Thursday, September 19, 2024

ಪ್ರಾಯೋಗಿಕ ಆವೃತ್ತಿ

SSLC, PUC ಪರೀಕ್ಷಾ ಪದ್ದತಿ ಬದಲು, ಇನ್ಮುಂದೆ ವ‍ರ್ಷಕ್ಕೆ ಮೂರು ಬಾರಿ ಪರೀಕ್ಷೆ!

ಮಹತ್ವದ ಬೆಳವಣಿಗೆಯೊಂದರಲ್ಲಿ ಕರ್ನಾಟಕ ಶಿಕ್ಷಣ ಮಂಡಳಿಯು ಎಸ್‌ಎಸ್‌ಎಲ್‌ಸಿ (10 ನೇ ತರಗತಿ) ಮತ್ತು ಪಿಯುಸಿ (12 ನೇ ತರಗತಿ) ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗಳನ್ನು ರದ್ದು ಮಾಡಲು ಸಿದ್ದತೆ ನಡೆಸುತ್ತಿದೆ. ಇದರ ಬೆನ್ನಲ್ಲೇ  ಎಸ್​ಎಸ್​ಎಲ್​ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಇನ್ಮುಂದೆ ವರ್ಷಕ್ಕೆ ಮೂರು ಪರೀಕ್ಷೆಗಳನ್ನು ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಪೂರಕ ಪರೀಕ್ಷೆಗಳ ಬದಲಾಗಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಬೋರ್ಡ್ ಪರೀಕ್ಷೆಗಳಿಗೆ ಪರೀಕ್ಷೆ 1, ಪರೀಕ್ಷೆ 2 ಮತ್ತು ಪರೀಕ್ಷೆ 3 ಎಂಬ ಮೂರು ವಾರ್ಷಿಕ ಪರೀಕ್ಷೆಗಳನ್ನು ಪರಿಚಯಿಸಲಿದೆ. 2023-24ನೇ ಶೈಕ್ಷಣಿಕ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯು ವಿದ್ಯಾರ್ಥಿಗಳು ವರ್ಷಕ್ಕೆ 3 ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು, ಫೇಲ್​​​ ಅಥವಾ ಕಡಿಮೆ ಅಂಕ ಬಂದವರು 3 ಬಾರಿ ಪರೀಕ್ಷೆ ಬರೆಯಬಹುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಈಗಿನ ಪ್ರಸ್ತುತ ಪರೀಕ್ಷಾ ಪದ್ಧತಿಯಲ್ಲಿ ಒಂದು ವಾರ್ಷಿಕ ಪರೀಕ್ಷೆ ಮತ್ತು ಒಂದು ಪೂರಕ ಪರೀಕ್ಷೆಯನ್ನು ನಡೆಸಲಾಗುತ್ತಿತ್ತು. ಇದು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಒತ್ತಡ ಮತ್ತು ಆತಂಕವನ್ನು ಸೃಷ್ಟಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳ ಅರ್ಥಪೂರ್ಣ ಕಲಿಕೆ ಮತ್ತು ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಈಗಿನ ವ್ಯವಸ್ಥೆಯನ್ನು ಬದಲಾಯಿಸಲಾಗುತ್ತಿದೆ ಎನ್ನಲಾಗಿದೆ.

ಪರಿಚಯಿಸಲಾಗುವ ಹೊಸ ಪದ್ಧತಿ ಮೂಲಕ ವಿದ್ಯಾರ್ಥಿಗಳಿಗೆ ಮೊದಲ ಪರೀಕ್ಷೆಯಲ್ಲಿ ತೆಗೆದ ಅಂಕಗಳಿಗಿಂತ ಹೆಚ್ಚು ಅಂಕಗಳನ್ನು ಕ್ರಮವಾಗಿ ಮೊದಲ, ಎರಡನೆಯ, ಮೂರನೆಯ ಪರೀಕ್ಷೆಗಳಲ್ಲಿ ತೆಗೆಯುವ  ಮೂಲಕ ಅಂಕಗಳನ್ನು ಸುಧಾರಿಸಲು  ಸಹಕಾರಿಯಾಗಲಿದೆ.

ವಿದ್ಯಾರ್ಥಿಗಳ ಕಲಿಕೆಯ ವೇಗ ಮತ್ತು ಶೈಲಿಯು ವಿಭಿನ್ನವಾಗಿದೆ. 1, 2 ಮತ್ತು 3 ಪರೀಕ್ಷೆಗಳನ್ನು ನಡೆಸುವುದರಿಂದ ಅವರ ಕಲಿಕೆಯ ವೇಗಕ್ಕೆ ಹೊಂದಿಕೊಳ್ಳಲು ಮತ್ತು ಸಮಯದ ಮಿತಿಯಿಂದ ಉಂಟಾಗುವ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬುದರ ಬಗ್ಗೆ ಗಮನಹರಿಸಲಾಗಿದೆ.

ಇದಲ್ಲದೆ ಪೂರಕ ಪರೀಕ್ಷೆಗಳನ್ನು ‘ಪರೀಕ್ಷೆ 1, 2 ಅಥವಾ 3’ ಎಂದು ಮರುನಾಮಕರಣ ಮಾಡುವ ಮೂಲಕ, ವಿದ್ಯಾರ್ಥಿಗಳಿಗೆ ಕಾರ್ಯಕ್ಷಮತೆ ಮತ್ತು ಸಕಾರಾತ್ಮಕ ಮನೋಭಾವವನ್ನು ಉತ್ತೇಜಿಸುವ ಅವಕಾಶಗಳನ್ನು ಒದಗಿಸಬಹುದು ಎಂದು ತಜ್ಞರು ಹೇಳುತ್ತಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!