Thursday, September 19, 2024

ಪ್ರಾಯೋಗಿಕ ಆವೃತ್ತಿ

ಒಕ್ಕಲಿಗರ ಮಾನ, ಸ್ವಾಭಿಮಾನಕ್ಕೆ ದುಬಾರಿಯಾಗುತ್ತಿದೆಯೇ ದೇವೇಗೌಡರ ಕುಟುಂಬ?

ಮಾಚಯ್ಯ ಎಂ ಹಿಪ್ಪರಗಿ

ದೇವೇಗೌಡರದ್ದು ಜಾತಿ ರಾಜಕಾರಣ. ಈ ಮಿಥ್ ನಿಂದ ಹೊರಬಂದು, ಅವರದು ಕುಟುಂಬ ರಾಜಕಾರಣ ಅಂತ ಅರ್ಥ ಮಾಡಿಕೊಳ್ಳಲು ಸ್ವತಃ ಒಕ್ಕಲಿಗರಿಗೇ ಸಾಕಷ್ಟು ಕಾಲ ಬೇಕಾಯ್ತು. ಅಷ್ಟರಲ್ಲಾಗಲೇ ದೇವೇಗೌಡರು ತುಳಿದುಹಾಕಿದ ಒಕ್ಕಲಿಗರ ನಾಯಕರ ಪಟ್ಟಿ ವಿಪರೀತ ಉದ್ದವಾಗಿತ್ತು. ತಮ್ಮ ಮಕ್ಕಳು, ಮೊಮ್ಮಕ್ಕಳ ಭವಿಷ್ಯಕ್ಕೆ ಅಡ್ಡಿಯಾಗಬಲ್ಲ ನಾಯಕರನ್ನು ತುಳಿದುಹಾಕುವಲ್ಲಿ ಮಾತ್ರ ದೇವೇಗೌಡರದ್ದು ನಿಜವಾದ ಜಾತ್ಯತೀತವಾದ. ಎಲ್ಲಾ ಜಾತಿಯ ನಾಯಕರನ್ನು ಸವರಿಹಾಕಿ, ತಮ್ಮ ಕುಟುಂಬಕ್ಕೆ ದಾರಿ ಕ್ಲಿಯರ್ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಆದರೆ ಆ ಪಟ್ಟಿಯಲ್ಲಿ ಒಕ್ಕಲಿಗ ನಾಯಕರೇ ಹೆಚ್ಚಿರುವುದು ವಿಪರ್ಯಾಸ. ಇನ್ ಫ್ಯಾಕ್ಟ್ ಅದು ಸಹಜವೂ ಹೌದು. ಒಕ್ಕಲಿಗ ಜಾತಿ ಐಡೆಂಟಿಟಿಯ ಮೇಲೆ ತಮ್ಮ ರಾಜಕಾರಣವನ್ನು ಕಟ್ಟಿಕೊಂಡ ಅವರ ಫ್ಯಾಮಿಲಿ, ಆ ಐಡೆಂಟಿಟಿಯನ್ನು ದೀರ್ಘ ಕಾಲ ಜತನ ಮಾಡಿಕೊಳ್ಳಬೇಕೆಂದರೆ ಮತ್ತ್ಯಾರೂ ಒಕ್ಕಲಿಗರು ಆ ಐಡೆಂಟಿಟಿಯನ್ನು ಕ್ಲೇಮ್ ಮಾಡಿಕೊಳ್ಳದಂತೆ ನೋಡಿಕೊಳ್ಳಬೇಕಿತ್ತು.

ಹಳೆಯ ಉದಾಹರಣೆಗಳು ಸಾಕಷ್ಟಿವೆ, ಅದನ್ನೆಲ್ಲ ಬಿಟ್ಟು ತೀರಾ ಇತ್ತೀಚಿನ ಸಮಕಾಲೀನ ನಿದರ್ಶನವನ್ನೆ ಪರಿಗಣಿಸೋದಾದ್ರೆ, ಸತತ ಸೋಲಿನಿಂದ ಕಂಗೆಟ್ಟಿರುವ ನಿಖಿಲ್ ಕುಮಾರಸ್ವಾಮಿಯನ್ನು ಚನ್ನಪಟ್ಟಣದಲ್ಲಿ ಕಸಿ ಮಾಡುವ ಸಲುವಾಗಿ ದೇವೇಗೌಡರ ಕುಟುಂಬ ಬಲಿಹಾಕಲು ಹೊರಟಿರೋದು ಅದೇ ಒಕ್ಕಲಿಗ ಸಮುದಾಯದ ಸಿ ಪಿ ಯೋಗೇಶ್ವರ್ ಅವರನ್ನು. 2024ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ದೇವೇಗೌಡರ ಮಗ ಕುಮಾರಸ್ವಾಮಿ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಅಳಿಯ ಮಂಜುನಾಥ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಇದೇ ಸಿ ಪಿ ಯೋಗೇಶ್ವರ್. ಈಗ ಆತನ ರಾಜಕೀಯ ಅಸ್ತಿತ್ವವನ್ನೆ ಅಳಿಸಿಹಾಕಲು ದೇವೇಗೌಡರ ಕುಟುಂಬ ಬೆವರು ಹರಿಸುತ್ತಿದೆ.

ನಿಜ ಹೇಳಬೇಕು ಅಂದ್ರೆ, ಈಗ ಹೇಳಹೊರಟಿರುವ ವಿಚಾರ, ದೇವೇಗೌಡರ ಕುಟುಂಬದ ರಾಜಕೀಯ ಚರಿತ್ರೆಯ ಬಗ್ಗೆ ಅಲ್ಲ. ದೇವೇಗೌಡರು ಬೀಸಿದ ಜಾತಿಯ ಬಲೆಗೆ ಸಿಲುಕಿ, ತಮಗೆ ಅರಿವಿಲ್ಲದೆಯೇ ತಮಗಿರುವ ಚಾರಿತ್ರಿಕ ಶ್ರೀಮಂತಿಕೆಯನ್ನು ಸಂಕಷ್ಟಕ್ಕೆ ಸಿಲುಕಿಸಿಕೊಳ್ಳುತ್ತಿರುವ ಒಕ್ಕಲಿಗ ಸಮುದಾಯದ ಸಂದಿಗ್ಧತೆಯ ಬಗ್ಗೆ. ಸೋಷಿಯಲ್ ಸೈಕಾಲಜಿ ಆಯಾಮದಿಂದ ನೋಡಿದಾಗ, ಒಕ್ಕಲಿಗ ಸಮುದಾಯವನ್ನು ಬಹಳಷ್ಟು ಜನ ಫ್ಯೂಡಲ್ ಮತ್ತು ಶೋಷಿತ ಸಮುದಾಯಗಳ ಮೇಲೆ ದಬ್ಬಾಳಿಕೆ ನಡೆಸುವ ಜಾತಿ ದುರಭಿಮಾನ ಸಮುದಾಯವಾಗಿ ವರ್ಗೀಕರಿಸುತ್ತಾರೆ. ಮೇಲ್ನೋಟಕ್ಕೆ ಅದು ನಿಜದಂತೆಯೂ ಕಾಣಬಹುದು. ಆದರೆ, ಈ ಅಭಿಪ್ರಾಯವನ್ನು ಕೇವಲ ಒಕ್ಕಲಿಗ ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸಿ ನಾವು ಅಂತಿಮ ತೀರ್ಮಾನಕ್ಕೆ ಬರುವುದಾದರೆ, ಅದು ಸಂಕುಚಿತ ಅಭಿಪ್ರಾಯ ಅನಿಸಿಕೊಳ್ಳುತ್ತದೆ.

ಯಾಕೆಂದರೆ ನಮ್ಮ ದೇಶದ ಶ್ರೇಣೀಕೃತ ಜಾತಿವ್ಯವಸ್ಥೆಯ ಸಂರಚನೆ, ಅದರ ಉದ್ದೇಶ ಮತ್ತು ಅದರ ವ್ಯವಸ್ಥಿತ ಕಾರ್ಯವೈಖರಿಯನ್ನೂ ನಾವಿಲ್ಲಿ ನಿರ್ಲಕ್ಷಿಸಿ ಅಭಿಪ್ರಾಯಕ್ಕೆ ಬರಲಾಗದು. ಜಾತಿ ವ್ಯವಸ್ಥೆ ಎನ್ನುವುದು ಸೋಷಿಯಲ್ ಇಂಜಿನಿಯರಿಂಗ್ ರೂಪದಲ್ಲಿ ಕಾಣುವ ಒಂದು ಎಕಾನಮಿಕಲ್ ಕಾನ್ಸ್ಪಿರೈಸಿ. ಮೂಲತಃ ಆಸ್ತಿ ಒಡೆತನವನ್ನು ನಿಯಂತ್ರಿಸುವ ಹುನ್ನಾರ. ಆ ಮೂಲಕ ಸಮುದಾಯಗಳ ನಡುವೆ ಸ್ವಾವಲಂಬನೆ, ಸ್ವಾಭಿಮಾನ, ಕೀಳರಿಮೆ ಮತ್ತು ಮುಖ್ಯವಾಗಿ ದಬ್ಬಾಳಿಕೆಯ ಹಂಚಿಕೆಯಲ್ಲಿ ಅಂತರವನ್ನು ಸೃಷ್ಟಿಸುವ ಮತ್ತು ಅಂತಹ ಸೃಷ್ಟಿಯನ್ನು ಸಹಜೀಕರಿಸುವ ವ್ಯವಸ್ಥೆ. ಈ ವ್ಯವಸ್ಥೆಯನ್ನು ಎಷ್ಟು ಸಂಕೀರ್ಣವಾಗಿ ಮತ್ತು ಆಳವಾಗಿ ಬೆಸೆಯಲಾಗಿದೆಯೆಂದರೆ, ಮೇಲಿನವರಿಂದ ಶೋಷಿಸಲ್ಪಡುವ ಸಮುದಾಯ, ತನ್ನ ಕೆಳಗಿನವರ ಮೇಲೆ ತಾನೇ ಶೋಷಕನಾಗುವ ಅವಕಾಶ ಸಿಕ್ಕಾಗ ಯಾವ ಮುಲಾಜೂ ಇಲ್ಲದೆ ಬದಲಾಗುತ್ತದೆ. ಅಟ್ರಾಸಿಟಿ ಕೇಸುಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದಾಗ ನಮಗಿದು ಅರ್ಥವಾಗುತ್ತದೆ.

ಆ ನಿಟ್ಟಿನಿಂದ ಭೂ ಒಡೆತನ ಮತ್ತು ಸಾಮಾಜಿಕ ಸಾಂದ್ರೀಕೃತೆಯ ಅನುಕೂಲ ಪಡೆದ ಎಲ್ಲಾ ಸಮುದಾಯಗಳು, ತಮಗಿಂತ ಕೆಳ ವರ್ಗಗಳ ಪಾಲಿಗೆ ಶೋಷಕರಾಗಿರುತ್ತಾರೆ. ಮತ್ತು ಆ ಮೂಲಕ ತಮಗಿಂತ ಮೇಲಿನವರಿಂದ ತಮ್ಮ ಮೇಲಾಗುತ್ತಿರುವ ಶೋಷಣೆಗೆ ಅವರನ್ನು ಸಮ್ಮತಿಪೂರ್ಣವಾಗಿ ಅಣಿಗೊಳಿಸಲಾಗುತ್ತದೆ. ಇದನ್ನು ನಾವು ಒಕ್ಕಲಿಗ ಸಮುದಾಯದಲ್ಲೂ ಕಾಣಬಹುದು, ಬಸವಣ್ಣನವರ ಆಶಯಗಳನ್ನು ಮರೆತ ಇಂದಿನ ಲಿಂಗಾಯತರಲ್ಲೂ ಕಾಣಬಹುದು, ಉತ್ತರ ಭಾರತದ ಪ್ರಬಲ ಯಾದವ ಸಮುದಾಯದಲ್ಲೂ ನೋಡಬಹುದು.

ಇದನ್ನು ಹೊರಗಿಟ್ಟು ನೋಡುವುದಾದರೆ, ಕರ್ನಾಟಕ ಕೇಂದ್ರಿತ ನೆಲ, ಜಲ, ಭಾಷಾಭಿಮಾನದ ಹೋರಾಟದಲ್ಲಿ ಒಕ್ಕಲಿಗರ ಕೊಡುಗೆ ಮತ್ತು ಪಾತ್ರವನ್ನು ನಿರ್ಲಕ್ಷಿಸಲಾಗುವುದಿಲ್ಲ. ಹಾಗಾಗಿಯೇ ಒಕ್ಕಲಿಗರನ್ನು ನಮ್ಮ ಸಮಾಜ ಸ್ವಾಭಿಮಾನಿ ಸಮುದಾಯವಾಗಿ ಕಾಣುತ್ತದೆ. ಇನ್ನು ಕೆಲವರಿಗೆ ಅದು ಅತಿ ಸ್ವಾಭಿಮಾನ ಅನ್ನಿಸಬಹುದು, ಮತ್ತೆ ಕೆಲವರಿಗೆ ದುರಭಿಮಾನ ಅಂತಲೂ ಕಾಣಿಸಬಹುದು. ಅವರವರ ದೃಷ್ಟಿಯಂತೆ ನೋಟವೂ ಬೇರೆ. ಆದರೆ ತಮ್ಮ ಘನತೆ, ಮಾನಾಭಿಮಾನದ ವಿಚಾರಕ್ಕೆ ಬಂದಾಗ ಒಕ್ಕಲಿಗರು ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಾ ಬಂದಿದ್ದೇನೆ ನಾವು ಕಂಡಿದ್ದೇವೆ.

ಆದರೆ ಈಗ ಏನಾಗುತ್ತಿದೆ? ಬೆಂಕಿಯಂತೆ ಪ್ರತಿಕ್ರಿಯಿಸಬೇಕಿದ್ದ ವಿದ್ಯಮಾನಗಳಿಗೂ ಆ ಸಮುದಾಯ ಶೀತ ಹೆಪ್ಪುಗಟ್ಟಿದಂತೆ ತಣ್ಣಗಿರುವುದು ವಿಚಿತ್ರವಾಗಿ ಕಾಣಿಸುತ್ತಿದೆ. ಒಬ್ಬ ಶಾಸಕ, `ಒಕ್ಕಲಿಗನ ಹೆಂಡತಿಯನ್ನು ತನ್ನ ಜೊತೆ ಮಲಗಲು ಕಳಿಸಲು’ ಕೇಳಿದಾಗ, ಆ ಸಮುದಾಯ ವಹಿಸಿರುವ ವಿಲಕ್ಷಣ ಮೌನವಿದೆಯಲ್ಲ, ಅದು ನಿಜಕ್ಕೂ ಸಹಜವಾದುದಲ್ಲ. ಒಕ್ಕಲಿಗ ಸಮುದಾಯದ ಸಂಘಟನೆಗಳಾಗಲಿ, ರಾಜಕೀಯ ನಾಯಕರಾಗಲಿ, ಕೊನೇಪಕ್ಷ ಆ ಸಮುದಾಯದ ಸ್ವಾಮೀಜಿಗಳು ಕೂಡಾ ತುಟಿಬಿಚ್ಚದೆ ತಣ್ಣಗಿದ್ದಾರೆ. ಯಾಕೆ ಹೀಗೆ?

ದೇವೇಗೌಡರ ಕುಟುಂಬದ ರಾಜಕೀಯ ಚಕ್ರವ್ಯೂಹಕ್ಕೆ ಸಿಲುಕಿರುವ ಆ ಸಮುದಾಯದ ಸಂದಿಗ್ಧತೆ ಇದಕ್ಕೆ ಕಾರಣವಾಗಿ ಗೋಚರಿಸುತ್ತದೆ. ಹಾಗೆ ಹೇಳಿದ ಶಾಸಕ, ಬಿಜೆಪಿ ಪಕ್ಷದವನು. ಬಿಜೆಪಿ ಪಕ್ಷದೊಂದಿಗೆ ದೇವೇಗೌಡರ ಕುಟುಂಬ ಮೈತ್ರಿ ಮಾಡಿಕೊಂಡಿದೆ. ಆ ಶಾಸಕನ ವಿರುದ್ಧ ಗಂಭೀರವಾಗಿ ಹೋರಾಟ ರೂಪುಗೊಂಡರೆ ಅದು ಬಿಜೆಪಿ ಜೆಡಿಎಸ್ ಮೈತ್ರಿ ಮೇಲೆ ವ್ಯತಿರಿಕ್ತ ಪರಿಣಾಮಕ್ಕೆ ದಾರಿಯಾಗಬಹುದು. ಹಾಗಾದರೆ, ದೇವೇಗೌಡರ ಮಗ ಕುಮಾರಸ್ವಾಮಿ ತಮಗೆ ಸಿಕ್ಕಿರುವ ಕೇಂದ್ರ ಮಂತ್ರಿ ಸ್ಥಾನವನ್ನು ಕಳೆದುಕೊಳ್ಳಬೇಕಾಗುತ್ತೆ. ದೇವೇಗೌಡರ ಕುಟುಂಬದ ರಾಜಕೀಯ ಕನಸುಗಳೂ ಕಮರಿಹೋಗುತ್ತವೆ. ಇದನ್ನೆಲ್ಲ ಲೆಕ್ಕಾಚಾರ ಹಾಕಿ, ಒಕ್ಕಲಿಗ ಸಮುದಾಯದಲ್ಲಿ ಉಕ್ಕಬೇಕಿದ್ದ ರೋಷಾಗ್ನಿಯನ್ನು ವ್ಯವಸ್ಥಿತವಾಗಿ ನಿಯಂತ್ರಿಸಲಾಗಿದೆ. ಆ ನಿಯಂತ್ರಣವೇ ಒಕ್ಕಲಿಗ ಸಮುದಾಯದ ಅಸಹಜ ಮೌನವಾಗಿ ಹೆಪ್ಪುಗಟ್ಟಿದೆ. ಇಲ್ಲವಾದಲ್ಲಿ, ಸ್ವತಃ ಬಿಜೆಪಿ ಪಕ್ಷವೇ ಸಮರ್ಥಿಸಿಕೊಳ್ಳಲು ಹಿಂದೇಟು ಹಾಕುತ್ತಿರುವ ಆ ಹೇಳಿಕೆಯನ್ನು ಒಕ್ಕಲಿಗ ಸಮುದಾಯ ಸಹಿಸಿಕೊಳ್ಳುತ್ತಿದೆ ಎಂದರೆ ಏನರ್ಥ?

ಕೆಲ ದಿನಗಳ ಹಿಂದೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ದೇವೇಗೌಡರ ಕುಟುಂಬದ ಕುಡಿಗಳ ಲೈಂಗಿಕ ಪ್ರಕರಣಗಳು ಹೊರಬಿದ್ದಾಗಲೇ ಆ ಸಮುದಾಯ ತತ್ತರಿಸಿಹೋಗಿತ್ತು. ಬಿಸಿ ತುಪ್ಪ, ನುಂಗುವಂತೆಯೂ ಇಲ್ಲ, ಉಗುಳುವಂತೆಯೂ ಇಲ್ಲ ಎಂಬ ತಳಮಳ ಅನುಭವಿಸಿತ್ತು. ಆದರೆ ಈಗ, ಕುಮಾರಸ್ವಾಮಿಯ ಯಕಶ್ಚಿತ್ ಕೇಂದ್ರ ಮಂತ್ರಿಯ ಸ್ಥಾನಕ್ಕಾಗಿ ಆ ಸಮುದಾಯದ ಆಕ್ರೋಶವನ್ನು ಶೀಥಲೀಕರಿಸಲಾಗಿದೆ. ಇದು ಹೀಗೇ ಮುಂದುವರೆದರೆ, ಎಲ್ಲಿಗೆ ಹೋಗಿ ತಲುಪಬಹುದು…

ಕಡೆಯದಾಗಿ ಹೇಳಬೇಕೆಂದರೆ, ಅದೇ ಶಾಸಕ, ಅದೇ ಆಡಿಯೋದಲ್ಲಿ ಆಡಲಾದ ಅವಹೇಳನಕಾರಿ ಜಾತಿನಿಂದನೆಯ ಮಾತುಗಳ ವಿರುದ್ಧ ದಲಿತ ಸಮುದಾಯ, ಸಂಘಟನೆಗಳು ಮತ್ತು ನಾಯಕರು ಪ್ರತಿಭಟಿಸಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಆದರೆ ಒಕ್ಕಲಿಗ ಸಮುದಾಯ ತಣ್ಣನೆಯ ಮೌನಕ್ಕೆ ಶರಣಾಗಿದೆ. ಯಾಕೆ ಎಂಬ ಪ್ರಶ್ನೆ ಕಾಡದೆ ಇರುವುದೇ?

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!