Thursday, September 19, 2024

ಪ್ರಾಯೋಗಿಕ ಆವೃತ್ತಿ

”ಇನ್ಫೋಸಿಸ್‌ ಮಹಾನುಭಾವರು ಟ್ವೀಟ್‌ ಮಾಡುವಾಗ ಎಚ್ಚರವಹಿಸಲಿ”

✍️ ರಜನಿಕಾಂತ್‌, ಕೆ.ಆರ್‌.ಪೇಟೆ

“ನಾನೊಬ್ಬ ತೆರಿಗೆದಾರ. ನನ್ನ ತೆರಿಗೆಯ ಹಣ ಇರುವುದು ದೇಶದ ಅಭಿವೃದ್ದಿಗೆ ಹೊರತು ಬಿಟ್ಟಿಯಾಗಿ ಹಂಚಿವುದಕ್ಕಲ್ಲ.” ಇದನ್ನು ಇನ್ಫೋಸಿಸ್‌ ಮುಖ್ಯಸ್ಥರಲ್ಲಿ ಒಬ್ಬರಾದ ಮೋಹನದಾಸ ಪೈ ಟ್ಟೀಟ್‌ ಮಾಡುವುದರ ಜೊತೆಗೆ, ಈ ನನ್ನ ಹೇಳಿಕೆಯನ್ನು ಒಪ್ಪುವವರು ಇದನ್ನು ಸಮರ್ಥಿಸಿ ಎಂದು ಹೇಳಿದ್ದಾರೆ.

ಈ ಹೇಳಿಕೆಯು ನೇರವಾಗಿ ರಾಜ್ಯದ ಜನರಿಗೆ ಅಧಿಕಾರ ಹಿಡಿದಿರುವ ಕಾಂಗ್ರೆಸ್‌ ಜಾರಿ ಮಾಡಲು ಹೊರಟಿರುವ 5 ಜನಪರ ಗ್ಯಾರಂಟಿಗಳನ್ನು ಉದ್ದೇಶಿಸಿ ಮಾಡಲಾಗಿದೆ ಎಂಬುದು ಎಂತಹವರಿಗೂ ಗೊತ್ತಾಗುತ್ತದೆ.

ಆದರೆ ಇಲ್ಲಿ ಗಮನಿಸಬೇಕಾದದು, ಅವರ ಟ್ವೀಟ್‌ ಮಾತ್ರವಲ್ಲ, ಅವರ ಮನಸ್ತಿತಿಯನ್ನು. ಅವರ ಟ್ವೀಟ್‌ ಒಳಾರ್ಥವೇ ನಮ್ಮಂಥವರು ಮಾತ್ರವೇ ದೇಶಕ್ಕೆ ತೆರಿಗೆ ಕಟ್ಟುತ್ತಿದ್ದೇವೆ, ನಮ್ಮನ್ನು ಬಿಟ್ಟರೆ ಇನ್ಯಾರು ಇಲ್ಲ. ಹಾಗಾಗಿ ಆ ತೆರಿಗೆಯನ್ನು ಪುಕ್ಕಟ್ಟೆಯಾಗಿ, ಬಿಟ್ಟಿಯಾಗಿ ಹಂಚಲು ಅಲ್ಲ ಎಂದಿರುವುದು.

ಹಾಗದರೆ ಜನರಿಗೆ ಸರ್ಕಾರ ಯಾವುದೇ ಯೋಜನೆಯ ಮೂಲಕ ಉಚಿತವಾಗಿ ಕಲ್ಯಾಣ ಕಾರ್ಯಕ್ರಮಗಳನ್ನು ಮಾಡಿದರೆ ಅದು ದುರಂತವೇ ? ಜನರು ತೆರಿಗೆ ಕಟ್ಟದೆ ನಿಮ್ಮ ತೆರಿಗೆಯ ಹಂಗಿನಲ್ಲಿ ಮಾತ್ರ ಇದ್ದಾರೆಯೇ? ಎನ್ನುವ ಸಂಶಯಕ್ಕೆ ಇವರು ಮಾಡಿರುವ ಟ್ವೀಟ್‌ ದಾರಿ ಮಾಡಿಕೊಟ್ಟಿದೆ.

ಇವರ ಪ್ರಕಾರ ಅಭಿವೃದ್ದಿ ಅಂದರೆ ಐಷಾರಾಮಿ ಜೀವನಕ್ಕೆ ಹತ್ತಿರ ಇರುವ ಮೂಲಸೌಕರ್ಯ. ದೊಡ್ಡ ಮಾಲುಗಳು, ಪ್ಲೈಓವರ್‌ ಗಳು, ವಿಮಾನಯಾನ, ಖಾಸಗೀ ಕಂಪನಿಗಳ ಒಳಿತು, ನಗರವಾಸಿಗರು ಎಂಬಂತೆ, ಹಾಗೂ ಇವರಿಗೆ ಮಾತ್ರವೇ ತೆರಿಗೆಯನ್ನು ಖರ್ಚು ಮಾಡಬೇಕು ಎಂದು ಹೇಳಿದಂತೆ ಇದೆ. ಇಂತಹವರಿಗೆ ತಿಳಿ ಹೇಳುವುದನ್ನು ನಾಗರಿಕರಾದವರು ಮಾಡಬೇಕಲ್ಲವೇ ? ಹಾಗಾಗಿ ಈ ಕೆಳಗಿನ ಅಂಶಗಳನ್ನು ಅವರಿಗೆ ತಲುಪಿಸುವ ಒಂದು ಪ್ರಯತ್ನ ಮಾಡೋಣ.

1. ದೇಶಕ್ಕೆ ನವ ಉದಾರೀಕರಣದ ಭಾಗವಾಗಿ ಭೂಮಿಯನ್ನು ಕನಿಷ್ಠ ಬೆಲೆಗೆ ಲಪಟಾಯಿಸಿದ್ದು ಹಾಗೂ ಶೇ 100% ತೆರಿಗೆ ವಿನಾಯಿತಿಂದ ತಪ್ಪಿಸಿಕೊಂಡು ಸರ್ಕಾರದ ಬಿಟ್ಟಿ ಅವಶ್ಯಕತೆಗಳನ್ನು ನೀವು ಪಡೆಯಲಿಲ್ಲವೇ ?ಇದರಿಂದ ಇಂದು ಅತ್ಯಂತ ಆಗರ್ಭವಾಗಿ ಅದರ ಮೌಲ್ಯ ಹೆಚ್ಚಿಲ್ಲವೇ?

2.ಒಕ್ಕೂಟ ವ್ಯವಸ್ಥೆಯ ಎಲ್ಲಾ ರಾಜ್ಯಗಳ ಜನಗಳು ಕಟ್ಟುವ ಪರೋಕ್ಷ ತೆರಿಗೆಯೇ 65% ಗಿಂತ ಹೆಚ್ಚು. ಅಂದರೆ ನಿಮ್ಮಂತರಿಗಿಂತ ಹೆಚ್ಚು. ಮಧ್ಯಮ ವರ್ಗದ ಉದ್ಯಮಿಗಳು ಕಟ್ಟುವ ತೆರಿಗೆ  25%. ನಿಮ್ಮಂತಹವರು ಕಟ್ಟುತ್ತಿರುವ ತೆರಿಗೆ ಕೇವಲ 10% ಮಾತ್ರ ಎಂಬುದು ನಿಮಗೆ ಗೊತ್ತಿದೆ ಅಲ್ಲವೇ ? ಈಗ ಹೇಳಿ ನೀವು ನಮ್ಮದು ತೆರಿಗೆ ಹೆಚ್ಚೇ ಅಥವಾ ಜನರದೇ ?

3.ಕೂಲಿ ಕಾರ್ಮಿಕರನ್ನೂ ಲೆಕ್ಕಿಸದೇ, ಪರೋಕ್ಷ ತೆರಿಗೆಯನ್ನು ಲೆಕ್ಕಿಸದೇ ಕೇಂದ್ರ ಸರ್ಕಾರವು ಸುಮಾರು 81% ಬಡ ಜನರ ಬಳಿ ಜಿಎಸ್‌’ಟಿಯನ್ನು ವಸೂಲಿ ಮಾಡಿ ನಿಮ್ಮಂಥವರ ಸಾಲ ಮನ್ನಾ ಮಾಡಿದೆಯಲ್ಲವೇ ? ಮತ್ತು ನೀವು ಕಟ್ಟುತ್ತಿರುವ ಜಿಎಸ್‌’ಟಿ ಕೇವಲ 3% ಅನ್ನುವುದು ನಿಮಗೆ ಗೊತ್ತು ತಾನೇ ? ಇಲ್ಲಿ ಬಿಟ್ಟಿ ಕುಳಗಳು ಯಾರು ?

4.ಕಾನೂನಾತ್ಮಕವಾಗಿ ತಮ್ಮದೇ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಕೆಲಸಗಾರರಿಗೆ ನ್ಯಾಯಯುತವಾದ ಸಂಬಳವನ್ನು ಕೊಡುತ್ತಿರುವಿರಾ ? ಹೆಚ್ಚುವರಿ ಉಳಿತಾಯ ನಿಮಗೆ ಬಿಟ್ಟಿಯಾಗಿಲ್ಲವೇ ?

5.ಅತ್ಯಧಿಕ ತೆರಿಗೆ ಕಟ್ಟುತ್ತಿರುವ ಜನಸಾಮಾನ್ಯರ ಹಣವನ್ನು ನೀವು ಓಡಾಟ ಮಾಡುವ ವಿಮಾನದಲ್ಲೆಲ್ಲಾ ಖರ್ಚು ಮಾಡಲಾಗಿದೆ. ಅಲ್ಲೆಲ್ಲಿಯೂ ಇವರು ಓಡಾಡುವುದಿಲ್ಲ. ಅವರು ಶಕ್ತರೂ ಅಲ್ಲ. ಇಲ್ಲಿ ನಿಮ್ಮ ಅನುಭವಿಸುವಿಕೆ ಇಲ್ಲವೇ ? ಜನರ ಅವಶ್ಯಕತೆಗಳಿಗೆ ನಿಮ್ಮ ತೆರಿಗೆಯ ಪಾಲೆಷ್ಟು ಹೇಳಿ ನೋಡೋಣ.

6. ನಿಮ್ಮ 10% ತೆರಿಗೆ ಹಣದಲ್ಲಿ ಈ ನಾಗರೀಕ ಸಮಾಜಕ್ಕೆ ಯಾವ ಪ್ರಮಾಣದಲ್ಲಿ ಅಭಿವೃದ್ದಿ ಮಾಡಲಾಗಿದೆ ಎಂಬುದಕ್ಕೆ ಲೆಕ್ಕಾಚಾರ ಇದ್ದರೆ ಹೇಳಿ ?

ಈ ಮೇಲಿನ ಯಾವುದನ್ನು ಮಾಡದ ಮೋಹನದಾಸ ಪೈ, ಕರ್ನಾಟಕದ ಜನರನ್ನು ಒಂದು ರೀತಿಯಲ್ಲಿ ಭಿಕ್ಷುಕರ ರೀತಿ ಯೋಚಿಸುವಂತೆ ಮಾತನಾಡುವುದು ಅಪರಾಧ. ಯಾವುದೇ ಸರ್ಕಾರ ಉಚಿತವಾಗಿ ಏನನ್ನಾದರು ಕೊಟ್ಟರೆ ಅದು ಬಿಟ್ಟಿ ಅಲ್ಲ. ಬದಲಿಗೆ ಅದು ಜನರ ಸಾಂವಿದಾನಿಕ ಹಕ್ಕು ಎಂಬುದನ್ನು ಗೊತ್ತು ಮಾಡಿಸಬೇಕಾಗಿದೆ. ಈ ಕೆಲಸವನ್ನು ಯಾವುದೇ ಸರ್ಕಾರಗಳು ಮಾಡಿದರೆ ಅದನ್ನು ಬಿಟ್ಟಿ ಎಂದು ಬೊಬ್ಬೆ ಹಾಕುವ ಅಥವಾ ಜನರನ್ನು ತಾತ್ಸಾರ ಮನೋಭಾವದಿಂದ ಅಲ್ಲಗಳೆಯುವ ಯೋಚನೆಯನ್ನೂ ಮಾಡುವುದು ಎಷ್ಟು ಸರಿ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!