Thursday, September 19, 2024

ಪ್ರಾಯೋಗಿಕ ಆವೃತ್ತಿ

ತುಮಕೂರು| ವಿದ್ಯಾರ್ಥಿನಿಯರೊಂದಿಗೆ ಐಟಂ ಡಾನ್ಸ್‌; ಜಿಲ್ಲಾಧಿಕಾರಿ, ತಹಸೀಲ್ದಾರ್ ವಿರುದ್ಧ ದೂರು ದಾಖಲು

ತುಮಕೂರಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮಹಿಳಾ ಹಾಸ್ಟೆಲ್‌ನಲ್ಲಿ ಅಧಿಕಾರಿಗಳು ಅಸಹ್ಯ ಸಾಹಿತ್ಯದ ಹಾಡುಗಳಿಗೆ ವಿದ್ಯಾರ್ಥಿನಿಯರೊಂದಿಗೆ ನೃತ್ಯ ಮಾಡಿದ್ದರು. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹಂದ್ರಾಳ ಗ್ರಾಮದ ಹೆಚ್.ಆರ್ ನಾಗಭೂಷಣ್ ಎಂಬವರು ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

“ಅಧಿಕಾರಿಗಳು ದೀಪಾವಳಿ ಹಬ್ಬದ ಆಚರಣೆ ಮಾಡುತ್ತೇವೆ ಎಂಬ ನೆಪದಲ್ಲಿ ಎಸ್‌ಸಿ/ಎಸ್‌ಟಿ ಬಾಲಕಿಯ ಹಾಸ್ಟೆಲ್‌ಗೆ ನಿಯಮಬಾಹಿರವಾಗಿ ನುಗ್ಗಿ, ವಿದ್ಯಾರ್ಥಿನಿಯರ ಜೊತೆ ನೃತ್ಯ ಮಾಡಿದ್ದಾರೆ. ಅವರ ಮೈ, ಕೈ ಮುಟ್ಟಿ ಅನುಚಿತವಾಗಿ ವರ್ತಿಸಿದ್ದಾರೆ. ಸರ್ಕಾರಿ ಹೆಣ್ಣು ಮಕ್ಕಳ ಹಾಸ್ಟೆಲ್‌ಗಳಿಗೆ ರಾತ್ರಿ ವೇಳೆ ಪುರುಷರು ತೆರಳಬಾರದೆಂಬ ನಿಯಮಗಳಿದ್ದರೂ ಕೂಡ ಅಧಿಕಾರಿಗಳು ಹಾಸ್ಟೆಲ್‌ಗೆ ಅತಿಕ್ರಮ ಪ್ರವೇಶ ಮಾಡಿದ್ದಾರೆ. ಇದು ಅಕ್ಷಮ್ಯ ಅಪರಾಧವಾಗಿದೆ” ಎಂದು ನಾಗಭೂಷಣ್ ಆರೋಪಿಸಿದ್ದಾರೆ.

“ಪರಿಶಿಷ್ಟ ಸಮುದಾಯದ ಹೆಣ್ಣು ಮಕ್ಕಳನ್ನು ಮೋಜು ಮಸ್ತಿಗೆ ಅಧಿಕಾರಿಗಳು ಬಳಸಿಕೊಂಡಿರುವುದು ಎಸ್‌ಸಿ/ಎಸ್‌ಟಿ ಕಾಯ್ದೆಯ ಉಲ್ಲಂಘನೆಯಾಗಿದೆ. ಜವಾಬ್ದಾರಿಯಿಂದ ನಿಯಮಾನುಸಾರ ಮಕ್ಕಳಿಗೆ ಸರ್ಕಾರಿ ಸೇವೆ ನೀಡಬೇಕಾದ ಅಧಿಕಾರಿಗಳು ಸರ್ಕಾರಿ ಸೌಲಭ್ಯ ನೀಡುವ ನೆಪದಲ್ಲಿ ಮಕ್ಕಳನ್ನು ಇಂತಹ ಹೀನ ಕೃತ್ಯಗಳಿಗೆ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ. ಜಿಲ್ಲಾಧಿಕಾರಿ ಶ್ರೀನಿವಾಸ್ ಕೆ, ತುಮಕೂರು ತಹಸಿಲ್ದಾರ್ ಸಿದ್ದೇಶ್, ತುಮಕೂರು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಹಾಗೂ ಇತರ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರೊಂದಿಗೆ ಐಟಂ ಹಾಡೊಂದಕ್ಕೆ ನೃತ್ಯ ಮಾಡಿ, ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಿರುವ ತುಮಕೂರು ಜಿಲ್ಲಾಧಿಕಾರಿ ಶ್ರೀನಿವಾಸ್ ಕೆ, ತಹಸಿಲ್ದಾರ್ ಸಿದ್ದೇಶ್, ಜಂಟಿ ನಿರ್ದೇಶಕ ಕೃಷ್ಣಪ್ಪ ಸೇರಿದಂತೆ ಇತರೆ ಅಧಿಕಾರಿಗಳ ವಿರುದ್ಧ ಕೊಡಿಗೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೃಪೆ: ಈದಿನ.ಕಾಂ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!