Friday, September 20, 2024

ಪ್ರಾಯೋಗಿಕ ಆವೃತ್ತಿ

ಗೌರವದಿಂದ ನಡೆಸಿಕೊಂಡರೂ ಜಗದೀಶ್ ಶೆಟ್ಟರ್ ದ್ರೋಹ ಬಗೆದಿದ್ದಾರೆ: ಡಿ.ಕೆ ಶಿವಕುಮಾರ್

ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಸೇರಿಕೊಂಡ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, “ಜಗದೀಶ್ ಶೆಟ್ಟರ್ ಅವರನ್ನು ಗೌರವದಿಂದ ನಡೆಸಲಾಗಿದ್ದರೂ ನಮ್ಮ ವಿಶ್ವಾಸಕ್ಕೆ ದ್ರೋಹ ಬಗೆದಿದ್ದಾರೆ” ಎಂದು ಬೇಸರದಿಂದ ನುಡಿದಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಕಳೆದ ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿಯಿಂದ ಅವಮಾನ ಆಯಿತು ಎಂದು ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಬಳಿಕ ಟಿಕೆಟ್ ನೀಡಲಾಯಿತಾದರೂ 35 ಸಾವಿರ ಮತಗಳಿಂದ ಸೋತಿದ್ದರು. ಆದರೂ ಕೂಡ ಕಾಂಗ್ರೆಸ್ ಪಕ್ಷ ಅವರಿಗೆ ಎಂಎಲ್‌ಸಿ ಸ್ಥಾನ ನೀಡಿ ಗೌರವದಿಂದ ನಡೆಸಿಕೊಂಡಿದೆ. ಮತ್ತೆ ಶೆಟ್ಟರ್ ಅವರನ್ನು ಒತ್ತಡದಿಂದ ಮತ್ತೆ ಬಿಜೆಪಿ ಕರೆಸಿಕೊಂಡಿದ್ದಾರೋ ಗೊತ್ತಿಲ್ಲ” ಎಂದು ತಿಳಿಸಿದರು.

“ಜಗದೀಶ್ ಶೆಟ್ಟರ್ ಅವರೊಂದಿಗೆ ನಿನ್ನೆ ಬೆಳಗ್ಗೆ ಕೂಡ ಇದೇ ವಿಚಾರವನ್ನು ಮಾತನಾಡಿದ್ದೆ. ಆಗ ನಾನು ಮತ್ತೆ ಬಿಜೆಪಿಗೆ ಹೋಗುವ ಕೆಲಸ ಮಾಡುವುದಿಲ್ಲ. ಕಾಂಗ್ರೆಸ್‌ಗೆ ದ್ರೋಹ ಬಗೆಯಲ್ಲ. ಯಾಕೆಂದರೆ ರಾಜಕಾರಣದಲ್ಲಿ ಸ್ಥಾನ ನೀಡುವ ಮೂಲಕ ನನಗೆ ಮರುಜೀವ ಕೊಟ್ಟಿದೆ. ಬಿಜೆಪಿಗೆ ಸೇರುವ ಕೆಲಸ ಮಾಡಲ್ಲ ಎಂದಿದ್ದರು. ಅದನ್ನೇ ನಿನ್ನೆ ಮೈಸೂರಿನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದೆ. ಇವತ್ತು ನೋಡಿದರೆ ದೆಹಲಿಗೆ ಹೋಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಶೆಟ್ಟರ್ ಅವರನ್ನು ಒತ್ತಡದಿಂದ ಮತ್ತೆ ಬಿಜೆಪಿ ಕರೆಸಿಕೊಂಡಿದ್ದಾರೋ ಗೊತ್ತಿಲ್ಲ. ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿರುವ ವಿಚಾರ ಕೆಪಿಸಿಸಿ ಕಚೇರಿಯ ಮೂಲಕ ತಿಳಿಯಿತು” ಎಂದು ತಿಳಿಸಿದರು.

ದೇಶದ ಹಿತದೃಷ್ಟಿಯಿಂದ ಮತ್ತೆ ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ ಎಂದು ಜಗದೀಶ್ ಶೆಟ್ಟರ್ ದೆಹಲಿಯಲ್ಲಿ ನೀಡಿರುವ ಹೇಳಿಕೆಯ ಬಗ್ಗೆ ಪತ್ರಕರ್ತರು ಕೇಳಿದಾಗ, “ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸಿದಾಗ ದೇಶದ ಹಿತ ಗೊತ್ತಿರಲಿಲ್ವಾ? ಎಂದು ಡಿಕೆ ಶಿವಕುಮಾರ್ ಮರು ಪ್ರಶ್ನೆ ಹಾಕಿದರು.

ಮತ್ತೊಂದೆಡೆ ಈ ರಾಜಕೀಯ ಬೆಳವಣಿಗೆಯ ವಿಚಾರದಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ‌ ಸಿದ್ದರಾಮಯ್ಯ, “ಕಾಂಗ್ರೆಸ್ ಪಕ್ಷದಲ್ಲಿ ಶೆಟ್ಟರ್​ಗೆ​​​​ ಯಾವುದೇ ಅನ್ಯಾಯ ಆಗಿಲ್ಲ” ಎಂದು ತಿಳಿಸಿದ್ದಾರೆ.

“ನಾವು ಅವರಿಗೆ ಟಿಕೆಟ್ ಕೊಟ್ಟಿದ್ದೆವು. ಚುನಾವಣೆಯಲ್ಲಿ ಸೋತರೂ ಶೆಟ್ಟರನ್ನು ಎಂಎಲ್​ಸಿ ಮಾಡಿದ್ದೆವು. ಕಾಂಗ್ರೆಸ್ ಪಕ್ಷದಲ್ಲಿ ಅವರಿಗೆ ಯಾವುದೇ ಅನ್ಯಾಯ ಆಗಿಲ್ಲ. ಒಮ್ಮೆ ಅವರು ನನಗೆ ಬಿಜೆಪಿಯಲ್ಲಿ ಅವಮಾನ ಆಗಿದೆ ಮತ್ತೆ ಹೋಗಲ್ಲ ಎಂದಿದ್ದರು. ಈಗ ಹೋಗಿದ್ದಾರೆ” ಎಂದು ಸಿದ್ದರಾಮಯ್ಯ ತಿಳಿಸಿದರು.

ಕೃಪೆ: ಈದಿನ.ಕಾಂ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!