Thursday, September 19, 2024

ಪ್ರಾಯೋಗಿಕ ಆವೃತ್ತಿ

ಐಟಿ ದಾಳಿ| ಗುತ್ತಿಗೆದಾರನ ಮನೆಯಲ್ಲಿ ಸಿಕ್ತು ₹42 ಕೋಟಿ ಕ್ಯಾಷ್ !

ಬೆಂಗಳೂರಿನ ಆರ್.ಟಿ.ನಗರದ ಆತ್ಮಾನಂದ ಕಾಲೋನಿಯಲ್ಲಿರುವ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಅವರ ತಮ್ಮ ಪ್ರದೀಪ್ ಎಂಬಾತನ ಮನೆಯ ಬೆಡ್‌ ರೂಂ ಮಂಚದ ಅಡಿಯಲ್ಲಿ ಹತ್ತಾರು ಬಾಕ್ಸ್‌ಗಳಲ್ಲಿದ್ದ 500 ರೂಪಾಯಿ ನೋಟುಗಳ ಕಂತೆಗಳನ್ನು ಕಂಡು ಐಟಿ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ.

ಮಾಜಿ ಕಾರ್ಪೊರೇಟರ್ ಅಶ್ವಥಮ್ಮ ಪತಿ ಗುತ್ತಿಗೆದಾರ ಅಂಬಿಕಾಪತಿ ತಮ್ಮನ ಮನೆಯಲ್ಲಿ ಸಿಕ್ಕ 42 ಕೋಟಿಗೂ ಅಧಿಕ ಹಣ ಯಾರದಿರಬಹುದು?ಯಾರಿಗೆ ಕೊಡಲು ಈ ಹಣವನ್ಮು ಪ್ರದೀಪ್ ಮನೆಯಲ್ಲಿ ಬಚ್ಚಿಡಲಾಗಿತ್ತು ಎಂಬ ಬಗ್ಗೆ ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಗುರುವಾರ ಪೊಲೀಸ್ ಭದ್ರತೆಯೊಂದಿಗೆ ಆರ್ ಟಿ ನಗರದ ಎರಡು ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು,ಬಾಕ್ಸ್ ಗಳಲ್ಲಿ ತುಂಬಿಸಿಟ್ಟಿದ್ದ ಈ ಹಣದ ಮೂಲ ಯಾವುದು, ಯಾರಿಗೆ ಸೇರಿದ್ದು ಎಂಬುದಾಗಿ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಬಳಿಕ ವಾರ್ಡ್ 95 ರ ಮಾಜಿ ಕಾಂಗ್ರೆಸ್ ಕಾರ್ಪೊರೇಟರ್ ಅಶ್ವಥಮ್ಮ ಹಾಗೂ ಗುತ್ತಿಗೆದಾರ ಆರ್. ಅಂಬಿಕಾಪತಿ ದಂಪತಿ ನಿವಾಸದ ಮೇಲೂ ಐಟಿ ರೈಡ್ ಆಗಿದೆ. ಇವರು ಮಾಜಿ ಶಾಸಕರ ಸಂಬಂಧಿಕರು ಎನ್ನಲಾಗಿದ್ದು, ಅವ್ಯವಹಾರ ನಡೆಸಿದ್ದಾರೆಂಬ ಆರೋಪದ ಮೇಲೆ ದಾಳಿ ನಡೆಸಲಾಗಿದೆ.

ಗುರುವಾರ ಸಂಜೆಯಿಂದಲೇ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಕಂತೆ ಕಂತೆ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. ಮಂಚದ ಅಡಿಯಲ್ಲಿ ಬರೋಬ್ಬರಿ 23 ಬಾಕ್ಸ್ ಗಳಲ್ಲಿ 500 ಮುಖಬೆಲೆಯ ಕಂತೆ ನೋಟುಗಳು ಪತ್ತೆಯಾಗಿವೆ. ಈ ಹಣವನ್ನು ಕಾರಿನಲ್ಲಿ ಸಾಗಾಟ ಮಾಡಲು ನಿರ್ಧರಿಸಲಾಗಿತ್ತು‌ ಎಂಬ ಬಗ್ಗೆ ನಿನ್ನೆ ಸಂಜೆ ಮಾಹಿತಿ ಬಂದ ಹಿನ್ನಲೆಯಲ್ಲಿ ಆರ್. ಟಿ.ನಗರದ ಎರಡು ಸ್ಥಳಗಳ ಮೇಲೆ ಏಕಕಾಲದಲ್ಲಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಕಂಟ್ರಾಕ್ಟರ್ ಆಗಿರುವ ಅಂಬಿಕಾಪತಿ ಕೆಂಪಣ್ಣ ಅವರ ಸಂಘದಲ್ಲಿ ಗುರುತಿಸಿಕೊಂಡಿದ್ದರು. 40% ಕಮಿಷನ್ ಆರೋಪ ಮಾಡಿದ್ದರಲ್ಲಿ ಇವರೂ ಒಬ್ಬರಾಗಿದ್ದರು. ಇವರ ಸಹೋದರ ಮನೆಯ, ಬಳಕೆ ಮಾಡದ ಬೆಡ್ ರೂಂ ಒಂದರ ಮಂಚದ ಅಡಿಯಲ್ಲಿ ಹಣ ಸಂಗ್ರಹಿಸಿಡಲಾಗಿತ್ತು. ರೂಂ ಗೆ ಬೀಗ ಹಾಕಲಾಗಿತ್ತು.

ಚುನಾವಣೆ ಲಿಂಕ್?

ಪಂಚರಾಜ್ಯಗಳ ಚುನಾವಣೆಗೆ ಹಣ ಸಾಗಿಸಲು ಬೆಂಗಳೂರು ಫಂಡಿಂಗ್ ಮೂಲವಾಗಿದೆ ಎಂಬ ಮಾಹಿತಿ ಹಿನ್ನಲೆ ಐಟಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.ತೆರಿಗೆ ವಂಚನೆ ಸಂಬಂಧ ಆದಾಯ ತೆರಿಗೆ (ಐ.ಟಿ.) ಇಲಾಖೆ ಅಧಿಕಾರಿಗಳು ರಾಜಧಾನಿಯ ಚಿನ್ನಾಭರಣ ವ್ಯಾಪಾರಿಗಳು, ಉದ್ಯಮಿಗಳು, ವೈದ್ಯರ ಮನೆ, ಕಚೇರಿಗಳೂ ಸೇರಿದಂತೆ 10ಕ್ಕೂ ಹೆಚ್ಚು ಕಡೆ ಗುರುವಾರ ದಾಳಿ ನಡೆಸಿದ್ದಾರೆ.

ಹೊಸದಿಲ್ಲಿ ಹಾಗೂ ಚೆನ್ನೈನಿಂದ ಬಂದಿದ್ದ ಅಧಿಕಾರಿಗಳು ಮಲ್ಲೇಶ್ವರ, ಸದಾಶಿವನಗರ, ಡಾಲರ್ಸ್‌ ಕಾಲೋನಿ, ಮತ್ತೀಕೆರೆ, ಮುಳ್ಳೂರು, ಆರ್‌ಎಂವಿ ಬಡಾವಣೆ, ಸರ್ಜಾಪುರ ಸೇರಿದಂತೆ ಹಲವೆಡೆ ಏಕಕಾಲಕ್ಕೆ ದಾಳಿ ಮಾಡಿ, ಮನೆ ಹಾಗೂ ಕಚೇರಿಗಳಲ್ಲಿ ಇಂಚಿಂಚೂ ಶೋಧ ನಡೆಸಿದರು. ಹಣಕಾಸು ವಹಿವಾಟು, ತೆರಿಗೆ ಪಾವತಿ, ಬ್ಯಾಂಕ್‌ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಪತ್ರಗಳನ್ನು ಅಧಿಕಾರಿಗಳು ಜಾಲಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!