Friday, September 20, 2024

ಪ್ರಾಯೋಗಿಕ ಆವೃತ್ತಿ

ಅಧಿಕಾರಕ್ಕಾಗಿ ಮಳೆಪೀಡಿತರ ನೆರವಿಗೆ ಅಡ್ಡಗಾಲು ಹಾಕುತ್ತಿದೆಯೇ ಬಿಜೆಪಿ!?

ಮಾಚಯ್ಯ ಎಂ ಹಿಪ್ಪರಗಿ

ಕರ್ನಾಟಕದ ಜನ ಮಳೆಯ ಆರ್ಭಟಕ್ಕೆ ತತ್ತರಿಸಿಹೋಗಿದ್ದಾರೆ. ನದಿಗಳ ರೌದ್ರಾವತಾರಕ್ಕೆ ಮನೆ, ಮಠ, ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಜನ-ಜಾನುವಾರುಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ದೈತ್ಯ ಗುಡ್ಡಗಳೇ ಕುಸಿದುಬೀಳುತ್ತಿವೆ. ಬದುಕು ಮೂರಾ ಬಟ್ಟೆಯಾಗಿದೆ. ಇಂಥಾ ಸಮಯದಲ್ಲಿ ಜನಕ್ಕೆ ಆಸರೆಯಾಗಬೇಕಿದ್ದ ಶಕ್ತಿಸೌಧದಲ್ಲಿ ರಾಜಕೀಯ ಮೇಲಾಟಗಳ ಗದ್ದಲ ಬಿಟ್ಟರೆ, ಜನರ ಬಗ್ಗೆ ಕಾಳಜಿ ತೋರುವಂತಹ ಒಂದೇಒಂದು ಚರ್ಚೆ ನಡೆಯುತ್ತಿಲ್ಲ. ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ ರಾಜಕೀಯ ಲಾಭಕ್ಕೋಸ್ಕರ ವಾಲ್ಮೀಕಿ ಹಗರಣವನ್ನು ಮುಂದಿಟ್ಟುಕೊಂಡು ಕಲಾಪಗಳೇ ನಡೆಯದಂತೆ ಗದ್ದಲವೆಬ್ಬಿಸಲು ತೋರುತ್ತಿರುವ ಉತ್ಸಾಹದಲ್ಲಿ ಒಂದೇಒಂದು ಅಂಶ, ಮಳೆಯಿಂದ ಹಾನಿಗೊಳಗಾದ ಜನರ ಕುರಿತು ತೋರುತ್ತಿಲ್ಲ. ಇತ್ತ, ವಿರೋಧ ಪಕ್ಷಗಳ ಈ ರಾಜಕೀಯ ಆರೋಪಗಳಿಗೆ ಪ್ರತ್ಯುತ್ತರ ಕೊಡುವತ್ತಲೇ ಆಡಳಿತ ಪಕ್ಷ ತನ್ನ ಬಹುಪಾಲು ಗಮನವನ್ನು ಕೇಂದ್ರೀಕರಿಸಿಕೊಂಡಿದೆ. ಇದು ನಿಜಕ್ಕೂ ವಿಷಾದಕರ.

ಒಂದು ಕಡೆ ಜನ, ಬದುಕು ಕಳೆದುಕೊಂಡು ಬೀದಿಗೆ ಬಂದಿದ್ದರೆ, ಮತ್ತೊಂದೆಡೆ ಅಧಿಕಾರ ಕೇಂದ್ರಿತ ರಾಜಕಾರಣವೇ ವಿಧಾನಸೌಧದ ತುಂಬಾ ವಿಜೃಂಭಿಸುತ್ತಿದೆ. ಇಂಥಾ ಸಂದರ್ಭದಲ್ಲಿ ಬೇರೆಲ್ಲ ವಿಚಾರಗಳನ್ನು ಬದಿಗಿರಿಸಿ, ಜನರ ಕಷ್ಟಗಳಿಗೆ ಸ್ಪಂದಿಸಬೇಕಾದ್ದು ಸರ್ಕಾರದ ಕರ್ತವ್ಯವಾಗಿರುತ್ತದೆ. ಆದರೆ ಆ ಕರ್ತವ್ಯವನ್ನು ನಿಭಾಯಿಸಲು ವಿರೋಧ ಪಕ್ಷಗಳಿಗೂ ಒಂದಷ್ಟು ಹೊಣೆಗಾರಿಕೆಗಳಿರುತ್ತವೆ. ಸರ್ಕಾರಕ್ಕೆ ಆಡಳಿತವನ್ನು ನಡೆಸಲು ಅವಕಾಶವನ್ನೇ ಕೊಡದಂತೆ, ಸದನದ ಒಳಗೆ ಮತ್ತು ಹೊರಗೆ ಪ್ರತಿಭಟನೆ ರೂಪದ ಗದ್ದಲಮಯ ವಾತಾವರಣ ಸೃಷ್ಟಿಸುತ್ತಿರುವ ಬಿಜೆಪಿ ಒಂದು ಜವಾಬ್ಧಾರಿಯುತ ವಿರೋಧ ಪಕ್ಷವಾಗಿ ತನ್ನ ಹೊಣೆಯನ್ನು ನಿಭಾಯಿಸುತ್ತಿಲ್ಲ. ಆಬ್ವಿಯಸ್ಲಿ, ಇಂಥಾ ಸಂದರ್ಭದಲ್ಲಿ ಆಡಳಿತ ಪಕ್ಷವನ್ನು ಬಿಟ್ಟು ವಿರೋಧ ಪಕ್ಷವನ್ನು ಪ್ರಶ್ನಿಸುವುದು ಅಸಂಬದ್ಧ ಅಂತ ಕೆಲವರಿಗೆ ತೋರಬಹುದು. ಆದರೆ, ರಾಜ್ಯದ ಮಟ್ಟಿಗೆ ವಿರೋಧ ಪಕ್ಷವಾಗಿರುವ ಬಿಜೆಪಿಯೇ, ಕೇಂದ್ರದಲ್ಲಿ ಆಡಳಿತ ಪಕ್ಷವಾಗಿ ಅಧಿಕಾರ ನಡೆಸುತ್ತಿದೆ ಮತ್ತು ಆ ಅಧಿಕಾರವನ್ನು ಬಳಸಿಕೊಂಡು ಬೇರೆ ಪಕ್ಷಗಳ ಆಡಳಿತವಿರುವ ರಾಜ್ಯ ಸರ್ಕಾರಗಳನ್ನು ಹೇಗೆಲ್ಲ ಅಸ್ಥಿರಗೊಳಿಸಲು ಯತ್ನಿಸುತ್ತಿದೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ಇಂಥಾ ಅತಿವೃಷ್ಟಿಯ ಸಂದರ್ಭದಲ್ಲಿ ಅದು ರಾಜ್ಯ ಸರ್ಕಾರಕ್ಕೆ ಸಹಕಾರ ಕೊಡದೆ, ಅಡ್ಡಗಾಲು ಹಾಕಿ ಕೂತಿರುವ ರಾಜಕೀಯ ಮೇಲಾಟದ ಗಂಭೀರತೆ ಅರ್ಥವಾಗುತ್ತದೆ.

ಇಲ್ಲಿ ಚರ್ಚೆಯಾಗ್ತಿರುವ ವಾಲ್ಮೀಕಿ ನಿಗಮದ ಹಗರಣವನ್ನು ಬಿಜೆಪಿ ಹೋರಾಟವಾಗಿ ಕೈಗೆತ್ತಿಕೊಂಡಿರುವ ಬಗ್ಗೆ ಯಾರಿಗೂ ತಕರಾರುಗಳಿಲ್ಲ. ವಿರೋಧ ಪಕ್ಷವಾಗಿ ಅದು ಬಿಜೆಪಿಯ ಹೊಣೆಯೂ ಹೌದು. ಆದರೆ ಈ ಹಗರಣವನ್ನು ಅದು ಕೈಗೆತ್ತಿಕೊಂಡಿರುವ ತೀವ್ರತೆಯನ್ನು ನೋಡಿದಾಗ, ಅದಕ್ಕೆ ಜನರ ಕಾಳಜಿಗಿಂತಲೂ ಹೆಚ್ಚಾಗಿ, ಜನಾಭಿಪ್ರಾಯದ ಮೇಲೆ ರಚನೆಯಾಗಿರುವ ಸರ್ಕಾರವನ್ನು ಅಸ್ಥಿರಗೊಳಿಸಿ, ಆಪರೇಷನ್ ಕಮಲದಂತಹ ವಾಮ ಮಾರ್ಗದ ಮೂಲಕ ಅಧಿಕಾರಕ್ಕೇರುವ ರಾಜಕೀಯ ತುಡಿತವೇ ಹೆಚ್ಚಾಗಿದೆಯಾ? ಎಂಬ ಅನುಮಾನ ಕಾಡದಿರದು. ಹೀಗೆ ಅನುಮಾನಿಸಲು ಕಾರಣವೂ ಇದೆ. ಏನಂದ್ರೆ, ರಾಜ್ಯ ಸರ್ಕಾರವಾಗಲಿ ಅಥವಾ ಸಿಎಂ ಸಿದ್ದರಾಮಯ್ಯನವರಾಗಲಿ ಈ ಹಗರಣವನ್ನು ತಳ್ಳಿ ಹಾಕುತ್ತಿಲ್ಲ ಅಥವಾ ತಪ್ಪಿತಸ್ಥರನ್ನು ರಕ್ಷಿಸುವ ಯತ್ನಗಳನ್ನೂ ಮಾಡುತ್ತಿಲ್ಲ. ಈಗಾಗಲೇ ಎಸ್‌ಐಟಿ ತನಿಖೆಗೆ ಒಪ್ಪಿಸಲಾಗಿದೆ. ಆರೋಪಿಗಳನ್ನು ಬಂಧಿಸಿ, ಅವರಿಂದ ಲೂಟಿಯಾದ ಹಣವನ್ನು ವಸೂಲಿ ಮಾಡಿ ಸರ್ಕಾರದ ಬೊಕ್ಕಸಕ್ಕೂ ಮರಳಿಸಲಾಗುತ್ತಿದೆ. ಅಲ್ಲದೇ ಆರೋಪ ಕೇಳಿಬಂದ ಸಚಿವರಿಂದಲೂ ರಾಜೀನಾಮೆ ಪಡೆಯಲಾಗಿದೆ. ನಿಗಮದ ಅಧಿಕಾರಿಗಳು ಮತ್ತು ಬ್ಯಾಂಕ್‌ ಸಿಬ್ಬಂದಿಗಳ ವ್ಯವಸ್ಥಿತ ಜಾಲ ಇದರಲ್ಲಿ ಭಾಗಿಯಾಗಿರುವ ಬಗ್ಗೆ ಸಿದ್ದರಾಮಯ್ಯನವರು ಸದನದಲ್ಲೂ ದಾಖಲೆ ಸಮೇತ ಉತ್ತರಕೊಟ್ಟಿದ್ದಾರೆ. ಅಷ್ಟೇ ಯಾಕೆ, ಕೇಂದ್ರ ಸರ್ಕಾರದ ಸುಪರ್ದಿಯಲ್ಲಿರುವ ಇ ಡಿ ಕೂಡಾ ಸ್ವಯಂ ಪ್ರೇರಿತವಾಗಿ ತನಿಖೆ ನಡೆಸುತ್ತಿದೆ. ಒಂದುವೇಳೆ, ಬಿಜೆಪಿ ಆರೋಪಿಸುವಂತೆ ರಾಜ್ಯ ಸರ್ಕಾರ ಈ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದರೂ, ಅವರದೇ ಅಧೀನದಲ್ಲಿರುವ ಇ ಡಿ ಯಂತೂ ಪ್ರಕರಣವನ್ನು ಬಯಲಿಗೆಳೆಯುತ್ತದೆ ಎಂದಿಟ್ಟುಕೊಳ್ಳೋಣ.

ಇಷ್ಟೆಲ್ಲ ವ್ಯವಸ್ಥಿತ ತನಿಖೆ ನಡೆಯುತ್ತಿದ್ದಾಗಲೂ, ಅದನ್ನೇ ನೆಪ ಮಾಡಿಕೊಂಡು ಸದನಗಳನ್ನು ಗದ್ದಲದ ಗೂಡಾಗಿಸುತ್ತಿರುವ ಬಿಜೆಪಿ ಆ ಮೂಲಕ, ಮಳೆಯಿಂದ ಸಂತ್ರಸ್ತರಾದ ಜನರ ನೆರವಿಗೆ ಧಾವಿಸುವ ಸರ್ಕಾರಕ್ಕೂ ಪರೋಕ್ಷವಾಗಿ ಅಡ್ಡಗಾಲು ಹಾಕುತ್ತಿದೆ. ಬಿಜೆಪಿ ನಾಯಕರು ಪದೇಪದೇ ಹೇಳ್ತಿರುವ “ಈ ಸರ್ಕಾರ ಆದಷ್ಟು ಬೇಗ ಪತನವಾಗಲಿದೆ” ಎನ್ನುವ ಮಾತುಗಳನ್ನು ಕನ್ಸಿಡರ್ ಮಾಡೋದಾದ್ರೆ, ಈ ಹಗರಣವನ್ನು ನೆಪ ಮಾಡಿಕೊಂಡು ಬಿಜೆಪಿ ಸಾಧಿಸಲು ಹೊರಟಿರುವ ಉದ್ದೇಶ ಏನು ಅನ್ನೋದು ಅರ್ಥವಾಗುತ್ತೆ. ಹೀಗೆ ಬಿಜೆಪಿಗೆ ಅಧಿಕಾರ ಕೇಂದ್ರಿತ ರಾಜಕಾರಣವೇ ಮುಖ್ಯವಾಗಿರೋದ್ರಿಂದ ಮಳೆಯಲ್ಲಿ ಬದುಕು ಕಳೆದುಕೊಂಡ ಜನರ ಕುರಿತ ಚರ್ಚೆಯೇ ಅದಕ್ಕೆ ಬೇಕಾಗಿಲ್ಲ. ವಿರೋಧ ಪಕ್ಷವಾದ ಬಿಜೆಪಿ, ಕೇಂದ್ರದಲ್ಲಿರುವ ತನಗಿರುವ ಪವರ್ ಬಳಸಿಕೊಂಡು, ಸರ್ಕಾರವನ್ನೇ ಅಸ್ಥಿರಗೊಳಿಸಲು ಯತ್ನಿಸಲು ಮುಂದಾದರೆ, ಸರ್ಕಾರವಾದರೂ ಇಂತಹ ಸಂದರ್ಭದಲ್ಲಿ ಸುಸೂತ್ರವಾಗಿ ನಡೆಯಲು ಹೇಗೆ ಸಾಧ್ಯ?

ಕೇವಲ ಇವತ್ತು ಬಿಜೆಪಿ ವರ್ತಿಸುತ್ತಿರೋ ನಿದರ್ಶನವಿಟ್ಟುಕೊಂಡು ಅದರ ಮೇಲೆ ಈ ಆರೋಪ ಮಾಡ್ತಾ ಇರೋದಲ್ಲ. ಅಧಿಕಾರ ಮತ್ತು ಜನರ ಕಾಳಜಿಯ ವಿಚಾರ ಬಂದಾಗ ಬಿಜೆಪಿ ಯಾವತ್ತೂ ಅಧಿಕಾರವನ್ನೇ ತನ್ನ ಆಯ್ಕೆಯಾಗಿ ಸೆಲೆಕ್ಟ್ ಮಾಡಿಕೊಳ್ಳುತ್ತೆ ಅನ್ನೋದಕ್ಕೆ ಸಾಕಷ್ಟು ಉದಾಹರಣೆಗಳಿವೆ. 2019ರ ಉದಾಹರಣೆಯನ್ನೇ ತೆಗೆದುಕೊಳ್ಳೋದಾದ್ರೆ, ಅವಾಗಲು ಸಹಾ ಇಂತದ್ದೇ ಅತಿವೃಷ್ಟಿಯ ಪ್ರವಾಹ ಪರಿಸ್ಥಿತಿ ಕರ್ನಾಟಕದಲ್ಲಿ ನಿರ್ಮಾಣವಾಗಿತ್ತು. ಉತ್ತರ ಕರ್ನಾಟಕ ಸಂಪೂರ್ಣ ಜಲಾವೃತವಾಗಿ, ಅಪಾರ ಸಾವುನೋವುಗಳು ಸಂಭವಿಸಿದ್ದವು. ಅಂತಹ ಸಮಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಿ, ಜನರ ನೆರವಿಗೆ ಸರ್ಕಾರವೇ ಇರದಂತಹ ನಿರ್ವಾತವನ್ನು ಸೃಷ್ಟಿಸಿದ್ದು ಇದೇ ಬಿಜೆಪಿ. ಜನ, ನೆರೆ ಹಾವಳಿಯಿಂದ ತತ್ತರಿಸಿದ್ದರೆ, ಅವರ ಕಷ್ಟ ಸುಖಗಳನ್ನು ಕೇಳಬೇಕಾಗಿದ್ದ ಶಾಸಕರನ್ನು ಮುಂಬೈನ ರೆಸಾರ್ಟುಗಳಲ್ಲಿ ಇಟ್ಟು ಅಧಿಕಾರಕ್ಕಾಗಿ ಬಿಜೆಪಿ ಕಸರತ್ತು ನಡೆಸುತ್ತಿತ್ತು. ತಾನೇ ಸರ್ಕಾರ ರಚಿಸಿದರೂ, ಯಡಿಯೂರಪ್ಪನವರು ಸಿಎಂ ಆಗಿದ್ದು ಬಿಟ್ಟರೆ, ಸಚಿವ ಸಂಪುಟವನ್ನೇ ಬಿಜೆಪಿ ರಚನೆ ಮಾಡಲಿಲ್ಲ. ಬಿಜೆಪಿ ಹೈಕಮಾಂಡ್ ಸುಮಾರು 40 ದಿನಗಳ ಕಾಲ ಸಚಿವ ಸಂಪುಟ ರಚಿಸಲು ಅವಕಾಶವನ್ನೇ ನೀಡಲಿಲ್ಲ. ಜನ ಪ್ರವಾಹದಲ್ಲಿ ಹಾಹಾಕಾರ ಹಾಕುತ್ತಿದ್ದರೆ, ಸಿಂಗಲ್ ವ್ಯಕ್ತಿಯ ಸರ್ಕಾರ ಯಾವ ನೆರವಿಗೂ ಧಾವಿಸದೆ ಸಂಪುಟ ರಚನೆಯ ಸರ್ಕಸ್ಸಿನಲ್ಲಿ ನಿರತವಾಗಿತ್ತು. ನಿಜ ಹೇಳ್ಬೇಕು ಅಂದ್ರೆ, ಅವತ್ತು ಪ್ರಧಾನಿಯಾಗಿದ್ದ ಮೋದಿಯವರು ಕರ್ನಾಟಕದ ಪ್ರವಾಹ ಪರಿಸ್ಥಿತಿಯನ್ನು ನೋಡುವುದಕ್ಕೂ ಇತ್ತ ತಲೆಹಾಕಲಿಲ್ಲ.

ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ತಮ್ಮದೇ ಬಿಜೆಪಿಯ ಮುಖ್ಯಮಂತ್ರಿ ಪದೇಪದೇ ಮನವಿ ಮಾಡಿಕೊಂಡಾಗಲೂ ಮೋದಿಯವರ ಸರ್ಕಾರ ಕ್ಯಾರೇ ಅನ್ನಲಿಲ್ಲ. ಯಡಿಯೂರಪ್ಪನವರ ಭೇಟಿಗೂ ಅವಕಾಶ ನೀಡಲಿಲ್ಲ. ಕೊನೆಗೆ ಬೇಸತ್ತ ಅವರು, ಜನವರಿ 2, 2020ರಂದು ಕಿಸ್ಸಾನ್ ಸಮ್ಮಾನ್ ಕಾರ್ಯಕ್ರಮಕ್ಕಾಗಿ ಮೋದಿ ತುಮಕೂರಿಗೆ ಬಂದಿದ್ದಾಗ ಸಾರ್ವಜನಿಕ ವೇದಿಕೆಯಲ್ಲೆ ಯಡಿಯೂರಪ್ಪನವರು ತಮ್ಮ ಭಾಷಣದಲ್ಲಿ “ಕೈ ಮುಗಿದು ಬೇಡಿಕೊಳ್ತೀನಿ ಪರಿಹಾರ ನೀಡಿ” ಎಂದು ಬೇಡಿಕೊಳ್ಳಬೇಕಾಯ್ತು. ಕೇವಲ ನೆರೆ ಪರಿಹಾರ ಮಾತ್ರವಲ್ಲ, ಬರ ಪರಿಹಾರ ನೀಡುವಲ್ಲೂ ಕೇಂದ್ರ ಬಿಜೆಪಿ ಸರ್ಕಾರ ಎಂಥಾ ಮಲತಾಯಿ ಧೋರಣೆ ಅನುಸರಿಸಿತು ಅನ್ನೋದನ್ನು ನಾವು ಕಂಡಿದ್ದೇವೆ. ಅಷ್ಟೇ ಏಕೆ, 2022ರ ಸೆಪ್ಟಂಬರ್‍‌ ನಲ್ಲಿ ಬೆಂಗಳೂರು ಸಿಟಿ ಮಹಾಮಳೆಗೆ ನಲುಗಿ, ಹಲವು ಬಡಾವಣೆಗಳು ಜಲಾವೃತಗೊಂಡ ಪರಿಸ್ಥಿತಿ ನಿರ್ಮಾಣವಾಗಿದ್ದಾಗ ಬಿಜೆಪಿ ಸಚಿವರುಗಳು ಜನಸ್ಪಂದನ ಹೆಸರಿನಲ್ಲಿ ದೊಡ್ಡಬಳ್ಳಾಪುರದ ವೇದಿಕೆಯಲ್ಲಿ ಕುಣಿದು ಕುಪ್ಪಳಿಸಿದ್ದನ್ನು ಜನ ಇನ್ನೂ ಮರೆತಿಲ್ಲ.

ವಿರೋಧ ಪಕ್ಷಗಳು ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವುದು ಅಥವಾ ಅದರ ವೈಫಲ್ಯವನ್ನು ಎತ್ತಿ ತೋರಿಸುವಂತಹ ಕೆಲಸಗಳನ್ನು ಮಾಡಲೇಬೇಕು. ಅದಕ್ಕೋಸ್ಕರವೇ ವಿರೋಧ ಪಕ್ಷಗಳನ್ನು ಪ್ರಜಾಪ್ರಭುತ್ವದ ಕಾವಲುನಾಯಿ ಎಂದೂ ಕರೆಯಲಾಗುತ್ತೆ. ಆದರೆ ಅಂತಹ ಹೊಣೆಗಾರಿಕೆ ನಿಭಾಯಿಸುವಾಗ ವಿರೋಧ ಪಕ್ಷಗಳಿಗೂ ಆಡಳಿತ ಪಕ್ಷದಷ್ಟೇ ಜನಕಾಳಜಿ ಮುಖ್ಯವಾಗಬೇಕಾಗುತ್ತದೆ. ಸಂದರ್ಭದ ಗಾಂಭೀರ್ಯತೆಯನ್ನು ಅರಿತು, ಜನರ ಆಶೋತ್ತರಗಳನ್ನು ಆದ್ಯತೆಯಾಗಿಸಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ, 2019ರ ಫೆಬ್ರವರಿ ತಿಂಗಳಿನಲ್ಲಿ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಮ್ಮ ಯೋಧರು ಸಾಗುತ್ತಿದ್ದ ವಾಹನದ ಮೇಲೆ 200 ಕೆಜಿಯಷ್ಟು ಸ್ಫೋಟಕದ ಮೂಲಕ ದಾಳಿ ಮಾಡಲಾಯ್ತು. ಅದರಲ್ಲಿ ನಮ್ಮ ಸುಮಾರು 40 ಸೈನಿಕರು ಹುತಾತ್ಮರಾದರು. ಅದು ದೇಶದ ಭದ್ರತೆ ಮತ್ತು ಐಕ್ಯತೆಯ ಮೇಲೆ ನಡೆದಿದ್ದ ದಾಳಿ. ಅಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವೈಫಲ್ಯವನ್ನು ಮುಗಿಬಿದ್ದು ತರಾಟೆಗೆ ತೆಗೆದುಕೊಳ್ಳುವ ಎಲ್ಲಾ ಅವಕಾಶಗಳು ರಾಷ್ಟ್ರೀಯ ವಿರೋಧ ಪಕ್ಷಗಳ ಮುಂದಿತ್ತು. ಆದರೆ ಆಗ ಜವಾಬ್ಧಾರಿಯುತ ವಿರೋಧ ಪಕ್ಷದ ಪ್ರತಿನಿಧಿಯಾಗಿ ವರ್ತಿಸಿದ ರಾಹುಲ್ ಗಾಂಧಿಯವರು, “ಇದು ದೇಶದ ಆತ್ಮದ ಮೇಲೆ ನಡೆದ ದಾಳಿ. ಈ ಹಂತದಲ್ಲಿ ನಾವು ರಾಜಕಾರಣ ಮಾಡುವುದಿಲ್ಲ. ನಮ್ಮ ಸೈನಿಕರ ಮತ್ತು ಸರ್ಕಾರದ ಪರವಾಗಿ ನಿಲ್ಲುತ್ತೇವೆ” ಎಂದು ಕೇಂದ್ರ ಸರ್ಕಾರದ ಜೊತೆಗೆ ನಿಂತರು. ಹುತಾತ್ಮ ಸೈನಿಕರ ಕಟುಂಬಗಳಿಗೆ ಸಾಂತ್ವನ ಹೇಳಲು ನೆರವಾದರು. ಇನ್‌ಫ್ಯಾಕ್ಟ್, ರಾಹುಲ್ ಗಾಂಧಿ ಈ ಮಾತು ಹೇಳುವಾಗ, ಕೇಂದ್ರ ಬಿಜೆಪಿ ಸರ್ಕಾರದ ಮೇಲೆ ರಫೇಲ್ ಹಗರಣದ ಆರೋಪಗಳು ಕೇಳಿಬಂದಿದ್ದವು. ಅದನ್ನೇ ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಬಿಜೆಪಿ ಸಕರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದವು. ಆದರೂ ಪುಲ್ವಾಮಾ ಘಟನೆಯ ಗಂಭೀರತೆ ಮರೆತು ಸರ್ಕಾರದ ಬೆನ್ನಿಗೆ ನಿಲ್ಲುವ ನಿರ್ಧಾರ ಕೈಗೊಂಡಿದ್ದವು. ವಿರೋಧ ಪಕ್ಷಗಳು, ಸರ್ಕಾರವನ್ನು ವಿಮರ್ಶಿಸುವುದರ ಜೊತೆಗೆ ಇಂತಹ ಹೊಣೆಗಾರಿಕೆಯನ್ನೂ ಪ್ರದರ್ಶಿಸಬೇಕಾಗುತ್ತದೆ. ಆದರೆ ಇವತ್ತು ಬಿಜೆಪಿ ವರ್ತಿಸುತ್ತಿರುವ ರೀತಿ ನೋಡಿದಾಗ, ವಿರೋಧ ಪಕ್ಷವಾಗಿ ಅದಕ್ಕೆ ತನ್ನ ಹೊಣೆಯೇ ಅರ್ಥವಾದಂತೆ ಕಾಣುತ್ತಿಲ್ಲ.

ಒಟ್ಟಿನಲ್ಲಿ ಬಿಜೆಪಿಗೆ, ಜನರ ಸಂಕಷ್ಟಗಳಿಗಿಂತ ಅಧಿಕಾರ ದಕ್ಕಿಸಿಕೊಳ್ಳುವುದೇ ಮುಖ್ಯ ಅನ್ನೋದು ಮಾತ್ರ ಮತ್ತೆಮತ್ತೆ ಸಾಬೀತಾಗುತ್ತಿದೆ. ಅದೇ ಕಾರಣಕ್ಕೆ, ಈಗಲೂ ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗದ ಜನ ಅತಿವೃಷ್ಟಿಯಿಂದ ಬದುಕು ಕಳೆದುಕೊಂಡು ಬೀದಿಗೆ ಬಂದಾಗಲೂ, ಅದರ ಬಗ್ಗೆ ಚರ್ಚಿಸದೆ, ಆ ಕುರಿತು ಸರ್ಕಾರ ಕಾರ್ಯಪ್ರವೃತ್ತಗೊಳ್ಳುವುದಕ್ಕೂ ಆಸ್ಪದ ಕೊಡದೆ ಸರ್ಕಾರವನ್ನು ಅಸ್ಥಿರಗೊಳಿಸುವ ತನ್ನ ಹಳೆಯ ಛಾಳಿಯನ್ನೇ ಮತ್ತೆ ಮುಂದುವರೆಸಿದೆ. ಹಾಗಂತ ರಾಜ್ಯ ಸರ್ಕಾರಕ್ಕೆ ತನ್ನ ಹೊಣೆಗಾರಿಕೆಯಿಂದ ವಿನಾಯಿತಿ ನೀಡಲಾಗದು. ಬಿಜೆಪಿಯ ಜನವಿರೋಧಿ ರಾಜಕೀಯ ಮೇಲಾಟಗಳಿಗೆ ಮಣೆ ಹಾಕದೆ, ಸಿದ್ದರಾಮಯ್ಯನವರ ಸರ್ಕಾರ ಆದಷ್ಟು ಬೇಗ ಸಂತ್ರಸ್ತ ಜನರ ನೆರವಿಗೆ ಧಾವಿಸಲಿ. ತನ್ನ ಹೊಣೆಯನ್ನು ನಿಭಾಯಿಸಲಿ ಎಂದಷ್ಟೇ ಆಶಿಸಬಹುದು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!