಡಿರುವ ಪ್ರಧಾನಿಗಳು ಮೌನಕ್ಕೆ ಶರಣಾಗಿರುವುದು ದುರದೃಷ್ಠಕರ ಎಂದು ಟೀಕಿಸಿದರು.
ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂದು ಪೋಷಕರು ಬಸವಳಿಯುತ್ತಾರೆ. ಆದರೆ, ಪಿಎಸ್ಐ, ಉಪನ್ಯಾಸಕ ಹಾಗೂ ಇಂಜಿನಿಯರಿಂಗ್ ಹುದ್ದೆಗಳು ತಲಾ 50 ರಿಂದ 80 ಲಕ್ಷಕ್ಕೆ ಮಾರಾಟವಾದರೆ ಯುವಕರ ಉದ್ಯೋಗದ ಪಾಡೇನು ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಹುದ್ದೆ ಮಾರಾಟಕ್ಕಿದೆ
ಬಿಜೆಪಿಯ ಹಿರಿಯ ಮುಖಂಡ ಬಸವನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯದಲ್ಲಿ ಎರಡು ಸಾವಿರ ಕೋಟಿ ರೂ.ಗೆ ಮುಖ್ಯಮಂತ್ರಿ ಹುದ್ದೆ ಮಾರಾಟಕ್ಕಿದೆ ಹಾಗೂ ಕೈಗಾರಿಕಾ ಮಂತ್ರಿ ತಲೆ ಹಿಡುಕ ಎಂದು ಸಂಬೋಧಿಸುತ್ತಾರೆ. ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಒಬ್ಬ ರೌಡಿ ಎಂದು ಕರೆಯುತ್ತಾರೆ. ಶಿಸ್ತಿನ ಪಕ್ಷವಾಗಿರುವ ಬಿಜೆಪಿ ಅವರ ಪಕ್ಷದ ನಾಯಕರ ಮೇಲೆ ಕ್ರಮ ಕೈಗೊಳ್ಳಲಿ. ಇಲ್ಲದಿದ್ದರೆ ಆರೋಪಿಗಳು ಸತ್ಯ ಎಂದು ಒಪ್ಪಿಕೊಳ್ಳಲಿ ಎಂದು ಸವಾಲು ಹಾಕಿದರು.
ಉನ್ನತ ಶಿಕ್ಷಣ ಸಚಿವರ ಪ್ರಚೋಧನೆ ಹಿಂದೆ ನರೇಂದ್ರಮೋದಿ, ಜೆ.ಪಿ.ನಡ್ಡಾ ಹಾಗೂ ಬಸವರಾಜ ಬೊಮಾಯಿ ಬೆಂಬಲವಿದ್ದು, ಸ್ಥಳ ಹಾಗೂ ದಿನಾಂಕವನ್ನು ನಿಗಧಿಪಡಿಸಿದರೆ ಸಿದ್ಧರಾಮಯ್ಯ ಮತ್ತು ಶಿವಕುಮಾರ್ ಅವರನ್ನು ಕರೆತರುತ್ತೇವೆ. ಹತ್ಯೆ ಮಾಡಲು ಸಿದ್ಧರಿದ್ದೀರಾ ಎಂದು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಎಐಸಿಸಿ ವೀಕ್ಷಕ ರೋಜಿಜಾನ್, ಕಾಂಗ್ರೆಸ್ ನಾಯಕರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಶಾಸಕರಾದ ದಿನೇಶ್ ಗೂಳೀಗೌಡ, ಮಧು ಮಾದೇಗೌಡ, ಪಕ್ಷದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪ ಅಮರನಾಥ್, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮುಖಂಡರಾದ ದಡದಪುರ ಶಿವಣ್ಣ, ಕೆ.ಬಿ. ಚಂದ್ರಶೇಖರ್, ರಮೇಶ್ ಬಂಡಿಸಿದ್ದೇಗೌಡ, ಸಚಿನ್ ಮಿಗಾ, ಗುರುಚರಣ್, ರವಿ ಗಣಿಗ, ಡಾ.ಕೃಷ್ಣ ಸೇರಿದಂತೆ ಮತ್ತಿತರು ಹಾಜರಿದ್ದರು.




