Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಟ್ರಯಲ್ ಬ್ಲಾಸ್ಟ್ ತಡೆಗೆ ವಿಶೇಷ ಸುಗ್ರೀವಾಜ್ಞೆ ಹೊರಡಿಸಿ: ರೈತ ಸಂಘಟನೆಗಳ ಒಕ್ಕೊರಲ ಆಗ್ರಹ

ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರೈತರ ಹಿತದೃಷ್ಟಿಯಿಂದ ಕಟ್ಟಿರುವ ಕೃಷ್ಣರಾಜ ಸಾಗರ ಜಲಾಶಯದ ಸಂರಕ್ಷಣೆ ದೃಷ್ಟಿಯಿಂದ 20 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಗಣಿಗಾರಿಕೆ ನಡೆಸಬಾರದು ಎಂಬ `ವಿಶೇಷ ಸುಗ್ರೀವಾಜ್ಞೆ’ ಹೊರಡಿಸುವಂತೆ ರೈತ ಸಂಘಟನೆಗಳ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ಆಗ್ರಹಿಸಿದರು.

ಪಾಂಡವಪುರ ತಾಲ್ಲೂಕಿನ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ಗೆ ರಾಜ್ಯ ಸರ್ಕಾರ ತಯಾರಿ ಮಾಡಿಕೊಳ್ಳುತ್ತಿರುವ ಸಂಬAಧ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಂಡ್ಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಬೆಳಗ್ಗೆ ನಡೆದ ತುರ್ತು ಸಭೆಯಲ್ಲಿ ಭಾಗವಹಿಸಿದ್ದ ರೈತ ಸಂಘಟನೆಗಳ ಎಲ್ಲ ಬಣಗಳ ಮುಖಂಡರು, ಹೈ ಕೋರ್ಟ್ ಎಂಬ ಗುಮ್ಮವನ್ನು ನಮ್ಮ ಮೇಲೆ ಬಿಡಬೇಡಿ, ನಮಗೆ ಕೆಆರ್‌ಎಸ್ ಅಣೆಕಟ್ಟೆ ಮುಖ್ಯ. ಹಾಗಾಗಿ ಮುಖ್ಯಮಂತ್ರಿಗಳೊAದಿಗೆ ಚರ್ಚಿಸಿ ಕೆಆರ್‌ಎಸ್‌ನ 20 ಕಿ.ಮೀ. ವ್ಯಾಪ್ತಿಯಲ್ಲಿ ಸುಗ್ರೀವಾಜ್ಞೆ ಹೊರಡಿಸಬೇಕೆಂದು ಒತ್ತಾಯಿಸಿದರು.

ಟ್ರಯಲ್ ಬ್ಲಾಸ್ಟ್ ಮುಖ್ಯವೇ?

ರೈತ ಹೋರಾಟಗಾರ್ತಿ ಸುನಂದಾ ಜಯರಾಂ ಮಾತನಾಡಿ, ಕೆ.ಆರ್.ಎಸ್. 8 ಜಿಲ್ಲೆಗಳಿಗೆ ನೀರು ನೀಡುತ್ತಿದೆ. ಕೋಟ್ಯಂತರ ಜನ ಸೇರಿದಂತೆ ಪರಿಸರ, ಪ್ರಾಣಿ ಪಕ್ಷಿಗಳು ಕೆಆರ್‌ಎಸ್ ಅವಲಂಬಿತವಾಗಿವೆ. ಈ ಹಿನ್ನೆಲೆಯಲ್ಲಿ ನಮಗೆ ಅಣೆಕಟ್ಟೆ ಭದ್ರತೆ ಮುಖ್ಯ ಎಂದರು.

ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಕೆಆರ್‌ಎಸ್ ಅಣೆಕಟ್ಟೆಯ ಸುರಕ್ಷತೆಗಿಂತ ಟ್ರಯಲ್ ಬ್ಲಾಸ್ಟ್ ಮುಖ್ಯವೇ? ನಾವು ನಿಮಗೆ ಅಧಿಕಾರ ಕೊಟ್ಟಿದ್ದೇವೆ, ನೀವು ನಮ್ಮನ್ನು ರಕ್ಷಿಸಬೇಕು. ಪರಿಸರ ಮತ್ತು ಅರಣ್ಯ ಇಲಾಖೆ ಕಾಯ್ದೆ ಮೀರಿ ಹೈಕೋರ್ಟ್ ನೆಪವೊಡ್ಡಿ ಟ್ರಯಲ್ ಬ್ಲಾಸ್ಟ್ಗೆ ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದರು.

ವರದಿ ಬಹಿರಂಗಪಡಿಸಿ

ಸಭೆಯ ಪ್ರಾರಂಭದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್. ಕೆಂಪೂಗೌಡ ಅವರು, ರೈತರ ವಿರೋಧದ ನಡುವೆಯೂ ಟ್ರಯಲ್ ಬ್ಲಾಸ್ಟ್ಗೆ ಮುಂದಾಗಿರುವ ಸರ್ಕಾರದ ಕ್ರಮವನ್ನು ಖಂಡಿಸುತ್ತೇವೆ. ಬೇಬಿ ಬೆಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ ಮಾಡದಂತೆ ಕಳೆದ 15 ವರ್ಷಗಳಿಂದ ಹೋರಾಟ ನಡೆಸುತ್ತಲೇ ಬಂದಿದ್ದೇವೆ. 2018 ರ ಸೆಪ್ಟೆಂಬರ್‌ನಲ್ಲಿ ಕೇಳಿಬಂದ ಭಾರೀ ಶಬ್ದದಿಂದಾಗಿ ನೈಸರ್ಗಿಕ ವಿಪತ್ತು ನಿರ್ವಹಣಾ ಮಂಡಳಿಯವರು ಅಣೆಕಟ್ಟೆ ಸುರಕ್ಷತೆ ದೃಷ್ಟಿಯಿಂದ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ಮಾಡುವುದು ಸೂಕ್ತವಲ್ಲ ಎಂದು ತಿಳಿಸಿದೆ. ಈ ಬಗ್ಗೆ ಅಣೆಕಟ್ಟೆ ಸುರಕ್ಷತಾ ಪ್ಯಾನಲ್ ಸದಸ್ಯರು ಸರ್ಕಾರ ಹಾಗೂ ನ್ಯಾಯಾಲಯಕ್ಕೆ ಕೊಟ್ಟಿರುವ ವರದಿ ಬಹಿರಂಗಪಡಿಸಬೇಕೆಂದು ಆಗ್ರಹಿಸಿದರು.

ಗಣಿಗಾರಿಕೆಯಿಂದ ಡ್ಯಾಂಗಳಿಗೆ ಹಾನಿ

ಸರ್ವೋದಯ ಕರ್ನಾಟಕ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್.ಗೌಡ ಮಾತನಾಡಿ, ವಿಶ್ವದಲ್ಲಿ ಸಾವಿರಾರು ಡ್ಯಾಂಗಳು ಇವೆ. ಗಣಿಗಾರಿಕೆಯಿಂದ ಹಲವು ಡ್ಯಾಂಗಳಿಗೆ ಹಾನಿಯಾಗಿರುವ ಉದಾಹರಣೆಗಳೂ ಇವೆ. ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಡೆದರೆ ಕೆಆರ್‌ಎಸ್‌ಗೂ ಹಾನಿಯಾಗುತ್ತದೆ. ಡ್ಯಾಂ ಸೇಫ್ಟಿ ಆಕ್ಟ್ ಇಲ್ಲಿ ಅನ್ವಯವಾಗುತ್ತಿಲ್ಲ. ಹೈಕೋರ್ಟ್ಗೆ ಸರ್ಕಾರಿ ವಕೀಲರು ಮನವರಿಕೆ ಮಾಡಲು ವಿಫಲರಾಗಿದ್ದಾರೆ. ಟ್ರಯಲ್ ಬ್ಲಾಸ್ಟ್ ಬೇಡ ಎಂದು ವಕೀಲರು ವಾದ ಮಾಡಿಲ್ಲ. ಇದೇ ಕಾರಣಕ್ಕೆ ಕೋರ್ಟ್ ಟ್ರಯಲ್ ಬ್ಲಾಸ್ಟ್ಗೆ ಆದೇಶ ಮಾಡಿದೆ ಎಂದರು.

ಹತ್ತಾರು ಕಡೆ ಟ್ರಯಲ್ ಬ್ಲಾಸ್ಟ್ ನಡೆದರೆ ಕೆಆರ್‌ಎಸ್ ಡ್ಯಾಂಗೆ ತೊಂದರೆಯಾಗುವುದು ಗ್ಯಾರಂಟಿ. ಕೆಆರ್‌ಎಸ್ ಅಣೆಕಟ್ಟೆ ಕಟ್ಟಿರುವುದು ಒಂದು ಕಲ್ಲಿನ ಸೆಲೆಯ ಮೇಲೆ. ವೈಜ್ಞಾನಿಕವಾಗಿ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಡೆದರೆ ಡ್ಯಾಂಗೆ ತೊಂದರೆಯಾಗುತ್ತದೆ. ಈ ಬಗ್ಗೆ ಸುಗ್ರೀವಾಜ್ಞೆ ತರಲು ಸರ್ಕಾರಕ್ಕೆ ಅವಕಾಶವಿದೆ. ಈ ಬಗ್ಗೆ ಸ್ಪಷ್ಟ ಕಾನೂನು ರಚಿಸಿ ಇದಕ್ಕೆ ಇತಿಶ್ರೀ ಹಾಡಬೇಕೆಂದರು.

ನೈಸರ್ಗಿಕ ವಿಕೋಪ ನಿರ್ವಹಣಾ ಮಂಡಳಿಯ ವರದಿಯಂತೆ ಹೈಕೋರ್ಟ್ ಕೂಡ ಡ್ಯಾಂ ಸುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿದೆ. ಆದರೆ ಈಗ ಟ್ರಯಲ್ ಬ್ಲಾಸ್ಟ್ ನಡೆಸಲು ಸರ್ಕಾರ ಮುಂದಾಗಿದೆ. ಅಣೆಕಟ್ಟೆಗೆ ಹಾನಿಯಾದರೆ ಇನ್ನೊಂದು ಡ್ಯಾಂ ಕಟ್ಟಲು ಸಾಧ್ಯವಿಲ್ಲ. ಶ್ರವಣಬೆಳಗೊಳದ ಗೊಮ್ಮಟೇಶ್ವರ ಬೆಟ್ಟದ ಸುತ್ತ 8 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸದಂತೆ ಆದೇಶ ಇದೆ. ಕೆ.ಆರ್.ಎಸ್. ಅಣೆಕಟ್ಟೆಯನ್ನು ಕೋಟ್ಯಂತರ ಜನ ಅವಲಂಬಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವ ಟ್ರಯಲ್ ಬ್ಲಾಸ್ಟ್ ಬೇಡ ಎಂದರು.

ಕಾವೇರಿ ಸಮಸ್ಯೆ ಉದ್ಬವವಾದಾಗ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಸುಗ್ರೀವಾಜ್ಞೆಯನ್ನು ತಂದು ರೈತರ ಪರ ನಿಂತರು. ಅಂತಹ ತೀರ್ಮಾನವನ್ನು ಇಂದಿನ ಸರ್ಕಾರ ಸಹ ಅದೇ ಮಾದರಿಯಲ್ಲಿ ಸುಗ್ರೀವಾಜ್ಞೆ ತಂದು ಅಣೆಕಟ್ಟೆಯನ್ನು ರಕ್ಷಿಸಿ ಎಂದು ಒತ್ತಾಯಿಸಿದರು.

ಅಪಾಯವಾದರೆ ಯಾರು ಹೊಣೆ

ಹೋರಾಟಗಾರ ಕೆ.ಆರ್.ರವೀಂದ್ರ ಮಾತನಾಡಿ, 90 ವರ್ಷ ಮೇಲ್ಪಟ್ಟ ಎಲ್ಲ ಡ್ಯಾಂಗಳ ವಿಸರ್ಜನೆ ಮಾಡುವಂತೆ ವಿಶ್ವಸಂಸ್ಥೆ ಇತ್ತೀಚೆಗೆ ಒಂದು ಆದೇಶ ಹೊರಡಿಸಿದೆ. ಆ ಪಟ್ಟಿಯಲ್ಲಿ ಕೆಆರ್‌ಎಸ್ ಡ್ಯಾಂ ಕೂಡ ಸೇರಿದೆ. ಇಂತಹ ಸ್ಥಳದಲ್ಲಿ ಟ್ರಯಲ್ ಬ್ಲಾಸ್ಟ್, ಗಣಿಗಾರಿಕೆಯಿಂದ ಅಪಾಯವಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಡೀಮ್ಡ್ ಫಾರೆಸ್ಟ್ ವ್ಯಾಪ್ತಿಗೆ ಕೆಆರ್‌ಎಸ್ ಬೇಬಿಬೆಟ್ಟ ಬರಲಿದೆ. ಕೇಂದ್ರ ಪರಿಸರ ಸಚಿವಾಲಯದ ಅನುಮತಿ ಪಡೆಯದೇ ಟ್ರಯಲ್ ಬ್ಲಾಸ್ಟ್ ಮಾಡ್ತಿರೋದೇ ಕಾನೂನುಬಾಹಿರ. ಟ್ರಯಲ್ ಬ್ಲಾಸ್ಟ್ ವಿಚಾರದಿಂದ ಹಿಂದೆ ಸರಿದು 20 ಕಿ.ಮೀ. ವ್ಯಾಪ್ತಿಯಲ್ಲಿ ಸಂಪೂರ್ಣ ಗಣಿಗಾರಿಕೆ ನಿಷೇಧ ಮಾಡುವಂತೆ ಹೇಳಿದರು.

ಸಭೆಯಲ್ಲಿ ಶಾಸಕರಾದ ಪಿ. ರವಿಕುಮಾರ್ ಗಣಿಗ, ರಮೇಶ್ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಎಎಸ್ಪಿ ತಿಮ್ಮಯ್ಯ, ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಕೃಷ್ಣಮೂರ್ತಿ ಕುಲಕರ್ಣಿ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ಮಹೇಶ್, ಕಾವೇರಿ ನೀರಾವರಿ ನಿಗಮದ ತಾಂತ್ರಿಕ ಸಲಹೆಗಾರ ಶಿವಪ್ರಸಾದ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಾದ ರೇಷ್ಮಾ, ನಾಗಮಧು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!