Friday, September 20, 2024

ಪ್ರಾಯೋಗಿಕ ಆವೃತ್ತಿ

ಕಾಟೇರ ಕಾಂಗ್ರೆಸ್ ಎಫೆಕ್ಟ್: ದರ್ಶನ್ ಮೇಲೆ ಐಟಿ ರೇಡ್‌ಗೆ ಬಿಜೆಪಿ ಹುನ್ನಾರ!?

ಕಾಟೇರ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ. ಒಂದು ಕಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನ ಬಿಗ್ ಹಿಟ್ ನೋಡಲು ಸಿಕ್ಕಿದ್ದರೆ, ಮತ್ತೊಂದೆಡೆ ಕನ್ನಡ ಸಿನಿಮಾಗಳು ‘ಸಂವೇದನೆಯ ಕತೆ’ಗಳನ್ನು ಮುಟ್ಟುತ್ತಿಲ್ಲ ಎಂದು ಬೇಸರಿಸಿಕೊಂಡಿದ್ದ ಚಿತ್ರರಸಿಕರು ಕೂಡಾ ಮುಗಿಬಿದ್ದು ಚಿತ್ರ ನೋಡುತ್ತಿದ್ದಾರೆ. ಜೊತೆಗೆ, ಸಾಕಷ್ಟು ಉತ್ತಮ ರಿವ್ಯೂಗಳನ್ನೂ ನೀಡುತ್ತಿದ್ದಾರೆ. ಈ ಎಲ್ಲಾ ಕಾರಣದಿಂದ ಮೊದಲ ವಾರದಲ್ಲೇ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಹಳೆಯ ರೆಕಾರ್ಡುಗಳನ್ನೆಲ್ಲ ಧೂಳೀಪಟ ಮಾಡಿ ಮುನ್ನುಗ್ಗುತ್ತಿದೆ. ಬಿಡುಗಡೆಯಾದ ಎಂಟು ದಿನಗಳಲ್ಲಿ ಬರೋಬ್ಬರಿ 53.5 ಕೋಟಿ ಗಳಿಕೆ ಮಾಡಿರುವ ಕಾಟೇರ ಸಿನಿಮಾ ಕೆಜಿಎಫ್-2 ಮತ್ತು ಕಾಂತಾರಾ ಸಿನಿಮಾಗಳ ಮೊದಲ ವಾರದ ಗಳಿಕೆಯನ್ನು ಮುರಿದಿದೆ.

ಬಾಕ್ಸ್ ಆಫೀಸ್‌ನಲ್ಲಿ ಈ ಪರಿ ಹಿಟ್ ಆಗಿರುವ ಸಿನಿಮಾದ ಯಶಸ್ಸಿನ ಮೂರು ಗುಟ್ಟುಗಳೆಂದರೆ; ನಾಯಕ ನಟ ದರ್ಶನ, ನಿರ್ದೇಶಕ ತರುಣ್ ಸುಧೀರ್ ಮತ್ತು ಕಥೆ! ಹೌದು, ಇದುವರೆಗೆ ಕನ್ನಡ ಸಿನಿಮಾ ಇಂಡಸ್ಟ್ರಿಯ ಮೇಲಿದ್ದ ಅಪವಾದವೆಂದರೆ, ಸ್ಟಾರ್‌ಡಂ ಹಿಂದೆ ಬೀಳುವ ಚಿತ್ರತಂಡಗಳು ಸಾಮಾಜಿಕ ಸಂಕೀರ್ಣ ಇಶ್ಯೂಗಳನ್ನು ಕೈಗೆತ್ತಿಕೊಂಡು ಸಿನಿಮಾ ಮಾಡುವಲ್ಲಿ ಸೋಲುತ್ತಾ ಬಂದಿದ್ದವು. ಎಪ್ಪತ್ತು ಎಂಬತ್ತರ ದಶಕದಲ್ಲಿ ಬರುತ್ತಿದ್ದ ಸಂವೇದನಾಶೀಲ ಚಿತ್ರಗಳನ್ನು ಹೊರತುಪಡಿಸಿದರೆ, ಇತ್ತೀಚಿನ ದಿನಗಳಲ್ಲಿ ರೀಮೇಕ್ ಅಥವಾ ರೆಡಿಮೇಡ್ ಸೂತ್ರಗಳಿಗೇ ಹೆಚ್ಚೆಚ್ಚು ಜೋತುಬೀಳುತ್ತಿದ್ದರು. ಪಕ್ಕದ ತಮಿಳಿನಲ್ಲಿ ಕರ್ಣನ್ ಮತ್ತು ಜೈಭೀಮ್ ತರಹದ ಸಿನಿಮಾ ಬಂದಾಗ, ಹಿಂದಿಯಲ್ಲಿ ಆರ್ಟಿಕಲ್ 19 ಸಿನಿಮಾ ಬಂದಾಗ, ಮರಾಠಿಯಲ್ಲಿ ಸೈರಾಟ್ ತರಹದ ಸಿನಿಮಾ ಬಂದಾಗ ಕನ್ನಡದ ಚಿತ್ರರಸಿಕರು ಇಂತಹ ಸಿನಿಮಾಗಳು ಕನ್ನಡದಲ್ಲಿ ಬರೋದು ಯಾವಾಗ ಎಂದು ಕೊರಗುತ್ತಿದ್ದುದುಂಟು.

ಇತ್ತೀಚೆಗೆ ಮಂಸೋರೆ ನಿರ್ದೇಶನದ 19.20.21 ಸಿನಿಮಾ ಈ ನಿಟ್ಟಿನಲ್ಲಿ ಒಂದು ಪ್ರಯತ್ನವಾಗಿತ್ತಾದರೂ ಸ್ಟಾರ್‌ನಟದ ಕೊರತೆ, ಪ್ರಚಾರ ಹಾಗೂ ಮಾಸ್ ವರ್ಗದ ಪ್ರೇಕ್ಷಕರನ್ನು ಮೆಚ್ಚಿಸುವ ಫಾರ್ಮುಲಾಗಳ ಕೊರತೆಯಿಂದ ಸಿನಿಮಾ ಹೆಚ್ಚು ಯಶಸ್ಸು ಕಂಡಿರಲಿಲ್ಲ. ಆದರೆ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಾಟೇರ ಸಿನಿಮಾದ ಮೂಲಕ ಅಂತದ್ದೊಂದು ಸಾಹಸಕ್ಕೆ ಕೈಹಾಕಿರೋದು ಕನ್ನಡ ಸಿನಿಮಾ ಮಟ್ಟಿಗೆ ಉತ್ತಮ ಬೆಳವಣಿಗೆ ಎನ್ನಬಹುದು.

ಜಾತಿ ವ್ಯವಸ್ಥೆಯ ಕ್ರೌರ್ಯ, ಪಾಳೇಗಾರಿಕೆಯ ದಬ್ಬಾಳಿಕೆ, ಭೂಹಕ್ಕು ಹಂಚಿಕೆಯ ರೋಚಕ ಕಥನವಿರುವ ಸಿನಿಮಾ ಎಪ್ಪತ್ತರ ದಶಕದ ಸಾಮಾಜಿಕ ಜೀವನಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ವಿಚಾರ ಇಷ್ಟೇ ಆಗಿದ್ದಿದ್ದರೆ, ಇಷ್ಟೆಲ್ಲಾ ಹೇಳುವ ಅವಶ್ಯಕತೆ ಇರಲಿಲ್ಲ. ಆದರೆ, ಸಿನಿಮಾದಲ್ಲಿ ಕಾಂಗ್ರೆಸ್ ಸರ್ಕಾರ ಕೈಗೊಂಡ ಉಳುವವನೇ ಭೂಮಿಯ ಒಡೆಯ ಯೋಜನೆಯ ಸುತ್ತ ಸದಾಭಿಪ್ರಾಯವನ್ನು ಕಟ್ಟಿಕೊಡಲಾಗಿದೆ. ಇಂದಿರಾಗಾಂಧಿ ಮತ್ತು ದೇವರಾಜು ಅರಸು ಅವರ ಈ ಪ್ರಯತ್ನಗಳನ್ನು ಶ್ಲಾಘಿಸುವ ರೀತಿ ಕತೆಯನ್ನು ಹೆಣೆಯಲಾಗಿದೆ!!

ಕೇಂದ್ರದ ಮೋದಿ ಸರ್ಕಾರ ದರ್ಶನ್ ಮತ್ತು ಕಾಟೇರ ಸಿನಿಮಾದ ಬಗ್ಗೆ ಕೆಂಗಣ್ಣು ಬೀರಲು ಕಾರಣವಾಗಿರೋದೆ ಈ ಸಂಗತಿ! ಹೌದು, ಲೋಕಸಭಾ ಚುನಾವಣೆಗೆ ತುಂಬಾ ದಿನಗಳೇನು ಬಾಕಿ ಉಳಿದಿಲ್ಲ. ಎಲ್ಲಾ ಪಕ್ಷಗಳು ತಮ್ಮದೇ ತಯಾರಿಯಲ್ಲಿ ತೊಡಗಿಕೊಂಡಿವೆ. ಬಿಜೆಪಿಯಂತೂ ಧಾರ್ಮಿಕ ರಾಮಮಂದಿರವನ್ನೇ ತನ್ನ ರಾಜಕೀಯ ಅಜೆಂಡಾವಾಗಿ ಬಳಸಿಕೊಳ್ಳಲು ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದೆ. ಅಂತಹ ಸಂದರ್ಭದಲ್ಲಿ ಬಿಡುಗಡೆಯಾಗಿರುವ ಕಾಟೇರ ಸಿನಿಮಾ, ಕಾಂಗ್ರೆಸ್‌ನ ಪರವಾಗಿ ಅಲೆಯೊಂದನ್ನು ಸೃಷ್ಟಿಸುತ್ತಿರೋದು ಮೋದಿ-ಅಮಿತ್ ಶಾ ಜೋಡಿಯ ನಿದ್ದೆಗೆಡಿಸುತ್ತಿದೆ. ಯಾಕೆಂದರೆ ಕರ್ನಾಟಕದ ಮಟ್ಟಿಗೆ ಅತಿದೊಡ್ಡ ಫ್ಯಾನ್‌ಪಾಲೋಯಿಂಗ್ ಹೊಂದಿರುವ ಕೆಲವೇ ಕೆಲವು ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಒಬ್ಬರು. ಈಗಾಗಲೇ ಡಾ.ರಾಜ್‌ಕುಮಾರ್ ಕುಟುಂಬದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ತಮ್ಮ ಮಡದಿ ಶ್ರೀಮತಿ ಗೀತಾ ಶಿವರಾಜ್‌ಕುಮಾರ್ ಮೂಲಕ ಕಾಂಗ್ರೆಸ್‌ಗೆ ಪಾದಾರ್ಪಣೆ ಮಾಡಿಯಾಗಿದೆ. ಈಗ ನಟ ದರ್ಶನ್ ಕೂಡಾ ಕಾಂಗ್ರೆಸ್ ಪರವಾಗಿ ಸಿನಿಮಾ ಮಾಡಿದರೆ, ಬಿಜೆಪಿ ಪರಿಸ್ಥಿತಿ ಏನಾಗಬೇಡ!?

ಮುಖ್ಯವಾಗಿ, ದಕ್ಷಿಣ ಭಾರತದಲ್ಲಿ ಸಿನಿಮಾ ನಟರ ಬಗ್ಗೆ ಅಪಾರ ಕ್ರೇಜ್ ಇದೆ. ಇದು ರಾಜಕೀಯವಾಗಿಯೂ ಬಳಕೆಯಾದದ್ದುಂಟು. ಆಂದ್ರದಲ್ಲಿ ಎನ್‌ಟಿಆರ್ ಮುಖ್ಯಮಂತ್ರಿಯಾದದ್ದು, ತಮಿಳುನಾಡಿನಲ್ಲಿ ಎಂಜಿಆರ್, ಕರುಣಾನಿಧಿ, ಜಯಲಲಿತಾ ಮೊದಲಾದವರು ರಾಜ್ಯವನ್ನು ಆಳಿದ್ದು ಅವರಿಗಿದ್ದ ಸಿನಿಮಾ ಫಾಲೋವರ್ ವರ್ಚಸ್ಸಿನಿಂದಲೇ. ಈ ಸೂತ್ರವನ್ನು ತಾಳೆಹಿಡಿದೇ, ತಮಿಳುನಾಡಿನ ಸೂಪರ್‌ಸ್ಟಾರ್ ರಜನೀಕಾಂತ್ ಅವರನ್ನು ತನ್ನತ್ತ ಸೆಳೆಯಲು ಹರಸಾಹಸ ಪಡುತ್ತಿರುವುದು. ಹಾಗೆ ನೋಡಿದರೆ, ಕರ್ನಾಟಕದಲ್ಲೇ ಸ್ವಲ್ಪಮಟ್ಟಿಗೆ ಈ ಟ್ರೆಂಡ್ ಕಡಿಮೆ ಅನ್ನಬಹುದು. ಆದಾಗ್ಯೂ, ಇಲ್ಲಿಯ ನಟರ ಅಭಿಮಾನಿಗಳ ಅಭಿಮಾನವೂ ರಾಜಕೀಯವಾಗಿ ವರ್ಕ್‌ಔಟ್ ಆಗಿದ್ದುಂಟು. ರೆಬೆಲ್‌ಸ್ಟಾರ್ ಅಂಬರೀಶ್ ಇದಕ್ಕೊಂದು ನಿದರ್ಶನ. ತಮ್ಮ ರಾಜಕೀಯ ನಿರಾಸಕ್ತಿಯಿಂದಾಗಿ ಅವರು ಹೆಚ್ಚೇನು ಪರಿಣಾಮಕಾರಿಯಾಗಲು ಸಾಧ್ಯವಾಗಲಿಲ್ಲವೇ ವಿನಾ, ಅವರಿಗಿದ್ದ ರಾಜಕೀಯ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿದ್ದರೆ ಅಂಬರೀಶ್ ಅವರೂ ಎತ್ತರಕ್ಕೆ ಹೇರಬಹುದಾದ ಎಲ್ಲಾ ಸಾಧ್ಯತೆಗಳಿದ್ದವು.

ಇದಿಷ್ಟು, ದಕ್ಷಿಣ ಭಾರತದಲ್ಲಿ ಸಿನಿಮಾ ನಟರಿಗೆ ರಾಜಕೀಯದ ಮೇಲಿರುವ ಇನ್‌ಫ್ಲ್ಯೂಯೆನ್ಸ್ ಗೆ ನಿದರ್ಶನ. ಈಗ ಬಿಜೆಪಿ, ಕಾಟೇರಾ ಸಿನಿಮಾ ಮತ್ತು ದರ್ಶನ್ ಮೇಲೆ ಕೆಂಗಣ್ಣು ಬೀರುತ್ತಿರುವುದಕ್ಕೆ ಈ ಇನ್‌ಪ್ಲ್ಯೂಯೆನ್ಷಿಯಲ್ ಹಿಸ್ಟರಿಯೇ ಕಾರಣ!

ಈಗಾಗಲೇ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿರುವ ಬಿಜೆಪಿ, ಲೋಕಸಭಾ ಚುನಾವಣೆ ಹೊತ್ತಿಗೆ ಹೇಗಾದರು ಮಾಡಿ ತನ್ನ ಹಿಡಿತ ಬಿಗಿಗೊಳಿಸಬೇಕೆಂಬ ಪ್ರಯತ್ನದಲ್ಲಿದೆ. ಆ ಪ್ರಯತ್ನಕ್ಕೆ ‘ಕಾಂಗ್ರೆಸ್ ಪರ’ವಾದ ಕಥಾಹಂದರ ಹೊಂದಿರುವ ಕಾಟೇರ ಸಿನಿಮಾ ಅಡ್ಡಿಯುಂಟುಮಾಡುವ ಎಲ್ಲಾ ಸಾಧ್ಯತೆಗಳು ಇರುವುದರಿಂದ, ಹೇಗಾದರೂ ಮಾಡಿ ಆ ಪ್ರಭಾವವನ್ನು ತಗ್ಗಿಸಲು ಕೇಂದ್ರದ ಮೋದಿ ಸರ್ಕಾರ ಯೋಚಿಸಿ ಕಂಡುಕೊಂಡ ಮಾರ್ಗವೇ ಐಟಿ, ಈಡಿ ದಾಳಿ!

ಬಿಜೆಪಿಗೆ ಇದು ಹೊಸದೇನಲ್ಲ.2020ರಲ್ಲಿ ತಮಿಳುನಾಡು ಚುನಾವಣೆ ಸಂದರ್ಭದಲ್ಲಿ ಡಿಎಂಕೆ ಪರವಾಗಿ ಸಿಂಪಥಿ ಹೊಂದಿದ್ದ ನಟ ವಿಜಯ್ ಅವರಿಗೆ ಸಂಬಂಧಿಸಿದ 38 ಸ್ಥಳಗಳ ಮೇಲೆ ಐಟಿ ರೇಡ್ ನಡೆಸಲಾಗಿತ್ತು. ಆದರೂ ತಮ್ಮ ರಾಜಕೀಯ ನಿಲುವು ಬದಲಿಸಿಕೊಳ್ಳದ ವಿಜಯ್, ಚುನಾವಣೆಯ ದಿನ ಡಿಎಂಕೆ ಬಣ್ಣಗಳನ್ನು ಬಿಂಬಿಸುವ ಧಿರಿಸುಗಳನ್ನು ಧರಿಸಿ, ಸೈಕಲ್ ಮೇಲೆ ಮತಗಟ್ಟೆಗೆ ಬಂದು, ಡಿಎಂಕೆ ಪರವಾಗಿ ತಮ್ಮ ಸ್ಟಾರ್‌ಡಂ ವಿನಿಯೋಗಿಸಿದ್ದರು. ಪರಿಣಾಮವಾಗಿ ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿಕೂಟ ಹೀನಾಯವಾಗಿ ಸೋತು, ಡಿಎಂಕೆ ಅಧಿಕಾರಕ್ಕೇರಿತು.

ಅಲ್ಲದೇ, ಐಟಿ ಮತ್ತು ಇಡಿ ಇಲಾಖೆಗಳನ್ನು ತನ್ನ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಾ ಬಂದಿರುವ ಬಿಜೆಪಿ ಚುನಾವಣೆಯಿರುವ ರಾಜ್ಯಗಳಲ್ಲಿ ಎದುರಾಳಿ ಪಕ್ಷಗಳ ನಾಯಕರ ಮನೆ ಮೇಲೆ ರೇಡ್ ಮಾಡಿಸುತ್ತಿರುವುದು ಹೊಸ ಸಂಗತಿಯೇನಲ್ಲ. ಈಗ ಅದೇ ಅಸ್ತ್ರವನ್ನು ಕಾಂಗ್ರೆಸ್‌ನ ಹೊಸ ಸಿಂಪಥೈಸರ್ ನಟನಾಗಿ ಗುರುತಿಸಿಕೊಳ್ಳುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಪ್ರಯೋಗಿಸಲು ಬಿಜೆಪಿ ಕೇಂದ್ರ ಸರ್ಕಾರ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಅಭೂತಪೂರ್ವ ಯಶಸ್ಸು ಕಂಡಿರುವ ಸಿನಿಮಾ ದಾಖಲೆಯ ಕಲೆಕ್ಷನ್ ಮಾಡುತ್ತಿರುವುದರಿಂದ ಅದೇ ನೆಪವಿಟ್ಟುಕೊಂಡು ದಾಳಿ ನಡೆಸಲು ಯೋಜನೆ ರೂಪಿಸಲಾಗುತ್ತಿದೆ. ಇದು ಬಿಜೆಪಿಯ ಆಂತರಿಕ ಮೂಲಗಳಿಂದಲೇ ತಿಳಿದುಬಂದಿರುವ ಮಾಹಿತಿ!! ಈ ದಾಳಿಯ ಸಂಪೂರ್ಣ ಹೊಣೆಯನ್ನು ಮೋದಿ ಸಂಪುಟದಲ್ಲಿ ಪ್ರಭಾವಿ ಸಚಿವರೂ ಆಗಿರುವ ಉತ್ತರ ಕರ್ನಾಟಕ ಮೂಲದ ಸಂಸದರಾದ ಬಿಜೆಪಿ ನಾಯಕನಿಗೆ ವಹಿಸಲಾಗಿದ್ದು, ಬೆಂಗಳೂರಿನ ಪ್ರಭಾವಿ ಬಿಜೆಪಿ ಶಾಸಕರಿಬ್ಬರು ಸಾಥ್ ನೀಡುತ್ತಿರುವುದಾಗಿ ಮೂಲಗಳು ತಿಳಿಸಿವೆ.

ಆ ಮೂಲಕ ನಟ ದರ್ಶನ್ ಹಾಗೂ ಅವರ ಕಾಟೇರ ಸಿನಿಮಾಗೆ ‘ಬ್ಯಾಡ್ ನೇಮ್ ತಂದು, ಅದು ಹಬ್ಬಿಸುತ್ತಿರುವ ಕಾಂಗ್ರೆಸ್‌ಪರ ಅಲೆಯನ್ನು ಹತ್ತಿಕ್ಕುವುದು ಮೋದಿ ಸರ್ಕಾರದ ಉದ್ದೇಶ ಎನ್ನಲಾಗುತ್ತಿದೆ. ಆದರೆ, ಸದ್ಯಕ್ಕೀಗ ಬಿಜೆಪಿ ತನ್ನ ಇಡೀ ಗಮನವನ್ನು ರಾಮಮಂದಿರ ಉದ್ಘಾಟನೆಯನ್ನು ರಾಜಕೀಯವಾಗಿ ಎನ್‌ಕ್ಯಾಶ್ ಮಾಡಿಕೊಳ್ಳುವ ಕಾರ್ಯದ ಮೇಲೆ ಕೇಂದ್ರೀಕರಿಸಿದ್ದು, ಅದಾದ ನಂತರವೇ ನಟ ದರ್ಶನ್ ಅವರ ಮೇಲೆ ಐಟಿ, ಇಡಿ ರೇಡ್‌ಗಳನ್ನು ಆಯೋಜಿಸಲಾಗುತ್ತದೆ ಎಂಬ ನಿಖರ ಮಾಹಿತಿಗಳು ಬಿಜೆಪಿ ವಲಯದಲ್ಲೇ ಹರಿದಾಡುತ್ತಿವೆ!!

ಅಂದಹಾಗೆ, ಈ ಹಿಂದೆ ಬಿಜೆಪಿ ಕೃಪಾಪೋಷಿತ ಕನ್ನಡ ನ್ಯೂಸ್ ಚಾನೆಲ್‌ಗಳು ದರ್ಶನ್ ಅವರಿಗೆ ನಿಷೇಧ ಹೇರಿದ್ದನ್ನು; ಅವರ ವಿರುದ್ಧ ಅಪಪ್ರಚಾರ ನಡೆಸಿದ್ದನ್ನು ನಾವಿಲ್ಲಿ ಮರೆಯಲಾಗದು. ಇದಕ್ಕೆಲ್ಲಾ ದರ್ಶನ್ ಮತ್ತು ಅವರ ಅಭಿಮಾನಿಗಳು ಹೇಗೆ ತಿರುಗೇಟು ನೀಡುತ್ತಾರೆ ಹಾಗೂ ತಮ್ಮ ಪಕ್ಷದ ಪರವಾಗಿ ಸಿನಿಮಾ ಮಾಡಿದ ದರ್ಶನ್ ಬೆಂಗಾವಲಿಗೆ ಕಾಂಗ್ರೆಸ್ ಪಕ್ಷ ಎಷ್ಟು ದೃಢವಾಗಿ ನಿಲ್ಲಲಿದೆ ಎಂಬುದನ್ನು ಕಾದುನೋಡಬೇಕಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!